ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ಸಿಎಂಗೆ ಪತ್ರ ಬರೆದ ನಟ-ನಟಿಯರು
ಇಷ್ಟು ದಿನ ಮಳಿಯಾಳಿಯಂ, ತಮಿಳು ಚಲನಚಿತ್ರೋದ್ಯಮದಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ಆಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಇದೀಗ ಕನ್ನಡ ಚಲನ ಚಿತ್ರೋದ್ಯಮದಲ್ಲೂ ಮಹಿಳೆಯರು ಲೈಂಗಿಕ ದೌರ್ಜನ್ಯ ಸೇರಿ ಇನ್ನಿತರೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕನ್ನಡ ನಟ, ನಟಿಯರು ಸಿಎಂಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡ ಚಲನ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ ಸಂಸ್ಥೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಇನ್ನು ಈ ಬಗ್ಗೆ ಫೈರ್ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರಾದ ಕವಿತಾ ಲಂಕೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, "ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಮಲೆಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಹಿಂಸೆ ಮತ್ತು ಇತರೆ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದಾರೆ. ಕರ್ನಾಟಕ ಸರ್ಕಾರವು ಕನ್ನಡ ಚಲನ ಚಿತ್ರೋದ್ಯಮದಲ್ಲಿನ ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು," ಆಗ್ರಹಿಸಿದ್ರು.
"ಕನ್ನಡ ಚಲನಚಿತ್ರೋದ್ಯಮದಲ್ಲಿ ದೇಶದ ಮೊದಲ ಚಲನ ಚಿತ್ರೋದ್ಯಮದ ಆಂತರಿಕ ದೂರುಗಳ ಸಮಿತಿಯನ್ನು ಸ್ಥಾಪಿಸುವಲ್ಲಿ ನಮ್ಮ 'ಫೈರ್' ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ. ಹಾಗೆಯೇ ಲೈಂಗಿಕ ಕಿರುಕುಳದ ಸಂತ್ರಸ್ತರನ್ನು 2017ರಿಂದ ಈವರೆಗೂ ನಮ್ಮ ಸಂಸ್ಥೆ ಬೆಂಬಲಿಸುತ್ತಲೇ ಬಂದಿದೆ. ಸದ್ಯ ಚಲನ ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತವಾದ ಕೆಲಸದ ವಾತಾವರಣವನ್ನು ನೀಡುವುದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾದ ಅಂಶವೆಂದು ನಾವು ಭಾವಿಸುತ್ತೇವೆ" ಎಂದು ತಿಳಿಸಿದ್ದಾರೆ.
"ಲೈಂಗಿಕ ಕಿರುಕುಳ ಸೇರಿದಂತೆ ಕನ್ನಡ ಚಲನ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ತನಿಖೆ ಮಾಡುವುದು ಮತ್ತು ಚಿತ್ರೋದ್ಯಮದಲ್ಲಿ ಎಲ್ಲ ಮಹಿಳೆಯರಿಗೂ ಸುರಕ್ಷಿತವಾದ ಮತ್ತು ನ್ಯಾಯಯುತವಾದ ವಾತಾವರಣವನ್ನು ಸೃಷ್ಟಿಸಲು ಅದಕ್ಕೆ ತಕ್ಕ ಪಾಲಿಸಿಗಳನ್ನು ರಚಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕೆಂದು," ಒತ್ತಾಯಿಸಿದ್ದಾರೆ.
"ಈ ಸಮಿತಿಯ ನೇತೃತ್ವ ವಹಿಸಲು ತಮ್ಮ ವೃತ್ತಿಜೀವನದುದ್ದಕ್ಕೂ ಲಿಂಗ ಸಮಾನತೆಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರನ್ನು ನೇಮಿಸಬೇಕು. ಈ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ನಮ್ಮ ನೆರವು ಅಗತ್ಯವಾದಲ್ಲಿ 'ಫೈರ್' ಸಂಸ್ಥೆಯು ಸಹಾಯ ನೀಡಲು ಸಿದ್ಧವಾಗಿದೆ," ಎಂದು ಹೇಳಿದ್ದಾರೆ.
" ಇನ್ನು ವರದಿಯನ್ನು 3 ತಿಂಗಳುಗಳೊಳಗಾಗಿ ಸಂಪೂರ್ಣಗೊಳಿಸಬೇಕು ಎಂದು 'ಫೈರ್' ಸಂಸ್ಥೆಯು ವಿನಂತಿಸಿಕೊಳ್ಳುತ್ತಿದೆ. ಹಾಗೆಯೇ ಈ ಬಗ್ಗೆ ವಿವರಗಳನ್ನು ಮತ್ತು ಫಲಿತಾಂಶವನ್ನು ಶೀಘ್ರವಾಗಿ ತಿಳಿಸಬೇಕೆಂದು ನಾವು ಬಯಸುತ್ತೇವೆ," ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.












Click it and Unblock the Notifications