KGF Chapter-3: ಯಶ್ ನಟನೆಯ 'ಕೆಜಿಎಫ್-3' ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹೊಂಬಾಳೆ
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್' ಸರಣಿ ಸಿನಿಮಾಗಳು ಭಾರತೀಯ ಚಿತ್ರರಂಗವನ್ನು ಶೇಕ್ ಮಾಡಿದ್ದವು. ಕೆಜಿಎಫ್-1ರ ಬಳಿಕ ಕನ್ನಡ ಚಿತ್ರರಂಗವನ್ನು ಇಡೀ ಜಗತ್ತು ತಿರುಗಿ ನೋಡಿತ್ತು. ಇದರ ಮುಂದುವರಿದ ಭಾಗ 'ಕೆಜಿಎಫ್-2' ಕೂಡ ಬಾಕ್ಸಾಫೀಸ್‌ನಲ್ಲಿ ಸಖತ್ ಸೌಂಡ್ ಮಾಡಿ ಯಶ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿಸಿದೆ. ಆದರೆ ಕಥೆ ಇಲ್ಲಿಗೆ ಮುಗೀತು ಎಂದುಕೊಳ್ಳುವಷ್ಟರಲ್ಲಿ 'ಕೆಜಿಎಫ್-3' ಕೂಡ ಬರುತ್ತೆ ಎಂದು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ನೀಡಿತ್ತು ಹೊಂಬಾಳೆ ಫಿಲ್ಮ್ಸ್. ಆದರೆ ಮೂರು ವರ್ಷಗಳಿಂದ ಈ ವಿಚಾರ ಸೈಲೆಂಟಾಗಿಯೇ ಇತ್ತು. ಅಂತೂ ಇಂತೂ 'ಕೆಜಿಎಫ್-3' ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ಸಿನಿ ಜರ್ನಿಗೆ ಕೆಜಿಎಫ್ ಸಿನಿಮಾಗಳು ಒಂದು ದೊಡ್ಡ ತಿರುವನ್ನೇ ನೀಡಿವೆ. ಎಲ್ಲೆಡೆಯೂ ಕೆಜಿಎಫ್‌ನಿಂದ ಕರ್ನಾಟಕವನ್ನು ಗುರುತಿಸಲಾಗುತ್ತಿದೆ. ಕೆಜಿಎಫ್-3 ಸಿನಿಮಾ ಕೂಡ ಬರುತ್ತೆ ಎಂದು ಎರಡನೇ ಚಾಪ್ಟರ್ ಕ್ಲೈಮ್ಯಾಕ್ಸ್‌ನಲ್ಲಿ ಘೋಷಿಸಿದ್ದು ಬಿಟ್ಟರೆ ಇದರ ಬಗ್ಗೆ ಎಲ್ಲಿಯೂ ಯಾವುದೇ ಮಾಹಿತಿ ರಿವೀಲ್ ಆಗಿರಲಿಲ್ಲ. ಆದರೆ ಯಶ್ ಅಭಿಮಾನಿಗಳು ಕೆಜಿಎಫ್-3 ಸಿನಿಮಾ ಯಾವಾಗ ಬರುತ್ತೆ ಅಂತ ಆಗಾಗ ಪ್ರಶ್ನೆಗಳನ್ನು ಕೇಳಿ ಕೇಳಿ ಸುಸ್ತಾಗಿದ್ದರು. ಹೊಂಬಾಳೆ ಕೂಡ ಈ ಗುಟ್ಟನ್ನು ಹಾಗೆಯೇ ಉಳಿಸಿಕೊಂಡಿತ್ತು.

ಆದರೆ ಇಂದು ಹೊಂಬಾಳೆ ಫಿಲ್ಮ್ಸ್ ಕೆಜಿಎಫ್-3 ಸಿನಿಮಾದ ಬಗ್ಗೆ ಕೊನೆಗೂ ಮೌನ ಮುರಿದು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. KGF ಚಾಪ್ಟರ್ 2 ರಿಲೀಸ್ ಆಗಿ ಇಂದಿಗೆ ಮೂರು ವೈಭವದ ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ಜೊತೆಗೆ ಕೆಜಿಎಫ್-3 ಬಗ್ಗೆಯೂ ಹೊಂಬಾಳೆ ದೊಡ್ಡ ಅಪ್ಡೇಟ್ ನೀಡಿದೆ. ಕೆಜಿಎಫ್ ಚಾಪ್ಟರ್-2 ಇಂದಿಗೆ 3 ವರ್ಷಗಳನ್ನು ಆಚರಿಸುತ್ತಿದೆ. ಬೆಳ್ಳಿ ಪರದೆಯನ್ನು ಬೆಚ್ಚಿಬೀಳಿಸಿದ, ಚಿತ್ರಮಂದಿರಗಳನ್ನು ಆಚರಣೆಯ ಅಖಾಡಗಳನ್ನಾಗಿ ಮಾಡಿದ ಮತ್ತು ಚಿನ್ನದ ಪದಕದಲ್ಲಿ ಕೆತ್ತಿದ ಪರಂಪರೆಯನ್ನು ಬಿಟ್ಟ ಭೀಕರ ಚಂಡಮಾರುತ ಎಂದು ಹೊಂಬಾಳೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಕೆಜಿಎಫ್ ಎರಡನೇ ಚಾಪ್ಟರ್‌ನ ವಿಶೇಷ ವಿಡಿಯೋ ಹಂಚಿಕೊಂಡಿರುವ ಹೊಂಬಾಳೆ, ಇದರ ಕೊನೆಯಲ್ಲಿ KGF-3 ಎಂದು ರಿವೀಲ್ ಮಾಡಿದೆ. ಈ ಮೂಲಕ KGF-3 ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸುಳಿವು ನೀಡಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಸದ್ಯ ಯಶ್ ಅವರು ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿರುವುದರಿಂದ ಆ ಸಿನಿಮಾ ಬಳಿಕ KGF-3 ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.

ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಅವರು ಸದ್ಯ ಜ್ಯೂನಿಯರ್ ಎನ್‌ಟಿಆರ್ ಅವರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದರ ಬಳಿಕ ಕೆಜಿಎಫ್ ಅಖಾಡಕ್ಕೆ ಅವರು ಮರಳಲಿದ್ದಾರೆ ಎನ್ನಲಾಗಿದೆ. ನೀಲ್ ಅವರು ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವುದರಿಂದ ಆ ಪ್ರಾಜೆಕ್ಟ್ ಮುಗಿಸಿ ನಂತರ ಕೆಜಿಎಫ್-3 ಡೈರೆಕ್ಟ್ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ, ಯಶ್ ಅಭಿಮಾನಿಗಳು ಚಾಪ್ಟರ್ 3 ಬೇಗ ನೋಡಬೇಕು ಎಂದು ಕಾತರದಲ್ಲಿರುವುದರಿಂದ ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಹೊಂಬಾಳೆ ಕೂಡ ಕೆಜಿಎಫ್-3 ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.












Click it and Unblock the Notifications