Sanvi Sudeep: ಸುದೀಪ್ ಮಗಳು ಸಾನ್ವಿ ಬಗ್ಗೆ ಬೇಸರಗೊಂಡ ಕನ್ನಡಿಗರು!
ಮ್ಯಾಕ್ಸ್ ಸಿನಿಮಾದ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ಸುದೀಪ್, ಇತ್ತೀಚೆಗೆ ಜೀ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಸುದೀಪ್‌ಗೆ ಕಾರ್ಯಕ್ರಮದಲ್ಲಿ ಹಲವು ಅಚ್ಚರಿಯ ಉಡುಗೊರೆ ಸಿಕ್ಕಿತು. ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡು ನೋವಿನಲ್ಲಿರುವ ಸುದೀಪ್‌ಗೆ ಕಾರ್ಯಕ್ರಮದಲ್ಲಿ ತಾಯಿಯ ಪುತ್ಥಳಿಯನ್ನು ನೀಡಲಾಯಿತು. ಇದನ್ನು ನೋಡಿ ಸುದೀಪ್ ಭಾವುಕರಾದರು.
ಇದೇ ಕಾರ್ಯಕ್ರಮದಲ್ಲಿ ಸುದೀಪ್ ಮಗಳು ಸಾನ್ವಿ ತಂದೆಗಾಗಿ ವಿಶೇಷ ಹಾಡನ್ನು ಹಾಡಿದರು. ಅಪ್ಪ ಮಗಳ ಬಾಂಧವ್ಯ ನೋಡಿ ಕನ್ನಡಿಗರು ಖುಷಿಯಾದರೂ, ಸಾನ್ವಿ ಮಾಡಿದ ಆ ಒಂದು ಕೆಲಸಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಡೆಯುತ್ತಿರುವುದು ಕನ್ನಡ ಕಾರ್ಯಕ್ರಮ, ನೋಡುವುದು ಕನ್ನಡಿಗರು, ಬಂದವರೂ ಕನ್ನಡಿಗರು, ಆದರೆ ಸಾನ್ವಿ ಸುದೀಪ್ ಮಾತಿನಲ್ಲಿ ಒಂದಕ್ಷರ ಕೂಡ ಕನ್ನಡ ಇರಲಿಲ್ಲ ಎನ್ನುವುದೇ ಈಗ ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ.

ಸುದೀಪ್‌ಗೆ ಕನ್ನಡಿಗರ ಪ್ರಶ್ನೆ
ಕಾರ್ಯಕ್ರಮ ನೋಡಿದ ಅನೇಕ ಮಂದಿ ಸುದೀಪ್‌ಗೆ ಮಗಳ ಮೇಲಿರುವ ಪ್ರೀತಿ ನೋಡಿ ಖುಷಿ ಪಟ್ಟಿದ್ದಾರೆ. ಆದರೆ ಇಂತಹ ಕಾರ್ಯಕ್ರಮವನ್ನು ಹಳ್ಳಿಗಾಡಿನ ಜನ, ಹಿರಿಯರು, ಮಹಿಳೆಯರೇ ಹೆಚ್ಚಾಗಿ ನೋಡುತ್ತಾರೆ, ಅಂತಹ ಜನಕ್ಕೆ ಸುದೀಪ್ ಮತ್ತು ಮಗಳ ನಡುವೆ ನಡೆದ ಸಂಭಾಷಣೆಯೇ ಅರ್ಥವಾಗಿಲ್ಲ, ನೀವು ಕನ್ನಡದವರಾಗಿ ಕನ್ನಡ ಮಾತನಾಡಲು ಸಮಸ್ಯೆ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಸುದೀಪ್ ಅನೇಕ ಕಡೆಗಳಲ್ಲಿ ತಮ್ಮ ಕನ್ನಡ ಪ್ರೇಮವನ್ನು ತೋರಿಸಿದ್ದಾರೆ. ಬೇರೆ ಭಾಷೆಯವರು ಕನ್ನಡ್ ಎಂದು ಕರೆದಾಗ ಅದನ್ನು ಅಲ್ಲೇ ಕನ್ನಡ ಎಂದು ತಿದ್ದಿದ್ದಾರೆ. ಕನ್ನಡದ ಬಗ್ಗೆ ಸುದೀಪ್‌ಗೆ ಇರುವ ಅಭಿಮಾನ, ಪ್ರೀತಿ ಬಗ್ಗೆ ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ, ಆದರೆ ತಮ್ಮ ಮಗಳೇ ಕನ್ನಡ ಕಾರ್ಯಕ್ರಮವೊಂದರಲ್ಲಿ ಬರೀ ಇಂಗ್ಲಿಷ್‌ನಲ್ಲಿ ಮಾತನಾಡುವಾಗ ತಾವು ಯಾಕೆ ಕನ್ನಡ ಮಾತನಾಡು ಎಂದು ಹೇಳಲಿಲ್ಲ ಎನ್ನುವುದು ಅಭಿಮಾನಿಗಳ ಪ್ರಶ್ನೆ.
ಇಲ್ಲೇ ಇದ್ದು ಕನ್ನಡ ಕಲಿಯಲು ತಾತ್ಸಾರವಾ? ಕನ್ನಡ ಮಾತನಾಡಲು ಸಾನ್ವಿ ಸುದೀಪ್‌ಗೆ ಕೀಳರಿಮೆ ಇದೆಯಾ ಎಂದೆಲ್ಲಾ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಆಂಕರ್ ಅನುಶ್ರೀ ಕೂಡ ಸಾನ್ವಿ ಸುದೀಪ್ ಜೊತೆ ಕನ್ನಡ ಬಿಟ್ಟು ಬರೀ ಇಂಗ್ಲಿಷ್‌ನಲ್ಲೇ ಮಾತನಾಡಿದ್ದು ಕೂಡ ನೋಡುಗರ ಬೇಸರಕ್ಕೆ ಕಾರಣವಾಗಿದೆ.
ಇದು ಸಾನ್ವಿ ಸುದೀಪ್ ಒಬ್ಬರ ಕತೆಯಷ್ಟೆ ಅಲ್ಲ, ಈಗಿನ ಮಕ್ಕಳನ್ನು ಕನ್ನಡದಿಂದ ದೂರ ಮಾಡಲಾಗುತ್ತಿದೆ, ಶಾಲೆಗಳಲ್ಲಿ ಇಂಗ್ಲಿಷ್, ಹಿಂದಿ ಕಲಿಯಲು ಆದ್ಯತೆ ನೀಡಲಾಗುತ್ತಿದೆ, ಮಕ್ಕಳು ತಮ್ಮ ಭಾಷೆಯನ್ನೇ ಮರೆಯುವ ಹಂತಕ್ಕೆ ಬಂದಿವೆ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.
ಫೇಸ್‌ಬುಕ್, ಟ್ವಿಟರ್ ನಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಪೋಷಕರು ಇಂಗ್ಲಿಷ್ ಭಾಷೆಯ ವ್ಯಾಮೋಹದಲ್ಲಿ ಮಕ್ಕಳಿಗೆ ಕನ್ನಡ ಕಲಿಸುವುದನ್ನು ಮರೆಯಬಾರದು ಎಂದು ಮನವಿ ಮಾಡಿದ್ದಾರೆ. ಇನ್ನಾದರೂ ಮುಂದಿನ ಕಾರ್ಯಕ್ರಮದಲ್ಲಿ ಸಾನ್ವಿ ಸುದೀಪ್ ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಮನಗೆಲ್ಲಲಿ ಎಂದು ಕನ್ನಡಿಗರು ಕೇಳಿದ್ದಾರೆ.












Click it and Unblock the Notifications