ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳೇ ಗಂಡು?

By Staff
|
Google Oneindia Kannada News


ಅವನಂತೆ ನಾನು ಪ್ಯಾಂಟ್‌ ಹಾಕುತ್ತೇನೆ. ಅವನಂತೆ ನಾನೂ ಟ್ರಾಫಿಕ್‌ನಲ್ಲಿ ಜಗಳ ಆಡುತ್ತೇನೆ. ಅವನಂತೆ ನಾನೂ ಅಸಂಬದ್ಧ ಜೋಕ್ಸ್‌ ಮಾಡುತ್ತೇನೆ. ಅವನಂತೆ ನಾನೂ ಪಾರ್ಟಿ ಮಾಡುತ್ತೇನೆ. ಇದೇ ತಾನೆ ಸಮಾನತೆ? ಇಷ್ಟೇ ತಾನೆ ಸಮಾನತೆ?

Red - Wineನನಗೆ ಗೊತ್ತಿತ್ತು. ಹೀಗೆಲ್ಲ ನಾನು ವೈನ್‌ ಡೈನ್‌ ಅಂತ ಅಂದರೆ ನೀವುಗಳು ಬರೋಲ್ಲ ಅಂತ. ಮತ್ತ್ಯಾಕೆ ಹಾಗೆ ಹೇಳಿದೆ ಅಂತ ಕೇಳ್ತಿದ್ದೀರಾ? ನಿಮ್ಮ್ಹತ್ರ ಹೇಳ್ದೆ ಇನ್ನ್ಯಾರ್ಹತ್ರ ಹೇಳಲೀ?! ಹೋದ್ವಾರ ಡಾ.ವೇಣುಗೋಪಾಲ್‌ ಮನೆಯಲ್ಲಿ ಪಾರ್ಟಿ ಅಂತ ಕರೆದಿದ್ದ್ರಲ್ಲ ಹೋಗಿದ್ದೆ.

ಅಬ್ಬಬ್ಬ, ಅಲ್ಲಿನ ನೋಟ ನಿಜಕ್ಕೂ ಯಾವುದೋ ಸಿನೆಮಾ ಪತ್ರಿಕೆಯ ಪ್ರತೀ ಪುಟದಂತಿತ್ತು. ಸರಿಯಾಗಿ ಹೇಳಿದಿರಿ ನೀವು, ನಾನು ಅದಕ್ಕೆಲ್ಲಾ suit ಆಗೋಲ್ಲ. ನೀವೇನೋ ನೆವ ಹೆಳಿ ತಪ್ಪಿಸಿಕೊಂಡ್ಬಿಟ್ರಿ ಜಾಣರು. ಆದರೆ ಈ ಹೆಡ್ಡ ತಲೆಗೆ ಅದೆಲ್ಲಾ ಹೊಳೆಯೋದೇ ಇಲ್ಲ್ವೇ!

ಒಂದು ಕ್ಷಣ ಲಿಂಗ ಬೇಧವಿಲ್ಲದ society ಅಂದ್ರೆ ಇದೇನಾ? ಅನ್ನುವ ಅನುಮಾನ ಮೂಡಿತು. ಆಕೆ ಕೈಯಲ್ಲಿ ಕಂದು, ಇವಳ ಕೈಯಲ್ಲಿ ನೀಲಿ, ಅವಳ ಕೈಯಲ್ಲಿ ಕೆಂಪು ಹೀಗೆ, ತರಹಾವರಿ ಬಣ್ಣದ ಪೇಯಗಳು ಪ್ರತಿಯೊಬ್ಬರ ಕೈಯಲ್ಲೂ. ನನ್ನ ಕೈಯಲ್ಲಿ ಮಾತ್ರ ಅಚ್ಚ ಕಿತ್ತಳೆ ರಸ. ಪಕ್ಕದಲ್ಲಿ ಬಂದು ಕುಳಿತಳು ಶರ್ವಾಣಿ, ಅವಳ ಕೈಯಲ್ಲಿ ನನಗೆ ಹೆಸರೂ ಹೇಳಲು ಬಾರದ ಒಂದು drink.

‘ಮುಂಚೆ ನಾನೂ ನಿನ್ನ ಹಾಗೇ ಇದ್ದೆ ಕಣೆ. ಆದರೆ ಒಂದಿನ ಇವರೇ ಪರ್ವಾಗಿಲ್ಲ ಕುಡಿ ಅಂತ ಅಭ್ಯಾಸ ಮಾಡಿಸಿದ್ರು. ಸ್ವಲ್ಪ ತಗೊ ಏನೂ ಆಗಲ್ಲ’ ಅಂದಳು. ನನ್ನ ಉತ್ತರ ‘ನೋ ಥ್ಯಾಂಕ್ಸ್‌’. ಮಹಾ ಪುಳಿಚಾರು ಅಂತ ಎಲ್ಲರಿಗೂ ಕೆಳಿಸುವಂತೆ ಉದ್ಗಾರಿಸಿ ಅವಳು ಅಲ್ಲಿಂದೆದ್ದಳು. ನನಗೆ ಅದು ಅವಮಾನ ಅಂತ ಖಂಡಿತಾ ಅನ್ನಿಸಲಿಲ್ಲ.

ಈಗ ನಮ್ಮ ಸಾವಿತ್ರಿ ಮ್ಯಾಡಂನ ಗ್ರ್ಯಾಂಡ್‌ ಎಂಟ್ರೀ. ಅವಳ ಹೆಸರು ಕೇಳಿ ನನ್ನ ಗುಂಪಿನವಳು ಅಂದುಕೊಂಡ್ಬಿಟ್ಟ್ರಾ? ಅವಳ ಮೊದಲ ಮಾತೇ ಏನು ಗೊತ್ತಾ? ‘ಗಂಡಸರೇನ್ಮಹಾ great ನಾವೇನು ಕಡಿಮೆ?’ ಅನ್ನುತ್ತಾ ಅದೇನನ್ನೋ ಗಂಟಲಿಗೆ ಸುರಿದ್ಕೊಂಡಳು. ಓಹ್‌, ಅವರುಗಳ ಹಾವ ಭಾವ, ಮಾತು, ಆ ಕಮಟಲು ವಾಸನೆ. . . . . .ನನ್ನ ಮೈ ಮೇಲೆ ಸಾವಿರಾರು ಸಹಸ್ರಪದಿ ಹರಿಯುತ್ತಿರುವಂತೆ ಅನ್ನಿಸುತ್ತಿತ್ತು. ಹೊರಟು ಬಂದುಬಿಡಲೇ? ಆಗಲಿಲ್ಲ. ಶಿಷ್ಠಾಚಾರ! ಜಾಗ ಬದಲಾಯಿಸಿದೆ. ಆದರೇನ್ಬಂತು ಭಾಗ್ಯ? ವಸಂತ ಅಲ್ಲೇ ಇದ್ದಳು. ನನ್ನ ಕಡೆ ತಿರುಗಿ ‘ನನಗೊಂದಾಸೆ ಕಣೆ’ ಅಂದಳು. ಅಲ್ಲಿದ್ದ ಹೆಂಗಸರೆಲ್ಲರ ಕತ್ತು ಹಿಸುಕಿಬಿಡಬೇಕು ಅನ್ನುವ ನನ್ನ ಆಸೆಯನ್ನು ತೋರಗೊಡದೆ ‘ಏನು?’ ಅಂದೆ.

‘ಒಂದಿನ, ಮೈಮೇಲೆ ಪ್ರಜ್ಞೆಯೇ ಇಲ್ಲದಷ್ಟು ಕುಡಿದು ಮನಸ್ಸಿನಲ್ಲಿ ಇರುವುದನ್ನೆಲ್ಲಾ ಒದರಿಬಿಡಬೇಕು’ ಅಂದಳು. ಹಾಗಾದರೆ ಹೆಂಡ ನಮ್ಮ ನೈಜ ಮನಸ್ಸಿನ ಪ್ರತಿಧ್ವನಿಯೇ? ಛೇ, ಛೇ! ಎಲ್ಲಿ ಲಯ ತಪ್ಪುತ್ತಿದ್ದೇವೆ ನಾವು? ಯಾವ ಗಂಡನ ಹೆಂಡತಿ ಯಾರು ಅಂತ ತಿಳಿಯದಾಗದ ಮೊದಲೇ ಆ ಜಾಗ ಖಾಲಿ ಮಾಡಬೇಕೆನಿಸುತ್ತಿತ್ತು ನನಗೆ!

ಆಗ ನಾನು ಎಂಟನೇ ಕ್ಲಾಸ್ನಲ್ಲಿದ್ದೆ. ಕುಳ್ಳಿ ಪೂರ್ಣಿಮ ಗೊತ್ತಲ್ಲ ನಿಮಗೆ. ಸಿಸ್ಟರ್‌ ಪೆಟ್ರೀನಾರ ಕಣ್ಮಣಿ ತಾನೆ? ಕ್ರಿಸ್ಮಸ್‌ಗೆ ಬರಬೇಕು ಅಂತ ಅವರ order ಆಯಿತು ಜೊತೆಗೆ ಒಂದು friend ಬರಬಹುದು ಅಂತಾನೂ ಆಯ್ತಲ್ಲ. ಸೋ ನನ್ನ ಕರೆದುಕೊಂಡು ಹೋದಳು. chapelನಲ್ಲಿ ಬೈಬಲ್‌ ಪಠಣ ಆಯ್ತು. ಟ್ರೇನಲ್ಲಿ ಪುಟಾಣಿ ಗಾಜಿನ ಲೋಟಗಳಲ್ಲಿ ಬ್ರೌನ್‌ ಬಣ್ಣದ ಪೇಯ, ಪಕ್ಕದಲ್ಲಿ ಪ್ಲಮ್‌ ಕೇಕ್‌. ಒಂದೇ ನಿಮಿಷದಲ್ಲಿ ತಿಂದು ಕುಡಿದು ಅಲ್ಲಿಂದ ಹೊರಟೆವು.

ಅವಳ ಅಮ್ಮನಿಗೆ ವಿಷಯ ಹೇಳಿದ್ದೇ ತಡ, ‘ಹೋಗಿ ಸ್ನಾನ ಮಾಡಿಕೊಂಡು ದೇವರಿಗೆ ನಮಸ್ಕಾರ ಮಾಡು. ನಾಳೆ ಬೆಳಗ್ಗೆ ಸ್ನಾನ ಮಾಡೋವರೆಗೂ ಅಡುಗೆ ಮನೆ ಕಡೆ ಬರಬೇಡ’ ಅಂದರು ಅವಳಿಗೆ. ಮಾಮೂಲು, ನನಗೆ ಏನೂ ಅರ್ಥವಾಗದೆ ಮಿಕ ಮಿಕ ನೋಡಿದೆ ಅಷ್ಟೆ. ಶಾಲಾ ಕ್ರಿಸ್ಮಸ್‌ನಲ್ಲಿ ನಾವು ಕುಡಿದುಬಂದದ್ದಾದರೂ ಏನು? ಅವಳಮ್ಮ ಹೀಗೆ ಹೇಳಿದ್ದಾದರೂ ಯಾಕೇಂತ ಈವರೆಗೂ ನನಗೆ ಅರ್ಥವೇ ಆಗಿರಲಿಲ್ಲವೇ?! ಈ ಕಾಲದ ಅಮ್ಮ ಆ ಕಾಲದಂತೆ ಇರುವುದು ಬೇಡ, ಇರಲೂಬಾರದು. ಆದರೆ ಆ ಅಮ್ಮ ಎಲ್ಲಿ ಹೋದಳು ಈಗ?. . . . . .

ನಾವು ಗಂಡಸಿರಿಗೇನು ಕಡಿಮೆ ಎನ್ನುತ್ತಾ ಆತ್ಮ ವಿಶ್ವಾಸದ ಜಾಗದಲ್ಲಿ ಅಂತರಂಗದ ದಾರಿದ್ರ್ಯವನ್ನು ತಂದುಕೂರಿಸಿದ್ದೇವಾ? ಏನೋ ಗೊತ್ತಿಲ್ಲ, ಇದೊಂದು ಗುರಿಯಿಲ್ಲದ ಓಟ ಅನ್ನಿಸಿತು. ಬದುಕನ್ನು ಓಡಿಸುತ್ತಿದ್ದೇವೆ ಆದರೆ ನಿಶ್ಚಲ ಚಕ್ರಗಳ ಮೇಲೆ ಹೌದಾ? ನನ್ನನ್ನು ನಾನೆ ಕೇಳಿಕೊಂಡೆ.

ಹೂಂ, ನೀವು ಏನೇ ಹೇಳಿ ಎರಡು ಗಾಜಿನ ಲೋಟಗಳ ತಾಕಲಾಟದಿಂದ ಎದ್ದ ಕರ್ಕಶ cheers ಎನ್ನುವ ಶಬ್ದದಲ್ಲಿ ಹೆಂಗಸರ ಸಮಾನತೆ, ಅಸ್ತಿತ್ವ ಇದೆ ಅನ್ನುವುದಾದರೆ ಆ equalityಗೆ ನನ್ನ ವಿರೋಧವಿದೆ. ಅಂತಹ identityಗೆ ನನ್ನ ಧಿಕ್ಕಾರವಿದೆ. ಕ್ಷಮಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X