ಬಕೆಟ್ ಹಿಡಿಯೋದು ಅಂದ್ರೇನು? ಈ ಪದ ಬಳಸುವ ಮುನ್ನ ಎಚ್ಚರ!
ಬಕೆಟ್ ಹಿಡಿಯೋದು ಎನ್ನುವ ಪದವನ್ನು ನೀವು ಎಲ್ಲೆಡೆ ಕೇಳಿರಬಹುದು. ಇತ್ತೀಚಿಗೆ ಶಾಲೆಗಳಿಂದಲೇ ಶುರುವಾಗುವ ಈ ಪದ ಕಚೇರಿಯವರೆಗೂ ಇದ್ದೇ ಇದೆ. ಅವನು ದೊಡ್ಡ ಬಕೆಟ್ ಗುರು. ಬಕೆಟ್ ಹಿಡಿದು ಹಿಡಿದೇ ತನ್ನೆಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾನೆ ಅಂತೆಲ್ಲಾ ಹೇಳುತ್ತರಲ್ಲಾ ಹಾಗಾದರೆ ಬಕೆಟ್ ಹಿಡಿಯೋದು ಅಂದರೇನು? ಬಕೆಟ್ ಹಿಡಿಯೋದು ಅಂತರಲ್ಲಾ ಹಾಗಂದರೇನು?
ಬಕೆಟ್ ಹಿಡಿಯೋದು ಯಾರು? ಬಕೆಟ್ ಅಂದರೆ ಏನು? ಬಕೆಟ್ ಅನ್ನೇ ಯಾಕೆ ಹಿಡಿಯಬೇಕು? ಬಕೆಟ್ ಎನ್ನುವ ವಸ್ತುವನ್ನೇ ಇಲ್ಲಿ ಯಾಕೆ ಬಳಸಲಾಗುತ್ತದೆ? ಬಕೆಟ್ ಒಕೆ ಆದರೆ ಬಕೆಟ್‌ನಲ್ಲಿ ಹಿಡಿಯೋದು ಏನ್ನನ್ನಾ ಎನ್ನುವ ಅನೇಕ ಪ್ರಶ್ನೆಗಳು ಕಾಡಬಹುದು. ಈ ಎಲ್ಲಾ ಗೊಂದಲಕ್ಕೆ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಉತ್ತರ ಕೊಟ್ಟಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದ ಪ್ರಸಿದ್ಧ ಸ್ಥಳಗಳು, ಅವುಗಳ ಕ್ಷೇತ್ರ ಮಹತ್ವ, ಊರು ಹಾಗೂ ಸ್ಥಳಗಳ ಹೆಸರಿನ ಹಿಂದಿನ ಕಥೆಗಳು ಸೇರಿದಂತೆ ಸಾಮಾನ್ಯ ಜ್ಞಾನಕ್ಕೆ ಉಪಯುಕ್ತವಾಗುವ ಮಾಹಿತಿಗಳನ್ನು ನೀಡುವ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರು ಕೆಲವು ವಿಶೇಷ ಪದಗಳ ಅರ್ಥಗಳನ್ನು ಸಹ ವಿವರಿಸುತ್ತಾರೆ. ಅದೇ ರೀತಿ ಇದೀಗ ಬಕೆಟ್ ಹಿಡಿಯೋದು ಅಂದ್ರೇನು? ಎನ್ನುವ ಪದದ ಅರ್ಥ ತಿಳಿಸಿದ್ದಾರೆ.
'ಬಕೆಟ್ ಹಿಡಿಯೋದು ಅಂದ್ರೆ ಅವನು ಮಾತುಗಳಲ್ಲೇ ನೈಸ್ ಮಾಡಿ, ನೈಸ್ ಮಾಡಿನೇ ಕೆಲಸ ಮಾಡಿಸಿಕೊಂಡ ಅಂತಾ ಹೇಳುತ್ತಾರೆ. ಆದರೆ ಅಲ್ಲಿ ಬಕೆಟ್ ಎನ್ನುವ ಪದವೇ ಯಾಕೆ ಬಂತು. ಯಾಕೆಂದರೆ ಬ್ರಿಟೀಷರ ಕಾಲದಲ್ಲಿ ಬ್ರಿಟೀಷ್ ಅಧಿಕಾರಿಗಳು ಅಲ್ಲಲ್ಲಿ ಮೀಟಿಂಗ್ ಮಾಡಿಕೊಂಡು ಬರುತ್ತಿದ್ದರು. ಆಗ ಎಲ್ಲಾ ಕಡೆಗಳಲ್ಲೂ ಶೌಚಾಲಯದ ಸೌಲಭ್ಯ ಇರುತ್ತಿರಲಿಲ್ಲ. ಹೀಗಾಗಿ ಬ್ರಿಟೀಷ್ ಅಧಿಕಾರಿಗಳ ಬಳಿ ಒಬ್ಬ ಸಹಾಯಕ ಬಕೆಟ್ ಹಿಡಿದುಕೊಂಡು ಇರುತ್ತಿದ್ದ. ಒಂದು ವೇಳೆ ಅವರಿಗೆ ಮೂತ್ರ ವಿಸರ್ಜನೆ ಮಾಡಬೇಕು ಅಂದರೆ ಅದೇ ಬಕೆಟ್‌ಗೆ ಮಾಡುತ್ತಿದ್ದರು. ಬಳಿಕ ಆ ಸಹಾಯಕ ಅದನ್ನು ಹೊರಗಡೆ ತೆಗೆದುಕೊಂಡು ಹೋಗಿ ಎಸೆದು ಬರುತ್ತಿದ್ದ'.

'ಬ್ರಿಟೀಷ್ ಅಧಿಕಾರಿಗಳ ಜೊತೆ ಈ ಕೆಲಸಕ್ಕೆ ಅಂದರೆ ಬಕೆಟ್ ಹಿಡಿದುಕೊಳ್ಳುವವರಿಗೆ ವಿಶೇಷ ಸೌಲಭ್ಯಗಳನ್ನು ಕೊಡಲಾಗುತ್ತಿತ್ತು. ಹೀಗಾಗಿ ನಮಗೆನಾದರೂ ಕೆಲಸ ಆಗಬೇಕು ಎಂದರೆ ಹೋಗಿ ಬಕೆಟ್ ಹಿಡಿ ಆಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅಂದರೆ ಏನಾದರೂ ಕೆಲಸ ಆಗಬೇಕು ಅಂದರೆ ಅವನು ಅಂತಹ ಕೆಲಸ ಮಾಡಲು ಸಹ ಸಿದ್ಧರಿರಬೇಕು. ಇದರಿಂದ ನಿಮ್ಮ ಕೆಲಸ ಆಗುತ್ತದೆ ಎಂದರ್ಥ'.

'ಈಗ ಬಕೆಟ್ ಹಿಡಿಯೋನು ಅಂದರೆ ನೈಸ್ ಮಾಡಿ ಅವನ ಕೆಲಸ ಮಾಡಿಸಿಕೊಳ್ಳುವವನು. ಅವನ ಕೆಲಸ ಆಗಬೇಕು ಅಂದರೆ ಏನು ಬೇಕಾದರೂ ಮಾಡುವವನು. ಈ ರೀತಿ ಅರ್ಥ ಇರುವ ಬಕೆಟ್ ಹಿಡಿಯಲೇ ತಯಾರಿರುವವನು ಇನ್ನೇನು ಮಾಡಲು ತಯಾರಿರಲ್ಲ? ಅವನೇ ಬಕೆಟ್ ಹಿಡಿಯೋನು' ಎಂದು ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಬಕೆಟ್ ಪದದ ಅರ್ಥ ವಿವರಿಸಿದ್ದಾರೆ.












Click it and Unblock the Notifications