A.R.Rahman: ಖ್ಯಾತ ಗಾಯಕ ಎ.ಆರ್.ರೆಹಮಾನ್ ಆಸ್ಪತ್ರೆಗೆ ದಾಖಲು
A.R.Rahman: ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರಿಗೆ ಇಂದು (ಮಾರ್ಚ್ 16) ಬೆಳಗ್ಗೆ ದಿಢೀರ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ, ಎ.ಆರ್.ರೆಹಮಾನ್ ಅವರನ್ನು ಆಸ್ಪತ್ರೆಯ ತುರ್ತು ವಾರ್ಡ್‌ಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ವೈದ್ಯರು ಇಸಿಜಿ ಮತ್ತು ಎಕೋಕಾರ್ಡಿಯೋಗ್ರಾಮ್ ಸೇರಿದಂತೆ ಪರೀಕ್ಷೆಗಳನ್ನು ನಡೆಸಿದರು. ವೈದ್ಯರ ತಂಡವು ಅವರ ಆರೋಗ್ಯದ ಸ್ಥಿತಿಯನ್ನು ಪರಿಶೀಲನೆ ನಡೆಸಿದ್ದು, ಆಂಜಿಯೋಗ್ರಾಮ್ ಮಾಡಿಸಬಹುದು ಎಂದು ಆಸ್ಪತ್ರೆಯ ನಿಕಟ ಮೂಲಗಳು ಸೂಚಿಸಿವೆ. ಅವರ ಆರೋಗ್ಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಸಿಎಂ ಸ್ಟಾಲಿನ್ ಹೇಳಿದ್ದೇನು?: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರೆಹಮಾನ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದು, ತಾವು ವೈದ್ಯರೊಂದಿಗೆ ಮಾತನಾಡಿದ್ದು ರೆಹಮಾನ್ ಅವರು ಚೆನ್ನಾಗಿದ್ದಾರೆ. ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ರೆಹಮಾನ್ ಅವರ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ತಿಳಿದ ತಕ್ಷಣ, ನಾನು ವೈದ್ಯರನ್ನು ಸಂಪರ್ಕಿಸಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದೆ. ಅವರು ಚೆನ್ನಾಗಿದ್ದಾರೆ ಮತ್ತು ಶೀಘ್ರದಲ್ಲೇ ಮನೆಗೆ ಮರಳುತ್ತಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.
58 ವರ್ಷದ ಎ.ಆರ್.ರೆಹಮಾನ್ ಅವರನ್ನು ಇಂದು ಮುಂಜಾನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರ ವ್ಯವಸ್ಥಾಪಕ ಸೆಂಥಿಲ್ ವೇಲನ್ ತಿಳಿಸಿದ್ದಾರೆ. ಎ.ಆರ್.ರೆಹಮಾನ್ ಈ ಹಿಂದೆ ಕತ್ತು ನೋವಿಗೂ ಒಳಗಾಗಿದ್ದರು ಅಂತಲೂ ಹೇಳಿದ್ದಾರೆ.
ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಎ.ಆರ್.ರೆಹಮಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿಗಳನ್ನು ಅವರ ಸಹೋದರಿ ರೈಹಾನಾ ತಳ್ಳಿಹಾಕಿದ್ದಾರೆ. ಅವರು ನಿರ್ಜಲೀಕರಣ ಹಾಗೂ ಉದರ ಸಂಬಂಧಿ ತೊಂದರೆಗೊಳಗಾಗಿದ್ದರು ಎಂದು ಅವರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಎರಡು ಬಾರಿಯ ಆಸ್ಕರ್ ಪ್ರಶಸ್ತಿ ಹಾಗೂ ಒಮ್ಮೆ ಗ್ರಾಮಿ ಪ್ರಶಸ್ತಿಗೆ ಭಾಜನರಾಗಿರುವ ಎ.ಆರ್.ರೆಹಮಾನ್, 'ರೋಜಾ', 'ದಿಲ್ ಸೆ', 'ಎಂದಿರನ್' ಹಾಗೂ 'ಸ್ಲಮ್ ಮಿಲಿಯನೇರ್' ಚಿತ್ರಗಳಿಗೆ ಸಂಯೋಜಿಸಿದ ಸಂಗೀತದಿಂದ ವಿಶ್ವವಿಖ್ಯಾತ ಸಂಗೀತ ನಿರ್ದೇಶಕರೆನಿಸಿಕೊಂಡಿದ್ದಾರೆ.












Click it and Unblock the Notifications