ಸಮಾಧಿ ಮುಂದೆ 'ಅಪ್ಪು'ವನ್ನೇ ಕುಣಿಸಿದ ಅಭಿಮಾನಿ: ವಿಡಿಯೋ ಫುಲ್ ವೈರಲ್
ಬೆಂಗಳೂರು, ಜೂನ್ 21: 'ಕರ್ನಾಟಕ ರತ್ನ' ಅಂತಲೇ ಹೆಸರು ಪಡೆದ, ರೀಲ್ ಮೇಲೆ ಮಾತ್ರವಲ್ಲದೇ ರಿಯಲ್ ಆಗಿಯೂ ಮಾದರಿಯಾದ ನಾಯಕ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಎಂದರೆ ಯಾರಿಗೆತಾನೆ ಇಷ್ಟವಿಲ್ಲ ಹೇಳಿ. ಅಭಿಮಾನಿಗಳು ಆರಾಧ್ಯ ದೈವ 'ಅಪ್ಪು' (Appu) ಅವರನ್ನು ನೆನೆಯದ ದಿನಗಳಿಲ್ಲ. ಮನುಷ್ಯರಾಗಿ ಹುಟ್ಟಿ ದೇವರಾದ ವ್ಯಕ್ತಿ ಎಂದರೆ ತಪ್ಪಾಗಲಾರದು. ನಮ್ಮನ್ನಗಲಿ ನಾಲ್ಕು ವರ್ಷಗಳಾಗಿದ್ದು, ಅವರ ನೆನಪು ಹಚ್ಚಹಸಿರಾಗಿದೆ. ಅವರ ಸಮಾಧಿಗೆ ನಿತ್ಯವು ಸಾವಿರಾರು ಜನ ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡಿದ ಅಭಿಮಾನಿಯೊಬ್ಬ ಅಪ್ಪುವನ್ನು ಕುಣಿಸಿ ರೀಲ್ ಮಾಡಿದ್ದು, ವೈರಲ್ ಆಗಿದೆ.
ಬೆಂಗಳೂರು ನಂದಿನಿ ಬಡಾವಣೆಯ ಬಳಿಕ ಹೊರ ವರ್ತುಲ ರಸ್ತೆಯ (ORR) ಪಕ್ಕದ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಅವರ ಸಮಾಧಿ ಇದೆ. ಹೂವು, ಹೂಗುಚ್ಚ ಹಿಡಿದು ಅಪಾರ ಅಭಿಮಾನಿಗಳು ಅಲ್ಲಿಗೆ ಭೇಟಿ ನೀಡಿ ಸಮಾಧಿ ನೋಡಿ 'ಅಪ್ಪು' ನೆನೆದು ಕಂಬನಿ ಮಿಡಿಯುತ್ತಾರೆ. ರಾಜ್ ಕುಟುಂಬಸ್ಥರು ತೆರಳಿ ಅಪ್ಪು, ವರನಟ ಡಾ.ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಸಮಾಧಿ ದರ್ಶನ ಮಾಡುತ್ತಾರೆ. ಅಭಿಮಾನಿಗಳು ಸಹ ಸದಾ ತುಂಬಿರುತ್ತಾರೆ.

ಅಪ್ಪು ಸಮಾಧಿ ನೋಡಲು ತೆರಳಿದ್ದ ಅಭಿಮಾನಿ ಬಾಲಕ ಅಲ್ಲಿಯೇ ರೀಲ್ಸ್ ಮಾಡಿದ್ದಾನೆ. ಅಪ್ಪು ಅವರ ಸಮಾಧಿ ಮೇಲೆ ಅಪ್ಪು ಅವರ ಸುಂದರ ಫೋಟೋ ಇದೆ. ಅದರ ಮುಂದೆ ಈ ಬಾಲಕ ಕೃತಕ ಬುದ್ಧಿಮತ್ತೆ (AI) ಟೋಲ್ ಬಳಸಿ ರೀಲ್ಸ್ ಮಾಡಿದ್ದಾನೆ. ಅಭಿಮಾನಿ ಕುಣಿಯುತ್ತಿದ್ದಂತೆ ಫೋಟೋದಲ್ಲಿನ ಅಪ್ಪು ಅವರು ಸಹ ಈತನೊಂದಿಗೆ ಡಾನ್ಸ್ ಮಾಡಿದಂತೆ ರೆಕಾರ್ಡ್ ಆಗಿದೆ. ಇದು ಅಭಿಮಾನಿಗಳಿಗೆ ಒಂದು ಕ್ಷಣ ಅಪ್ಪುವಿನ ಡಾನ್ಸ್ ಅನ್ನು ನೆನಪಿಸಿಬಿಡುವಂತಿದೆ.
'ಜೀವನಕ್ ಪಾಠ ಹೇಳೋ ಟೀಚರ್ ಕಣೋ... ಇವನು ಲೈಫು ಪಾರ್ಟನರ್‌ಗಿಂತ ಕ್ಲೋಸ್ ಕಣೋ..' ಎನ್ನುವ ಹಾಡಿನ ಸಾಲುಗಳಿಗೆ ಅಭಿಮಾನಿ ಡಾನ್ಸ್ ಮಾಡಿದ್ದಾನೆ. ಅದರಲ್ಲಿ ಅಪ್ಪು ಸಹ ಡಾನ್ಸ್ ಮಾಡಿದಂತೆ ಕಂಡು ಬಂದಿದೆ. ಅಸಲಿಗೆ ಇದು ನಿಜವಲ್ಲ. ಇದು PixVerse.AI ಎಂಬ ಟೂಲ್‌ನಿಂದ ಮಾಡಿದ ವಿಡಿಯೋ ಆಗಿದೆ. ರೀಲ್ಸ್ ಮಾಡುವಾಗಲೇ ತಂತ್ರಜ್ಞಾನ ಬಳಸಿರಬಹುದು. ಇಲ್ಲವೇ ಡಾನ್ಸ್ ಮಾಡಿದ ಬಳಿ ಅದನ್ನು ಎಐ ಟೂಲ್‌ಗೆ ನೀಡಿ ಎಡಿಟ್ ಮಾಡಿದ್ದಾಗಿ ಗೊತ್ತಾಗುತ್ತದೆ.
ಒಟ್ಟಿನಲ್ಲಿ ಅಪ್ಪುವಿನೊಂದಿಗೆ ಅಭಿಮಾನಿ ಬಾಲಕನ ಡಾನ್ಸ್ ವೈರಲ್ ಆಗಿದೆ. ಇನ್ಸ್‌ಟಾಗ್ರಾಮ್‌ನಲ್ಲಿ sekammam.m7h ಖಾತೆಯಿಂದ ಹಂಚಿಕೊಳ್ಳಲಾಗಿದೆ. ವಿಡಿಯೋಗೆ ಏಳು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ತಂತ್ರಜ್ಞಾನ ಯುಗದಲ್ಲಿ ಏನಾಬೇಕಾದರೂ ಮಾಡಬಹುದು ಎಂಬುದು ಆಗಾಗ್ಗೆ ಸಾಬೀತಾಗುತ್ತಿದೆ. ನಿತ್ಯ ಒಂದಲ್ಲ ಒಂದು ಎಐ ಕುರಿತು ಸುದ್ದಿಗಳಿಗೆ, ವೈರಲ್ ವಿಡಿಯೋಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಅದರಲ್ಲಿ ಇದು ಸಹ ಒಂದಾಗಿದೆ. ಈ ವಿಡಿಯೋ ನೋಡಿದ ಅಪ್ಪು ಅಭಿಮಾನಿಗಳು ಒಂದು ಕ್ಷಣ ಆಶ್ಚರ್ಯಗೊಂಡಿದ್ದಾರೆ.












Click it and Unblock the Notifications