Allu Arjun: ಅಲ್ಲು ಅರ್ಜುನ್‌ಗೆ ಮತ್ತೆ ಶಾಕ್ ಕೊಟ್ಟ ಹೈದರಾಬಾದ್ ಪೊಲೀಸರು
ಪುಷ್ಪ 2 ಸಿನಿಮಾ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಘಟನೆ ಇದೀಗ ಅಲ್ಲು ಅರ್ಜುನ್‌ಗೆ ಸಂಕಷ್ಟ ತಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಂಧನವಾಗಿದ್ದ ಅಲ್ಲು ಅರ್ಜುನ್ ಮಧ್ಯಂತರ ಜಾಮೀನು ಪಡೆದ ಜೈಲಿನಿಂದ ಹೊರಬಂದಿದ್ದಾರೆ. ಇದೀಗ ಅಲ್ಲು ಅರ್ಜುನ್‌ಗೆ ಹೈದರಾಬಾದ್ ಪೊಲೀಸರು ಮತ್ತೆ ಶಾಕ್ ಕೊಟ್ಟಿದ್ದಾರೆ. ಪುಷ್ಪ 2 ನಾಯಕ ಅಲ್ಲು ಅರ್ಜುನ್‌ಗೆ ಸಮನ್ಸ್ ನೀಡಿರುವ ಪೊಲೀಸರು, ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಕರೆದಿದ್ದಾರೆ.
ಡಿಸೆಂಬರ್ 4 ರಂದು ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ಘಟನೆ ನಡೆದಿತ್ತು. ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ್ದರೆ ಆಕೆಯ ಮಗ ತೀವ್ರವಾಗಿ ಅಸ್ವಸ್ತಗೊಂಡಿದ್ದರು. ಬಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಬಾಲಕ ಬ್ರೈನ್ ಡೆಡ್ ಆಗಿದೆ ಎನ್ನಲಾಗಿದೆ.

ಮಂಗಳವಾರ ಪ್ರಕರಣದ ವಿಚಾರಣೆ ನಡೆಯಲಿದ್ದು ಅಲ್ಲು ಅರ್ಜುನ್ ಬೆಳಗ್ಗೆ 11 ಗಂಟೆಗೆ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹಾಜರಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಮನ್ಸ್ ಕೊಡುತ್ತಿದ್ದಂತೆ ಅಲ್ಲು ಅರ್ಜುನ ಪರ ವಕೀಲರ ತಂಡ ಅವರ ಮನೆಗೆ ಭೇಟಿ ನೀಡಿ ಈ ಬಗ್ಗೆ ಚರ್ಚೆ ಮಾಡಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿತ್ರಮಂದಿರದ ಮ್ಯಾನೇಜ್‌ಮೆಂಟ್, ಅಲ್ಲು ಅರ್ಜುನ್ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಡಿಸೆಂಬರ್ 13ರಂದು ಇದೇ ಪ್ರಕರಣದಲ್ಲಿ ಅಲ್ಲು ಅರ್ಜುನ್‌ರನ್ನು ಪೊಲೀಸರು ಬಂಧಿಸಿದ್ದರು. ಸಿಟಿ ಸಿವಿಲ್ ಕೋರ್ಟ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು, ಆದರೆ ತೆಲಂಗಾಣ ಹೈಕೋರ್ಟ್ ಅವರಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿತು.
ಅಲ್ಲು ಅರ್ಜುನ್‌ರ ಮಧ್ಯಂತರ ಜಾಮೀನು ರದ್ದುಗೊಳಿಸಬೇಕು ಎಂದು ಪೊಲೀಸರು ಹೈಕೋರ್ಟ್‌ಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನುವ ವರದಿಗಳಿದ್ದು, ಈ ಬೆನ್ನಲ್ಲೇ ಅವರನ್ನು ವಿಚಾರಣೆಗೆ ಕರೆಯಲಾಗಿದೆ.
ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ನಾನು ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ಪೊಲೀಸರು ಅಲ್ಲಿದ್ದರು, ಅನುಮತಿ ಇಲ್ಲದೇ ಇದ್ದರೆ ಚಿತ್ರಮಂದಿರದ ಒಳಗಡೆ ಹೋಗಲು ಹೇಗೆ ಅನುಮತಿ ಕೊಟ್ಟರು ಎಂದು ಕೇಳಿದ್ದಾರೆ. ಅಲ್ಲದೆ ಪೊಲೀಸರು ಸೂಚನೆ ಕೊಡುತ್ತಿದ್ದಂತೆ ನಾನು ಚಿತ್ರಮಂದಿರದ ಹೊರಗಡೆ ಹೋದೆ ಎಂದು ಅವರು ಹೇಳಿದ್ದರು. ಇದಕ್ಕೆ ಹೈದರಾಬಾದ್ ಪೊಲೀಸರು ಪ್ರತಿಕ್ರಿಯೆ ನೀಡಿದ್ದು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದೆ.












Click it and Unblock the Notifications