Darshan Thoogudeepa Gang: ಶಿವಮೊಗ್ಗದ ಕೇಂದ್ರ ಕಾರಾಗೃಹದ ಮೇಲೆ ಎಸ್ಪಿ ನೇತೃತ್ವದ ತಂಡ ದಿಢೀರ್ ದಾಳಿ
ಶಿವಮೊಗ್ಗ ಆಗಸ್ಟ್ 28: ರೇಣುಕಾಸ್ವಾಮಿ ಕೊಲೆಯ ಇಬ್ಬರು ಆರೋಪಿಗಳು ಶಿವಮೊಗ್ಗ ಜೈಲಿಗೆ ಶಿಫ್ಟ್ ಆಗುತ್ತಿರುವ ಬೆನ್ನಲ್ಲೆ ಶಿವಮೊಗ್ಗದ ಕೇಂದ್ರ ಕಾರಾಗೃಹದ ಮೇಲೆ ಎಸ್ಪಿ ನೇತೃತ್ವದ ತಂಡ ದಿಢೀರ್ ದಾಳಿ ಮಾಡಿದ್ದಾರೆ. ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ 120ಕ್ಕೂ ಹೆಚ್ಚು ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದರು.
ರೇಣುಕಾಸ್ವಾಮಿ ಕೊಲೆ ಆರೋಪಿಗಳಿಬ್ಬರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗುತ್ತಿದ್ದಾರೆ. ಆರೋಪಿತರಾದ ಲಕ್ಷ್ಮಣ ಹಾಗು ಜಗದೀಶ್ ರನ್ನ ಶಿವಮೊಗ್ಗಕ್ಕೆ ಪೊಲೀಸರು ಇಂದು ಕರೆತರಲಿದ್ದಾರೆ. ಇವರಿಬ್ಬರೂ ಶಿಫ್ಟ್ ಆಗುವ ಮುನ್ನವೇ ದಾಳಿ ಮಾಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಜೈಲಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಜೈಲಿನಲ್ಲಿರುವ ಬ್ಯಾರಕ್ ತಪಾಸಣೆ ಮಾಡಿ, ನಿಷೇಧಿತ ವಸ್ತುಗಳ ಶೋಧ ನಡೆಸಿದರು.

ದರ್ಶನ್ ಗ್ಯಾಂಗ್ ಶಿಫ್ಟ್
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಗ್ಯಾಂಗ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಆದರೆ ದರ್ಶನ್‌ಗೆ ಜೈಲು ಜೈಲಾಗಿರದೆ ಬಿಂದಾಸ್ ಲೈಫ್ ಅನ್ನು ನೀಡಿರುವುದು ಆಕ್ರೋಶಕ್ಕೆ ಎಡೆ ಮಾಡಿದೆ. ಕೈಯಲ್ಲಿ ಕಪ್, ಸಿಗರೇಟ್ ಹಿಡಿದು ದರ್ಶನ್ ತಮ್ಮ ಗ್ಯಾಂಗ್‌ನೊಂದಿಗೆ ಮಾತುಕತೆಯನ್ನಾಡುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೈಲಿನಲ್ಲಿ ದರ್ಶನ್‌ಗೆ ರಾಜಾಧಿತ್ಯವನ್ನು ನೀಡಲಾಗುತ್ತಿದೆ ಎನ್ನುವುದಕ್ಕೆ ಈ ಫೋಟೋ ಸಾಕ್ಷಿಯಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದರ್ಶನ್ ಹಾಗೂ ಗ್ಯಾಂಗ್ ಅನ್ನು ಶಿಫ್ಟ್ ಮಾಡಲು ಕೋರ್ಟ್ ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ಇಂದು ರಾಜ್ಯದ ನಾನಾ ಜೈಲುಗಳಿಗೆ ದರ್ಶನ್ ಹಾಗೂ ಗ್ಯಾಂಗ್ ಶಿಫ್ಟ್ ಆಗಲಿದ್ದಾರೆ.
ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲು ಎಸಿಎಂಎಂ ಕೋರ್ಟ್ ಆದೇಶ ನೀಡಿದೆ. ಮುಂದಿನ ನ್ಯಾಯಾಲಯ ವಿಚಾರಣೆಗಳಿಗೆ ಕಾನ್ಫರೆನ್ಸ್ ಮೂಲಕ ದರ್ಶನ್ ಹಾಜರಾಗಲಿದ್ದಾರೆ. ಇನ್ನೂ ಆರೋಪಿಗಳಾದ ಪವನ್, ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ, ಧನರಾಜ್‌ಗೆ ಧಾರವಾಡ ಜೈಲು ಗತಿಯಾದರೆ, ನಾಗರಾಜ್ ಕಲಬುರಗಿ ಜೈಲು, ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರದಲ್ಲೇ ಇರಲಿದ್ದಾರೆ. ಇನ್ನೂ ರವಿ, ಕಾರ್ತಿಕ್, ನಿಕಿಲ್, ಕೇಶಮೂರ್ತಿ ತುಮಕೂರು ಜೈಲಿನಲ್ಲಿದ್ದಾರೆ.
ಜೈಲಿಗೆ ವಿಶೇಷ ಭದ್ರತೆ
ದರ್ಶನ್ ಗ್ಯಾಂಗ್ ಶಿವಮೊಗ್ಗ ಜೈಲಿಗೆ ಶಿಫ್ಟ್ ಆಗುತ್ತಿರುವ ಬೆನ್ನಲ್ಲೇ ಜೈಲಿಗೆ ವಿಶೇಷ ಭದ್ರತೆಯನ್ನು ಒದಗಿಸಲಾಗಿದೆ. ದರ್ಶನ್ ಶಿಫ್ಟ್ ಆಗುವ ಬಳ್ಳಾರಿ ಜೈಲಿಗೆ ಹೆಚ್ಚಿನ ಬಿಗಿ ಭದ್ರತೆ ನೀಡಲಾಗಿದೆ. ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ದರ್ಶನ್ ಜೈಲಿನಿಂದ ಶಿಫ್ಟ್ ಆಗುತ್ತಾರೆ ಎನ್ನುವ ಸುದ್ದಿ ತಿಳಿದು ಅಭಿಮಾನಿಗಳು ದರ್ಶನ್ ಅವರನ್ನು ಕಾಣಲು ಜೈಲು ಬಳಿ ಜಮಾಯಿಸಿದ್ದಾರೆ. ಹೀಗಾಗಿ ಜೈಲಿನ ಬಳಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.












Click it and Unblock the Notifications