'ನನ್ನ ಜೀವನದಲ್ಲಿ ತುಂಬಾ ರೇಗಿಸಿದ ವ್ಯಕ್ತಿ ಅಂದ್ರೆ ಅದು ಅಪರ್ಣಾ'- ಮಂಡ್ಯ ರಮೇಶ್
ಕನ್ನಡಿಗರ ಮನ ಗೆದ್ದಿದ್ದ ನಿರೂಪಕಿ ಅಪರ್ಣಾ ಅವರು ಚಿರನಿದ್ರೆಗೆ ಜಾರಿದ್ದಾರೆ. ಹಲವು ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ಅಕಾಲಿಕ ಅಗಲಿಕೆಗೆ ಇಡೀ ಕನ್ನಡ ಸಿನಿ ರಂಗವೇ ಕಂಬನಿ ಮಿಡಿದಿದೆ. ಹಾಸ್ಯ ನಟ ಮಂಡ್ಯ ರಮೇಶ್ ಕೂಡ ಅಪರ್ಣಾ ಅವರ ಬಗ್ಗೆ ನೋವಿನ ಮಾತುಗಳನ್ನಾಡಿದ್ದಾರೆ.
ಅಪರ್ಣಾ ಅವರ ಅಂತಿಮ ದರ್ಶನ್ ಪಡೆದ ಬಳಿಕ ಮಾತನಾಡಿದ ಮಂಡ್ಯ ರಮೇಶ್ ಅವರು, 'ನನ್ನ ಜೀವನದಲ್ಲಿ ತುಂಬಾ ರೇಗಿಸಿದ ವ್ಯಕ್ತಿ ಅಂದ್ರೆ ಅದು ಅಪರ್ಣಾ. ಐದು ವರ್ಷ ಮಜಾ ಟಾಕೀಸ್ ಮೂಲಕ ಇವರ ಜೊತೆ ಒಡನಾಟ ನಮ್ಮದು. ಎಲ್ಲರನ್ನೂ ಅತೀ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಅಪರ್ಣಾ. ಇಷ್ಟು ಬೇಗ ಅವರಿಗೆ ಸಾವು ಬರುತ್ತೆ ಅಂತ ನಾವ್ಯಾರೂ ಕೂಡ ನಿರೀಕ್ಷಿಸಿರಲಿಲ್ಲ' ಎಂದು ಭಾವುಕರಾದರು.

80 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ನಿರೂಪಣೆ ಮಾಡಿದ್ದ ಹೆಗ್ಗಳಿಕೆ ಅಪರ್ಣಾ ಅವರದ್ದು. ಯಾವಾಗಲೂ ಮಜಾ ಟಾಕೀಸ್‌ನಲ್ಲಿ ರೂಪದ ಬಗ್ಗೆ ಹಾಗೂ ವಯಸ್ಸಿನ ಬಗ್ಗೆ ಕಾಮಿಡಿ ಮಾಡ್ತಿದ್ವಿ. ಆಸ್ಟ್ರೇಲಿಯಾಗೆ ನಾವೆಲ್ಲ ಹೋಗಿದ್ದ ದಿನಗಳನ್ನು ಮರೆಯಲು ಆಗಲ್ಲ ಎಂದು ಮಂಡ್ಯ ರಮೇಶ್ ಸ್ಮರಿಸಿದರು.
ಇನ್ನೂ ಮಜಾ ಟಾಕೀಸ್ ಶೋನ ಸಹನಟಿ ರೂಪಿಕಾ ಕೂಡ ಅಪರ್ಣಾ ಅಂತಿಮ ದರ್ಶನ್ ಪಡೆದರು. ಈ ವೇಳೆ ಮಾತನಾಡಿದ ಅವರು, 'ಅಪರ್ಣಾ ಅಕ್ಕ ಜೊತೆ ಸುಮಾರು ತುಂಬಾ ಎಪಿಸೋಡ್ ನಾನು ಮಾಡಿದಿನಿ. ಅಪರ್ಣಾ ಅಕ್ಕ ನನಗೆ ಅಕ್ಕ ಇದ್ದ ಹಾಗೆ ಇದ್ದರು. ಮಜಾ ಟಾಕೀಸ್ ವರ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಆಗಿದ್ದರು. ಅವರು ಬಿಟ್ಟರೇ ಆ ಪಾತ್ರನ ಬೇರೆ ಯಾರು ಮಾಡೋಕೆ ಆಗುತ್ತಿರಲಿಲ್ಲ. ಅವರನ್ನು ನಾನು ತುಂಬಾ ಮಿಸ್ ಮಾಡ್ಕೊಳಿನಿ ಅಂತ ಹೇಳಲ್ಲ. ಯಾಕೆಂದರೆ ಅವರ ನಟನೆ, ವಾಯ್ಸ್ ನಮ್ಮ ಜೊತೆ ಟ್ರಾವೆಲ್ ಮಾಡುತ್ತಾ ಇರುತ್ತದೆ' ಎಂದು ನಟಿ ರೂಪಿಕಾ ಹೇಳುವಾಗ ಅವರ ಕಣ್ಣು ತುಂಬಿ ಬಂತು.
ಮೂರು ದಶಕಗಳವರೆಗೆ ಯಶಸ್ವಿ ನಿರೂಪಕಿಯಾಗಿ ಸೇವೆ ಸಲ್ಲಿಸಿದ ಅಪರ್ಣಾ, 'ನಮ್ಮ ಮೆಟ್ರೋ'ದಲ್ಲಿ ಘೋಷಣೆಯಾಗುವ 'ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆ'ಗೆ ಧ್ವನಿ ಗೂಡಿಸಿದ್ದರು. 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ 'ಮಸಣದ ಹೂವು' ಚಿತ್ರದಿಂದ ಬೆಳಕಿಗೆ ಬಂದರು. ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿ ಹಲವು ಚಿತ್ರಗಳಲ್ಲಿ ನಟನೆ ಮಾಡಿದರು.

ಅಲ್ಲದೆ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದರು.












Click it and Unblock the Notifications