ಕಿರುತೆರೆಯಿಂದ ಹಿರಿತೆರೆಗೆ ಮತ್ತೊಬ್ಬ ಕಲಾವಿದ: ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಪಾರು ಖ್ಯಾತಿಯ 'ಆದಿ'
ಬೆಂಗಳೂರು, ಮಾರ್ಚ್. 29: ಕನ್ನಡ ಕಿರುತೆರೆಯಲ್ಲಿ ಸುಮಾರು ಆರು ವರ್ಷ ಸಕತ್ ಹೈಪ್ ಕ್ರಿಯೇಟ್ ಮಾಡಿದ್ದ ಧಾರಾವಾಹಿ 'ಪಾರು'. ಈ ಧಾರಾವಾಹಿಯಲ್ಲಿ ಪಾರು ಪಾತ್ರದಿಂದ ಮೋಕ್ಷಿತಾ ಪೈ ಹೇಗೆ ಫೇಮಸ್ ಆದರೋ ಹಾಗೆಯೇ ಆದಿ ಪಾತ್ರದಿಂದ ಖ್ಯಾತಿ ಪಡೆದವರು ನಟ ಶರತ್ ಪದ್ಮನಾಭ್.
ಜೀ ಕನ್ನಡದಲ್ಲಿ ಬರುತ್ತಿದ್ದ ಪಾರು ಸೀರಿಯಲ್ ಈಗ ಅಂತ್ಯ ಕಂಡಿದೆ. ಆರು ವರ್ಷ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಈ ಧಾರಾವಾಹಿ ಒಂದು ಹಿಟ್ ಶೋ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆದ್ದಿರುವ ಆದಿ ಅಂದರೆ ಶರತ್ ಪದ್ಮನಾಭ್ ನಾಯಕನಾಗಿ ಕನ್ನಡ ಹಿರಿತೆರೆ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ನಟ ಶರತ್ ಪದ್ಮನಾಭ್ ನಾಯಕನಾಗಿ ಬಣ್ಣ ಹಚ್ಚಿರುವ ಚೊಚ್ಚಲ ಸಿನಿಮಾಗೆ 'ಅನಿಮಾ' ಎಂಬ ಹೆಸರು ಇಡಲಾಗಿದೆ. ಈ ಹಿಂದೆ ರೈತರ ಕುರಿತ ಹೊನ್ನು ಬಿತ್ಯಾರು ಎಂಬ ಕಿರುಚಿತ್ರ ಮಾಡಿದ್ದ ನಿರ್ದೇಶಕ ವರ್ಧನ್ ಎಂ ಎಚ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. 'ಅನಿಮಾ' ಎಂದರೆ ಪ್ರತಿಬಿಂಬ ಕಾಣದ ಕನ್ನಡಿ ಎಂದರ್ಥ.
ಎ ಡ್ರೀಮರ್ಸ್ ಸ್ಟುಡಿಯೋ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಅನಿಮಾ ಸಿನಿಮಾದ ಚಿತ್ರೀಕರಣ ಕೊನೆ ಹಂತದಲ್ಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಎನ್ನಲಾಗಿದೆ. ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹುಲಿಯೂರು ದುರ್ಗ ಸುತ್ತಮುತ್ತ ಈಗಾಗಲೇ ಶೂಟಿಂಗ್ ನಡೆಸಲಾಗುತ್ತಿದೆ.

ಅನಿಮಾ ಪೋಸ್ಟರ್ ರಿಲೀಸ್
ನಟ ಶರತ್ ಪದ್ಮನಾಭ್ ನಟನೆಯ 'ಅನಿಮಾ' ಸಿನಿಮಾ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ವಿಭಿನ್ನವಾಗಿದ್ದು, ದಟ್ಟ ಕಾಡಿನ ಮಧ್ಯೆ ಸಾಗುತ್ತಿರುವ ಕಾರು ನಾನಾ ಕಥೆಯನ್ನು ಬಿಚ್ಚಿಡುತ್ತಿದೆ. ಸಿನಿಮಾ ಪೋಸ್ಟರ್ ಅನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಟ ಶರತ್ ಪದ್ಮನಾಭ್ ಹಂಚಿಕೊಂಡಿದ್ದಾರೆ.
" ಅನಿಮಾ, ನಮ್ಮ ಸಿನಿಮಾ, ನಿಮ್ಮ ಸಿನಿಮಾ ಆಗುವ ಮೊದಲ ಹೆಜ್ಜೆ!! Presenting you the title poster of our movie !!
ಒಂದು ರೋಚಕವಾದ ಕಥೆಯನ್ನು ಹೇಳಲು ಆದಷ್ಟು ಬೇಗ ಬರ್ತಾ ಇದೀವಿ !! ನಮ್ಮ ತಂಡಕ್ಕೆ ನಿಮ್ಮ ಬೆಂಬಲವಿರಲಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ಅನಿಮಾ ಚಿತ್ರದಲ್ಲಿ ಶರತ್ ಪದ್ಮನಾಭ್ ನಾಯಕನಾಗಿ ನಟಿಸ್ತಿದ್ದು, ಅನುಷಾ ಕೃಷ್ಣ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಪಂಕಜ್ ಎಸ್ ನಾರಾಯಣ್, ಯುವ ಶೆಟ್ಟಿ, ವಾಣಿ, ಸೂರಿ, ಸುಷ್ಮಿತಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಎನ್ ಕೆ ರಾಜ್ ಛಾಯಾಗ್ರಹಣ, ವಿರಾಜ್ ವಿಶ್ವ ಸಂಭಾಷಣೆ, ರೋನಾದ ಬಕ್ಕೇಶ್ ಸಂಗೀತ 'ಅನಿಮಾ'ಗೆ ಇದೆ.












Click it and Unblock the Notifications