ಕ್ಷೇತ್ರ ಪರಿಚಯ : ಜೆಡಿಎಸ್, ಕಾಂಗ್ರೆಸ್ ಭದ್ರ ಕೋಟೆ ಭದ್ರಾವತಿ!
ಭದ್ರಾನದಿಯ ತಟದಲ್ಲಿದೆ ಅಂದಿನ 'ಬೆಂಕಿಪುರ' ಇಂದಿನ ಭದ್ರಾವತಿ. ಇಲ್ಲಿನ ಕಾರ್ಖನೆಯ ಬೆಂಕಿಯೇ ಇಲ್ಲಿನ ಜನರ ಮನೆಯ ಅಡುಗೆಗೆ ಆಧಾರ. ಅರೆ ಮಲೆನಾಡು, ಬಯಲುಸೀಮೆಯನ್ನು ಕ್ಷೇತ್ರ ಒಳಗೊಂಡಿದೆ.
ಆಕಾಶವಾಣಿ ಕೇಂದ್ರ, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖನೆಗಳಿಂದಾಗಿ ಭದ್ರಾವತಿ ಪ್ರಸಿದ್ಧಿ ಪಡೆದಿದೆ. ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳು. ಆದರೆ, ಅಭಿವೃದ್ಧಿಯ ಪಥದಲ್ಲಿ ಭದ್ರಾವತಿ ಬಹಳ ದೂರ ಸಾಗಬೇಕಾಗಿದೆ.
ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಟ್ಟಣವಿದು. ಬಸ್ಸು, ರೈಲು ಸಂಪರ್ಕ ಉತ್ತಮವಾಗಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಭದ್ರಾವತಿಗೂ ಅದು ಹತ್ತಿರವಾಗಲಿದೆ.

ಪಟ್ಟಣದಲ್ಲಿ ಮೂಲ ಸೌಕರ್ಯಗಳು ಇನ್ನೂ ಅಭಿವೃದ್ಧಿಯಾಗಬೇಕು. ಭಾರೀ ಮಳೆ ಸುರಿದಾಗ ಪಟ್ಟಣದ ನಡುವೆ ಇರುವ ಭದ್ರಾ ನದಿ ತುಂಬಿ ಹರಿಯುತ್ತದೆ. ಹೊಸ ಸೇತುವೆ ನಿರ್ಮಾಣವಾಗಿದ್ದರೂ ಅದು ದುರಸ್ಥಿ ಕಾಣಬೇಕಿದೆ. ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಕಾಯಕಲ್ಪಕ್ಕಾಗಿ ಕಾದು ಕುಳಿತಿದೆ.
ರಾಜಕೀಯವಾಗಿ ಕ್ಷೇತ್ರದಲ್ಲಿ ವಿಶಿಷ್ಟ ಸಂಪ್ರದಾಯ ನಡೆದುಬಂದಿದೆ. ಒಂದು ಬಾರಿ ಗೆದ್ದವರು ಮತ್ತೊಂದು ಬಾರಿ ಇಲ್ಲಿ ಗೆಲ್ಲುವುದಿಲ್ಲ. ಕಾಂಗ್ರೆಸ್‌ನ ಬಿ.ಕೆ.ಸಂಗಮೇಶ್, ಜೆಡಿಎಸ್‌ನ ಅಪ್ಪಾಜಿ ಗೌಡ ಪ್ರಮುಖ ನಾಯಕರು. ಬಿಜೆಪಿಗೆ ಇಲ್ಲಿ ಪ್ರಮುಖ ನಾಯಕರ ಕೊರತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ, ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರ ತವರು ಕ್ಷೇತ್ರ ಭದ್ರಾವತಿ. 2013ರ ಚುನಾವಣೆಯಲ್ಲಿ ಅವರು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಕ್ಷೇತ್ರದಲ್ಲಿ ಕಮಲ ಆರಳಿಸುವ ಪ್ರಯತ್ನವೂ ಸಾಗದೆ.
ಒಮ್ಮೆ ಬಿ.ಕೆ.ಸಂಗಮೇಶ, ಮತ್ತೊಂದು ಬಾರಿ ಅಪ್ಪಾಜಿ ಗೌಡ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಬಿ.ಕೆ.ಸಂಗಮೇಶ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಅಪ್ಪಾಜಿ ಗೌಡ ಪ್ರಸ್ತುತ ಕ್ಷೇತ್ರದ ಶಾಸಕರು.
2013 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತರು ಎಂಬ ಕಾರಣಕ್ಕೆ ಸಿ.ಎಂ.ಇಬ್ರಾಹಿಂ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಲಾಗಿತ್ತು. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಸಂಗಮೇಶ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಇಬ್ಬರೂ ಸೋಲು ಕಂಡರು.
ಲಿಂಗಾಯತ ಸಮುದಾಯಕ್ಕೆ ಸೇರಿದ ಸಂಗಮೇಶ ಅವರು ಕಮಲ ಪಾಳಯ ಸೇರಬಹುದು ಎಂಬ ಮಾತುಗಳು ಹಬ್ಬಿವೆ. ಈ ಬಾರಿ ಯಾರು ಶಾಸಕರಾಗುತ್ತಾರೆ? ಎಂಬುದು ಕುತೂಹಲದ ವಿಷಯ.
2013ರ ಚುನಾವಣೆಯಲ್ಲಿ ಅಪ್ಪಾಜಿ ಗೌಡ ಅವರು 78,370 ಮತಗಳನ್ನು ಪಡೆದು ಜಯಗಳಿಸಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಿ.ಕೆ.ಸಂಗಮೇಶ್ವರ ಅವರು 34,271 ಮತ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿ.ಎಂ.ಇಬ್ರಾಹಿಂ ಅವರು 22,329 ಮತ, ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್.ಬಿ.ಶಿವಾಜಿರಾವ್ ಸಿಂಧ್ಯಾ ಕೇವಲ 1,779 ಮತ ಪಡೆದಿದ್ದರು.












Click it and Unblock the Notifications