ದರ್ಶನ್ ಕೇಸ್ ಬಗ್ಗೆ ನಟ ರಮೇಶ್ ಅರವಿಂದ್ ಅಚ್ಚರಿಯ ಹೇಳಿಕೆ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರ ಬಗ್ಗೆ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ನಟ ರಮೇಶ್ ಅರವಿಂದ್ ಮಾತನಾಡಿದ್ದಾರೆ. ʼದರ್ಶನ್ ಅವರಿಗೆ ತಪ್ಪು ತಿದ್ದುಕೊಂಡು ನಿನ್ನೆಯ ದರ್ಶನ್ ಆಗಲು ಅವಕಾಶವಿದೆʼ ಎಂದು ಹೇಳಿದ್ದಾರೆ.
ನಮಗೆ ಗೊತ್ತಿರುವ ವ್ಯಕ್ತಿ ತಪ್ಪು ಮಾಡಿದಾಗ ಆ ವ್ಯಕ್ತಿ ನನಗೆ ಗೊತ್ತಿದ್ದಾರೆ ಎನ್ನುವ ಕಾರಣಕ್ಕೆ ಅದನ್ನು ತಪ್ಪೇ ಅಲ್ಲ ಎಂದು ಹೇಳಲು ಆಗಲ್ಲ. ಅದೇ ರೀತಿ ತಪ್ಪು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಆ ವ್ಯಕ್ತಿ ನನಗೆ ಗೊತ್ತೇ ಇಲ್ಲ ಎಂದೂ ಹೇಳಲು ಸಾಧ್ಯವಿಲ್ಲ. ಕಲಾವಿದರಾಗಿ ನಾವು ಈ ಇಕ್ಕಟ್ಟಿನಲ್ಲಿ ಸಿಲುಕಿದ್ದೇವೆ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.

ನಟ ದರ್ಶನ್ ಅವರ ಬಗ್ಗೆ ನಾನು ಇಲ್ಲಿವರೆಗೆ ಮಾತನಾಡಲಿಲ್ಲ. ನಾನು ಹೆಚ್ಚಾಗಿ ಇಂತಹ ವಿಷಯಗಳ ಬಗ್ಗೆ ಮಾತನಾಡುವುದೂ ಇಲ್ಲ. ನಾನು ನೋಡಿದಂತೆ ಇಲ್ಲಿ ಮೂವರು ದರ್ಶನ್ ಇದ್ದಾರೆ. ಒಬ್ಬರು ನಿನ್ನೆಯ ದರ್ಶನ್. ಅವರು ಒಳ್ಳೆಯ ಸಿನಿಮಾಗಳಿಂದ ಹೆಚ್ಚು ಮಜಾ ಕೊಟ್ಟ ಸೂಪರ್‌ಸ್ಟಾರ್. ಅವರನ್ನು ವೀಕೆಂಡ್ ವಿತ್ ರಮೇಶ್ ಕುರ್ಚಿಯಲ್ಲೂ ನೋಡಿದ್ದೇನೆ.
ಎರಡನೇ ರೀತಿಯ ದರ್ಶನ್ ಅವರನ್ನು ಈಗ ನೋಡುತ್ತಿದ್ದೇನೆ. ಸದ್ಯದ ಘಟನೆಯಿಂದ ನಮಗೂ ಬೇಸರವಾಗಿದೆ. ಒಂದು ದೊಡ್ಡ ತಪ್ಪು ನಡೆದು ಹೋಗಿದೆ. ಇನ್ನು ಈ ತಪ್ಪು ಯಾರು ಮಾಡಿದ್ದರೂ ಶಿಕ್ಷೆ ಆಗಲೇಬೇಕು. ಅದನ್ನು ಕಾನೂನು ನೋಡಿಕೊಳ್ಳುತ್ತದೆ.
ಮೂರನೇದು ನಾಳೆಯ ದರ್ಶನ್. ಅಂದರೆ, ಈ ಘಟನೆಯ ಶಿಕ್ಷೆಯ ಅನುಭವಿಸಿ ಹೊರಬಂದಾಗ ಆ ನಾಳೆಯ ದರ್ಶನ್ ಏನು ಮಾಡುತ್ತಾರೆ ಎನ್ನುವುದೇ ನನಗಿರುವ ಕುತೂಹಲ. ನಾವು ಓಡಾಡುವ ರಸ್ತೆಯಲ್ಲಿ ಯೂಟರ್ನ್ ಇಲ್ಲ ಎನ್ನುವ ಬೋರ್ಡ್ ಇರುತ್ತದೆ.

ಆದರೆ, ಜೀವನದಲ್ಲಿ ಹಾಗಲ್ಲ, ಶಿಕ್ಷೆ ಅನುಭವಿಸಿದ ಮೇಲೂ ಒಂದು ಅವಕಾಶ ನಮ್ಮ ಮುಂದಿರುತ್ತದೆ. ಮಾಡಿದ ತಪ್ಪನ್ನು ತಿದ್ದುಕೊಂಡು ನಿನ್ನೆಯ ದರ್ಶನ್ ಆಗಲು ಅವಕಾಶವಿದೆ. ಆದರೆ ದರ್ಶನ್ ಏನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಷ್ಟೇ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಟ ದರ್ಶನ್ ಹಾಗೂ ರಮೇಶ್ ಅರವಿಂದ್ ಅವರ ನಡುವೆ ಉತ್ತಮ ಒಡನಾಟವಿತ್ತು. ಈ ಹಿಂದೆ ಇವರು ಖಾಸಗಿ ವಾಹಿನಿಯಲ್ಲಿ ನಡೆಸಿಕೊಡುತ್ತಿದ್ದ ʼವೀಕೆಂಡ್ ವಿತ್ ರಮೇಶ್ʼ ಕಾರ್ಯಕ್ರಮದಲ್ಲಿ ದರ್ಶನ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ದರ್ಶನ್ ಅವರ ಬದುಕಿನ ಚಿತ್ರಣವನ್ನು ರಮೇಶ್ ಅರವಿಂದ್ ಅವರು ಸೊಗಸಾಗಿ ಪ್ರೇಕ್ಷಕರ ಮುಂದಿಟ್ಟಿದ್ದರು. ಇದೇ ಕಾರ್ಯಕ್ರಮದಲ್ಲಿ ದರ್ಶನ್ ಅವರ ಬದುಕಿನ ಅದೆಷ್ಟೋ ವಿಚಾರಗಳು ಅಂದು ಹೊರಜಗತ್ತಿಗೆ ಪರಿಚಯವಾಗಿತ್ತು.












Click it and Unblock the Notifications