Gondal movie: 45 ರೂಪಾಯಿ ಕೂಲಿಯಿಂದ ಆಸ್ಕರ್ ಅಂಗಳದವರೆಗೆ ಸಂತೋಷ್ ದಾವಖರ್ ಪಯಣ

ಮೊನ್ನೆ ಮೊನ್ನೆ ಆಸ್ಕರ್ ಪ್ರಶಸ್ತಿಗೆ ಭಾರತದ ಪ್ರವೇಶವಾದ ʼಗೊಂದಳ್‌ʼ ಸಿನಿಮಾ (Gondal movie) ಅನೌನ್ಸ್‌ಮೆಂಟ್‌ ಆಗುವವರೆಗೆ ಸಂತೋಷ್‌ ದಾವಖರ್‌ ಅನ್ನುವ ನಿರ್ದೇಶಕರ ಹೆಸರು ಭಾರತೀಯರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಇದೀಗ ಗೊಂದಳ್‌ ಸಿನಿಮಾದ ಬಗ್ಗೆ ನಿರ್ದೇಶಕರ ಬಗ್ಗೆ ಚರ್ಚೆ ಶುರುವಾಗಿದೆ. ಅದರಲ್ಲೂ ದಾವಖರ್‌ ಎಂಬ ನಿರ್ದೇಶಕ ಬಾಲ್ಯದಲ್ಲಿ ಬಾಲ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು ಎಂಬ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಸಂತೋಷ್‌ ದಾವಖರ್‌ ಅವರ ಹಿನ್ನೆಲೆಯೇ ಒಂದು ಸಿನಿಮಾ ಮಾಡುವಂತಿದೆ. ಅಷ್ಟಕ್ಕೂ ಈ ಸಂತೋಷ್‌ ದಾವಖರ್‌ ಯಾರು, ಬಾಲ್ಯದಲ್ಲಿ ಕೂಲಿ ಮಾಡುತ್ತಿದ್ದ ಅವರ ಬದುಕು ಬದಲಾಗಿದ್ದದ್ದು ಹೇಗೆ.. ನಿರ್ದೇಶನದಂಥಾ ಕ್ಷೇತ್ರವನ್ನು ಅವರು ಆರಿಸಿಕೊಂಡದ್ದು ಯಾಕೆ ಮತ್ತು ಅದು ಹೇಗೆ ಸಾಧ್ಯವಾಯಿತು ಅನ್ನುವುದು ಇಟರೆಸ್ಟಿಂಗ್‌ ಸ್ಟೋರಿ. ಆ ವಿವರ ಇಲ್ಲಿದೆ.

ಯಾರು ಈ ಸಂತೋಷ್‌ ದಾವಖರ್‌?

ಮಹಾರಾಷ್ಟ್ರದ ಗ್ರಾಮೀಣ ಹಿನ್ನೆಲೆಯಿಂದ ಬಂದ ಭಾರತೀಯ ಸಿನಿಮಾರಂಗದ ಮಹತ್ವದ ನಿರ್ದೇಶಕರಲ್ಲೊಬ್ಬರು. ನಾಸಿಕ್‌ ಜಿಲ್ಲೆಯ ಸಿನ್ನರ್‌ ಎಂಬ ಹಳ್ಳಿಯಿಂದ ಬಂದವರು. ಮನೆಯಲ್ಲಿ ಬಡತನ. ಊಟಕ್ಕೂ ಪಡಿಪಾಟಲು. ಇನ್ನು ಶಾಲೆಗೆ ಹೋಗುವುದು, ಓದುವುದು ಎಲ್ಲ ಕನಸಿನ ಮಾತು. ಆದರೂ ಒಂದು ಹಂತದವರೆಗೆ ಕಷ್ಟಪಟ್ಟು ಇವರನ್ನು ಶಾಲೆಗೆ ಕಳುಹಿಸಲಾಯಿತು. ಆ ಬಳಿಕ ಸಾಧ್ಯವಾಗಲಿಲ್ಲ. ಆದರೆ ಓದಿನ ಬಗ್ಗೆ ಅಪಾರ ಆಸಕ್ತಿ ಇದ್ದ ಸಂತೋಷ್‌ ತಾನೇ ದುಡಿದು ತನ್ನ ಶಾಲೆಯ ಫೀಸನ್ನು ಭರಿಸಲು ಮುಂದಾಗುತ್ತಾರೆ.

Gondal movie Who Is Santosh Davakhar From a 45 Wage to Directing India s Oscar Entry Gondal

14ನೇ ವಯಸ್ಸಿನಲ್ಲಿ ಅವರು ಕಲ್ಯಾಣದ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದದ್ದು ಭರ್ತಿ 12 ಗಂಟೆಗಳ ಕಾಲ. ಅಷ್ಟೆಲ್ಲ ಕೆಲಸ ಮಾಡಿದರೆ ಅವರಿಗೆ ಸಿಗುತ್ತಿದ್ದದ್ದು ಕೇವಲ 45 ರೂಪಾಯಿ.ಕಾರ್ಖಾನೆಗಳಲ್ಲಿ ಭಾರವಾದ ಸಾಮಾನುಗಳನ್ನು ಎತ್ತುವ ಕೆಲಸ ಮಾಡುವಾಗಲೂ ಅವರ ಮನಸ್ಸು ಕಲಿಕೆಯ ಮೇಲೆ ನೆಟ್ಟಿತ್ತು.

ಓದಿನ ಹಸಿವೆ, ಎತ್ತರದ ಜರ್ನಿ

ಹೀಗೆ ಕಷ್ಟಪಟ್ಟು ಓದಿದ ಸಂತೋಷ್‌, ಮಹಾರಾಷ್ಟ್ರದ ಕೆ. ವಿ. ಪೆಂಢಾರ್ಕರ್ ಕಾಲೇಜಿನಿಂದ ಬಿ.ಎ ಪದವಿ ಮುಗಿಸಿದರು. ಆ ನಂತರ ಕಷ್ಟಪಟ್ಟು ಓದಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಎರಡನ್ನೂ ಪಡೆದರು. ಇದೇ ಕಾರಣದಿಂದ ಅವರು ಆರಂಭದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿ ಹಾಗೂ ಪ್ರಾಜೆಕ್ಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಸಿನಿಮಾಗಳ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡ ಇವರು 2019ರಲ್ಲಿ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ 45 ದಿನಗಳ ಸ್ಕ್ರೀನ್‌ಪ್ಲೇ ಬರವಣಿಗೆ ಕೋರ್ಸ್ ಮಾಡಿದ್ದಾರೆ. ಇದನ್ನು ಹೊರತುಪಡಿಸಿ, ಸಿನಿಮಾ ನಿರ್ದೇಶನಕ್ಕೆ ಸಂಬಂಧಿಸಿ ಔಪಚಾರಿಕ ತರಬೇತಿ ಪಡೆದಿಲ್ಲ. ಸ್ವಂತ ಆಸಕ್ತಿಯಿಂದ ಸಿನಿಮಾಗಳನ್ನು ನೋಡುತ್ತ ಗಮನಿಸುತ್ತ ಆ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುತ್ತ ಹೋದರು.

ಭಿನ್ನ ಧ್ವನಿಯ ಸಿನಿಮಾಗಳು

2017ರಲ್ಲಿ ಅವರ ಅದ್ನ್ಯಾತ್ ಕಿರುಚಿತ್ರ ಜಾತಿ ವ್ಯವಸ್ಥೆಯ ಕುರಿತು ದನಿ ಎತ್ತಿತ್ತು. ಈ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಸಿಲ್ವರ್ ಲೋಟಸ್ ದೊರಕಿತ್ತು. ನಂತರ ಕೋವಿಡ್ ಕಾಲದ ಅಂತರ್ 19 ಸೇರಿದಂತೆ ಸಾಮಾಜಿಕ ವಿಷಯಗಳನ್ನಾಧರಿಸಿದ ಚಿತ್ರಗಳನ್ನು ಅವರು ಮಾಡಿದರು.

Gondal movie ಹಿನ್ನೆಲೆ

ಸಿನಿಮಾ ತಜ್ಞರ ಪ್ರಕಾರ, ಗೊಂದಲ್ ಕೇವಲ ಒಂದು ಸಿನಿಮಾ ಅಲ್ಲ. ಅದು ಸಂತೋಷ್ ಅವರ ಬಾಲ್ಯದ ನೆನಪುಗಳ ಜೊತೆ ಬೆಸೆದುಕೊಂಡಿರುವ ಮಹಾರಾಷ್ಟ್ರದ ಜನಪದ ಪರಂಪರೆಯ ಕಥೆ. ಗೊಂದಲ್ ಎನ್ನುವುದು ಸಂಗೀತ, ನೃತ್ಯ, ಭಕ್ತಿ ಮತ್ತು ಆಚರಣೆಗಳನ್ನು ಒಳಗೊಂಡ ಶತಮಾನಗಳಷ್ಟು ಹಳೆಯ ಸಂಪ್ರದಾಯ. ಬಾಲ್ಯದಲ್ಲೇ ತಮ್ಮ ಅಜ್ಜನ ಜೊತೆ ಈ ಆಚರಣೆಯನ್ನು ನೋಡುತ್ತ ಬೆಳೆದ ಸಂತೋಷ್, ಮುಂದೆ ಅದನ್ನೇ ತಮ್ಮ ಮೊದಲ ಫೀಚರ್ ಚಿತ್ರದ ಕೇಂದ್ರವಾಗಿಸಿಕೊಂಡರು. ಅವರು ಹೇಳುವಂತೆ, ಮೊದಲು ಗೊಂದಲ್ ಆಚರಣೆಯನ್ನು ಆಯ್ಕೆ ಮಾಡಿಕೊಂಡು, ನಂತರ ಅದರ ಸುತ್ತ ಕಥೆಯನ್ನು ಕಟ್ಟಿದರು.

ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ

ಸೆಪ್ಟೆಂಬರ್ 2026ರಲ್ಲಿ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಗೊಂದಲ್ ಚಿತ್ರವನ್ನು 99ನೇ ಅಕಾಡೆಮಿ ಪ್ರಶಸ್ತಿಗಳ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗಕ್ಕೆ ಭಾರತದ ಅಧಿಕೃತ ಪ್ರವೇಶಿಕೆಯಾಗಿ ಆಯ್ಕೆ ಮಾಡಿದೆ. ದೇಶದ ವಿವಿಧ ಭಾಷೆಗಳ 33 ಚಿತ್ರಗಳ ಪೈಪೋಟಿಯಲ್ಲಿ ಗೊಂದಲ್ ಆಯ್ಕೆಯಾಗಿದೆ. 2025ರಲ್ಲಿ ಬಿಡುಗಡೆಯಾದ ಈ ಚಿತ್ರ ಸಂತೋಷ್ ದಾವಖರ್ ಅವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿದೆ.

ಮಹಾರಾಷ್ಟ್ರದ ಗ್ರಾಮೀಣ ಬದುಕಿನ ಚಿತ್ರಣ

ಚಿತ್ರದ ಕಥೆ ಗ್ರಾಮೀಣ ಮಹಾರಾಷ್ಟ್ರದ ಹಿನ್ನೆಲೆಯಲ್ಲಿದೆ. ಪ್ರೀತಿ, ಆಸೆ, ಮೋಸ, ನಂಬಿಕೆ ಮತ್ತು ವಿಧಿಯ ನಡುವೆ ಸಿಲುಕುವ ಸ್ತ್ರೀಯೊಬ್ಬಳ ಬದುಕನ್ನು ಗೊಂದಲ್ ಆಚರಣೆಯ ವಾತಾವರಣದೊಂದಿಗೆ ಚಿತ್ರಿಸಲಾಗಿದೆ. ರಾತ್ರಿ ನಡೆಯುವ ಈ ಆಚರಣೆಯ ಸಂಗೀತ ಮತ್ತು ಸಂಭ್ರಮದ ನಡುವೆ ಮಾನವ ಸಂಬಂಧಗಳ ಸಂಕೀರ್ಣ ಮುಖಗಳು ತೆರೆದುಕೊಳ್ಳುತ್ತವೆ.

ಒಟ್ಟಿನಲ್ಲಿ ಒಂದು ಕಾಲದಲ್ಲಿ ದಿನಕ್ಕೆ 45 ರೂಪಾಯಿಗಾಗಿ 12 ಗಂಟೆ ದುಡಿದ ಬಾಲಕ, ಇಂದು ತನ್ನ ನೆಲದ ಸಂಸ್ಕೃತಿಯನ್ನು ಜಗತ್ತಿನ ಮುಂದೆ ತೋರಿಸಲು ಹೊರಟಿದ್ದಾರೆ. ಗೊಂದಲ್ ಮೂಲಕ ಸಂತೋಷ್ ದಾವಖರ್ ತಮ್ಮ ಯಶಸ್ಸಿನ ಕಥೆ ಮಾತ್ರ ಹೇಳುತ್ತಿಲ್ಲ. ಮರೆಯಾಗುತ್ತಾ ಹೋಗುತ್ತಿರುವ ಒಂದು ಜನಪದ ಪರಂಪರೆಯ ಧ್ವನಿಯನ್ನೂ ಜಗತ್ತಿಗೆ ಕೇಳಿಸುತ್ತಿದ್ದಾರೆ. ಬದುಕು ಕೆಲವೊಮ್ಮೆ ನಾವು ಕಳೆದುಕೊಂಡದ್ದನ್ನೇ ಮತ್ತೆ ಹೊಸ ರೂಪದಲ್ಲಿ ನಮ್ಮ ಮುಂದೆ ತಂದು ನಿಲ್ಲಿಸುತ್ತದೆ. ಸಂತೋಷ್ ಅವರ ಪಯಣ ಅದಕ್ಕೆ ಒಂದು ಸುಂದರ ಉದಾಹರಣೆಯಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+