Darshan: ನವಗ್ರಹ ಎದುರೇ ಮತ್ತೊಂದು ದರ್ಶನ್ ಸಿನಿಮಾ ಮರುಬಿಡುಗಡೆ; ಸಿಟ್ಟಿಗೆದ್ದ ಅಭಿಮಾನಿಗಳು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಡೆವಿಲ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅವರನ್ನು ಬಂಧಿಸಿದ ಕಾರಣ ಸಿನಿಮಾ ಕೂಡ ಅರ್ಧಕ್ಕೆ ನಿಂತಿದೆ, ಜಾಮೀನು ಸಿಕ್ಕರೆ ಶೂಟಿಂಗ್ ಕೂಡ ಮುಗಿಸುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಕಾಟೇರ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ದರ್ಶನ್ ಮುಂದಿನ ಸಿನಿಮಾ ಬಗ್ಗೆ ಭಾರಿ ಕುತೂಹಲವಿದೆ. ಈ ಬೆನ್ನಲ್ಲೇ ದರ್ಶನ್ ಬಂಧನವಾಗಿದ್ದು ಡೆವಿಲ್ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ.
ದರ್ಶನ್ ಬಂಧನವಾಗಿದ್ದರೂ ಅವರ ಅಭಿಮಾನಿಗಳು ಸಿನಿಮಾದಲ್ಲಿ ದರ್ಶನ್ ಸಿನಿಮಾಗೆ ಕಾಯದಂತೆ ಮಾಡಲು ಹಳೆಯ ಸೂಪರ್ ಹಿಟ್ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ಶಾಸ್ತ್ರಿ, ಕರಿಯ ಸಿನಿಮಾಗಳು ಮರುಬಿಡುಗಡೆಯಾಗಿದ್ದು, ಬೆಳ್ಳಿ ಪರದೆ ಮೇಲೆ ದರ್ಶನ್‌ರನ್ನು ಅಭಿಮಾನಿಗಳು ಕಣ್ತುಂಬಿಕೊಂಡರು.

ಇದೀಗ ದರ್ಶನ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೂಪರ್ ಹಿಟ್ ಸಿನಿಮಾ 'ನವಗ್ರಹ' ಮರುಬಿಡುಗಡೆಯಾಗಲು ಸಜ್ಜಾಗಿದೆ. ನವೆಂಬರ್ 8 ರಂದು ನವಗ್ರಹ ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಈ ಸಿನಿಮಾ ನೋಡಲು ದರ್ಶನ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಮರು ಬಿಡುಗಡೆಯಲ್ಲಿ ಕೂಡ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ.
'Krantiveera Sangolli Rayanna' Re-Release on November 8 💥#KrantiveeraSangolliRayanna #DBoss pic.twitter.com/n7Jmgfss74
— Bhargavi (@IamHCB) October 25, 2024
ಸಿಟ್ಟಿಗೆದ್ದ ದರ್ಶನ್ ಅಭಿಮಾನಿಗಳು
ನವಗ್ರಹ ಬಿಡುಗಡೆ ಸಂದರ್ಭದಲ್ಲಿ ಥಿಯೇಟರ್ ಬಳಿ ಜಾತ್ರೆ ಮಾಡಲು ಸಜ್ಜಾಗಿದ್ದ ದರ್ಶನ್ ಅಭಿಮಾನಿಗಳಿಗೆ ಹೊಸ ಸಮಸ್ಯೆ ಎದುರಾಗಿದೆ. ಅದೇ ದಿನ ದರ್ಶನ್‌ರ ಮತ್ತೊಂದು ಸೂಪರ್ ಹಿಟ್ ಸಿನಿಮಾ 'ಸಂಗೊಳ್ಳಿ ರಾಯಣ್ಣ' ಕೂಡ ಅದೇ ದಿನ ಮರುಬಿಡುಗಡೆಯಾಗಲು ಸಜ್ಜಾಗಿದೆ.
ನವಗ್ರಹ ಮತ್ತು ಸಂಗೊಳ್ಳಿ ರಾಯಣ್ಣ ಒಂದೇ ದಿನ ಮರುಬಿಡುಗಡೆಯಾಗುತ್ತಿರುವುದು ಇದೀಗ ದರ್ಶನ್ ಅಭಿಮಾನಿಗಳಿಗೆ ತಲೆನೋವು ತಂದಿದೆ. ಒಂದೇ ದಿನ ದರ್ಶನ್‌ರ ಎರಡು ಸೂಪರ್ ಹಿಟ್ ಬಿಡುಗಡೆಯಾಗುತ್ತಿದ್ದು, ಯಾವ ಸಿನಿಮಾ ನೋಡುವುದು, ಇದರಿಂದ ದರ್ಶನ್‌ರ ಸಿನಿಮಾ ಕಲೆಕ್ಷನ್ ಮೇಲೆ ಪ್ರಭಾವ ಬೀರುತ್ತದೆ ಎಂದು ಕೋಪಗೊಂಡಿದ್ದಾರೆ.
ನವಗ್ರಹ ಸ್ವಾಗತಕ್ಕೆ ಸಜ್ಜಾಗಿದ್ದ ಅಭಿಮಾನಿಗಳು
ದಸರಾ ಸಂದರ್ಭದಲ್ಲೇ ನಿರ್ದೇಶಕ ದಿನಕರ್ ತೂಗುದೀಪ್, ನವಗ್ರಹ ಸಿನಿಮಾ ಮರುಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಅಂದಿನಿಂದ ಅಭಿಮಾನಿಗಳು ನವಗ್ರಹ ಮರುಬಿಡುಗಡೆ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರು. ಸಿನಿಮಾ ಬಿಡುಗಡೆ ದಿನ ದೊಡ್ಡ ಮಟ್ಟದಲ್ಲಿ ಸಂಭ್ರಮಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ನಡುವೆ ಸಂಗೊಳ್ಳಿ ರಾಯಣ್ಣ ಬಿಡುಗಡೆಯಾಗುತ್ತಿರುವುದು ದರ್ಶನ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಸಂಗೊಳ್ಳಿ ರಾಯಣ್ಣ ಕೂಡ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಸಂಗೊಳ್ಳಿ ರಾಯಣ್ಣ ಪಾತ್ರದಲ್ಲಿ ದರ್ಶನ್ ಮಿಂಚಿದ್ದರು, ದೊಡ್ಡ ಬಜೆಟ್‌ನಲ್ಲಿ ಸಿನಿಮಾವನ್ನು ತೆರೆಗೆ ತರಲಾಗಿತ್ತು.












Click it and Unblock the Notifications