ಸೋನು ನಿಗಮ್ ವಿರುದ್ಧ ದೂರು ದಾಖಲು
ಬೆಂಗಳೂರು ಮೇ 3: ಗಾಯಕ ಸೋನು ನಿಗಮ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ಕನ್ನಡ ಹಾಡು ಹಾಡುವಂತೆ ಕೇಳಿದ್ದಕ್ಕೆ ಗಾಯಕ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಇದೀಗ ಸೋನು ನಿಗಮ್ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಕನ್ನಡ ಹಾಡಿನಿಂದ ಹಾಗೂ ಕರ್ನಾಟಕದಿಂದ ಅವರನ್ನು ದೂರ ಇಡುವಂತೆ ನಿರ್ಮಾಪಕರು ಹಾಗೂ ಕನ್ನಡ ಪರ ಹೋರಾಟಗಾರರು ಒತ್ತಾಯ ಹೇರುತ್ತಿದ್ದಾರೆ. ಜೊತೆಗೆ ಸೋನು ನಿಗಮ್ ವಿರುದ್ಧ ದೂರು ಕೂಡ ದಾಖಲಿಸಲಾಗಿದೆ.
ಹೌದು ಕನ್ನಡಿಗರ ಕನ್ನಡ ಪ್ರೀತಿಯನ್ನು ಭಯೋತ್ಪಾದನೆಗೆ ಗಾಯಕ ಸೋನು ನಿಗಮ್ ಹೋಲಿಸಿದ್ದು ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಇವರ ವಿವಾದಾತ್ಮಕ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡಪರ ಸಂಘಟನೆಗಳು ಸೋನು ನಿಗಂ ವಿರುದ್ಧ ದೂರು ನೀಡಿವೆ.

ಕರವೇ ನಾರಾಯಣಗೌಡ ಬಣದ ಸದಸ್ಯರು ಸೋನು ನಿಗಂ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕನ್ನಡಿಗರ ಕನ್ನಡ ಪ್ರೇಮವನ್ನು ಭಯೋತ್ಪಾದಕತೆಗೆ ಹೋಲಿಸಿದ ಸೋನು ನಿಗಮ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜೊತೆಗೆ ಸೋನು ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರು, 'ಸೋನು ನಿಗಮ್ ಕನ್ನಡದಿಂದ ಬ್ಯಾನ್ ಆಗಬೇಕು. ಅವರು ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ, ಕನ್ನಡಿಗರನ್ನು ಉಗ್ರರಿಗೆ ಹೋಲಿಸುತ್ತಾನಾ? ಸೋನು ಈಗಲೇ ಕನ್ನಡಿಗರಿಗೆ ಕ್ಷಮೆ ಕೇಳಬೇಕು. ಇಲ್ಲವಾದರೆ ಸೋನು ಕನ್ನಡ ಹಾಡು ಹಾಡುವಂತಿಲ್ಲ. ಅವರ ಮೇಲೆ ಕನ್ನಡ ಚಲನಚಿತ್ರ ಮಂಡಳಿ ನಿಷೇಧ ಹೇರಬೇಕು ಎಂದು ನಿರ್ಮಾಪಕ ಸಂಘಕ್ಕೆ ಆಗ್ರಹಿಸುತ್ತೇನೆ' ಎಂದಿದ್ದಾರೆ.

ಕನ್ನಡ ಹಾಡು ಕೇಳಿದಾಗ ಹಾಡಬೇಕು ಇಲ್ಲವಾದಲ್ಲಿ ತೆಪ್ಪಗಿರಬೇಕು. ಬಾಲಿವುಡ್ ಕೈಬಿಟ್ಟಾಗ ಸೋನು ನಿಗಮ್ ಅವರನ್ನು ಕೈ ಹಿಡಿದು ಮೇಲಕ್ಕೆ ಎತ್ತಿದ್ದು ಕನ್ನಡದವರು. ನಮ್ಮ ಹಣ, ಅನ್ನ ತಿಂದು ನಮಗೇ ಮಾತನಾಡ್ತಾಯಾ? ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸ ಮಾಡ್ತೀಯಾ? ಭಯೋತ್ಪಾದಕರ ರೀತಿ ಮಾಡಿದರೆ ನಾವು ಸುಮ್ಮನಿರೋದಿಲ್ಲ. ಎಸ್‌ಪಿಬಿ ಅಂಥಹ ಶ್ರೇಷ್ಠ ಗಾಯಕರು ಕನ್ನಡದ ಬಗ್ಗೆ ಎಷ್ಟೊಂದು ಗೌರವ ಇಟ್ಟುಕೊಂಡಿದ್ದಾರೆ. ಆದರೆ ನೀವು ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ಕನ್ನಡಿಗರಿಗೆ ಕೂಡಲೇ ಕ್ಷಮೆ ಕೇಳಬೇಕು' ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.
ಆಗಿದ್ದೇನು?
ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುವೊಂದರಲ್ಲಿ ಸೋನು ನಿಗಮ್ ಅವರ ಗಾಯನಗೋಷ್ಠಿ ಆಯೋಜನೆ ಮಾಡಲಾಗಿತ್ತು. ಸೋನು ನಿಗಮ್ ಹಿಂದಿ ಹಾಡು ಹಾಡುವಾಗ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡುವಂತೆ ಕೇಳಲು ಕನ್ನಡ ಕನ್ನಡ ಎಂದು ಕೂಗಿದ್ದಾನೆ. ಆಗ 'ಕನ್ನಡ ಕನ್ನಡ ಇದರಿಂದಲೇ ಪಹಲ್ಗಾಮ್ ದಾಳಿ ಆಗಿರುವುದು' ಎಂದು ಕನ್ನಡಾಭಿಮಾನವನ್ನು ಭಯೋತ್ಪಾದಕತೆಗೆ ಹೋಲಿಕೆ ಮಾಡಿದ್ದಾರೆ ಸೋನು ನಿಗಮ್. ಸೋನು ನಿಗಮ್ ಈ ಹೇಳಿಕೆ ಇದೀಗ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದು ತೀವ್ರ ಖಂಡನೆ ವ್ಯಕ್ತವಾಗಿದೆ.












Click it and Unblock the Notifications