ಅಂಕಲ್ ನನ್ನ ಎದುರಲ್ಲೇ ಆ ಕೆಲಸ ಮಾಡಿದ್ರು: ಕಹಿ ಘಟನೆ ಬಿಚ್ಚಿಟ್ಟ ನಟಿ ನಯನಾ ನಾಗರಾಜ್
ನಯನಾ ನಾಗರಾಜ್ ಅವರು ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ನಟಿ. ಗಿಣಿರಾಮ ಧಾರಾವಾಹಿಯ ಮೂಲಕ ಮನೆಮಾತಾಗಿರುವ ಅವರು ತಾವು ನಡೆದು ಬಂದ ಹಾದಿಯನ್ನು ಸಂದರ್ಶನದಲ್ಲಿ ಮೆಲುಕು ಹಾಕಿದ್ದಾರೆ. ಇತ್ತೀಚೆಗೆ ಅವರು ಸೀರಿಯಲ್‌ಗಳಿಂದ ದೂರ ಉಳಿದಿದ್ದು, ಇದರ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಜೊತೆಗೆ ನಟಿಯ ಬಾಳಲ್ಲಿ ಎದುರಾದ ಕೆಟ್ಟ ಅನುಭವವನ್ನೂ ಸಹ ಅವರು ಹೇಳಿಕೊಂಡಿದ್ದಾರೆ.
"ರಾಜೇಶ್ ರಿವೀಲ್ಸ್" ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ನಯನಾ ನಾಗರಾಜ್ ಅವರು ಕಿರುತೆರೆಯಲ್ಲಿ ತಮ್ಮ ಜರ್ನಿ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ. ಅಲ್ಲಿ ಸಿಗುತ್ತಿದ್ದ ಸಂಭಾವನೆ, ಅದರಿಂದ ಕಷ್ಟದ ಜೀವನ, ತಮ್ಮ ವೈವಾಹಿಕ ಜೀವನ, ಇತ್ತೀಚೆಗೆ ಹರಿದಾಡಿದ ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ತಮ್ಮ ಬಾಲ್ಯದ ದಿನಗಳನ್ನು ನೆನೆದಿರುವ ಅವರು ತಮಗೆ ಎದುರಾಗಿದ್ದ ಕೆಟ್ಟ ಅನುಭವವನ್ನು ರಿವೀಲ್ ಮಾಡಿದ್ದಾರೆ.

ನನ್ನ ಬದುಕಿನಲ್ಲಿ ಎರಡು ಕೆಟ್ಟ ಘಟನೆಗಳು ನಡೆದಿವೆ. ಬೆಂಗಳೂರಿನ ತ್ಯಾಗರಾಜನಗರದ ವಠಾರದಲ್ಲಿ ನಾವು ವಾಸ ಇದ್ವಿ. ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ವಠಾರದಲ್ಲಿದ್ದ ಮೆಟ್ಟಿಲುಗಳೇ ನಮ್ಮ ಅಡ್ಡಾ ಆಗಿತ್ತು. ಅದು ರಸ್ತೆಯ ಪಕ್ಕದಲ್ಲೇ ಇದ್ದಿದ್ದರಿಂದ ಹೆಚ್ಚು ಜನರ ಓಡಾಟವೂ ಇರಲಿಲ್ಲ. ಬೇಸಿಗೆ ರಜೆ ಇದ್ದಿದ್ದರಿಂದ ಒಂದು ದಿನ ನಾನು ನನ್ನ ಸ್ನೇಹಿತೆ ಇಬ್ಬರೂ ಆ ಮೆಟ್ಟಿಲ ಬಳಿ ಕುಳಿತಿದ್ವಿ. ಆಗ ಒಬ್ಬ ಅಂಕಲ್ ಗಾಡಿಲಿ ಬಂದ್ರು, ನಮ್ಮ ಮುಂದೆ ಬಂದು ಗಾಡಿ ನಿಲ್ಲಿಸಿದ್ರುʼ ಎಂದು ನಯನಾ ಹೇಳಿದ್ದಾರೆ.
ʼನಾವು ಆಗ ಆ ಅಂಕಲ್ ಯಾರಿಗೋ ಕಾಯುತ್ತಿರಬೇಕು ಎಂದು ನಮ್ಮ ಪಾಡಿಗೆ ನಾವು ಮಾತನಾಡಿಕೊಂಡು ಇದ್ವಿ. ಅಂಕಲ್ ಸುಮಾರು ಹತ್ತು ನಿಮಿಷಗಳ ಕಾಲ ನಮ್ಮನ್ನೇ ನೋಡುತ್ತಾ ನಿಂತಿದ್ದರು. ಆ ರೋಡಲ್ಲಿ ಯಾರೂ ಇರಲಿಲ್ಲ, ನಮ್ಮ ಪಾಡಿಗೆ ನಾವಿಬ್ಬರೇ ಕೂತಿದ್ವಿ. ನಾವು ಕೂಡ ಆ ವಯಸ್ಸಿಗೆ ಒಳ್ಳೆಯ ಬಟ್ಟೆಗಳನ್ನೇ ಧರಿಸಿದ್ವಿ. ಆದರೆ ಸಡನ್ನಾಗಿ ಆಯಪ್ಪ ತನ್ನ ಪ್ಯಾಂಟ್ ಓಪನ್ ಮಾಡಿ, ಹಸ್ತಮೈಥುನ ಮಾಡಿಕೊಂಡʼ ಎಂದು ತಮಗಾದ ಕೆಟ್ಟ ಅನುಭವವನ್ನು ರಿವೀಲ್ ಮಾಡಿದ್ದಾರೆ.
'ಆ ವ್ಯಕ್ತಿ ಹಾಗೆ ಮಾಡಿದ್ದಕ್ಕೆ ನಮಗೆ ಏನು ಮಾಡಬೇಕು ಅನ್ನೋದು ಕೂಡ ಗೊತ್ತಾಗಲಿಲ್ಲ. ಆದರೆ ಮುಜುಗರದಿಂದ ತಲೆತಗ್ಗಿಸಿಕೊಂಡಿದ್ವಿ. ಆ ವ್ಯಕ್ತಿ ಯಾವುದೇ ಭಯ ಇಲ್ಲದೆ, ಆ ಕೆಟ್ಟ ಕೆಲಸ ಮಾಡಿ ಪ್ಯಾಂಟ್ ಹಾಕ್ಕೊಂಡು ಕೊನೆಗೆ ಗಾಡಿ ತಗೊಂಡು ಅಲ್ಲಿಂದ ಹೊರಟು ಹೋದ. ನಮಗೆ ಆ ವಯಸ್ಸಲ್ಲಿ ಆ ವ್ಯಕ್ತಿ ಯಾಕೆ ಹಾಗೆಲ್ಲ ಮಾಡಿದ ಅನ್ನೋದು ತಿಳಿಯಲಿಲ್ಲ' ಎಂದಿದ್ದಾರೆ.
'ಇದೇ ವೇಳೆ ಎದುರುಗಡೆ ಮನೆಯ ಕಿಟಕಿಯಲ್ಲಿ ಒಂದು ಆಂಟಿ ಇದ್ದರು. ಅವರು ಕಿಟಕಿ ತೆಗೆದು ಹೊರಗೆ ಈ ಘಟನೆಯನ್ನು ನೋಡಿದ್ರು. ಆದರೆ ಅವರು ಏನೂ ಮಾಡಲಿಲ್ಲ. ಹಿರಿಯ ಮಹಿಳೆ ಆಗಿದ್ದ ಅವರು ಆ ಸಂದರ್ಭದಲ್ಲಿ ಅಲ್ಲಿಗೆ ಬಂದು ಏನಾದರೂ ಮಾಡಬಹುದಿತ್ತು. ಆದರೆ ಅವರು ಏನೂ ಮಾಡಲೇ ಇಲ್ಲ, ಎಲ್ಲವನ್ನೂ ನೋಡಿ ಸುಮ್ಮನೆ ಕಿಟಕಿ ಹಾಕ್ಕೊಂಡ್ರು. ಕೊನೆಗೆ ನಮ್ಮ ಅಮ್ಮನ ಹತ್ರ ಬಂದು ನಮ್ಮ ಬಗ್ಗೆ ಕೆಟ್ಟದಾಗಿ ಕಂಪ್ಲೇಟ್ ಮಾಡಿದ್ರು. ಆ ವ್ಯಕ್ತಿ ಕೆಟ್ಟದಾಗಿ ಏನೋ ಮಾಡ್ತಿದ್ರೆ ಈ ಹುಡುಗೀರು ಅದನ್ನ ನೋಡ್ಕೊಂಡು ಕೂತಿದ್ರು ಎಂದು ಆಂಟಿ ಬಂದು ಅಮ್ಮನಿಗೆ ಹೇಳಿದ್ರು' ಎಂದು ನಯನಾ ಅವರ ಆ ದಿನದ ಘಟನೆ ನೆನೆದಿದ್ದಾರೆ.












Click it and Unblock the Notifications