Bigg Boss 12: ಒಳಗಡೆ ಹೋಗಿ ಜಗಳ ಮಾಡೋದ್ರೀ: ಬಿಗ್ ಬಾಸ್ ಮನೆಗೆ ಕಾಲಿಟ್ಟ ಮಲ್ಲಮ್ಮ ಯಾರು?
ಬಿಗ್ ಬಾಸ್ ರಿಯಾಲಿಟಿ ಇಂದಿನಿಂದ ಅದ್ಧೂರಿಯಾಗಿ ಶುರುವಾಗಲಿದೆ. ಈಗಾಗಲೇ ಮೊದಲ ನಾಲ್ಕು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ಇದರಲ್ಲಿ ಮಲ್ಲಮ್ಮ ಕೂಡ ಒಬ್ಬರು. ಈ ಬಾರಿ ಅಚ್ಚರಿ ಎನ್ನುವಂತೆ ಮಲ್ಲಮ್ಮ ಅವರು ಬಿಗ್ ಬಾಸ್ ಮನೆಯ ಮೂರನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಸೇರಿಕೊಂಡಿದ್ದು, ಇಂದು ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ಪ್ರಸಾರವಾಗಲಿದೆ. ಇಲ್ಲಿವರೆಗೆ ನಾಲ್ಕು ಸ್ಪರ್ಧಿಗಳ ಹೆಸರನ್ನು ಕಾರ್ಯಕ್ರಮಕ್ಕೂ ಮುನ್ನವೇ ರಿವೀಲ್ ಮಾಡಲಾಗಿದೆ. ಇವರಲ್ಲಿ ಮಲ್ಲಮ್ಮ ಅವರ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದ್ದು, ಅವರ ಹಿನ್ನೆಲೆ ಏನು ಎಂಬ ವಿವರ ಇಲ್ಲಿದೆ.
ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡುವ ಮಲ್ಲಮ್ಮ ಅವರಿಗೆ ಮಾತಿನ ಮಲ್ಲಿ ಎನ್ನುವ ಹೆಸರೂ ಇದೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹವಾ ಇಟ್ಟಿದ್ದಾರೆ ಮಲ್ಲಮ್ಮ. ಯುಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ "ಮಲ್ಲಮ್ಮ ಟಾಕ್ಸ್" ಎಂಬ ಅಕೌಂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಪ್ರತಿಭೆಯಾಗಿರುವ ಮಲ್ಲಮ್ಮ ಅವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಣ್ಣ ಗ್ರಾಮದವರು. ಕೆಲಸಕ್ಕೆಂದು ಬೆಂಗಳೂರಿಗೆ ಬಂದ ಅವರು ತಮ್ಮ ಮಾತಿನಿಂದಲೇ ಜನರ ಗಮನ ಸೆಳೆದಿದ್ದರು.

ತಮ್ಮದೇ ಆದ ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರಿಗೆ 1.69 ಲಕ್ಷ ಫಾಲೋವರ್ಸ್ ಹಾಗು ಯೂಟ್ಯೂಬ್ ಚಾನೆಲ್ಗೆ 16 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ. ಐ ಆಮ್ ಎ ಡೇಂಜರ್ ಎಂದು ಮಲ್ಲಮ್ಮ ಬಿಗ್‌ಬಾಸ್ ಪ್ರೋಮೋದಲ್ಲಿ ಹೇಳಿಕೊಂಡಿದ್ದಾರೆ. ಬಿಗ್‌ಬಾಸ್ ಬಗ್ಗೆ ನಿಮಗೇನು ಗೊತ್ತು? ಎಂದು ಸುದೀಪ್ ಕೇಳಿದ್ದು, ಅಲ್ಲಿ ಆಟ ಆಡೋದ್ರೀ ಎಂದು ಮುಗ್ಧತೆಯಿಂದ ಮಾತನಾಡಿದ್ದಾರೆ.
ಆಟ ನೀವೇ ಹೇಳಿಕೊಡಬೇಕು
"ನಾಮಿನೇಷನ್, ಟಾಸ್ಕ್, ಎಲಿಮಿನೇಷನ್ ಅಂದ್ರೆ ಗೊತ್ತಾ?" ಎಂದು ಮಲ್ಲಮ್ಮ ಅವರಿಗೆ ಸುದೀಪ್ ಕೇಳಿದ್ದಾರೆ. "ಆಟ ನೀವೇ ಹೇಳಿಕೊಡಬೇಕು" ಎಂದು ಮಲ್ಲಮ್ಮ ಹೇಳಿದ್ದು, ಎಲ್ರೂ ಶಾಕ್ ಆಗಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಹೋಗಿ ಏನ್ ಮಾಡ್ತೀರಿ ಅಂದ್ರೆ, ಒಳಗೋಗಿ ಜಗಳ ಮಾಡೋದ್ರೀ ಎಂದಿದ್ದಾರೆ. "ಬಿಗ್‌ಬಾಸ್ ಮಲ್ಲಮ್ಮ ಈಸ್ ಕಮಿಂಗ್" ಎಂದು ಕಿಚ್ಚ ಮನೆಯೊಳಗೆ ಕಳಿಸಿಕೊಟ್ಟಿದ್ದಾರೆ. ದೊಡ್ಮನೆಯ ಹಿರಿಯ ಸ್ಪರ್ಧಿಯಾಗಿ ಮಲ್ಲಮ್ಮ ಎಂಟ್ರಿ ನೀಡಿದ್ದು, ಇವರಿಗೆ ಮಾತಿಗೆ ಉಳಿದ ಸ್ಪರ್ಧಿಗಳು ಸುಸ್ತಾಗುತ್ತಾರಾ? ಎಂಬುದು ಸದ್ಯದಲ್ಲೇ ತಿಳಿಯಲಿದೆ.
ಟಗರು, ಭೀಮ, ಸಲಗ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದ ಕಾಕ್ರೋಚ್ ಸುಧಿ, ಸಿಲ್ಲಿ ಲಲ್ಲಿ, ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚಿದ್ದ ನಟಿ ಮಂಜು ಭಾಷಿಣಿ, ಕರಾವಳಿ ಮೂಲದ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರಕ್ಷಿತಾ ಶೆಟ್ಟಿ ಅಧಿಕೃತ ಸ್ಪರ್ಧಿಗಳು ಎಂದು ಘೋಷಣೆಯಾಗಿದೆ. ಉಳಿದ ಸ್ಪರ್ಧಿಗಳ ಹೆಸರು ಇಂದೇ ರಿವೀಲ್ ಆಗಲಿದೆ.












Click it and Unblock the Notifications