ಕಾನೂನು ಕೈಯಿಂದ ತಪ್ಪಿಸಿಕೊಳ್ಳುವುದು ಕಷ್ಟ: ಕೆಟ್ಟ ಕಾಮೆಂಟ್ ಮಾಡೋರಿಗೆ ರಮ್ಯಾ ಖಡಕ್ ವಾರ್ನಿಂಗ್!
ನಟಿ ರಮ್ಯಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ಸ್ ಹಾಕಿದ್ದವರ ಪೈಕಿ ಕೆಲವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಧ್ವನಿ ಎತ್ತಿದ್ದ ರಮ್ಯಾ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಈ ಸಂಬಂಧ ಪೋಸ್ಟ್ ಕೂಡ ಮಾಡಿದ್ದರು. ಇದಕ್ಕಾಗಿ ನಟ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ತಿರುಗಿಬಿದ್ದಿದ್ದಲ್ಲದೆ, ಅವರಿಗೆ ಕೆಟ್ಟ ಪದಗಳನ್ನು ಬಳಸಿ ಕಾಮೆಂಟ್ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ರಮ್ಯಾ ಪೊಲೀಸರಿಗೆ ದೂರು ಕೊಟ್ಟಿದ್ದರು. ಸದ್ಯ ಕೆಲವರನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ರಮ್ಯಾ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ನಟ ದರ್ಶನ್ ಅಭಿಮಾನಿಗಳು ರಮ್ಯಾಗೆ ಈ ರೀತಿ ಕೆಟ್ಟ ಕಾಮೆಂಟ್ಸ್ ಮಾಡಿದ್ದರು ಎಂಬ ಆರೋಪವಿದೆ. ಈ ಸಂಬಂಧ ರಮ್ಯಾ ಅವರು ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದ್ದರು. ಅದನ್ನು ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾಯಿಸಿ, ತನಿಖೆ ಶುರು ಮಾಡಲಾಗಿತ್ತು. ರಮ್ಯಾ ಅವರನ್ನು ನಿಂದಿಸಿದ್ದ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ಪೊಲೀಸರು ಬಲೆ ಬೀಸಿದ್ದರು. ನಟಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡ ತಕ್ಷಣ ಹಲವು ಅಕೌಂಟ್‌ಗಳು ಡಿಲೀಟ್ ಆಗಿದ್ದವು. ಈ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿ ಕ್ರಮ ತೆಗೆದುಕೊಂಡಿದ್ದಾರೆ.

ರಮ್ಯಾ ಅವರಿಗೆ ಅಶ್ಲೀಲ ಕಾಮೆಂಟ್ ಹಾಕಿದ್ದ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಸೈಬರ್ ಪೊಲೀಸರು ಅವರ ಐಪಿ ಅಡ್ರೆಸ್ ಮಾಹಿತಿ ಕಲೆಹಾಕಿದ್ದರು. ಈ ಪೈಕಿ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಉಳಿದವರನ್ನು ಪತ್ತೆ ಹಚ್ಚುವ ಕೆಲಸ ಮುಂದುವರಿದಿದೆ. ರಮ್ಯಾ ಅವರು ಈ ಕೇಸ್‌ನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಹೀಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿ ಇಬ್ಬರನ್ನು ಬಂಧಿಸಿದ್ದಾರೆ. ಈ ಬಗ್ಗೆ ನಟಿ ರಮ್ಯಾ ಸಂತಸ ವ್ಯಕ್ತಪಡಿಸಿದ್ದಾರೆ.
ಪೊಲೀಸರಿಗೆ ಥ್ಯಾಂಕ್ಸ್
ನನ್ನ ದೂರಿನ ಮೇರೆಗೆ ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ನಮ್ಮ ಗೃಹ ಸಚಿವ ಡಾ.ಪರಮೇಶ್ವರ್, ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಹಾಗೂ ಸಿಸಿಬಿಯ ಸಂಪೂರ್ಣ ತಂಡಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರು ನಗರ ಪೊಲೀಸರು ಸ್ತ್ರೀದ್ವೇಷದ ಆಕ್ರಮಣದ ವಿರುದ್ಧ ದೃಢವಾದ ನಿಲುವನ್ನು ತೆಗೆದುಕೊಂಡಿದ್ದಾರೆ. ಕಾನೂನು ಕ್ರಮ ಕೈಗೊಳ್ಳಲಾಗಿದೆ, ನನ್ನ ದೂರಿನ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮಹಿಳೆಯರಿಗೆ ನ್ಯಾಯ ನೀಡುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಮತ್ತಷ್ಟು ಬಂಧನಗಳನ್ನು ಸಕ್ರಿಯವಾಗಿ ಅನುಸರಿಸುತ್ತಿದ್ದಾರೆ. ನಮ್ಮ ನಗರದಲ್ಲಿ ಮಹಿಳೆಯರ ಘನತೆಯನ್ನು ರಕ್ಷಿಸುವ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ ವಿಷಯಕ್ಕೆ ಬಂದಾಗ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳುವುದು ಕಷ್ಟ ಎನ್ನುವ ಸಂದೇಶ ಸ್ಪಷ್ಟವಾಗಿದೆ ಎಂದು ರಮ್ಯಾ ಎಚ್ಚರಿಕೆ ನೀಡಿದ್ದಾರೆ.
ರಮ್ಯಾ ಅವರಿಗೆ ಕಾಮೆಂಟ್ ಮಾಡಿರುವುದು ದರ್ಶನ್ ಅಭಿಮಾನಿಗಳಾ ಅಥವಾ ನಕಲಿ ಅಕೌಂಟ್‌ಗಳಿಂದ ಈ ಕೃತ್ಯ ಮಾಡಲಾಗಿದೆಯೇ? ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಬಹುತೇಕ ಕಾಮೆಂಟ್‌ಗಳಲ್ಲಿ ನಟ ದರ್ಶನ್, ಡಿಬಾಸ್ ಹೆಸರು ಉಲ್ಲೇಖ ಮಾಡಿರುವುದರಿಂದ ಅವರೆಲ್ಲ ದರ್ಶನ್ ಅಭಿಮಾನಿಗಳು ಎಂದು ಹೇಳಲಾಗಿತ್ತು.












Click it and Unblock the Notifications