ನಟ ರಾಜ್ ಬಿ.ಶೆಟ್ಟಿ ತಲೆ ಬಗ್ಗೆ ಅಪಹಾಸ್ಯ: 'ಶೆಟ್ರ ಕಾಲ ಧೂಳಿಗೂ ಇವ್ರು ಸಮ ಇಲ್ಲ' ಎಂದ ಅಭಿಮಾನಿಗಳು
ಸ್ಯಾಂಡಲ್‌ವುಡ್ ಈಗಾಗಲೇ ವಿವಾದಗಳ ಸರಮಾಲೆಯಲ್ಲಿ ಸಿಲುಕಿಕೊಂಡಿದೆ. ಸಾಮಾಜಿಕ ಮಾಧ್ಯಮಗಳ ಬಳಕೆ ಹೆಚ್ಚಾದಂತೆ, ಈಗ ಯಾರು ಎಲ್ಲಿ ಏನು ಮಾತನಾಡಿದ್ರೂ ವಿವಾದಕ್ಕೆ ತಿರುಗುತ್ತಿವೆ. ಸೆಲೆಬ್ರಿಟಿಗಳು ಕುಂತರೂ ನಿಂತರೂ ಅವರನ್ನು ಟ್ರೋಲ್‌ಗಳು ಬೆನ್ನುಬೀಳುತ್ತಿವೆ. ಈಗ ಈ ಸಾಲಿನಲ್ಲಿ ಪ್ರತಿಭಾನ್ವಿತ ನಟ ರಾಜ್ ಬಿ.ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಪ್ರತಿಭೆ ಹಾಗೂ ಬಡವರ ಮನೆ ಮಕ್ಕಳು ಕುರಿತು ರಾಜ್ ಆಡಿದ್ದ ಮಾತುಗಳನ್ನು ಹಲವರು ಪ್ರಬುದ್ಧತೆ ಎಂದು ಸ್ವಾಗತಿಸಿದ್ದರೂ, ಕೆಲವರು ತಿರುಗಿಬಿದ್ದಿದ್ದಾರೆ. ಇದು ಕೊನೆಗೆ ಬಾಡಿ ಶೇಮಿಂಗ್ ಮಾಡುವ ಹಂತಕ್ಕೆ ತಲುಪಿದ್ದು, ನಟ ರಾಜ್ ಬಿ.ಶೆಟ್ಟಿ ತಲೆ ಮೇಲೆ ಕೆಲವರ ಕೆಂಗಣ್ಣು ಬಿದ್ದಿದೆ.
"ಒಂದು ಮೊಟ್ಟೆಯ ಕಥೆ" ಸಿನಿಮಾದಿಂದ ರಾಜ್ ಬಿ.ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದರು. ಬೋಳು ತಲೆಯೇ ಈ ಹಾಸ್ಯ ಚಿತ್ರದ ಪ್ರಧಾನ ಕಥಾವಸ್ತುವಾಗಿತ್ತು. ಇದನ್ನು ಕನ್ನಡ ಪ್ರೇಕ್ಷಕರು ಕೂಡ ಅಪ್ಪಿಸಿಕೊಂಡಿದ್ದರು. ನಂತರ ವಿಭಿನ್ನ ಪಾತ್ರಗಳ ಮೂಲಕ ರಾಜ್ ತಮ್ಮ ಪ್ರತಿಭೆಗೆ ವೇದಿಕೆಯನ್ನು ಸೃಷ್ಟಿಸಿಕೊಂಡಿದ್ದು ಗೊತ್ತೇ ಇದೆ. ನಟನೆ ಮಾತ್ರವಲ್ಲ, ನಿರ್ದೇಶನ, ನಿರ್ಮಾಣದಲ್ಲೂ ರಾಜ್ ಈಗ ಎತ್ತಿ ಕೈ ಎನಿಸಿಕೊಂಡಿದ್ದಾರೆ. ಅಲ್ಲದೆ ಹೀರೋ ಆಗಲು ಪ್ರತಿಭೆ ಮಾತ್ರ ಮುಖ್ಯ, ಅಂದ ಚೆಂದ ಅಲ್ಲ ಎನ್ನುವುದನ್ನು ಸುಳ್ಳು ಮಾಡಿದ್ದಾರೆ. ಆದರೆ ಈಗ ರಾಜ್ ಬಿ.ಶೆಟ್ಟಿ ಅವರ ಬೋಳುತಲೆಯು ಟ್ರೋಲ್ ಆಗುತ್ತಿದೆ.

ಈಗ ನಟರು ತಮ್ಮ ಅಭಿಪ್ರಾಯ ಹೇಳಿಕೊಳ್ಳುವುದಕ್ಕೂ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ನಟ ಏನೇ ಹೇಳಿದರೂ ಅದನ್ನು ಬೇರೊಬ್ಬ ನಟನಿಗೆ ಲಿಂಕ್ ಮಾಡಿ, ಬೆಂಕಿ ಹಚ್ಚುವ ಕೆಲಸಗಳು ಸದ್ದಿಲ್ಲದೆ ನಡೆಯುತ್ತಿವೆ. ಅದೇ ರೀತಿ ಈಗ ರಾಜ್ ಅವರ ಹೇಳಿಕೆಯೊಂದು ಪರ-ವಿರೋಧದ ಚರ್ಚೆಗೆ ಒಳಪಟ್ಟಿದೆ. ಇದಕ್ಕೆ ಕಾರಣ, ಇಲ್ಲಿ ಬಡವ-ಶ್ರೀಮಂತ ಎನ್ನುವುದಲ್ಲ, ಪ್ರತಿಭೆಗೆ ಮಾತ್ರ ಅವಕಾಶ ಸಿಗಬೇಕು ಎಂಬ ರಾಜ್ ಅಭಿಪ್ರಾಯ.
ಇತ್ತೀಚೆಗೆ ತಮ್ಮ ಅಭಿನಯದ "45" ಸಿನಿಮಾದ ಸಂದರ್ಶನದಲ್ಲಿ ರಾಜ್ ಶೆಟ್ಟಿ ಮಾತನಾಡಿದ್ದರು. 'ಈಗಿನ ಜನರೇಷನ್‌ನವರು ಒಂದನ್ನು ಕಲಿಯಬೇಕಿದೆ. ಇಂಡಸ್ಟ್ರಿ ನಮಗೆ ಅವಕಾಶ ಕೊಡಲ್ಲ ಅಂತಾರೆ, ಯಾಕೆ ಕೊಡಬೇಕು? ಇಲ್ಲಿ ಅವಕಾಶ ಕೊಡೋದಲ್ಲ, ಅವಕಾಶಕ್ಕೆ ನಾನು ಅರ್ಹನಾಗಬೇಕು ಎಂದಿದ್ದರು. ಬಡವರ ಮಕ್ಕಳು ಬೆಳಿಬೇಕು ಅನ್ನೋದಲ್ಲ. ಇಲ್ಲಿ ಅರ್ಹತೆ ಮಾತ್ರ ಮುಖ್ಯ ಆಗಬೇಕು. ಒಬ್ಬ ಬಡವನ ಮಗನಿಗೆ ಟ್ಯಾಲೆಂಟ್ ಇರೋದಿಲ್ಲ, ಆದರೆ ಒಬ್ಬ ಶ್ರೀಮಂತನ ಮಗನಿಗೆ ಸಿಕ್ಕಾಪಟ್ಟೆ ಟ್ಯಾಲೆಂಟ್ ಇರುತ್ತೆ. ಈಗ ನಾನು ಅವನು ಬಡವ ಅಂತ ಅವಕಾಶ ಕೊಡಬೇಕಾ? ಪ್ರತಿಭೆ ಅಂತ ಮತ್ತೊಬ್ಬನಿಗೆ ಅವಕಾಶ ಕೊಡಬೇಕಾ? ನನಗೇನೂ ಗೊತ್ತಿಲ್ಲ, ನಾನಿನ್ನೂ ಕಲಿಯಬೇಕು ಎನ್ನುವುದರಲ್ಲಿ ಮಾತ್ರ ಬಡತನ ಇರಬೇಕು. ಅಂತಹ ಬಡವನಿಗೆ ನಾವು ಅವಕಾಶ ಕೊಡುವುದು ಸರಿಯಾಗುತ್ತೆ' ಎಂದು ರಾಜ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
Great words from @RajbShettyOMK #45TheMovie pic.twitter.com/9olpc5R2sf
— 𝙍𝙎𝙆 (@RSKTheMonsters) December 23, 2025
ಕೆಲವರು 'ಬಡವರ ಮನೆ ಮಕ್ಕಳು ಬೆಳೀಬೇಕು ಅನ್ನೋದಲ್ಲ' ಎಂದ ರಾಜ್ ಮಾತಿನಿಂದ ಕೆರಳಿದ್ದಾರೆ. ಕೊನೆಗೆ ತಮ್ಮ ಆಕ್ರೋಶವನ್ನು ಹೊರಹಾಕಲು ರಾಜ್ ಅವರ ಬೋಳು ತಲೆಯನ್ನು ಟ್ರೋಲ್ ಮಾಡುವ ಮಟ್ಟಕ್ಕೂ ಇಳಿದಿದ್ದಾರೆ. ಈ ಸಂತೋಷ್‌ಕುಮಾರ್ ಎಲ್.ಎಂ ಅವರು ಫೇಸ್‌ಬುಕ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.
"ರಾಜ್ ಬಿ ಶೆಟ್ಟಿಯವರನ್ನು ಟೀಕಿಸುವ ಭರದಲ್ಲಿ ಕೆಲವರು. ಕಮೆಂಟುಗಳಲ್ಲಿ ಬಾಂಡ್ಲಿ, ಬೋಳ, ಬೊಕ್ಕ ಹೀಗೆ ಅನೇಕ ಪದಗಳನ್ನ ಬಳಸುತ್ತಿದ್ದಾರೆ. ಆ ಪೋಸ್ಟ್ ಬರೆದವರೂ ಸಹ ಅದರ ಬಗ್ಗೆ ಏನೂ ಮಾತನಾಡದೇ, ಒಳಗೊಳಗೆ ವಿಕೃತ ಆನಂದ ಅನುಭವಿಸುತ್ತಿದ್ದಾರೆ. ಮರೆಯದಿರಿ. ರಾಜ್ ಬಿ ಶೆಟ್ಟಿ ತಮ್ಮ ಬೋಳುತಲೆಯ ಬಗ್ಗೆಯೇ "ಒಂದು ಮೊಟ್ಟೆಯ ಕಥೆ" ಅನ್ನುವ ಸಿನಿಮಾ ಮಾಡಿ, ನಮ್ಮ ಅಂತರಂಗದ ಕುರೂಪದ ಬಗ್ಗೆ ಅವಲೋಕಿಸಿಕೊಳ್ಳಲು ಕಾರಣರಾದವರು. ಇಂಥವಕ್ಕೆಲ್ಲ ಅವರು ಉತ್ತರಿಸುವುದೂ ಇಲ್ಲ. ಆದರೆ ಅವರನ್ನು ಟೀಕಿಸುವ ಭರದಲ್ಲಿ ನೀವು ನಿಮ್ಮ ಮನದ ಓರೆಕೋರೆಗಳನ್ನು ಇಲ್ಲಿ ಜಗಜ್ಜಾಹೀರು ಮಾಡುತ್ತಿದ್ದೀರ...ಅಷ್ಟೇ" ಎಂದು ಬರೆದುಕೊಂಡಿದ್ದಾರೆ.
ನಟ ಡಾಲಿ ಹೆಸರು ಉಲ್ಲೇಖ
"ಬಡವರ ಮನೆ ಮಕ್ಕಳು ಬೆಳೀಬೇಕು" ಎಂದ ನಟ ಡಾಲಿ ಧನಂಜಯ್ ಅವರ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಕೆಲವರು ರಾಜ್.ಬಿ ಶೆಟ್ಟಿಯ ಮಾತನ್ನು ಡಾಲಿಗೆ ಕೌಂಟರ್ ಎನ್ನುವಂತೆ ಲಿಂಕ್ ಮಾಡುತ್ತಿದ್ದಾರೆ. ಈ ಫೇಸ್‌ಬುಕ್ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದು, ಅಸಲಿಗೆ ಅಲ್ಲಿ ರಾಜ್ ಬಿ ಶೆಟ್ರು ಎಲ್ಲೂ ಡಾಲಿ ಧನಂಜಯ್ ಹೆಸರು ಹೇಳಿಯೇ ಇಲ್ಲ, ಆದರೆ ಈ ಕಾಮೆಂಟ್ ಉತ್ತರಕುಮಾರರು ಯಾಕೆ "ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡೋದು? ಎಂದು ಕೇಳಿದ್ದಾರೆ. ಅನಿಲ್ ಎಂಬುವವರು, 'ರಾಜ್ ಶೆಟ್ರ ಕಾಲಿನ ಧೂಳಿಗೂ ಇವ್ರು ಸಮ ಇಲ್ಲ, ಟ್ಯಾಲೆಂಟ್ ಇದ್ದೋರು ಬಡವರಾಗಲಿ, ಶ್ರೀಮಂತರಾಗಲಿ ಅವಕಾಶ ಸಿಗಬೇಕು ಅಂತ ಅವ್ರು ಹೇಳಿದ್ದು, ಫಿಲಂ ಹೀರೊ ಮಗ ಅಂತ ಅವಕಾಶ ಸಿಗಬಾರದು. ಅವನಲ್ಲಿ ಅಭಿನಯ ಇದ್ದರೆ ಅವಕಾಶ ಸಿಗಲಿ ಅಂತ ಅರ್ಥ, ತಲೇಲಿ ಬುದ್ದಿ ಇದ್ರೆ ತಾನೆ ಯೋಚಿಸೋಕೆ' ಎಂದು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications