Jugari Cross: ತೆರೆ ಮೇಲೆ ಬರಲಿದೆ ತೇಜಸ್ವಿಯವರ 'ಜುಗಾರಿ ಕ್ರಾಸ್'
ಪೂರ್ಣಚಂದ್ರ ತೇಜಸ್ವಿಯವರ 'ಜುಗಾರಿ ಕ್ರಾಸ್' ತೆರೆ ಮೇಲೆ ಬರಲು ಸಜ್ಜಾಗಿದೆ. ತೇಜಸ್ವಿ ಹುಟ್ಟುಹಬ್ಬದ ದಿನದಂದೇ ಜುಗಾರಿ ಕ್ರಾಸ್ ಸಿನಿಮಾದ ಮೊದಲ ಲುಕ್ ಬಿಡುಗಡೆಯಾಗಿದೆ. ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ನಡುವೆ ನಡೆಯುವ ರಣ ರೋಚಕ ಕಥೆ ಇದೀಗ ಬೆಳ್ಳಿ ಪರದೆ ಮೇಲೆ ಬರಲಿದೆ. ಕನ್ನಡ ಕಾದಂಬರಿ ಲೋಕದಲ್ಲಿ ಜುಗಾರಿ ಕ್ರಾಸ್ ಮಾರಾಟದಲ್ಲಿ ದಾಖಲೆ ಬರೆದಿದೆ. ಕನ್ನಡಿಗರ ನೆಚ್ಚಿನ ಕಾದಂಬರಿಯಲ್ಲಿ ಜುಗಾರಿ ಕ್ರಾಸ್ ಇದ್ದೇ ಇರುತ್ತದೆ. ಈಗ ಇದೇ ಕಥೆಯನ್ನು ತೆರೆ ಮೇಲೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕನ್ನಡ ಪುಸ್ತಕ ಪ್ರಿಯರು 'ಜುಗಾರಿ ಕ್ರಾಸ್' ಕಾದಂಬರಿಯನ್ನು ಓದದೇ ಇರಲು ಸಾಧ್ಯವಿಲ್ಲ. ಅದರಲ್ಲೂ ಪೂರ್ಣಚಂದ್ರ ತೇಜಸ್ವಿಯವರ ಬರವಣಿಗೆ ಗೊತ್ತಿರುವವರಿಗೆ ಜುಗಾರಿ ಕ್ರಾಸ್ ಒಂದು ರಸದೌತಣ ಎನ್ನಬಹುದು.

ಮಲೆನಾಡಿನ ಕೃಷಿಕ ದಂಪತಿಗಳ ಬದುಕಿನಲ್ಲಿ ನಡೆಯುವ ಘಟನೆಗಳ ಕಥೆಯೇ ಜುಗಾರಿ ಕ್ರಾಸ್. ಪಶ್ಚಿಮ ಘಟ್ಟಗಳ ಮಹತ್ವ, ಅಲ್ಲಿ ನಡೆಯುವ ಕಾಡು ಕಳ್ಳತನ, ಒತ್ತುವರಿ, ನಿಗೂಢ ವಿಸ್ಮಯಗಳನ್ನು ಓದುಗರ ಮುಂದೆ ತಮ್ಮ ಬರವಣಿಗೆಯ ಮೂಲಕ ಪೂರ್ಣಚಂದ್ರ ತೇಜಸ್ವಿ ಕಟ್ಟಿಕೊಟ್ಟಿದ್ದರು. ಈ ಕಾದಂಬರಿ ಓದುವುದೇ ಒಂದು ರೋಚಕ ಅನುಭವ ಇನ್ನು ಇದನ್ನೇ ಬೆಳ್ಳಿ ತೆರೆ ಮೇಲೆ ತಂದರೆ ಅದು ಮತ್ತಷ್ಟು ರೋಚಕವಾಗುಸಬಹುದು.
ಹಲವು ಬಾರಿ ಪ್ರಯತ್ನ
ತೇಜಸ್ವಿಯವರು ಕೃತಿಗಳನ್ನು ತೆರೆಮೇಲೆ ತರುವ ಸಾಹಸ ಇಂದು ನೆನ್ನೆಯದಲ್ಲ. ಈಗಾಗಲೇ ಅವರ ಕಿರಗೂರಿನ ಗಯ್ಯಾಳಿಗಳು, ಡೇರ್ ಡೆವಿಲ್ ಮುಸ್ತಫಾ ಕಥೆಗಳು ತೆರೆಮೇಲೆ ಬಂದಿವೆ. ಕೃಷ್ಣೇಗೌಡನ ಆನೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರೂ ಅದು ಇನ್ನೂ ಯೋಜನೆಯ ಹಂತದಲ್ಲೇ ಇದೆ.
ಜುಗಾರಿ ಕ್ರಾಸ್ ಕಾದಂಬರಿಯನ್ನು ಸಿನಿಮಾ ಮಾಡಲು ಹಲವರು ಪ್ರಯತ್ನ ಮಾಡಿದ್ದರು. ಇದೀಗ ಗುರುದತ್ ಗಾಣಿಗ ಈ ಸಾಹಸಕ್ಕೆ ಮುಂದಾಗಿದ್ದು, ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದಾರೆ. 'ಕರಾವಳಿ' ಸಿನಿಮಾ ಮಾಡುತ್ತಿರುವ ಗುರುದತ್ ಗಾಣಿಗ, ಇದೀಗ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಜುಗಾರಿ ಕ್ರಾಸ್ ಸಿನಿಮಾ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಜುಗಾರಿ ಕ್ರಾಸ್‌ನಂತಹ ಕಾದಂಬರಿಗಳನ್ನು ಸಿನಿಮಾ ಮಾಡುವುದು ಸುಲಭವಾದ ಕೆಲಸವೇನಲ್ಲ. ಮಲೆನಾಡಿನ ಚಿತ್ರಣ, ಮಾಫಿಯಾ, ಮೂಡಿಗೆರೆ, ಏಲಕ್ಕಿ ಮಾರುಕಟ್ಟೆ, ರೈಲು ಮಾರ್ಗದಂತಹ ಅನೇಕ ವಿಚಾರಗಳು ಕಾದಂಬರಿಯಲ್ಲಿ ಬಂದು ಹೋಗುತ್ತವೆ. ಈಗ ಇರುವ ತಂತ್ರಜ್ಞಾನವನ್ನು ಬಳಸಿಕೊಂಡು ಜುಗಾರಿ ಕ್ರಾಸ್ ಅನ್ನು ತೆರೆ ಮೇಲೆ ತರಬಹುದಾದರೂ, ಅದು ನಿಜಕ್ಕೂ ಸವಾಲಿನ ಕೆಲಸ.
ಇನ್ನು ಸಿನಿಮಾದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಕುತೂಹಲ ಕೂಡ ಇದೆ. ಶ್ರೇಷ್ಠ ಕಾದಂಬರಿಯನ್ನು ಸಿನಿಮಾ ಮಾಡಲು ಗುರುದತ್ ಗಾಣಿಗ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಾರಾ ಅಥವಾ ಸ್ಟಾರ್ ಕಲಾವಿದರಿಗೆ ಅವಕಾಶ ಸಿಗುತ್ತದಾ ಎನ್ನುವ ಕುತೂಹಲ ಇದೆ. ತೇಜಸ್ವಿಯವರ ಕಾದಂಬರಿ ಸಿನಿಮಾ ಆಗುತ್ತದೆ ಎನ್ನುವ ಸುದ್ದಿ ಇದೀಗ ಅವರ ಅಭಿಮಾನಿಗಳಿಗೆ ಸಖತ್ ಖುಷಿ ಕೊಡುತ್ತಿದೆ.












Click it and Unblock the Notifications