"ಸುದೀಪ್ ಏನ್ ದೊಡ್ಡ ಹೀರೋನಾ? 30 ವರ್ಷದ ಹಿಂದೆ ಎಲ್ಲಿದ್ರಿ ನೆನಪಿದ್ಯಾ?"
ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಇತ್ತೀಚೆಗೆ ಕನ್ನಡದಲ್ಲಿ ಹೆಚ್ಚಾಗಿ ಸಿನಿಮಾ ಮಾಡುತ್ತಿಲ್ಲ. ಇದರಿಂದ ಚಿತ್ರರಂಗ ನೆಲಕಚ್ಚುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ ಕನ್ನಡದ ಸ್ಟಾರ್ ಹೀರೋಗಳು ಹೊರರಾಜ್ಯಗಳ ನಿರ್ದೇಶಕರು, ನಿರ್ಮಾಪಕರ ಹಿಂದೆ ಬಿದ್ದಿದ್ದಾರೆ ಎಂದು ಚಿತ್ರರಂಗದವರೇ ಆಗಾಗ ಬೇಸರ ಹೊರಹಾಕುತ್ತಿದ್ದಾರೆ. ನಟರ ಈ ನಡೆಯಿಂದ ಚಿತ್ರರಂಗದಲ್ಲಿ ಯಾರಿಗೂ ಸರಿಯಾಗಿ ಕೆಲಸ ಸಿಗುತ್ತಿಲ್ಲ, ಹೊಟ್ಟೆಪಾಡು ನಡೆಯುವುದೂ ಕಷ್ಟ ಎನ್ನುವ ಪರಿಸ್ಥಿತಿ ತಲುಪಿದೆ ಎಂದು ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕರೊಬ್ಬರು ಆಕ್ರೋಶದ ಮಾತುಗಳನ್ನಾಡಿದ್ದಾರೆ. ಇನ್ನು ನಟ ಕಿಚ್ಚ ಸುದೀಪ್ ವಿರುದ್ಧವೂ ಅಸಮಾಧಾನ ಹೊರಹಾಕಿದ್ದು, 'ಸುದೀಪ್ ಏನು ದೊಡ್ಡ ಸ್ಟಾರಾ?' ಎಂದು ಕೇಳಿದ್ದಾರೆ.
'ಏನ್ ನಿಮ್ಗೆ? ಹಣ ಕೊಡ್ತಿಲ್ವಾ? ನೀವು ಮಜಾ ಮಾಡಿಕೊಂಡಿದ್ರೆ, ಬಡವರ ಮನೆ ಮಕ್ಕಳು ಎಲ್ಲಿಗೆ ಹೋಗಬೇಕು? ಕಾರ್ಮಿಕರು, ನಿರ್ದೇಶಕರು ಎಲ್ಲಿಗೆ ಹೋಗಬೇಕು. ಥಿಯೇಟರ್‌ನವರು ಸಿನಿಮಾಗಳಿಲ್ಲದೇ ಸತ್ತೇ ಹೋಗಿದ್ದಾರೆ. ಬಾಡಿಗೆ, ಟ್ಯಾಕ್ಸ್ ಕಟ್ಟೋಕಾಗದೆ ಒದ್ದಾಡುತ್ತಿದ್ದಾರೆ. ಅದೆಲ್ಲ ಈ ನಟರಿಗೆ ಕಾಣಲ್ವಾ? ಈಗಲಾದರೂ ಬುದ್ಧಿ ಕಲೀರಿ' ಎಂದು ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಗರಂ ಆಗಿದ್ದಾರೆ.

'ನಟರು ನಮ್ಮ ಫೋನ್‌ಗಳನ್ನ ಕಟ್ ಮಾಡ್ತಾರೆ. ಇಲ್ಲಿ ದುಡ್ಡಿನ ಪ್ರಶ್ನೆ ಅಲ್ಲ, ಇವತ್ತಿಗೂ ನೂರು ಸಿನಿಮಾ ಮಾಡುವ ಶಕ್ತಿ ದೇವರು ಕೊಟ್ಟಿದ್ದಾನೆ. ಕನ್ನಡ ಚಿತ್ರರಂಗ ಅಂದ್ರೆ ಎಲ್ಲರ ಬದುಕು. ಎಲ್ಲರೂ ಚೆನ್ನಾಗಿರಬೇಕು. ನಾನು ಅನೇಕ ನಟರಿಗೆ ಈ ಹಿಂದೆ ಅಡ್ವಾನ್ಸ್ ಕೊಟ್ಟಿದ್ದೀನಿ. ಅವರು ಈಗ ನಮ್ಮನ್ನ ಮೂಸಿ ಕೂಡ ನೋಡ್ತಿಲ್ಲ. ನಮ್ಮ ಫೋನ್ ತೆಗೀತಿಲ್ಲ. ಸುತ್ತ ಹತ್ತತ್ತು ಜನ ಬಾಡಿಗಾರ್ಡ್‌ಗಳು ಇರ್ತಾರೆ. ನಮ್ಮನ್ನ ಹತ್ತಿರವೂ ಸೇರಿಸ್ತಿಲ್ಲ' ಎಂದಿದ್ದಾರೆ.
ಸಿನಿಮಾ ಮಾಡೋಕೆ ರೋಗನಾ?
'ಹಿಂದೆ ನಾವು ಅಣ್ಣಾವ್ರ ಹತ್ತಿರ ನೇರವಾಗಿ ಹೋಗಿ ಭೇಟಿಯಾಗಿ ಬರುತ್ತಿದ್ವಿ. ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ. ಅವರ ಮನೆ ಗೇಟ್ ಹತ್ರ ಹೋಗಿ ನಿಲ್ಲಬೇಕು. ಒಂದು ವೇಳೆ ಆ ನಟರು ಇಲ್ಲ ಅಂದ್ರೆ ನಮ್ಮನ್ನ ಅಲ್ಲಿಂದ ಓಡಿಸುತ್ತಾರೆ. ಒಂದು ಕಾಫಿ, ಟೀಗೂ ಮರ್ಯಾದೆ ಇಲ್ಲ. ಅಲ್ಲಿಗೆ ಹೋದ್ರೆ ಬಾಡಿಗಾರ್ಡ್‌ಗಳು ಇರ್ತಾರೆ. ಅವರನ್ನ ನೋಡಿದ್ರೆ ಭಯ ಆಗುತ್ತೆ. ಆಗ ರಾಜ್‌ಕುಮಾರ್ ಅವರಿಗೆ ಯಾವ ಬಾಡಿಗಾರ್ಡ್ ಇರುತ್ತಿರಲಿಲ್ಲ. ನಟರು ಹಣ ಮಾಡಿಕೊಂಡಿದ್ದಾರೆ. ಅದು ನೂರು ವರ್ಷ ಆದ್ರೂ ಕರಗೋದಿಲ್ಲ. ಆದರೆ ಕೆಲಸಗಾರರಿಗೆ ಹಾಗಲ್ಲ, ದಿನಾ ಕೆಲಸ ಮಾಡಬೇಕು, ತಿನ್ನಬೇಕು. ಈಗ ಇಂಡಸ್ಟ್ರಿಯಲ್ಲಿ ಇದೇ ಸಮಸ್ಯೆ. ಒಬ್ಬ ನಟ ಮೂರು, ನಾಲ್ಕು ವರ್ಷ ಆದ್ರೂ ಸಿನಿಮಾ ಮಾಡಲ್ಲ. ಯಾಕೆ ಮಾಡಲ್ಲ? ರೋಗನಾ?' ಎಂದು ಗುಡುಗಿದ್ದಾರೆ.

ಸುದೀಪ್ ಸಂಭಾವನೆ ಕೇವಲ 9 ಲಕ್ಷ
'ಸುದೀಪ್ ಹಳೇ ಹೀರೋ ಏನಲ್ಲ. ಅವರೂ ಹೊಸಬರೇ. ಸುದೀಪ್‌ಗೆ ಸಿನಿಮಾ ಮಾಡಿದ್ದೆ. ಧಮ್ ಸಿನಿಮಾ ಕಮರ್ಷಿಯಲ್ ಹಿಟ್, ಕಪಾಲಿ ಥಿಯೇಟರ್‌ನಲ್ಲಿ ನೂರು ದಿನ ಪ್ರದರ್ಶನ ಕಂಡಿತ್ತು. ಆಗಿನ ಕಾಲಕ್ಕೇ ಎರಡು ಕೋಟಿ ಲಾಭ ತಂದುಕೊಟ್ಟಿತ್ತು. ಆಗ ಅವರ ಸಂಭಾವನೆ ಕೇವಲ 9 ಲಕ್ಷ ರೂಪಾಯಿ. ಇನ್ನೂ ಒಂದು ಲಕ್ಷ ಹೆಚ್ಚು ಕೇಳಿದ್ರು. ಅದನ್ನೂ ಕೊಟ್ಟಿದ್ದೀನಿ. ಈಗ ಕೈಗೆ ಸಿಗೋದೆ ಇಲ್ಲ ಅಂದ್ರೆ ಹೇಗೆ? ಎಂದು ಕಿಚ್ಚ ಸುದೀಪ್ ವಿರುದ್ಧ ಬೇಸರ ಹೊರಹಾಕಿದ್ದಾರೆ. ಏನ್ ನಿಮ್ದು? ಯಾಕೆ ಸಿಗಲ್ಲ? ನಾವು ನಿಮ್ಮನ್ನ ಕನ್ನಡದಲ್ಲಿ ಬೆಳೆಸಿಲ್ವಾ? ಮೂವತ್ತು ವರ್ಷದ ಹಿಂದೆ ನೀವು ಎಲ್ಲಿದ್ರಿ? ಅನ್ನೋದನ್ನ ಅರ್ಥ ಮಾಡಿಕೊಳ್ಳಿ. ಈಗ ಅವರೇ ಫೋನ್ ತೆಗೆಯಲ್ಲ ಅಂದ್ರೆ ಹೇಗೆ? ಎಂದು ನಟರ ವಿರುದ್ಧ ಗರಂ ಆಗಿದ್ದಾರೆ. ಈಗ ಹೊಸ ಹೀರೋಗಳನ್ನ ರೆಡಿ ಮಾಡ್ತೀನಿ' ಎಂದೂ ಸವಾಲ್ ಹಾಕಿದ್ದಾರೆ ಕನಕಪುರ ಶ್ರೀನಿವಾಸ್.
ಈ ಹಿಂದೆಯೂ ಕನಕಪುರ ಶ್ರೀನಿವಾಸ್ ಅವರು ಸ್ಯಾಂಡಲ್‌ವುಡ್ ಸ್ಟಾರ್ ನಟರ ವಿರುದ್ಧ ಗುಡುಗಿದ್ದರು. ಕನ್ನಡ ನಟರ ಬೇರೆ ರಾಜ್ಯಗಳಲ್ಲಿ ಡೇಟ್ ಕೊಡುತ್ತಿದ್ದಾರೆ. ಕನ್ನಡ ಚಿತ್ರರಂಗ ನೆಲಕಚ್ಚಿದೆ. ಕಲಾವಿದರು, ನಿರ್ದೇಶಕರು ಹೊಟ್ಟೆಪಾಡಿಗಾಗಿ ಅಲೆಯುತ್ತಿದ್ದಾರೆ. ಸುದೀಪ್, ಶ್ರೀಮುರುಳಿಗೆ ಆಗ ಹಿಟ್ ಸಿನಿಮಾ ಮಾಡಿದವನು ನಾನು. ಇವತ್ತು ಅವರೆಲ್ಲ ಕೈಗೆ ಸಿಗೋದೇ ಇಲ್ಲ. ಅದಕ್ಕೆ ಹೊಸ ಹುಡುಗರನ್ನ ಚಿತ್ರರಂಗದಲ್ಲಿ ಬೆಳೆಸುತ್ತೀನಿ, ಹತ್ತು ನಟರನ್ನು ಹುಟ್ಟಾಕಿ ಕನಕಪುರ ಶ್ರೀನಿವಾಸ್ ಯಾರೂ ಅಂತ ತೋರಿಸ್ತೀನಿ ಎಂದು ಸವಾಲ್ ಹಾಕಿದ್ದರು.












Click it and Unblock the Notifications