Darshan Chikkanna Meet: ಸಾಕ್ಷಿ ಜೊತೆ 'ವಾಮನ' ಸಿನಿಮಾ ವೀಕ್ಷಿಸಿ ವಿವಾದಕ್ಕೆ ಸಿಲುಕಿದ್ರಾ ಡಿ-ಬಾಸ್
ಸ್ಯಾಂಡಲ್‌ವುಡ್ ನಟ ಧನ್ವೀರ್ ಅಭಿನಯದ 'ವಾಮನ' ಸಿನಿಮಾ ಇಂದು ತೆರೆಕಂಡಿದೆ. ಈ ಸಿನಿಮಾವನ್ನು ಬೆಂಗಳೂರಿನ ಮಾಗಡಿ ರಸ್ತೆ ಬಳಿ ಇರುವ ಜಿಟಿ ಮಾಲ್‌ನಲ್ಲಿ ಕಳೆದ ದಿನ ನಟ ದರ್ಶನ್ ಅವರು ವೀಕ್ಷಿಸಿದ್ದಾರೆ. ಅಲ್ಲದೆ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ. ಸುದ್ದಿ ಇಷ್ಟೇ ಆಗಿದ್ದರೆ ದೊಡ್ಡ ವಿಚಾರ ಆಗಿರಲಿಲ್ಲ. ಆದರೆ ಇಲ್ಲಿ ಸುದ್ದಿ ಬೇರೆನೇ ಇದೆ. ನಟ ದರ್ಶನ್ ಕೊಲೆ ಸಾಕ್ಷಿಯ ಜೊತೆಗೆ 'ವಾಮನ' ಸಿನಿಮಾ ನೋಡಿದ್ದಾರೆ. ಅಲ್ಲದೆ ಕೋರ್ಟ್ ವಿಚಾರಣೆಗೆ ಹಾಜರಾಗಲು ಬೆನ್ನು ನೋವಿನ ಕಾರಣ ಹೇಳಿ ಗೈರಾಗಿ ಥಿಯೇಟರ್‌ನಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು 'ವಾಮನ' ಸಿನಿಮಾ ಪ್ರಮೋಷನ್‌ಗೆ ನಟ ದರ್ಶನ್ ತೆರಳಬೇಕಿತ್ತು. ಆದರೆ ನಾನಾ ಕಾರಣಗಳಿಗಾಗಿ ಅವರು ಹೋಗಿರಲಿಲ್ಲ. ಇದೀಗ ಅವರೇ ಖುದ್ದಾಗಿ ಬಂದು ಜಿಟಿ ಮಾಲ್‌ನಲ್ಲಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಎ2 ಆರೋಪಿ. ಈ ಪ್ರಕರಣದಲ್ಲಿ ನಟ ಚಿಕ್ಕಣ್ಣ ಅವರನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಅಚ್ಚರಿ ಅಂದರೆ ದರ್ಶನ್ ಈ ಸಾಕ್ಷಿ ಜೊತೆ ಕುಳಿತು 'ವಾಮನ' ಸಿನಿಮಾವನ್ನು ಒಟ್ಟಿಗೆ ವೀಕ್ಷಣೆ ಮಾಡಿದ್ದಾರೆ. ಈ ವಿಚಾರ ಸದ್ಯ ಚರ್ಚೆಯನ್ನು ಹುಟ್ಟು ಹಾಕಿದೆ.
ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ದರ್ಶನ್‌ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಆ ಷರತ್ತುಗಳಲ್ಲಿ ದರ್ಶನ್ ಯಾವುದೇ ಕೈದಿಯನ್ನು ಭೇಟಿಯಾಗುವಂತಿಲ್ಲ. ಯಾವುದೇ ಸಾಕ್ಷಿಗಳೊಂದಿಗೆ ಮಾತನಾಡುವಂತಿಲ್ಲ. ಸಾಕ್ಷಿ ನಾಶಕ್ಕೆ ಪ್ರಯತ್ನ ಮಾಡುವಂತಿಲ್ಲ. ಆದರೆ ದರ್ಶನ್ ಕೇರಳದ ಪ್ರಸಿದ್ಧ ದೇವಸ್ಥಾನಕ್ಕೆ ಹೋದಾಗಲೂ ಬೇರೊಂದು ಕೊಲೆ ಆರೋಪಿಯೊಂದಿಗೆ ದೇವರ ದರ್ಶನ ಮಾಡಿದ್ದರು. ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ಸಾಕ್ಷಿಯೊಂದಿಗೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಈ ವಿಚಾರದಲ್ಲಿ ಮತ್ತೆ ದರ್ಶನ್ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಹಿಂದೆ ದರ್ಶನ್ ಜೈಲಿನಲ್ಲಿ ಇರುವಾಗಲೂ ಚಿಕ್ಕಣ್ಣ ಅವರನ್ನು ಭೇಟಿ ಮಾಡಿದ್ದರು. ಇದಾದ ಬಳಿಕ ಚಿಕ್ಕಣ್ಣರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಇದೀಗ ಮತ್ತೆ ದರ್ಶನ್ ಚಿಕ್ಕಣ್ಣ ಅವರೊಂದಿಗೆ ಕುಳಿತು ಸಿನಿಮಾ ನೋಡಿದ್ದಾರೆ. ಈ ವಿಚಾರವನ್ನು ಪೊಲೀಸರು ಅಸ್ತ್ರವಾಗಿ ಬಳಸುವ ಸಾಧ್ಯತೆ ಕೂಡ ಇದೆ.
ಕೊಲೆ ಆರೋಪಿ ದರ್ಶನ್ ಯಾವುದೇ ಸಾಕ್ಷಿಗಳನ್ನು ಭೇಟಿ ಮಾಡುವಂತಿಲ್ಲ. ಇದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದಂತಾಗುತ್ತದೆ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನ ಸಾಕ್ಷಿ ಆಗಿರುವ ಚಿಕ್ಕಣ್ಣ ಅವರೊಂದಿಗೆ ದರ್ಶನ್ ಸಿನಿಮಾ ನೋಡಿದ್ದು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಂತಾಗಿದೆ.
ಮೊನ್ನೆಯಷ್ಟೇ ದರ್ಶನ್ ಅವರನ್ನು ವಿಚಾರಣೆಗೆ ಕೋರ್ಟ್ ಬುಲಾವ್ ಕೊಟ್ಟಿತ್ತು. ಆದರೆ ದರ್ಶನ್ ಬೆನ್ನು ನೋವಿನ ಕಾರಣ ಹೇಳಿ ವಿಚಾರಣೆಗೆ ಹೈರಾಗಿದ್ದರು. ಇದಕ್ಕಾಗಿ ಜಡ್ಜ್ ಇದರಿಂದ ದರ್ಶನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ಕೋರ್ಟ್ ಹೇಳಿತ್ತು.
ಆದರೆ ದರ್ಶನ್ ಬೆನ್ನು ನೋವಿನ ಕಾರಣ ಹೇಳಿ ಇದೀಗ ಆಪ್ತ ಧನ್ವೀರ್ ಅವರು ಅಭಿನಯದ ವಾಮನ ಸಿನಿಮಾ ನೋಡಲು ಹೋಗಿದ್ದು ಭಾರೀ ಅನುಮಾನಗಳನ್ನು ಹುಟ್ಟು ಹಾಕಿದೆ. ಥಿಯೇಟರ್‌ನಲ್ಲಿ ಕುಳಿತು ಸಿನಿಮಾ ನೋಡಲು ಆಗುತ್ತೆ ಕೋರ್ಟ್ ವಿಚಾರಣೆಗೆ ಹಾಜರಾಗಲು ಯಾಕೆ ಆಗಲಿಲ್ಲ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ.
ಇದೀಗ ಹೈಕೋರ್ಟ್ ದರ್ಶನ್‌ಗೆ ನೀಡಿದ ಜಾಮೀನು ರದ್ದು ಕೋರಿ ಪೊಲೀಸರು ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯಲ್ಲಿ ಈ ಎಲ್ಲಾ ವಿಚಾರಗಳನ್ನೂ ಪರಿಗಣಿಸುವ ಸಾಧ್ಯತೆ ಇದೆ.












Click it and Unblock the Notifications