ಮೇಘನಾ ರಾಜ್ ಜೊತೆ ನಟಿಸಿದ್ದ ಖ್ಯಾತ ನಟನಿಗೆ ಹೃದಯಾಘಾತ, ಬದುಕೋದು ಡೌಟ್ ಎಂದ ವೈದ್ಯರು!
ಖ್ಯಾತ ನಟ ಲೈವ್ ಕಾರ್ಯಕ್ರಮದ ವೇದಿಕೆಯಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದಿರುವ ಘಟನೆ ವರದಿಯಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಕೊಚ್ಚಿಯಲ್ಲಿ ನಡೆದ ಲೈವ್ ಕಾರ್ಯಕ್ರಮದಲ್ಲಿ ಮಲಯಾಳಂ ಖ್ಯಾತ ನಟ ಮತ್ತು ನಿರೂಪಕ ರಾಜೇಶ್ ಕೇಶವ್ ವೇದಿಕೆಯಲ್ಲಿ ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿದ್ದು, ಪ್ರಸ್ತುತ ಅವರು ವೆಂಟಿಲೇಟರ್‌ನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. 2011ರಲ್ಲಿ ತೆರೆಕಂಡ ಮೇಘನಾ ರಾಜ್ ನಟನೆಯ "ಬ್ಯೂಟಿಫುಲ್" ಮಲಯಾಳಂ ಸಿನಿಮಾದಲ್ಲಿ ರಾಜೇಶ್ ಅಭಿನಯಿಸಿದ್ದರು.
49 ವರ್ಷದ ನಟ ರಾಜೇಶ್ ಕೇಶವ್ ಇನ್ನೇನು ಕಾರ್ಯಕ್ರಮ ಮುಕ್ತಾಯ ಆಗಲಿದೆ ಎನ್ನುವಾಗ ವೇದಿಕೆಯ ಮೇಲೆ ಕುಸಿದು ಬಿದಿದ್ದರು. ಅವರನ್ನ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಅವರಿಗೆ ತುರ್ತಾಗಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಲಾಗಿದ್ದು, ಸದ್ಯಕ್ಕೆ ಅವರು ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನಿರ್ಮಾಪಕಿ ಪ್ರತಾಪ್ ಜಯಲಕ್ಷ್ಮಿ ನಟನ ಆರೋಗ್ಯದ ಬಗ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಜ್ಞೆ ತಪ್ಪಿದ ನಂತರ 15-20 ನಿಮಿಷಗಳ ಒಳಗೆ ರಾಜೇಶ್ ಅವರನ್ನ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಬರೆದಿದ್ದಾರೆ. ನಮ್ಮ ಆತ್ಮೀಯ ಸ್ನೇಹಿತ ರಾಜೇಶ್‌ಗೆ ಈಗ ಬೇಕಾಗಿರುವುದು ನಿಮ್ಮೆಲ್ಲರ ಹೃತ್ಪೂರ್ವಕ ಪ್ರಾರ್ಥನೆ. ಭಾನುವಾರ ರಾತ್ರಿ ಕೊಚ್ಚಿಯ ಕ್ರೌನ್ ಪ್ಲಾಜಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದ ಕೊನೆಯಲ್ಲಿ ಅವರು ಕುಸಿದು ಬಿದ್ದರು. ತಕ್ಷಣ ಅವರನ್ನು ಲೇಕ್‌ಶೋರ್ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ದೃಢಪಡಿಸಿದ್ದಾರೆ.
ಮೆದುಳಿಗೆ ಹಾನಿ ಶಂಕೆ
ರಾಜೇಶ್ ಕುಸಿದು ಬಿದ್ದಿದ್ದರಿಂದ ಹೃದಯಾಘಾತ ಸಂಭವಿಸಿದೆ ಎಂದು ವೈದ್ಯರು ಹೇಳಿದರು. ಆಂಜಿಯೋಪ್ಲ್ಯಾಸ್ಟಿಯನ್ನು ತಕ್ಷಣವೇ ಮಾಡಲಾಯಿತು. ಅಂದಿನಿಂದ, ವೆಂಟಿಲೇಟರ್ ಸಹಾಯದಿಂದ ಅವರನ್ನು ಜೀವಂತವಾಗಿಡಲಾಗಿದೆ. ಅವರು ಇನ್ನೂ ಪ್ರತಿಕ್ರಿಯಿಸಿಲ್ಲ, ಆಗೊಮ್ಮೆ ಈಗೊಮ್ಮೆ ಸ್ವಲ್ಪ ಚಲನೆಗಳು ಕಂಡುಬಂದಿವೆ. ಅವರ ಮೆದುಳಿಗೆ ಸ್ವಲ್ಪ ಹಾನಿಯಾಗಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಅವರು ಮತ್ತೆ ಬದುಕಲು ನಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳು ಮಾತ್ರ ಬೇಕಾಗಿವೆ ಎಂದಿದ್ದಾರೆ.
ಈ ಘಟನೆ ನಿಜಕ್ಕೂ ಹೃದಯವಿದ್ರಾವಕವಾಗಿದೆ. ಆದರೆ ಅವರು ಹಿಂತಿರುಗುತ್ತಾರೆ ಎಂದು ನಮಗೆ ನಂಬಿಕೆ ಇದೆ. ನಾವೆಲ್ಲರೂ ಒಟ್ಟಾಗಿ ಬಂದು ಅವರನ್ನು ನಮ್ಮ ಆಲೋಚನೆಗಳಲ್ಲಿ ಹಿಡಿದಿಟ್ಟುಕೊಂಡರೆ, ಅವರು ಮತ್ತೆ ಚೇತರಿಸಿಕೊಳ್ಳಲಿದ್ದಾರೆ. ನನ್ನ ಪ್ರೀತಿಯ ಸ್ನೇಹಿತ ಎಂದು ಬರೆದುಕೊಂಡಿದ್ದಾರೆ. ಹೋಟೆಲ್ ಕ್ಯಾಲಿಫೋರ್ನಿಯಾ (2013), ನೀ-ನಾ (2015), ಥಟ್ಟಂ ಪುರತ್ ಅಚ್ಯುತನ್ (2018) ಸಿನಿಮಾಗಳಲ್ಲಿ ರಾಜೇಶ್ ಕೇಶವ್ ನಟಿಸಿದ್ದರು.












Click it and Unblock the Notifications