Asha Bhosle: 4 ತಿಂಗಳ ಗರ್ಭಿಣಿಯಾಗಿದ್ದಾಗ ಸಾಯಲು ಒಂದು ಬಾಟಲ್ ನಿದ್ದೆ ಮಾತ್ರೆ ನುಂಗಿದ್ದೆ: ಖ್ಯಾತ ಗಾಯಕಿ
ಹಲವು ದಶಕಗಳಿಂದ ತಮ್ಮ ಮಧುರ ಗಾಯನದಿಂದ ಸಂಗೀತ ಪ್ರಿಯರ ಮನರಂಜಿಸುತ್ತಿರುವ ಖ್ಯಾತ ಹಿನ್ನಲೆ ಗಾಯಕಿಯೊಬ್ಬರ ವೈಯಕ್ತಿಕ ಬದುಕಿನಲ್ಲಿ ನಡೆದಿರುವ ಕರಾಳ ಘಟನೆಗಳು ಇತ್ತೀಚೆಗೆ ಬಹಿರಂಗವಾಗಿದೆ. ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ (Asha Bhosle) ಅಂದಾಕ್ಷಣ ಅವರ ಹಾಡುಗಳೇ ಎಲ್ಲರಿಗೆ ಮೊದಲು ನೆನಪಾಗುತ್ತವೆ. ಅಷ್ಟರ ಮಟ್ಟಿಗೆ ಇಂಪಾಗಿದೆ ಅವರ ಕಂಠ. ಆದರೆ ಅವರ ವೈಯಕ್ತಿಕ ಬದುಕಿನ ಬಗ್ಗೆ ಅಷ್ಟಾಗಿ ಜನರಿಗೆ ತಿಳಿದಿರಲಿಲ್ಲ. ಹಲವು ವರ್ಷಗಳ ನಂತರ ಆಶಾ ಅವರ ಬದುಕಿನ ದುರಂತಗಳು ರಿವೀಲ್ ಆಗಿವೆ. ಇವರ ವೈವಾಹಿಕ ಜೀವನದ ಕಥೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ.
ಆಶಾ ಭೋಸ್ಲೆ ಅವರ ಕುರಿತು ರಮ್ಯಾ ಶರ್ಮಾ ಬರೆದಿರುವ ಜೀವನಚರಿತ್ರೆ "ಆಶಾ ಭೋಸ್ಲೆ: ಎ ಲೈಫ್ ಇನ್ ಮ್ಯೂಸಿಕ್" ಅನ್ನು ಮಂಜುಲ್ ಪಬ್ಲಿಷಿಂಗ್ ಹೌಸ್‌ನ ಮುದ್ರೆ ಅಮರಿಲ್ಲಿಸ್ ಬಿಡುಗಡೆ ಮಾಡಿದೆ. ಇದು ಆಶಾ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ಆಘಾತಕಾರಿ ವಿವರಗಳನ್ನು ಒಳಗೊಂಡಿದೆ. ಈ ಜೀವನಚರಿತ್ರೆಯಲ್ಲಿ ಭೋಸ್ಲೆಗಿಂತ 20 ವರ್ಷ ದೊಡ್ಡವರಾದ ಗಣಪತ್‌ರಾವ್ ಭೋಸ್ಲೆ ಅವರೊಂದಿಗಿನ ವಿವಾಹದ ಬಗ್ಗೆ ಮತ್ತು ಇದೆಲ್ಲವೂ ದುಃಖದಲ್ಲಿ ಹೇಗೆ ಕೊನೆಗೊಂಡಿತು ಎಂಬುದರ ಬಗ್ಗೆ ಜೀವನಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ.

ಗಾಯಕಿ ತಮ್ಮ ಜೀವನಚರಿತ್ರೆಯಲ್ಲಿ ಕೆಲ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ನಮ್ಮ ಕುಟುಂಬವು ತುಂಬಾ ಸಂಪ್ರದಾಯವಾದಿಯಾಗಿತ್ತು. ಅವರು ನನ್ನನ್ನು ಒಬ್ಬ ಗಾಯಕಿಯಾಗಿ ಒಪ್ಪಿಕೊಳ್ಳಲಿಲ್ಲ. ನನ್ನ ಪತಿ ಮುಂಗೋಪದವರಾಗಿದ್ದರು. ಅವರು ನನಗೆ ನೋವುಂಟುಮಾಡಲು ಇಷ್ಟಪಟ್ಟಿರಬಹುದು. ಬಹುಶಃ ಅವರು ಸ್ಯಾಡಿಸ್ಟ್ ಆಗಿರಬಹುದು. ಆದರೆ ಹೊರಗೆ ಯಾರೂ ಅದರ ಬಗ್ಗೆ ಕೇಳುತ್ತಿರಲಿಲ್ಲ. ನಾನು ಅವರಿಗೆ ಗೌರವ ನೀಡಿದ್ದೇನೆ, ಅವರು ಏನು ಮಾಡಿದ್ದಾರೆಂದು ಎಂದಿಗೂ ಪ್ರಶ್ನಿಸಲಿಲ್ಲ. ನಾನು ಹಿಂದೂ ಧರ್ಮದ ಪ್ರಕಾರ ನನ್ನ ಕರ್ತವ್ಯವನ್ನು ಮಾಡಿದ್ದೇನೆ ಎಂದು ಆಶಾ ಭೋಸ್ಲೆ ಹೇಳಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುಂದಾಗಿದ್ದೆ
ಒಂದು ಸಂದರ್ಭದಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನಿಸಿತು. ಆಗ ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ನಾನು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದೆ. ಆಸ್ಪತ್ರೆಯಲ್ಲಿ ಹದಗೆಟ್ಟ ಪರಿಸ್ಥಿತಿಯಲ್ಲಿದ್ದಾಗ ಭಾರಿ ಮಾನಸಿಕ ಸಂಕಷ್ಟ ಅನುಭವಿಸಿದ್ದೆ. ಅಲ್ಲಿ ಪರಿಸ್ಥಿತಿಗಳು ತುಂಬಾ ಕೆಟ್ಟದಾಗಿದ್ದು, ನಾನು ನರಕಕ್ಕೆ ಇಳಿದಿದ್ದೇನೆ ಎಂದು ಭಾವಿಸಿದೆ. ನಾನು ಮಾನಸಿಕ ಯಾತನೆಯಲ್ಲಿದ್ದೆ. ಹಾಗಾಗಿ, ನಾನು ಒಂದು ಬಾಟಲ್‌ನಷ್ಟು ನಿದ್ರೆ ಮಾತ್ರೆಗಳನ್ನು ನುಂಗಿದ್ದೆ. ಆದರೆ ನನ್ನ ಗರ್ಭದಲ್ಲಿದ್ದ ಮಗುವಿನ ಮೇಲೆ ನನಗಿದ್ದ ಪ್ರೀತಿ ಎಷ್ಟು ಪ್ರಬಲವಾಗಿತ್ತು ಎಂದರೆ ಅದೇ ನನ್ನ ಜೀವ ಉಳಿಸಿತು. ನಾನು ಬದುಕಿಗೆ ಮರಳಿದ್ದೆ ಎಂದು ಆ ಘಟನೆ ಬಹಿರಂಗಪಡಿಸಿದ್ದಾರೆ.
ನನ್ನ ಅಕ್ಕನ ಕಂಠ ಅನುಕರಿಸಲಿಲ್ಲ
2023ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶಾ ಭೋಸ್ಲೆ ಭಾಗವಹಿಸಿ ತಮ್ಮ ಅಕ್ಕ ಮತ್ತು ಭಾರತ ರತ್ನ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಬಗ್ಗೆ ಮಾತನಾಡಿದ್ದರು. ತಮ್ಮ ಸಹೋದರಿಯನ್ನು ನೆನಪಿಸಿಕೊಳ್ಳುತ್ತಾ ಭೋಸ್ಲೆ ನಮಗೆ ಬಾಲ್ಯದಿಂದಲೂ ಒಂದೇ ರೀತಿಯ ಧ್ವನಿ ಇತ್ತು. ನಾನು ಲತಾ ಅವರ ಶೈಲಿಯಲ್ಲಿ ಹಾಡುತ್ತಿದ್ದರೆ, ಯಾರೂ ನನ್ನನ್ನು ಕೆಲಸಕ್ಕೆ ಕರೆದುಕೊಂಡಿರಲಿಲ್ಲ. ಅದಕ್ಕಾಗಿ ನಾನು ಲತಾ ಅವರನ್ನು ಎಂದಿಗೂ ಅನುಕರಿಸಬಾರದೆಂದು ನಿರ್ಧರಿಸಿದೆ ಎಂದು ಆಶಾ ಭೋಸ್ಲೆ ಹೇಳಿದ್ದರು.












Click it and Unblock the Notifications