Pushpa 2: ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲು
ಪುಷ್ಪ 2 ಸಿನಿಮಾ ಮೊದಲ ದಿನ ದಾಖಲೆಯ ಮಟ್ಟದ ಗಳಿಕೆ ಮಾಡಿರುವ ಖುಷಿಯಲ್ಲಿರುವ ಚಿತ್ರತಂಡಕ್ಕೆ ಪೊಲೀಸರು ಆಘಾತ ನೀಡಿದ್ದಾರೆ. ಸಿನಿಮಾ ನಟ ಅಲ್ಲುಅರ್ಜುನ್ ಮೇಲೆ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪುಷ್ಪಾ 2 ಸಿನಿಮಾದ ಪ್ರೀಮಿಯರ್ ಶೋ ವೇಳೆ ಹೈದಾರಾಬಾದ್‌ನ ಸಂಧ್ಯಾ ಚಿತ್ರಮಂದಿರದ ಹೊರಗೆ ನಡೆದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ ಘಟನೆ ಇದೀಗ ಚಿತ್ರತಂಡಕ್ಕೆ ಸಂಕಷ್ಟ ತಂದಿದೆ.
ಅಲ್ಲು ಅರ್ಜುನ್ ಯಾವುದೇ ಮುನ್ಸೂಚನೆ ನೀಡದೆ ಪ್ರೀಮಿಯರ್ ಶೋಗೆ ಆಗಮಿಸಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲು ಅರ್ಜುನ್ ಮಾತ್ರವಲ್ಲದೆ ಸಂಧ್ಯಾ ಚಿತ್ರಮಂದಿರದ ಆಡಳಿತ ಮಂಡಳಿ ವಿರುದ್ಧ ಕೂಡ ಪ್ರಕರಣ ದಾಖಲಾಗಿದ್ದು, ಜನಸಂದಣಿಯನ್ನು ನಿರ್ವಹಿಸಲು ಸೂಕ್ತ ಮುನ್ನೆಚ್ಚರಿಕೆ ವಹಿಸದೇ ಇರುವುದಕ್ಕೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗೋಷ್ಠಿ ನಡೆಸಿದ್ದು, ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡುವ ಬಗ್ಗೆ ಚಿತ್ರಮಂದಿರದ ಆಡಳಿತ ಮಂಡಳಿಯಾಗಲೀ ಅಥವಾ ನಟನ ಕಡೆಯಿಂದ ಆಗಲಿ ಯಾವುದೇ ಮಾಹಿತಿ ನೀಡಿರಲಿಲ್ಲ. ಅಲ್ಲು ಅರ್ಜುನ್ ಬರುತ್ತಾರೆ ಎಂದು ತಿಳಿದಿದ್ದರೂ, ಆತನಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಘಟನೆಯಲ್ಲಿ 35 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ, ಆಕೆಯ 9 ವರ್ಷದ ಮಗ ತೀವ್ರ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಸಂಜೆ ಪುಷ್ಪ 2 ಪ್ರೀಮಿಯರ್ ಶೋ ವೇಳೆ ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿದ್ದಂತೆ ಸಾವಿರಾರು ಜನ ಅವರನ್ನು ನೋಡಲು ಮುಗಿಬಿದ್ದಕಾರಣ ಭದ್ರತಾ ತಂಡದ ಜೊತೆ ತಳ್ಳಾಟ ಉಂಟಾಗಿತ್ತು.
ಅಲ್ಲು ಅರ್ಜುನ್ ಮತ್ತು ಆತನ ಭದ್ರತಾ ತಂಡ ಚಿತ್ರಮಂದಿರದ ಬಾಲ್ಕನಿ ಪ್ರದೇಶ ಪ್ರವೇಶಿಸಿದ್ದಾರೆ. ಆದರೆ ಜನಸ್ತೋಮದ ತಳ್ಳಾಟದಲ್ಲಿ ರೇವತಿ ಮತ್ತು ಆಕೆಯ ಮಗ ಉಸಿರುಗಟ್ಟಿದ ಅನುಭವವಾಗಿದ್ದು ಪ್ರಜ್ಞೆ ಕಳೆದುಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ಗುಂಪನ್ನು ಚದುರಿಸಿ ಮಗನಿಗೆ ಸಿಪಿಆರ್ ಮಾಡಿದ್ದು, ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯ ಮಗ ತೇಜ ಎನ್ನುವವನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯ ಕುಟುಂಬವು ಆರ್ಥಿಕವಾಗಿ ದುರ್ಬಲವಾಗಿದ್ದು ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕು ಎಂದು ಅಲ್ಲು ಅರ್ಜುನ್‌ಗೆ ಒತ್ತಾಯಿಸಿದ್ದಾರೆ.
ಮಹಿಳೆಯ ಕುಟುಂಬದ ದೂರನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಕಾರಣವಾದ ಎಲ್ಲರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಪ್ರತಿಕ್ರಿಯೆ ನೀಡಿದ್ದು, ಮಹಿಳೆಯ ಕುಟುಂಬಕ್ಕೆ ಎಲ್ಲ ರೀತಿಯಲ್ಲಿ ನೆರವು ನೀಡುವುದಾಗಿ ಭರವಸೆ ನೀಡಿದೆ.












Click it and Unblock the Notifications