ನನ್ನ ಖಾಸಗಿ ಭಾಗಕ್ಕೆ ಥಳಿಸಿ, ಪತಿ ಮೇಲೆ ಹಲ್ಲೆ ನಡೆಸಿದ್ರು: ನಟಿ ಕಾವ್ಯ ಗೌಡ ಕುಟುಂಬದಲ್ಲಿ ಕಲಹ, ದೂರು ದಾಖಲು
"ರಾಧಾರಮಣ" ಸೀರಿಯಲ್ ಖ್ಯಾತಿಯ ನಟಿ ಕಾವ್ಯ ಗೌಡ ಕೌಟುಂಬಿಕ ಕಲಹ ಇದೀಗ ಬೀದಿಗೆ ಬಂದಿದೆ. ಕಾವ್ಯ ಹಾಗೂ ಪತಿ ಮೇಲೆ ಸಂಬಂಧಿಗಳೇ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಅಲ್ಲದೆ ಕಾವ್ಯ ಗೌಡ ಅವರಿಗೆ ಅತ್ಯಾಚಾರದ ಬೆದರಿಕೆಯೂ ಹಾಕಿರುವ ಆರೋಪವಿದ್ದು, ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾವ್ಯ-ಅತ್ತಿಗೆ ನಡುವೆ ಜಗಳ
ಸೋಮಶೇಖರ್ ಅವರನ್ನು ಕಾವ್ಯ ಗೌಡ ಮದುವೆಯಾಗಿದ್ದರು. ಸಹೋದರರಾದ ಸೋಮಶೇಖರ್ ಹಾಗೂ ನಂದೀಶ್ ಒಂದೇ ಮನೆಯಲ್ಲಿ ವಾಸವಿದ್ದರು. ಆದರೆ ನಂದೀಶ್ ಅವರ ಪತ್ನಿ ಪ್ರೇಮ ಹಾಗೂ ಕಾವ್ಯ ಗೌಡ ನಡುವೆ ಆಗಾಗ ಮನಸ್ತಾಪ ಇತ್ತು ಎನ್ನಲಾಗಿದೆ. ಕಾವ್ಯಗೌಡ ಅವರ ಮಗಳನ್ನು ಆರೈಕೆ ಮಾಡಿಕೊಳ್ಳಲು ಇದ್ದ ಹುಡುಗಿ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿ, ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.

ನಂತರ ಗಲಾಟೆ ತೀವ್ರಗೊಂಡು ಇಬ್ಬರೂ ಕೈಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಪ್ರೇಮಾ ಅವರ ಕುಟುಂಬಸ್ಥರು ಕಾವ್ಯ ಗೌಡಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದೇ ಗಲಾಟೆಯಲ್ಲಿ ಕಾವ್ಯ ಗೌಡ ಅವರ ಪತಿ ಸೋಮಶೇಖರ್ ಮೇಲೂ ಹಲ್ಲೆ ನಡೆದಿದ್ದು, ಚಾಕುವಿನಿಂದ ಇರಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಸೋಮಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಾವ್ಯ ಗೌಡ ಅವರ ಸಹೋದರಿ ಭವ್ಯಾ ಗೌಡ ಅವರು ಪ್ರೇಮಾ, ನಂದೀಶ್, ಪ್ರಿಯಾ, ರವಿಕುಮಾರ್ ಎಂಬುವವರ ಮೇಲೆ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಮತ್ತೊಂದೆಡೆ ಪ್ರೇಮಾ ಅವರ ಕುಟುಂಬ ಕೂಡ ಪ್ರತಿದೂರು ನೀಡಿದ್ದಾರೆ.
ಘಟನೆ ವಿವರಿಸಿದ ಕಾವ್ಯ ಗೌಡ
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಕಾವ್ಯ ಗೌಡ, 'ನನ್ನ ಮಗಳನ್ನು ನೋಡಿಕೊಳ್ಳಲು ಬಂದಿದ್ದ ಹುಡುಗಿ ಮೇಲೆ ಕಳ್ಳತನದ ಆರೋಪ ಮಾಡಿದ್ರು. ಅದು ಸರಿಯಲ್ಲ, ನಮ್ಮ ಮನೆಯಲ್ಲಿ ಎಲ್ಲ ಕಡೆ ಕ್ಯಾಮರಾ ಇದೆ. ನಮ್ಮ ಮಾವ ಇದನ್ನ ಇತ್ಯರ್ಥ ಮಾಡಿದ್ರು. ಮನೆ ಅಂದ ಮೇಲೆ ಗಲಾಟೆ ಇದ್ದೇ ಇರುತ್ತೆ, ಹಾಗಂತ ನಾನು ಕೊಚ್ಚೆ ಮೇಲೆ ಕಲ್ಲು ಹಾಕಲ್ಲ' ಎಂದಿದ್ದಾರೆ.
'ನನ್ನ ಮಗಳನ್ನ ನೋಡಿಕೊಳ್ಳುವ ಹುಡುಗಿಯನ್ನ ಕಳ್ಳಿ ಎಂದು ಕರೆದು, ನನ್ನ ಮಗು ಮೇಲೂ ಕೈ ಮಾಡಿದ್ದಾರೆ. ನಂತರ ಪ್ರೇಮಾ ಅವರ ಮನೆಯವರು ಮನೆಗೆ ಬಂದು ನನ್ನ ಮೇಲೆ ಹಲ್ಲೆಗೆ ಮುಂದಾದರು. ಅವರ ತಂದೆ ನನಗೆ ರಾಜಕೀಯದವರ ಬೆಂಬಲ ಇದೆ, ನಿನ್ನನ್ನ ಎಲ್ಲರ ಮುಂದೆ ಅತ್ಯಾಚಾರ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ರು. ನನ್ನ ಖಾಸಗಿ ಭಾಗಗಳ ಮೇಲೂ ಥಳಿಸಿದ್ದಾರೆ. ನನ್ನ ಗಂಡನಿಗೂ ಚಾಕುವಿನಿಂದ ಚುಚ್ಚಿದ್ದಾರೆ, ಅದೃಷ್ಟವಶಾತ್ ಅವರ ಪ್ರಾಣಕ್ಕೆ ಏನೂ ಅಪಾಯವಿಲ್ಲ. ಹೀಗಾಗಿ ಅವರಿಗೆ ಕಾನೂನು ಪ್ರಕಾರವೇ ಶಿಕ್ಷೆ ಆಗಬೇಕು. ನನಗೆ ನ್ಯಾಯ ಸಿಗಬೇಕು' ಎಂದು ಕಾವ್ಯ ಗೌಡ ಒತ್ತಾಯಿಸಿದ್ದಾರೆ.












Click it and Unblock the Notifications