ಅಮ್ಮನು ಕಲಿಸಿದ ಗುಟ್ಟಿನ ಪಾಠ ಅಪ್ಪ!
‘ನನ್ನ ಅಪ್ಪ.... ಓಹ್, ಹೇಗೆ ಹೇಳಲಿ?’ ಎನ್ನುವ ನಿಮ್ಮ ನೆಚ್ಚಿನ ಗೆಳತಿ ಗಗನಸಖಿ, ತನ್ನ personal diaryಯ ಒಂದು ಪುಟವನ್ನೇ ಕಳುಹಿಸಿದ್ದಾರೆ. ಅಪ್ಪಂದಿರಿಗೆ ಜಯವಾಗಲಿ... -ಸಂಪಾದಕ.
- ಗಗನ ಸಖಿ
[email protected]
ಜಗತ್ತಿನ ಎಲ್ಲಾ ಅಮ್ಮಂದಿರಿಗೂ ಎಷ್ಟೊಂದು ಕಕ್ಕುಲತೆಯಿಂದ ಪತ್ರ ಬರೆದಿದ್ದೆ ನಾನು! ನನ್ನ ಎಲ್ಲ ಹೆಂಗೆಳೆಯರು ಅವರ ಅಮ್ಮಂದಿರು ಬಲು ಸಂತೋಷಪಟ್ಟಿರುತ್ತಾರೆ ಅಂದುಕೊಂಡಿದ್ದೆ. ಆದರೆ ಮೊನ್ನೆ ಏನಾಯಿತು ಗೊತ್ತಾ? ನೀವು ಹೇಳಿದ ಸಿನೆಮಾಕ್ಕೆ ಟಿಕೆಟ್ಸ್ ಬುಕ್ ಮಾಡಿಸೋಣಾ ಅಂತ ಸರದಿ ಸಾಲಿನಲ್ಲಿ ನಿಂತಿದ್ದೆ, ಬೆನ್ನಿಗೆ ದಬದಬ ಗುದ್ದುಗಳು ಬಿದ್ದಾಗ ಒಂದು ನಿಮಿಷ ಬವಳಿ ಬಂದಂತಾಯ್ತು!
ತಿರುಗಿ ನೋಡಿದರೆ ಕವಿತಾ.... ಸ್ವಲ್ಪ ಬದಲಾಗಿದ್ದಾಳಾ? ಇಲ್ಲ ಹಾಗೆಯೇ ಇದ್ದಾಳೆ. ಕ್ರಿಯೇಟಿವಿಟಿಯ ಸಾರಾಂಶವಾಗೇ ಕಾಣುತ್ತಿದ್ದಾಳೆ.... ನಗುತ್ತಿದ್ದಾಳೆ, ನನ್ನನ್ನೂ ನಗಿಸುತ್ತಿದ್ದಾಳೆ.... ಒಂದು ನಿಮಿಷ, ಬಿದ್ದ ಬೆನ್ನು ಅದರ ಮೇಲೆದ್ದೆದ್ದು ಕುಣಿದ ಗುದ್ದುಗಳನ್ನು ಮರೆತೆ... ಕವಿತ ಹಾಗೇ, ಅರೆಕ್ಷಣ ಎಲ್ಲವನ್ನೂ ಮರೆಸುತ್ತಾಳೆ! ಕಳೆದ ವಾರ ನಿಮಗೂ ಸಿಕ್ಕಿದ್ದಳಂತಲ್ಲ, ನೀವಂತೂ ನನಗೆ ಹೇಳಲೇ ಇಲ್ಲ.
‘‘ನೀನು ಅಮ್ಮನಿಗೆ ಬರೆದ ಮೊದಲ ಪತ್ರ ಓದಿದೆ. ನಿಜ ಕಣೇ ನಾವು ಮೋಸ್ಟ್ ಆಫ್ ದ ಟೈಮ್ ಪಾತ್ರಧಾರಿಗಳನ್ನು ಮರೆತು ಪಾತ್ರಗಳಿಗೇ ಹೊಂದುಕೊಂಡುಬಿಟ್ಟಿರುತ್ತೇವೆ. ಅಮ್ಮನ ಬಗ್ಗೆ ಓದಿದ ಮೇಲೆ ಅವಳಿಗಾಗಿ ನಾನೂ ಕಾತರಿಸಿದೆ. ಆದರೆ ತಕ್ಷಣ, ಅಪ್ಪನ ಬಗ್ಗೆಯೂ ನನ್ನ ಗಮನ ಹರಿಸಿಯೇ ಇಲ್ಲವಲ್ಲ ಅನ್ನಿಸಿತು...’’ ಅಂದಳು ಕವಿತಾ. ನಾನು ನಿಮ್ಮೆಲ್ಲರ ಜೊತೆ ಸಿನೆಮಾಕ್ಕೆ ಹೊರಡುವ ಮೂಡ್‌ನಲ್ಲಿದ್ದೆ. ಅಮ್ಮನನ್ನೂ ಕರೆತರೋಣ ಅಂತಿದ್ದೆ. ಹೌದೂ ನನಗೂ ಅಪ್ಪನ ಕಡೆ ನಿಗವೇ ಇರಲ್ಲಿಲ್ಲ. ಇದ್ದಕ್ಕಿದ್ದಂತೆ ನನ್ನ ನಲಿವು ಬಸವಳಿದು ಬೆವರಾಯ್ತು. ಕ್ಯೂನಿಂದ ಹೊರ ಬಿದ್ದು ಮನೆ ದಾರಿ ಹಿಡಿದೆ.
ತಣ್ಣೀರಿನ ಲೋಟ ಕೈಗೆ ಬರುತ್ತಿದ್ದಂತೆ ಅಪ್ಪನ ನೆನಪು ತಣ್ಣನೆ ಕಾಡಿತು. ಅಪ್ಪನ ಪರಿಕಲ್ಪನೆಯೆ ಶಿಸ್ತಿನ ಸಿಪಾಯಿಯಲ್ಲದಿದ್ದರೂ, ಶಿಸ್ತು ಕಲಿಸುವ ಗಂಡು! ನನ್ನ ಒಂದಿಷ್ಟು ಗೆಳತಿಯರ ಮನೆಯಲ್ಲಿ ಅಪ್ಪ ಬರೀ material provider ಆಗಿದ್ದನ್ನು ನೋಡಿದ್ದೇನೆ, ಇನ್ನೊಂದಷ್ಟು ಮನೆಗಳಲ್ಲಿ nightmare ಆಗಿದ್ದನ್ನೂ ನೋಡಿದ್ದೇನೆ. ಆದರೆ ನನ್ನ ಅಪ್ಪ.... ಓಹ್, ಹೇಗೆ ಹೇಳಲಿ? ಅಮ್ಮಂದಿರು universal ಆಗುವಷ್ಟು ಸುಲಭವಾಗಿ ಅಪ್ಪಂದಿರು ಆಗುವುದಿಲ್ಲವಲ್ಲ! ಸರೀ ತಾನೆ?!
ಅಪ್ಪ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಕೂಗಿ ಹೇಳಬೇಕು ಅನ್ನಿಸಿತು.... ನಿಮಗೇ ಗೊತ್ತು ನಾನು ಎಂದು ಹಾಗೆ ಮಾಡಲಾರೆ, ಹಾಗಂತ ಹೇಳದೆ ಸುಮ್ಮನೆ ಕೂರಲಾರೆ! ಯಾಕೋ ಈ ಬಾರಿ ನಿಮ್ಮೊಡನೆ ಹಂಚಿಕೊಳ್ಳಲು ಮಾತುಗಳೇ ಬರುತ್ತಿಲ್ಲ ಅನ್ನಿಸಿತು. ಕವಿತಾ ಪದೇ ಪದೇ ನೆನೆಪಾಗುತ್ತಿದ್ದಳು.... ಒಂದು ನಾಲ್ಕೇ ಸಾಲು ನನ್ನ ಅಪ್ಪನಿಗಾಗಿ....
‘‘ಪುಟಾಣಿ ಕೈಗಳ್ಹಿಡಿದು ಜಾರುಬಂಡಿ ಆಡಿಸಿದ ಅಪ್ಪ
ಮಾರ್ಕೆಟ್ನಲ್ಲಿ ಉಂಗುರ ಬಳೆ ತೊಡಿಸಿದ ಅಪ್ಪ
ಶಾಲೆಗೆ ಬಳಪ ಅಂಗಿ ಪುಸ್ತಕ ಕೊಡಿಸಿದ ಅಪ್ಪ
ನನ್ನೆಲ್ಲಾ ಬಹುಮಾನಕ್ಕೆ ಚಪ್ಪಾಳೆ ತಟ್ಟಿದ ಅಪ್ಪ
ನಾನು ನಿನ್ನನ್ನು ಇನ್ನೂ ಪ್ರೀತಿಸುತ್ತೇನೆ.....
ಕೆಮ್ಮು ನೆಗಡಿಗೂ ಔಷಧದಂಗ್ಡಿಗೆ ಓಡಿದ ಅಪ್ಪ
ಕಾಲೇಜು ಟ್ರಿಪ್ಪಿಗೆ ಪರ್ಸ್ ಪೂರಾ ನೀಡಿದ ಅಪ್ಪ
ಕೈನೆಟಿಕ್ ಹೊಂಡಾಕ್ಕೆ ಪೆಟ್ರೋಲ್ ತುಂಬಿದ ಅಪ್ಪ
ರಾತ್ರಿ ತಡವಾದರೂ ಬೈಯ್ಯಲೇ ಇಲ್ಲ ಅಪ್ಪ
ನಾನು ನಿನ್ನನ್ನು ಇನ್ನೂ ಪ್ರೀತಿಸುತ್ತೇನೆ.....
ವಧು ಪರೀಕ್ಷೆಯಲ್ಲೇ ಕಣ್ಣೀರಿಟ್ಟ ಅಪ್ಪ
ಬಿಸಿಲ್ಲಲ್ಲಲೆದು ಛತ್ರದಿ ನಗುತ್ತಿದ್ದ ಅಪ್ಪ
ಶ್ರೀರಾಮಚಂದ್ರನಿಗೇ ಮಾವನಾದ ಅಪ್ಪ
ಹೆರಿಗೆ ನೋವನ್ನೂ ಹೊರೆ ಮಾಡದ ಅಪ್ಪ
ನಾನು ನಿನ್ನನ್ನು ಇನ್ನೂ ಪ್ರೀತಿಸುತ್ತೇನೆ.....
ಭೂಮಿ ತಿರುಗಿದೆ ಶತಾಯುಷಿ ಅಪ್ಪ
ನಿನಗೆ ತಿಳಿಯದ್ದು ಏನಿದೆ ಅಪ್ಪ
ಮುಖದಲ್ಲಿನ್ನೂ ಗಂಡು ನಗುವಿನ ಅಪ್ಪ
ಅಮ್ಮನು ಕಲಿಸಿದ ಗುಟ್ಟಿನ ಪಾಠ ಅಪ್ಪ
ಅದಕ್ಕಾಗೇ...
ನಾನು ನಿನ್ನನ್ನು ಇನ್ನೂ ಪ್ರೀತಿಸುತ್ತೇನೆ.....’’
ಯಾವಾಗಲೂ ನಿಮ್ಮ ಮೇಲಿನ ಅಪಾರ ವಿಶ್ವಾಸದಿಂದ, ನಿಮ್ಮ ಮನೋಭಾವಕ್ಕೆ ಸ್ಪಂದಿಸುವ ನನ್ನ ಭಾವ ತೀವ್ರತೆಯಿಂದ ‘‘ಹೌದು! ನಾವು ಹೆಂಗಸರೇ ಹೀಗೆ’’ ಅಂತ ಮೇಜು ಗುದ್ದಿ ಹೇಳಿತ್ತಿದ್ದೆ. ಆದರೆ, ಈ ದಿನ ಹಾಗೆ ಹೇಳಲು ನನಗೆ ಸಾಧ್ಯವಾಗುತ್ತಿಲ್ಲ. ಯಾಕೆ ಗೊತ್ತಾ? ಈಗ ನೀವು ಓದಿರುವುದು ನನ್ನ personal diaryಯ ಒಂದು ಪುಟ!












Click it and Unblock the Notifications