ಸಿನಿಮಾ ಹಿಟ್ ಆದ್ರೂ 'ದುನಿಯಾ' ರಶ್ಮಿ ಚಿತ್ರರಂಗದಿಂದ ದೂರ ಸರಿದಿದ್ದೇಕೆ? ಕಂಬ್ಯಾಕ್ ಬಗ್ಗೆ ಶುರುವಾಯ್ತು ಹೊಸ ಚರ್ಚೆ
ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಕೆಲವು ಸಿನಿಮಾಗಳು ಕೇವಲ ಕಲೆಕ್ಷನ್ ಮಾಡುವುದಷ್ಟೇ ಅಲ್ಲದೆ, ಪ್ರೇಕ್ಷಕರ ಎದೆಯಲ್ಲಿ ಶಾಶ್ವತವಾಗಿ ಅಚ್ಚೊತ್ತಿಬಿಡುತ್ತವೆ. ಅದೇ ಸಾಲಿನಲ್ಲಿದೆ 2007ರಲ್ಲಿ ತೆರೆಕಂಡಿದ್ದ ಸೂರಿ ನಿರ್ದೇಶನದ 'ದುನಿಯಾ' (Duniya) ಸಿನಿಮಾ. ಈ ಚಿತ್ರದ ಮೂಲಕವೇ ನಟ ವಿಜಯ್ ಅವರು 'ದುನಿಯಾ ವಿಜಿ' ಎಂದು ಕರೆಯಲ್ಪಟ್ಟರೆ, ಮುಗ್ಧ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕನ್ನಡಿಗರ ಮನಗೆದ್ದ ನಟಿ ರಶ್ಮಿ ಅವರು 'ದುನಿಯಾ ರಶ್ಮಿ' ಎಂದೇ ಮನೆಮಾತಾದರು. ಚೊಚ್ಚಲ ಸಿನಿಮಾ ಹಿಟ್ ಆದ ಮೇಲೂ ರಶ್ಮಿ ಅವರು ಚಿತ್ರರಂಗದಿಂದ ಮರೆಯಾಗುತ್ತಾ ಹೋಗಿದ್ದೇಕೆ? ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕೇ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ರಶ್ಮಿ ಅವರಿಗೂ ಇದೇ ಪ್ರಶ್ನೆಯನ್ನು ಅವರ ಅಭಿಮಾನಿಗಳು ಮುಂದಿಟ್ಟಿದ್ದಾರೆ.
ರೌಡಿಸಂ ಮತ್ತು ಮುಗ್ಧ ಪ್ರೀತಿಯ ಕಥೆಯನ್ನು ಅತ್ಯಂತ ರೋಚಕವಾಗಿ ಕಣ್ಣಿಗೆ ಕಟ್ಟಿದಂತೆ ತೋರಿಸಿದ್ದ ಈ ದುನಿಯಾ ಸಿನಿಮಾ, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಈ ಸಿನಿಮಾ ಪ್ರಮುಖ ಚಿತ್ರಮಂದಿರಗಳಲ್ಲಿ ಬರೋಬ್ಬರಿ 25 ವಾರಗಳಿಗೂ ಹೆಚ್ಚು ಕಾಲ ಯಶಸ್ವಿಯಾಗಿ ಪ್ರದರ್ಶನಗೊಂಡು, 'ಬೆಳ್ಳಿ ಮಹೋತ್ಸವ' ಆಚರಿಸಿಕೊಂಡ ಐಕಾನಿಕ್ ಚಿತ್ರವಾಗಿ ಹೊರಹೊಮ್ಮಿತ್ತು.

'ಪೂರ್ಣಿ' ಪಾತ್ರಕ್ಕೆ ಸಿಕ್ಕಿತ್ತು ಅತ್ಯುನ್ನತ ಗೌರವ
ಚಿತ್ರದಲ್ಲಿ 'ಪೂರ್ಣಿಮಾ' (ಪೂರ್ಣಿ) ಎಂಬ ಮುಗ್ಧ ಪಾತ್ರಕ್ಕೆ ರಶ್ಮಿ ಜೀವ ತುಂಬಿದ್ದರು. ಅವರ ನೈಸರ್ಗಿಕ ನಟನೆ ಹಾಗೂ ಭಾವಪೂರ್ಣ ಕಣ್ಣುಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದವು. ಚೊಚ್ಚಲ ಸಿನಿಮಾದಲ್ಲೇ ಅದ್ಭುತ ಅಭಿನಯ ನೀಡಿದ ಕಾರಣಕ್ಕಾಗಿ ರಶ್ಮಿ ಅವರಿಗೆ 'ಅತ್ಯುತ್ತಮ ನಟಿ' ಪ್ರಶಸ್ತಿಯೂ ಲಭಿಸಿತ್ತು. ದುನಿಯಾ ಸಿನಿಮಾ ಬಿಡುಗಡೆಯಾದ ಬಳಿಕ ಅದರಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ಕಲಾವಿದರು ಮತ್ತು ತಂತ್ರಜ್ಞರ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಕ್ಕಿತು.
ವಿಜಯ್ ಸ್ಟಾರ್ ಆದ್ರು, ಆದ್ರೆ ರಶ್ಮಿ ಅದೃಷ್ಟ ಕೈಕೊಟ್ಟಿತು
ಇದೇ ಸಿನಿಮಾ ನೀಡಿದ ಭದ್ರ ಬುನಾದಿಯ ಮೇಲೆ ನಟ ದುನಿಯಾ ವಿಜಯ್ ಇಂದು ಸ್ಯಾಂಡಲ್‌ವುಡ್‌ನ ಪ್ರಮುಖ ನಟ ಹಾಗೂ ನಿರ್ದೇಶಕರಾಗಿ ಬೆಳೆದು ನಿಂತಿದ್ದಾರೆ. ಆದರೆ, ನಾಯಕಿ ರಶ್ಮಿ ಅವರ ಸಿನಿಮಾ ಜರ್ನಿ ಮಾತ್ರ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ದುನಿಯಾ ಬಳಿಕ ಅವರು ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರೂ, ಯಾವುದೇ ಸಿನಿಮಾ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಡಲಿಲ್ಲ.

ಸ್ಟಾರ್ ನಟಿಯಾಗಿ ಮೆರೆಯುವ ಎಲ್ಲ ಅರ್ಹತೆ ಮತ್ತು ಅವಕಾಶಗಳಿದ್ದರೂ ರಶ್ಮಿ ಅವರು ಸದ್ದಿಲ್ಲದೆ ಚಿತ್ರರಂಗದಿಂದ ದೂರ ಸರಿದಿದ್ದು ಅವರ ಅಭಿಮಾನಿಗಳನ್ನು ಇಂದಿಗೂ ಕಾಡುತ್ತಿರುವ ಅತಿ ದೊಡ್ಡ ಪ್ರಶ್ನೆಯಾಗಿದೆ. ಕಳೆದ 2019ರಲ್ಲಿ ಕನ್ನಡ ಬಿಗ್‌ಬಾಸ್ ಸೀಸನ್-7 ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ರಶ್ಮಿ, ಅಲ್ಲಿಂದ ಹೊರಬಂದ ಬಳಿಕ ಒಂದು ರೀತಿ ಕಣ್ಮರೆಯೇ ಆದರು.
ಇನ್‌ಸ್ಟಾಗ್ರಾಂನಲ್ಲಿ 'ದುನಿಯಾ' ನೆನಪು: ಫ್ಯಾನ್ಸ್ ಭಾವುಕ
ಸಿನಿಮಾಗಳಿಂದ ದೂರವಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಆಕ್ಟಿವ್ ಆಗುವ ರಶ್ಮಿ, ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ತಮ್ಮದೇ ಮೊದಲ ಸಿನಿಮಾದ ಸೂಪರ್ ಹಿಟ್ ಗೀತೆಯಾದ "ಕರಿಯಾ ಐ ಲವ್ ಯೂ..." ಹಾಡಿನ ವಿಡಿಯೋ ಝಲಕ್ ಅನ್ನು ಶೇರ್ ಮಾಡಿಕೊಂಡಿರುವ ರಶ್ಮಿ, "ಇದು ಕನ್ನಡ ಚಿತ್ರರಂಗದ ಐಕಾನಿಕ್ ಸಿನಿಮಾ" ಎಂದು ಬರೆದುಕೊಂಡಿದ್ದಾರೆ.
ಇಷ್ಟಾಗಿದ್ದೇ ತಡ, ದುನಿಯಾ ಚಿತ್ರದ ಹಳೇ ನೆನಪುಗಳು ಅಭಿಮಾನಿಗಳಲ್ಲಿ ಮರುಕಳಿಸಿವೆ. ಕಮೆಂಟ್ ಸೆಕ್ಷನ್‌ನಲ್ಲಿ ಅಭಿಮಾನಿಗಳು ಸಾಲು ಸಾಲಾಗಿ "ಹೇ ಪೂರ್ಣಿ..." ಎಂದು ಪ್ರೀತಿಯಿಂದ ಕರೆಯುತ್ತಿದ್ದಾರೆ. "ಇದು ನಮ್ಮ ಬಾಲ್ಯದ ನೆಚ್ಚಿನ ಸಿನಿಮಾ, ಈ ಹಾಡುಗಳು ಇಂದಿಗೂ ನಮ್ಮ ಪ್ಲೇಲಿಸ್ಟ್‌ನಲ್ಲಿವೆ" ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ಇದರ ಜೊತೆಗೆ, "ಮತ್ತೆ ಯಾವಾಗ ಸಿನಿಮಾ ಮಾಡ್ತೀರಾ? ನಿಮ್ಮ ಕಂಬ್ಯಾಕ್‌ಗಾಗಿ ನಾವು ಕಾಯುತ್ತಿದ್ದೇವೆ" ಎಂದು ಕುತೂಹಲದಿಂದ ಪ್ರಶ್ನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಆದರೆ ರಶ್ಮಿ ಅವರ ಮುಂದಿನ ನಿರ್ಧಾರದ ಮೇಲೆ ಭಾರೀ ನಿರೀಕ್ಷೆಯೂ ಇದೆ.













Click it and Unblock the Notifications