KGF Chapter 3: ಕೆಜಿಎಫ್-3 ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ಯಶ್: ರಾಕಿಭಾಯ್ ಮುಂದಿನ ಕಥೆ ಬಗ್ಗೆ ಕೊನೆಗೂ ಸಿಕ್ಕಿತು ಉತ್ತರ
ಕನ್ನಡ ಚಿತ್ರರಂಗದ ನಟ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಸರಣಿ ಸಿನಿಮಾಗಳು ಇಡೀ ಭಾರತೀಯ ಸಿನಿಮಾರಂಗವನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದು ಗೊತ್ತೇ ಇದೆ. ಕೆಜಿಎಫ್ ಚಾಪ್ಟರ್ 2 ತೆರೆಕಂಡು ಭರ್ಜರಿ ಯಶಸ್ಸು ಸಾಧಿಸಿದ ದಿನದಿಂದಲೂ ಅಭಿಮಾನಿಗಳು 'ಕೆಜಿಎಫ್-3' ಯಾವಾಗ ಬರಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಲೇ ಇದ್ದವು. ಆದರೆ, ಈ ಬಹುನಿರೀಕ್ಷಿತ ಸೀಕ್ವೆಲ್ ಬಗ್ಗೆ ಯಶ್ ಈಗ ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದು, ಸಿನಿಮಾ ಸೆಟ್ಟೇರುವುದು ಯಾವಾಗ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಕೊಟ್ಟಿದ್ದಾರೆ.
ಅಮೆರಿಕಾದಲ್ಲಿ ನಡೆದ ಸಿನಿಮಾಕಾನ್ (CinemaCon 2026) ಕಾರ್ಯಕ್ರಮದಲ್ಲಿ 'ರಾಮಾಯಣ' ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಭಾಗವಹಿಸಿದ್ದ ಯಶ್, ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಸದ್ಯ ತಾವು ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' (Toxic) ಹಾಗೂ ನಿತೇಶ್ ತಿವಾರಿ ನಿರ್ದೇಶನದ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ ಎಂದು ಯಶ್ ತಿಳಿಸಿದ್ದಾರೆ. ರಾಮಾಯಣ ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಎರಡು ಭಾಗಗಳಲ್ಲಿ ಮೂಡಿಬರುತ್ತಿದೆ.

ಕೆಜಿಎಫ್-3 ಆತುರವಾಗಿ ಮಾಡಲ್ಲ
ಇದೇ ವೇಳೆ 'ಕೆಜಿಎಫ್-3' ಸ್ಥಿತಿಗತಿ ಬಗ್ಗೆ ಮಾತನಾಡಿರುವ ಯಶ್, "ನಾನು ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಈ ಬಗ್ಗೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇವೆ. ಆದರೆ, ಸದ್ಯಕ್ಕೆ ಯಾವುದನ್ನೂ ಫೈನಲ್ ಮಾಡಿಲ್ಲ. ನಮಗೆ 'ಕೆಜಿಎಫ್' ಸರಣಿಯ ಮೇಲೆ ಅಪಾರ ಜವಾಬ್ದಾರಿಯಿದೆ. ಹೀಗಾಗಿ ಒಂದು ಉತ್ತಮವಾದ ಮತ್ತು ಬಲಿಷ್ಠವಾದ ಕಥೆ ಸಿಕ್ಕಾಗ ಮಾತ್ರ ನಾವು ಮೂರನೇ ಭಾಗವನ್ನು ಕೈಗೆತ್ತಿಕೊಳ್ಳುತ್ತೇವೆ. ಅಲ್ಲಿಯವರೆಗೆ ಯಾವುದನ್ನೂ ಆತುರವಾಗಿ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ಯಶ್ ಅವರ ಸಂಪೂರ್ಣ ಗಮನ 'ಟಾಕ್ಸಿಕ್' ಮತ್ತು 'ರಾಮಾಯಣ' ಭಾಗ 1 ಹಾಗೂ 2ರ ಮೇಲಿದೆ. ಈ ಸಿನಿಮಾಗಳ ನಂತರವಷ್ಟೇ ಕೆಜಿಎಫ್ ಸರಣಿಯ ಬಗ್ಗೆ ಅವರು ಯೋಚಿಸಲಿದ್ದಾರೆ. ಇದರಿಂದಾಗಿ ರಾಕಿ ಭಾಯ್ ಅಬ್ಬರವನ್ನು ಮತ್ತೆ ನೋಡಲು ಅಭಿಮಾನಿಗಳು ಇನ್ನೂ ಕೆಲವು ವರ್ಷ ಕಾಯುವುದು ಅನಿವಾರ್ಯವಾಗಿದೆ. ಒಂದು ವೇಳೆ ಕಥೆ ಫೈನಲ್ ಆದರೆ ಸದ್ಯದಲ್ಲೇ ಈ ಸಿನಿಮಾ ಕೂಡ ಸೆಟ್ಟೇರುವ ಸುಳಿವನ್ನೂ ಯಶ್ ನೀಡಿದ್ದಾರೆ.
ಇತಿಹಾಸ ಬರೆದಿದ್ದ 'ಕೆಜಿಎಫ್-2'
ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್: ಚಾಪ್ಟರ್ 2' ಸಿನಿಮಾ 2022ರಲ್ಲಿ ಬಿಡುಗಡೆಯಾದಾಗ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿತ್ತು. ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಹಾಗೂ ಶ್ರೀನಿಧಿ ಶೆಟ್ಟಿ ಅವರಂತಹ ಘಟಾನುಘಟಿ ಕಲಾವಿದರನ್ನು ಒಳಗೊಂಡಿದ್ದ ಈ ಚಿತ್ರ, ಆ ಸಮಯದಲ್ಲಿ ಕನ್ನಡದ ಅತ್ಯಂತ ದುಬಾರಿ ಸಿನಿಮಾ ಎಂಬ ಖ್ಯಾತಿ ಗಳಿಸಿತ್ತು. ಅಷ್ಟೇ ಅಲ್ಲದೆ, 2022ನೇ ವರ್ಷದಲ್ಲಿ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿ ಹೊರಹೊಮ್ಮಿ, ವಿಶ್ವದಾದ್ಯಂತ ಸ್ಯಾಂಡಲ್‌ವುಡ್ ಖ್ಯಾತಿಯನ್ನು ಪಸರಿಸಿತ್ತು. ಈ ದೊಡ್ಡ ಮಟ್ಟದ ಯಶಸ್ಸಿನ ಬೆನ್ನಲ್ಲೇ ಅಭಿಮಾನಿಗಳು ಮೂರನೇ ಭಾಗಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಟಾಕ್ಸಿಕ್ ಕಥೆಯೂ ಹೇಳಿದ ಯಶ್
ಸದ್ಯ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಬಗ್ಗೆ ಮಾತನಾಡಿರುವ ಯಶ್, ಇದೊಂದು ತಂದೆ-ಮಗನ ನಡುವಿನ ಸೇಡಿನ ಕಥೆ ಎಂದು ಬಹಿರಂಗಪಡಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದ ಕಾಲಘಟ್ಟದಲ್ಲಿ ಈ ಕಥೆ ಸಾಗುತ್ತದೆ. ಭಾರತದಿಂದ ಬ್ರಿಟಿಷರು ನಿರ್ಗಮಿಸಿದರೂ, ಗೋವಾ ಮಾತ್ರ ಇನ್ನೂ ಪೋರ್ಚುಗೀಸರ ವಶದಲ್ಲಿತ್ತು. ಆ ಕಾಲದ ಗೋವಾದ ಸುತ್ತಲಿನ ರಹಸ್ಯಗಳು, ಗ್ಯಾಂಗ್‌ಸ್ಟರ್ ಯುಗ, ಅಧಿಕಾರದ ಆಸೆ ಮತ್ತು ರಾಜಕೀಯದ ಎಳೆಯನ್ನು ಈ ಸಿನಿಮಾ ಹೊಂದಿದೆ. "ಇದು ಕೇವಲ ಆಕ್ಷನ್ ಚಿತ್ರವಲ್ಲ, ಇಲ್ಲಿ ಭಾವನೆಗಳಿಗೂ ಅಷ್ಟೇ ಪ್ರಾಮುಖ್ಯತೆ ಇದೆ. ಇದೊಂದು ಸುಂದರ ಪ್ರೇಮಕಥೆಯನ್ನೂ ಒಳಗೊಂಡಿದೆ" ಎಂದು ಯಶ್ ವಿವರಿಸಿದ್ದಾರೆ.
ವಿಶ್ವದಾದ್ಯಂತ ಪ್ರೇಕ್ಷಕರು ಈಗ ಹೊಸತನದ ಕಥೆಗಳಿಗಾಗಿ ಕಾಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಯಶ್, ಅದಕ್ಕೆ 'ರಾಮಾಯಣ' ಮತ್ತು 'ಟಾಕ್ಸಿಕ್' ಸಿನಿಮಾಗಳು ಸೂಕ್ತ ಉತ್ತರವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿವಿಧ ಸಂಸ್ಕೃತಿಗಳನ್ನು ಒಗ್ಗೂಡಿಸಿ, ಜನರಿಗೆ ಮನರಂಜನೆಯ ಜೊತೆಗೆ ವಿಭಿನ್ನ ಲೋಕದ ಅನುಭವ ನೀಡುವ ಗುರಿಯನ್ನು ಈ ಎರಡೂ ಸಿನಿಮಾಗಳು ಹೊಂದಿವೆ. ತಮ್ಮ ಕಲ್ಪನೆಯ ಹೊಸ ಲೋಕವನ್ನು ತೆರೆಯ ಮೇಲೆ ತರಲು ಅಂತರಾಷ್ಟ್ರೀಯ ಮಟ್ಟದ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಯಶ್ ಹೇಳಿದ್ದಾರೆ.












Click it and Unblock the Notifications