ಸ್ಯಾಂಡಲ್‌ವುಡ್‌ನಲ್ಲೂ ನಟಿಯರಿಗೆ ಲೈಂಗಿಕ ದೌರ್ಜನ್ಯ? ನಟಿ ಹೇಳಿಕೆ ಮೂಡಿಸಿದೆ ಅನುಮಾನ..
ಮಲೆಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯರು ಲೈಂಗಿಕ ದೌರ್ಜನ್ಯ ಎದುರಿಸುತ್ತಿರುವ ಕುರಿತಾಗಿ ಜಸ್ಟೀಸ್ ಹೇಮಾ ಸಮಿತಿ ನೀಡಿರುವ ವರದಿಯು ಇಡೀ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಇಂತಹ ಸಮಿತಿಯೊಂದನ್ನು ರಚಿಸಬೇಕು ಎಂಬ ಕೂಗು ಕೇಳಿಬಂದಿದೆ. ಜೊತೆಗೆ ಸ್ಯಾಂಡಲ್‌ವುಡ್‌ನಲ್ಲೂ ನಟಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆಯೇ? ಎನ್ನುವ ಪ್ರಶ್ನೆಗಳನ್ನು ಹುಟ್ಟುಹಾಕಿದೆ ನಟಿಯೊಬ್ಬರ ಹೇಳಿಕೆ.
ಈವರೆಗೆ ಸ್ಯಾಂಡಲ್‌ವುಡ್‌ನಲ್ಲಿ ಈ ಬಗ್ಗೆ ಬೇರೆ ಯಾವ ನಟಿಯರೂ ಮಾತನಾಡಿರಲಿಲ್ಲ. ಇದೀಗ ಮೂಲತಃ ಕೇರಳದವರೇ ಆಗಿರುವ ಕನ್ನಡ ಚಿತ್ರರಂಗದ ನಟಿ ಶ್ರುತಿ ಹರಿಹರನ್ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ʼಕನ್ನಡ ಚಿತ್ರರಂಗಕ್ಕೂ ಹೇಮಾ ಕಮಿಟಿ ಮಾದರಿಯಲ್ಲಿ ಸಮಿತಿಯೊಂದನ್ನು ರಚಿಸುವ ಅಗತ್ಯವಿದೆʼ ಎಂದು ಹೇಳಿದ್ದಾರೆ.

ʼಹೇಮಾ ಸಮಿತಿಯ ನೀಡಿರುವ ವರದಿ ಬಗ್ಗೆ ಬಹಳ ಗೌರವವಿದೆ. ಈ ವಿಚಾರದ ಬಗ್ಗೆ ನಾವು ಗುಟ್ಟಾಗಿ ಮಾತನಾಡಿಕೊಳ್ಳುತ್ತಿದ್ದೆವು. ಚಿತ್ರೋದ್ಯಮದಲ್ಲಿ ಸೆಕ್ಸ್ ಫೇವರ್ ಮಿತಿಮೀರಿದೆ ಎಂದು ಮಾತನಾಡುತ್ತಿದ್ದೆವು. ಈಗ ಅದೇ ವಿಚಾರ ಗಂಭೀರ ಸ್ವರೂಪ ಪಡೆದುಕೊಂಡು, ಸರ್ಕಾರದವರೆಗೂ ತಲುಪಿರುವುದು ಹೆಮ್ಮೆಯ ವಿಚಾರʼ ಎಂದಿದ್ದಾರೆ ಶ್ರುತಿ ಹರಿಹರನ್.
ಇಂತಹ ವರದಿಯಿಂದ ಚಿತ್ರರಂಗದ ಗೌರವ ಕುಂದುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವ ಕುರಿತು ಮಾತನಾಡಿ, ʼಇದನ್ನು ನಾವು ತಪ್ಪಾಗಿ ನೋಡಬಾರದು. ಸಿನಿಮಾ ಎನ್ನುವುದು ಕಲೆಗೆ ಸಂಬಂಧಿಸಿದ ವಿಚಾರ. ಅದರೊಳಗೆ ಬೇರುಬಿಟ್ಟಿರುವ ಕೆಲ ಅಂಶಗಳನ್ನು ಸ್ವಚ್ಛಗೊಳಿಸಲು ಇದೊಂದು ಸೂಕ್ತ ಸಮಯ. ನಾವು ಮೊದಲು ನಮ್ಮ ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕುʼ ಎಂದೂ ಹೇಳಿದ್ದಾರೆ.

ಇತ್ತೀಚೆಗೆ ತೆಲುಗು ನಟಿ ಸಮಂತಾ ರುತ್ ಪ್ರಭು ಕೂಡ ಟಾಲಿವುಡ್‌ನಲ್ಲೂ ನಟಿಯರ ಮೇಲಿನ ಲೈಂಗಿಕ ಶೋಷಣೆಯ ಬಗ್ಗೆ ವರದಿ ನೀಡಲು ಹೇಮಾ ಮಾದರಿಯ ಸಮತಿ ರಚಿಸಬೇಕು. ಬಳಿಕ ವರದಿಯೂ ಬಿಡುಗಡೆ ಮಾಡಬೇಕು ಎಂದು ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದರು.
ಈಗ ನಟಿ ಶ್ರುತಿ ಹರಿಹರನ್ ಅವರು ಕನ್ನಡ ಚಿತ್ರರಂಗಕ್ಕೂ ಇದೇ ರೀತಿಯ ಸಮಿತಿಯೊಂದನ್ನು ರಚಿಸುವ ಅಗತ್ಯವಿದೆ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ, ನಮ್ಮ ಸ್ಯಾಂಡಲ್‌ವುಡ್‌ನಲ್ಲೂ ನಟಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆಯೇ? ಎಂಬ ಸಂಶಯ ಹುಟ್ಟುಹಾಕಿದೆ.

ಈ ಹಿಂದೆಯೂ ನಟಿ ಶ್ರುತಿ ಹರಿಹರನ್ ಅವರು ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ (Metoo) ಆರೋಪ ಮಾಡಿದ್ದರು. ಈ ಪ್ರಕರಣ ಕನ್ನಡ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಈ ಬಗ್ಗೆ ಅವರು ಬೋಲ್ಡ್ ಆಗಿಯೇ ಮಾತನಾಡಿದ್ದರು.
ʼಮೀಟೂ ವಿಚಾರವಾಗಿ ನನ್ನ ಕಥೆ ಹೇಳೋದಕ್ಕೆ ನನಗೆ ಧೈರ್ಯ ಇತ್ತು ಎಂದು ಹೇಳಲು ನನಗೆ ಬಹಳ ಹೆಮ್ಮೆ ಇದೆ. ಗೌರವ ಇದೆ. ಅದನ್ನು ನಾನು ಯಾರಿಗೂ ಸಾಬೀತು ಪಡಿಸುವ ಅವಶ್ಯಕತೆ ಇಲ್ಲ. ಅದನ್ನು ಸಮರ್ಥನೆ ಮಾಡುವ ಅವಶ್ಯಕತೆ ಇಲ್ಲ. ಮೀಟೂ ನಮಗೆ ಏನು ಬೇಕೋ ಅದನ್ನು ಹೇಳಿಕೊಳ್ಳುವ ವೇದಿಕೆ. ನಮ್ಮ ನಿಜ, ನಮ್ಮ ಅನಿಸಿಕೆಗಳನ್ನು ನಾವು ಹೇಳಿಕೊಳ್ಳುತ್ತೇವೆ. ಅದೇ ಮೀಟೂʼ ಎಂದು ಸಮರ್ಥಿಸಿಕೊಂಡಿದ್ದರು.
ʼನಾನು ಹೇಳಿಕೊಂಡ ಸಮಯದಲ್ಲೂ ಕೂಡ ಕೆಲವರು ಕನ್ನಡ ಚಿತ್ರರಂಗ ಸೇಫ್ ಅಂದುಕೊಳ್ಳುತ್ತಿದ್ದರು. ಆದರೆ ಇದು ಚಿತ್ರರಂಗದ ವಿಚಾರ ಅಲ್ಲ..ವೈಯಕ್ತಿಕ ವಿಚಾರ. ಅದೊಂದು ದೊಡ್ಡ ಕಥೆ. ಆದರೆ ಕೊನೆಯಲ್ಲಿ ಹಿಂದೆ ತಿರುಗಿ ನೋಡಿದಾಗ ನನ್ನ ಮೇಲೆ ನನಗೆ ಹೆಮ್ಮೆ ಇದೆ. ನಾನು ಮುಕ್ತವಾಗಿ ಮಾತನಾಡಿದ್ದರಿಂದ ಇವತ್ತು ನಮ್ಮ ಚಿತ್ರರಂಗದಲ್ಲಿ ಆದ ಬದಲಾವಣೆಯನ್ನು ಖಂಡಿತಾ ನಾನು ನೋಡುತ್ತಿದ್ದೇನೆʼ ಎಂದಿದ್ದರು.












Click it and Unblock the Notifications