Actor Darshan: ದರ್ಶನ್ ತೋರಿಸಿದ್ದು ಕೆಟ್ಟ ಸನ್ನೆಯಲ್ಲ ಅದೊಂದು ಯೋಗಮುದ್ರೆ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಸದ್ಯ ಬಳ್ಳಾರಿ ಕಾರಾಗೃಹದಲ್ಲಿದ್ದಾರೆ. ಇತ್ತೀಚೆಗೆ ದರ್ಶನ್ ಪತ್ನಿಯ ಜೊತೆ ಭೇಟಿಗೆ ಬರುವಾಗ ಮಾಧ್ಯಮಗಳಿಗೆ ಮದ್ಯದ ಬೆರಳು ತೋರಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ಮುಗಿಬಿದ್ದಿವೆ. ದರ್ಶನ್ ತಮಗೆ ಕೆಟ್ಟದಾಗಿ ಸನ್ನೆ ಮಾಡಿದ್ದಾರೆ ಎಂದು ಅಬ್ಬರಿಸುತ್ತಿವೆ. ಆದರೆ ದರ್ಶನ್ ಏನೇ ಮಾಡಿದರೂ ಸಮರ್ಥನೆ ಮಾಡಿಕೊಳ್ಳುವ ಅಭಿಮಾನಿ ಬಳಗ ಕೂಡ ದೊಡ್ಡದಾಗಿದೆ. ಇದೀಗ ಅವರ ಅಭಿಮಾನಿ ಸಂಘಟನೆಯೊಂದು ದರ್ಶನ್ ಯಾರಿಗೂ ಕೆಟ್ಟದಾಗಿ ಸನ್ನೆ ಮಾಡಿಲ್ಲ, ಅವರು ಯೋಗಮುದ್ರೆ ಮಾಡುತ್ತಿದ್ದರು ಎಂದು ಹೇಳಿದ್ದು, ಅದಕ್ಕೆ ಸಾಕ್ಷಿಯನ್ನು ಕೊಟ್ಟಿದೆ.
ಮಧ್ಯದ ಬೆರಳು ತೋರಿಸುವುದು ಕೆಟ್ಟ ಸನ್ನೆ, ಅದೊಂದು ಅಶ್ಲೀಲತೆ ಎನ್ನುವುದು ಗೊತ್ತಿರುವ ಸಂಗತಿ. ಆದರೆ ದರ್ಶನ್ ಅಭಿಮಾನಿಗಳ ಬಳಗ ಎಂದೇ ಹೆಸರಾಗಿರುವ ಡಿ ಕಂಪನಿ ಇದೀಗ ಅದು ಯೋಗಮುದ್ರೆ ಎಂದು ವಾದಿಸುತ್ತಿದೆ. ಹೌದು, ದರ್ಶನ್ ಮಾಡಿರುವುದು ವಿಘ್ನ ಹರ ಮುದ್ರೆ ಎಂದು ಹೇಳಿದ್ದು, ಅದನ್ನು ಸಾಬೀತುಪಡಿಸಲು ಫೋಟೊ, ಮಾಹಿತಿಯನ್ನು ಕೂಡ ಹಂಚಿಕೊಂಡಿದೆ.

ಡಿ ಕಂಪನಿ ಹೇಳಿದ್ದೇನು?
ದರ್ಶನ್ ನಡೆದುಕೊಂಡು ಬರುವಾಗ ವಿಘ್ನಹರ ಮುದ್ರಾ ಮಾಡಿಕೊಂಡು ನಡೆದುಕೊಂಡು ಬಂದಿದ್ದನ್ನೇ ಅಸಭ್ಯವಾಗಿ ಸನ್ನೆ ಮಾಡಿದರು ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಅಭಿಮಾನಿ ಸಂಘಟನೆ ಆರೋಪಿಸಿದೆ. ಈ ಪೋಸ್ಟ್ ಇದೀಗ ವೈರಲ್ ಆಗಿದ್ದು, ಅಭಿಮಾನಿಗಳು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ಮಾದ್ಯಮಗಳು ನಮ್ಮ @dasadarshan ಅವರ ವಿರುದ್ಧ ಸುಖಾಸುಮ್ಮನೆ ಇಲ್ಲಸಲ್ಲದ ವಿಚಾರಗಳನ್ನು ಪ್ರಚೋದಿಸಿ ಮನಬಂದಂತೆ ಸುದ್ದಿ ಬಿತ್ತರಿಸುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ ಡಿ ಬಾಸ್ ರವರು ನಡೆದು ಕೊಂಡು ಬರುವಾಗ ವಿಘ್ನ ಹರ ಮುದ್ರಾ ಮಾಡಿಕೊಂಡು ನಡೆದುಕೊಂಡು ಬಂದಿದ್ದನ್ನು ಏನೋ ಅಸಭ್ಯವಾಗಿ ತೋರಿಸಿದರು ಎಂದು ಬಿತ್ತರಿಸುತ್ತಿರುವ ನಿಮಗೆ ಧಿಕ್ಕಾರ pic.twitter.com/U9eOlKrIqo
— D Company(R)Official (@Dcompany171) September 13, 2024
ದರ್ಶನ್ ಉದ್ದೇಶಪೂರ್ವಕವಾಗಿ ಮಾಡಿದ್ದಾರೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ. ಅವರು ಜೈಲಿನಲ್ಲಿ ಓಡಾಡುವಾಗ ಮಾಧ್ಯಮಗಳು ದೃಶ್ಯಗಳನ್ನು ಸೆರೆ ಹಿಡಿದಿದ್ದರು. ಈ ದೃಶ್ಯಗಳೇ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದವು.
ನ್ಯಾಯಾಂಗ ಬಂಧನ ವಿಸ್ತರಣೆ
ಇನ್ನು ಹೊರಗಡೆ ಇಷ್ಟೆಲ್ಲಾ ವಿವಾದ ಆಗುತ್ತಿದ್ದರೂ, ದರ್ಶನ್ ಮತ್ತು ಉಳಿದ ಆರೋಪಿಗಳು ಇಂದು ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಾಂಗ ಬಂಧನ ಇಂದಿಗೆ ಮುಕ್ತಾಯವಾಗಿದ್ದರಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು, ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 17ರವೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.












Click it and Unblock the Notifications