Darshan Thoogudeepa: ಸುರಿವ ಮಳೆಯಲ್ಲೇ ಪವರ್‌ಫುಲ್ ದೇವಸ್ಥಾನಕ್ಕೆ ನಟ ದರ್ಶನ್ ಭೇಟಿ, ಏನಿದರ ಮಹತ್ವ?
ನಟ ದರ್ಶನ್ ತೂಗುದೀಪ ಅವರ ಡೆವಿಲ್ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ರಿಲೀಸ್‌ಗೆ ಸಜ್ಜಾಗುತ್ತಿದೆ. ಇದರ ನಡುವೆ ಬಿಡುವು ಮಾಡಿಕೊಂಡು ಅವರು ತಮ್ಮ ಕುಟುಂಬದೊಂದಿಗೆ ಹೊರರಾಜ್ಯದಲ್ಲಿರುವ ಐತಿಹಾಸಿಕ ಹಾಗೂ ಪವರ್‌ಫುಲ್ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಸುರಿವ ಮಳೆಯಲ್ಲೂ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರು ದೇವಸ್ಥಾನಕ್ಕೆ ತೆರಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದರ್ಶನ್ ಅವರು ಭೇಟಿ ನೀಡಿರುವ ಈ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆ ಹಾಗೂ ವಿಶೇಷತೆಗಳಿಂದ ಕೂಡಿದೆ. ಇಷ್ಟಕ್ಕೂ ಆ ದೇವಸ್ಥಾನ ಯಾವುದು, ಎಲ್ಲಿದೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ..
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದ ನಂತರ ದರ್ಶನ್ ಅವರು ಟೆಂಪಲ್ ರನ್ ಮಾಡುತ್ತಿದ್ದಾರೆ. ಕರ್ನಾಟಕದ ಹಲವು ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದ ಅವರು ಈ ಹಿಂದೆ ಕೇರಳದ ದೇವಸ್ಥಾನವೊಂದಕ್ಕೆ ಕುಟುಂಬ ಸಮೇತ ತೆರಳಿ ಹೋಮ ಮಾಡಿಸಿ ಬಂದಿದ್ದರು. ಇದೀಗ ಅವರು ಮತ್ತೊಮ್ಮೆ ಕೇರಳ ಮತ್ತೊಂದು ಪವರ್‌ಫುಲ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದರ್ಶನ್ ಅವರೊಂದಿಗೆ ಪತ್ನಿ ವಿಜಯಲಕ್ಷ್ಮಿ ಕೂಡ ಸುರಿವ ಮಳೆಯಲ್ಲೇ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.

ಈ ದೇವಾಲಯದ ವೈಶಿಷ್ಟ್ಯವೇನು?
ಪಕ್ಕದ ಕೇರಳದ ಕಣ್ಣೂರಿನ ಕೊಟ್ಟಿಯೂರು ಶಿವನ ದೇವಸ್ಥಾನಕ್ಕೆ (Kottiyoor Temple) ನಟ ಧನ್ವೀರ್, ದರ್ಶನ್ ಹಾಗೂ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಇದು ಮಹಾಶಿವನ ದೇವಾಲಯವಾಗಿದ್ದು, ದಕ್ಷಿಣ ಕಾಶಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಉತ್ತರ ಕೇರಳದಲ್ಲಿರುವ ಪುರಾತನ ಯಾತ್ರಾ ಸ್ಥಳವಾದ ಕೊಟ್ಟಿಯೂರು ಶಿವ ದೇವಾಲಯವು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿದೆ. ಬಾವಲಿ ನದಿಯ ಎದುರು ದಡದಲ್ಲಿ ಅಕ್ಕರೆ ಕೊಟ್ಟಿಯೂರು ಮತ್ತು ಇಕ್ಕರೆ ಕೊಟ್ಟಿಯೂರು ಎಂಬ ಎರಡು ದೇವಾಲಯಗಳಿವೆ. ಮೇ-ಜೂನ್ ತಿಂಗಳುಗಳಲ್ಲಿ ದೇವಾಲಯದ ವಾರ್ಷಿಕ ಉತ್ಸವವಾದ ವೈಶಾಖ ಮಹೋತ್ಸವದ ಸಮಯದಲ್ಲಿ ಅಕ್ಕರೆ ಕೊಟ್ಟಿಯೂರು 28 ದಿನಗಳವರೆಗೆ ಮಾತ್ರ ತೆರೆದಿರುತ್ತದೆ. ಆ ಸಮಯದಲ್ಲಿ ಇಕ್ಕರೆ ಕೊಟ್ಟಿಯೂರು ಮುಚ್ಚಿರುತ್ತದೆ.
ಈ ದೇವಾಲಯವು ದಕ್ಷ ಯಾಗಕ್ಕೆ ಹೆಸರುವಾಸಿಯಾಗಿದೆ. ಹಿಂದೂ ಪುರಾಣದ ಪ್ರಕಾರ ದಕ್ಷಪ್ರಜಾಪತಿ ತನ್ನ ಮಗಳು ಶಿವನೊಂದಿಗೆ ಮದುವೆಯಾದುದನ್ನು ನೋಡಿ ಸಂತೋಷ ಪಡದೆ, ತನ್ನ ಮಗಳು ಸತಿ ದೇವಿಗೆ ಮತ್ತು ಶಿವನಿಗೆ ತಿಳಿಸದೆ ಈ ಸ್ಥಳದಲ್ಲಿ ಯಾಗ ನಡೆಸಲು ನಿರ್ಧರಿಸಿದನು. ಸತಿ ದೇವಿಯು ತನ್ನ ಉದ್ದೇಶವನ್ನು ಅರಿಯದೆ ಯಾಗಭೂಮಿಗೆ ಭೇಟಿ ನೀಡಿದಳು. ಆದರೆ ಅವಳ ತಂದೆಯಿಂದ ಅವಮಾನಿಸಲ್ಪಟ್ಟಳು. ಗಾಯಗೊಂಡು ಅವಮಾನಿತಳಾದ ಅವಳು ತನ್ನ ಶಕ್ತಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಳು. ಈ ಕೃತ್ಯದಿಂದ ವಿಚಲಿತನಾದ ಶಿವನು ವೀರಭದ್ರನಾಗಿ ತಾಂಡವನೃತ್ಯ ಮಾಡಿ ದಕ್ಷನ ಶಿರಚ್ಛೇದ ಮಾಡಿದನು ಎಂದು ಹೇಳಲಾಗುತ್ತದೆ.

ಆಗ ಬ್ರಹ್ಮ, ವಿಷ್ಣು ಮತ್ತು ಇತರ ದೇವರುಗಳು ಶಿವನನ್ನು ಸಮಾಧಾನಪಡಿಸಲು ಇಲ್ಲಿಗೆ ಬಂದರು. ನಂತರ, ಶಿವನು ದಕ್ಷನ ತಲೆಯನ್ನು ಆಡಿನ ತಲೆಯಿಂದ ಬದಲಾಯಿಸಿದನು. ಆದ್ದರಿಂದ ಈ ಸ್ಥಳವು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನ ದೈವಿಕ ಉಪಸ್ಥಿತಿಯನ್ನು ಹೊಂದಿದೆ ಎಂಬ ಪ್ರತೀತಿ ಹೊಂದಿದೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಕೆಲವೇ ದಿನಗಳು ಈ ದೇವಸ್ಥಾನ ತೆರೆಯುವುದರಿಂದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಹೆಚ್ಚಾಗಿ ಜನ ಇಲ್ಲಿಗೆ ಭೇಟಿ ನೀಡುತ್ತಾರೆ.












Click it and Unblock the Notifications