Darshan Arrest: 13 ವರ್ಷಗಳ ಬಳಿಕ ಎರಡನೇ ಬಾರಿ ಪರಪ್ಪನ ಅಗ್ರಹಾರಕ್ಕೆ ದರ್ಶನ್; ಮುಂದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬರೋಬ್ಬರಿ 12 ದಿನ ಪೊಲೀಸರ ವಶದಲ್ಲಿದ್ದ ನಟ ದರ್ಶನ್ ಈಗ ಜೈಲುಪಾಲಾಗಿದ್ದಾರೆ. ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.
ಪೊಲೀಸ್ ಕಸ್ಟಡಿ ಅಂತ್ಯಗೊಂಡಿದ್ದರಿಂದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು, ಆರೋಪಿಗಳಾದ ದರ್ಶನ್, ಧನರಾಜ್, ವಿನಯ್, ಪ್ರದೋಶ್ರನ್ನು ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಸರ್ಕಾರದ ಪರ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರೆ, ದರ್ಶನ್ ಪರ ವಕೀಲ ಪ್ರವೀಣ್ ತಿಮ್ಮಯ್ಯ ವಾದ ಮಂಡಿಸಿದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು, ನಾಲ್ವರು ಆರೋಪಿಗಳು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಅದೇಶ ನೀಡಿದರು. ಪೊಲೀಸರು ಈಗಾಗಲೇ 12 ದಿನ ದರ್ಶನ್‌ರನ್ನು ತೀವ್ರ ವಿಚಾರಣೆ ಮಾಡಿದ್ದು ಎಲ್ಲಾ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ ಎನ್ನಲಾಗಿದೆ.
ಎರಡನೇ ಬಾರಿ ಪರಪ್ಪನ ಅಗ್ರಹಾರಕ್ಕೆ
ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಏನೂ ಹೊಸದಲ್ಲಿ 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಅವರು 28 ದಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ವಿಜಯಲಕ್ಷ್ಮಿ ರಾಜಿಗೆ ಒಪ್ಪಿಕೊಂಡಿದ್ದ ಕಾರಣ ಅವರು 28 ದಿನದ ಬಳಿಕ ಜೈಲಿನಿಂದ ಹೊರಬಂದಿದ್ದರು.
ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದು, ಮತ್ತೊಮ್ಮೆ ಪರಪ್ಪನ ಅಗ್ರಹಾರಕ್ಕೆ ಸೇರುತ್ತಿದ್ದಾರೆ. ಈ ಬಾರಿ ಅವರು ಸುಲಭವಾಗಿ ಜೈಲಿನಿಂದ ಹೊರಬರುವುದು ಅಸಾಧ್ಯ ಎಂದು ಕಾನೂನು ತಜ್ಞರು ಹೇಳಿದ್ದಾರೆ.
ಹೇಗಿರುತ್ತೆ ಮುಂದಿನ ವಿಚಾರಣೆ
ದರ್ಶನ್‌ರನ್ನು ಪೊಲೀಸರು ವಿಚಾರಣೆ ಮಾಡಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈಗ ಪೊಲೀಸರು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಿದ್ದು, ಅದಕ್ಕೆ 90 ದಿನಗಳ ಕಾಲ ಸಮಯಾವಕಾಶ ಇರಲಿದೆ. ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೂ ದರ್ಶನ್ ಮತ್ತು ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಚಾರ್ಜ್ ಶೀಟ್ ಪ್ರಕಾರ ಪೊಲೀಸರು ನ್ಯಾಯಾಲಯಕ್ಕೆ ವಿಚಾರಣೆ ವೇಳೆ ಸಾಕ್ಷಿಗಳನ್ನು ಪೊಲೀಸರು ನ್ಯಾಯಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಕೊಲೆ ಪ್ರಕರಣ ಆಗಿರುವ ಕಾರಣ ಸುದೀರ್ಘ ವಿಚಾರಣೆ ನಡೆಯಲಿದ್ದು, ನ್ಯಾಯಾಧೀಶರು ತಮ್ಮ ಸಾಕ್ಷಿ ಆಧಾರಗಳನ್ನು ಪರಿಶೀಲನೆ ಮಾಡಿ ಶಿಕ್ಷೆಯನ್ನು ಪ್ರಕಟಿಸಲಿದ್ದಾರೆ.
ಕೊಲೆ ಪ್ರಕರಣಗಳಲ್ಲಿ ಕನಿಷ್ಠ 7 ವರ್ಷ ಶಿಕ್ಷೆಯಾಗಲಿದ್ದು, ಇನ್ನೂ ಕೆಲವು ಬಾರಿ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶ ಕೂಡ ಇದೆ. ವಿಶೇಷ ಪ್ರಕರಣಗಳಲ್ಲಿ ಆರೋಪಿಗಳಿಗೆ ಮರಣ ದಂಡನೆ ವಿಧಿಸಲು ಕೂಡ ಕಾನೂನಿನಲ್ಲಿ ಅವಕಾಶ ಇದೆ.












Click it and Unblock the Notifications