• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೂನ್ಯದಿಂದ ಸೃಷ್ಟಿ - ವಿವಾಹ ವೃಷ್ಟಿ!

By Super
|

ಥ್ಯಾಂಕ್ಯೂ ಪ್ರಕಾಶ್‌, ಅಕ್ಷಯಪಾತ್ರೆ ಕಥೆಯನ್ನು ವಿಷದೀಕರಿಸಿದ್ದಕ್ಕೆ. ಆದರೆ, ಏನಿಲ್ಲ... ಒಂದೇಒಂದು ಡೌಟ್‌ ಎಂದರೆ ದ್ರೌಪದಿ ತೊಳೆದಿಟ್ಟಿದ್ದ ಆ ಪಾತ್ರೆಯಲ್ಲಿ ಒಂದು ಅಗುಳು ಹೇಗೆ ಉಳಿದುಕೊಂಡಿತ್ತು? ಪಾತ್ರೆ ತೊಳೆಯುವದರಲ್ಲಿ ಅವಳ ದಕ್ಷತೆ ಅಷ್ಟಕ್ಕಷ್ಟೆ? ಅಥವಾ ರಾತ್ರಿಯೂಟವಾದ ಮೇಲೆ ಪಾತ್ರೆ ತೊಳೆದಿಟ್ಟು ಬೇಗ ಮಲಗುವಂತೆ ಗಂಡನಿಂದ ಅರ್ಜೆನ್ಸಿ ಅವಳಿಗೆ ಐದುಪಟ್ಟು ಇರುತ್ತಿತ್ತೇ?

ಮೈಸೂರಿನಿಂದ ಪ್ರೊ।ವಿಕ್ರಮ ಕವಲಿ (ಸುರತ್ಕಲ್‌ ಕೆ.ಆರ್‌.ಇ.ಸಿಯ ನಿವೃತ್ತ ಪ್ರಾಧ್ಯಾಪಕ) ಬರೆಯುತ್ತಾರೆ: ‘‘ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ನನಗೆ ಈ ಸಲದ ನಿಮ್ಮ ಲೇಖನವನ್ನು ಓದುವ ಅವಕಾಶ ಒಂದೆರಡು ದಿನ ತಡವಾಗಿ ಸಿಕ್ಕಿತು. ಅದರಿಂದಾಗಿ ತೊಂದರೆ 'ಏನಿಲ್ಲ!' ಕಾಲೇಜಿನಲ್ಲಿ ಮೊದಲನೆ ವರುಷದ ಪಾಠಗಳಲ್ಲಿ on doing nothing ಎಂಬ ಒಂದು ಪ್ರಬಂಧ ಇತ್ತು. ಅದರ ಲೇಖಕ ಯಾವ ವಿಷಯವೂ ಇಲ್ಲದೆ ಹೇಗೆ ಒಂದು ಪ್ರಬಂಧ ಬರೆಯಬಹುದೆಂಬುದನ್ನು ತೋರಿಸಿಕೊಟ್ಟಿದ್ದ. ಆದರೆ ನಾವಾಗಲೇ ಇಂಜಿನಿಯರಿಂಗ್‌ ಓದುವದು ಎಂದು ತೀರ್ಮಾನಿಸಿಕೊಂಡಿದ್ದರಿಂದ ಇಂಗ್ಲಿಷ್‌ ಪಾಠದ ಕಡೆಗೆ ವಿಶೇಷ ಗಮನ ಕೊಡದೆ, ತರಗತಿಯಲ್ಲಿ ನಮ್ಮ ಜೊತೆಯಲ್ಲಿದ್ದ ಆರ್ಟ್ಸ್‌ ವಿದ್ಯಾರ್ಥಿಗಳು ಮಾಡುತ್ತಿದ್ದ ಗಲಾಟೆಯ ರಸಾನುಭವದ ಕಡೆಗೇ ಹೆಚ್ಚು ಲಕ್ಷ್ಯ ಕೊಟ್ಟಿದ್ದೆವೋ ಹೇಗೋ! ಈಗ ಆ ಲೇಖಕನ ಹೆಸರೂ ನೆನೆಪಿಲ್ಲ, ವಿಷಯವೂ ನೆನಪಿನಲ್ಲಿಲ್ಲ. ಆದರೆ ಜೀವನದಲ್ಲಿ ಇತರ ಕಡೆಗೆ ಬಂದ ‘ಏನಿಲ್ಲ'ಗಳ ಅವಾಂತರಗಳ ಬಗೆಗೆ ಒಂದೆರಡು ಸಾಲು ಬರೆಯಬೇಕೆನಿಸಿತು.

ಹೈಸ್ಕೂಲಿನಲ್ಲಿದ್ದಾಗ ನಮಗೆ ‘ಬಡಿಗೇರ' ಎಂಬ ಮಾಸ್ತರ ಇದ್ದರು. ಅವರ ಕುಲಕಸಬು ಬಡಗಿತನವೇ. ಹೆಚ್ಚಿನ ವ್ಯಾಸಂಗ ಮಾಡಿ ಮಾಸ್ತರ ಆಗಿದ್ದರು. ಅವರ ಮಗ ನನ್ನ ಕ್ಲಾಸಿನಲ್ಲಿ ಸಹಪಾಠಿ, ಗೆಳೆಯ. ಆಗಾಗ ಭಾನುವಾರದ ಬಿಡುವಿನ ವೇಳೆಯಲ್ಲಿ ನಮ್ಮ ಮನೆಗೆ ಬರುತ್ತಿದ್ದ. ಹೀಗೆಯೇ ಒಂದು ದಿನ ಬಂದಾಗ ಕೀಟಲೆಯ ಸ್ವಭಾವದ ನಮ್ಮ ಅಣ್ಣ, ‘ಏನು ರುದ್ರಣ್ಣಾ, ನಿಮ್ಮ ಅಪ್ಪ ಮನ್ಯಾಗ ಇದ್ದಾನ?'

‘ಹೂಂ, ಇದ್ದಾನೆ'

‘ಏನ ಮಾಡ್ತಿದ್ದ?'

‘ಏನೂ ಇಲ್ಲ'

‘ಅದಕ್ಕ ನೀ ತಪ್ಪಿಸ್ಗೊಂಡ್‌ ಓಡಿ ಬಂದ್ಬಿಟ್ಯಾ?' ಪಾಪ, ಅವನು ಇಂತಹ ಪ್ರಸಂಗದಲ್ಲಿ ಎಲ್ಲರೂ ಕೊಡುವತರಹ ‘ಏನಿಲ್ಲ' ಎಂಬ ಮುಗ್ಧ ಉತ್ತರ ಕೊಟ್ಟಿದ್ದ. ನಮ್ಮ ಅಣ್ಣನ ವ್ಯಂಗ್ಯ ಅವನಿಗೆ ತಿಳಿಯಲಿಲ್ಲ. ಉದ್ಯೋಗವಿಲ್ಲದ ಬಡಗಿ ಏನು ಮಾಡುತ್ತಾನೆ ಎಂಬ ಗಾದೆಯ ಮಾತು ಅವನಿಗೆ ಗೊತ್ತಿತ್ತೇನೋ ನಿಜ. ಆದರೆ ಆ ಸಮಯದಲ್ಲಿ ತಮ್ಮಪ್ಪ ಒಬ್ಬ ಬಡಗಿ ಎನ್ನುವ ವಿಷಯ ಅವನ ಗಮನದಲ್ಲಿ ಬರಲಿಲ್ಲ! ತುಳು ಭಾಷೆಯಲ್ಲಿಯ ‘ಬೇಲೆ ದಾಂತಿನ ಆಚಾರಿ ಬಾಲೆದ ...' ಕತೆಯೂ ಇದೇ! ಅದೇ ಕೊಂಕಣಿಯವರಲ್ಲಿ ಕತೆ ಸ್ವಲ್ಪ ಬೇರೆ. ಅವನು ತನ್ನ ಹಿಂಭಾಗಕ್ಕೇ ಅಸ್ತ್ರ ಪ್ರಯೋಗ ಮಾಡಿಕೊಂಡಿರುತ್ತಾನಂತೆ!

ಏನಿಲ್ಲವೆಂದ ಬಡಗಿಯಮಗನ ಕಥೆ ಅದಾದರೆ ಶೇಕ್ಸ್‌ಪಿಯರ್‌ನ ಕಿಂಗ್‌ ಲಿಯರ್‌ ನಾಟಕದ (ಅಂಕ 1, ದೃಶ್ಯ 4) ಒಂದು ‘ನಥಿಂಗ್‌' ಪ್ರಸಂಗವನ್ನು ಉಲ್ಲೇಖಿಸಿದವರು ಮೈಸೂರಿನವರೇ ಆದ ಎನ್‌.ಎಸ್‌.ಶಾರದಾಪ್ರಸಾದ್‌. Then tis like the breath of an unfeed lawyer - you gave me nothing fort. Can you make no use of nothing nuncle? ಎಂದು ಫ‚ೂಲ್‌ನ ಬಾಯಿಂದ ಕೇಳಿದಾಗ ಲಿಯರ್‌ ಕೊಡುವ ಉತ್ತರ Why, no, boy; nothing can made out of nothing! ಪ್ರಸಂಗ ಹಾಗೆ ಮುಂದುವರೆಯುತ್ತದೆ. ಫ‚ೂಲ್‌ನ ವಾದವಿವಾದ ಬುದ್ಧಿಮಾತು ಇವೆಲ್ಲ ಮುದುಕ ಲಿಯರ್‌ನಿಗೆ ನಥಿಂಗ್‌! ಅದು ವೃದ್ಧಾಪ್ಯದ ಗುಣವೋ ಪುತ್ರವ್ಯಾಮೋಹವೋ ಸ್ತುತಿಗೆ ಸಿಲುಕಿದ ಮನುಜನ ಸ್ಥಿತಿಯೋ ಗೊತ್ತಿಲ್ಲ. ಶೇಕ್ಸ್‌ಪಿಯರ್‌ ಸತ್ತು ಸುಮಾರು ನಾಲ್ಕು ಶತಮಾನ ಆಗುತ್ತಬಂದರೂ ಮನುಷ್ಯನಿಗೆ ಬುದ್ಧಿ ಬಂದಿಲ್ಲ, ಬರುವುದೂ ಇಲ್ಲ ಎನ್ನುತ್ತಿರುವಷ್ಟರಲ್ಲಿ 2006 ಮುಗಿಯುತ್ತಿದೆ, 2007ಕ್ಕೆ ಪ್ರವೇಶ, ವ್ಯಯನಾಮ ಸಂವತ್ಸರದ ಕೊನೇ ಪಾದಕ್ಕೆ ಪ್ರವೇಶ. ಆಗಲೂ ನಥಿಂಗ್‌!

ನಥಿಂಗ್‌ ಎನ್ನುತ್ತಲೇ ಕೆಲ್ಸ ಸಾ-ಧಿಸಿಕೊಳ್ಳುವ 'ಮತ್‌ಲಬೀ' ಮನುಷ್ಯರ ಪ್ರಸಂಗಗಳನ್ನು ನೆನಪಿಸಿಕೊಂಡವರು ನ್ಯೂಜೆರ್ಸಿಯ ಶ್ರುತಿ ಸತೀಶ್‌. ‘ಕುಛ್‌ ಭೀ ನಹೀಜೀ...'' ಎನ್ನುತ್ತಲೇ ಮಾತಿಗಿಳಿವ ಪಡೊಸನ್‌ ಬಿಹಾರಿಯಾಬ್ಬರು ತನ್ನ ಮಗುವೂ ಇವರ ಮಗುವಿನ ಜತೆಯೇ ಸ್ಕೂಲ್‌ಗೆ ಹೋಗುವಂತೆ, ಇವರ ಯಜಮಾನ್ರೇ ಕಾರಲ್ಲಿ ಆ ಮಗುವನ್ನೂ ಡ್ರಾಪ್‌ ಮಾಡುವಂತೆ ಏರ್ಪಾಡುಮಾಡುವುದರಲ್ಲಿ ಯಶಸ್ವಿಯಾದರಂತೆ. ಹಾಗೆಯೇ ಭಾರತಭೇಟಿಯ ವೇಳೆ ಅಲ್ಲೊಬ್ಬರು ಇವರ ಅಮೆರಿಕಜೀವನದ ಮೇಲೆ ಎಲ್ಲಿಲ್ಲದ ಕುತೂಹಲ ಆಸಕ್ತಿ ವ್ಯಕ್ತಪಡಿಸಿದವರು ಕೊನೆಗೆ ‘‘ಏನಿಲ್ಲ... ನಮ್ಮ ಮಗ ಇಂಜಿನಿಯರಿಂಗ್‌ ಫೈನಲ್‌ ಸೆಮಿಸ್ಟರ್‌. ನಿಮ್ಮ ಯಜಮಾನ್ರಿರುವ ಕಂಪೆನಿಲೇ ಅಮೆರಿಕೆಗೆ ಹೋಗಲು ಎಚ್‌ವನ್‌ ವೀಸಾ ಕೊಡಿಸೋ ಹಾಗೆ ಮಾಡ್ತೀರಾ?'' ಎಂದು ಬೆಣ್ಣೆಹಚ್ಚಿದ್ದರಂತೆ.

ತುಳಸಿಯಮ್ಮ ತ್ರಿವೇಣಿ ಶ್ರೀನಿವಾಸ್‌ ರಾವ್‌ ‘ಏನೂ ಇಲ್ಲ' ಬಗ್ಗೆ ಪ್ರತಿಕ್ರಿಯೆ ಬರೆದದ್ದರಲ್ಲಿ ಏನು ಇದೆ ಅಂತ ಈಗ ನೋಡೋಣವೇ? ಅದಕ್ಕಿಂತ ಮೊದಲು ಒಂದು ಇಂಟೆರೆಸ್ಟಿಂಗ್‌ ಒಬ್ಸರ್ವೇಶನ್‌. ಎಚ್‌ಡಿಟಿವಿ ಕುರಿತ ವಿಚಿತ್ರಾನ್ನ ಪ್ರಕಟವಾದ ಕೆಲದಿನಗಳಲ್ಲೇ ತ್ರಿವೇಣಿಯವರ ಚಿಕಾಗೊ ಮನೆಗೆ ಎಚ್‌ಡಿಟಿವಿ ಬಂತಂತೆ. ಅಷ್ಟುದೊಡ್ಡ ಟಿವಿಯನ್ನು ಅಂಗಡಿಯಿಂದ ಮನೆಗೆ ತರುವಷ್ಟರಲ್ಲಿ ಅವರ ಯಜಮಾನ್ರಿಗೆ ಸ್ವಲ್ಪವಾದ್ರೂ ಬೆವರೂ ಬಂದಿರಬಹುದೆನ್ನಿ. ಮತ್ತೆ ರುಬಿಕ್‌ಕ್ಯೂಬ್‌ ಸಂಚಿಕೆಯ ದಿನವೇ ಅವರ ಯಜಮಾನ್ರಿಗೆ ಆಫಿ‚ೕಸಲ್ಲಿ ಗಿಫ‚್‌್ಟಆಗಿ ರುಬಿಕ್‌ ಕ್ಯೂಬ್‌ ಸಿಕ್ತಂತೆ! ‘ಜೋಶಿಯವರೇ, ಮುಂದಿನ ವಾರ ಏನು ಬರೀತೀರಿ, ಅದು ನಮ್ಮನೆಗೆ ಬರುತ್ತದೆ'' ಎಂದಿದ್ದರು ತ್ರಿವೇಣಿ. ನಥಿಂಗ್‌ ಅಥವಾ ‘ಏನೂಇಲ್ಲ'ವನ್ನು ವಿಷಯವಾಗಿಸಿದ್ದು ಎಷ್ಟು ಸಮಯೋಚಿತ ಆಯ್ತಲ್ಲ!? ಎನಿವೇ, ತ್ರಿವೇಣಿಯವರ ಪತ್ರದೊಂದಿಗೆ ಈ ವಿವಾಹ (ವಿಚಿತ್ರಾನ್ನ ವಾಚಕರು ಹನಿಸಿದ) ವೃಷ್ಟಿ ಸಮಾಪ್ತವಾಗುತ್ತದೆ.

‘‘ಈ ಬಾರಿಯ ವಿಚಿತ್ರಾನ್ನವು ‘ಏನೂ ಇಲ್ಲ' ಎಂಬ ವಿಷಯದ ಊರುಗೋಲನ್ನೇ ಆಧಾರವಾಗಿ ಹಿಡಿದುಕೊಂಡು ಸೊಗಸಾಗಿ ಹಬ್ಬಿನಿಂತ ಹೂಬಳ್ಳಿಯಂತಿದೆ. ಈ ಲೇಖನದ ಜೊತೆಗಿದ್ದ ಖಾಲಿ ಚೌಕಟ್ಟಿನ ಚಿತ್ರ - ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ವಿಚಾರರಶ್ಮಿ' ಅಂಕಣವನ್ನು ನೆನಪಿಗೆ ತಂದಿತು. ಆ ಅಂಕಣಕರ್ತೃ ವಾಗಿದ್ದ ಜಿ.ಪಿ.ರಾಜರತ್ನಂ ಅವರು ನಿಧನಹೊಂದಿದ ವಾರ, ಲೇಖನದ ಜಾಗವನ್ನು ಖಾಲಿಯಾಗಿ ಬಿಟ್ಟು, ಜಿ.ಪಿ.ರಾಜರತ್ನಂ ಅವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆಯೆಂಬುದನ್ನು ಸಾಂಕೇತಿಕವಾಗಿ ಸೂಚಿಸಲಾಗಿತ್ತು.

ಲೇಖನ ರಚಿಸುವ ಕಲೆ ನನ್ನ ಮಟ್ಟಿಗೆ ಶೂನ್ಯದಿಂದ ಮಹತ್ತನ್ನು ಸೃಷ್ಟಿಸುವ ಪವಾಡದಂತೆಯೇ. ಮನಸಿನಾಳದಲ್ಲಿ ಮಿಂಚಿದ ವಿಚಾರದ ಕಿರು ಎಳೆಯಾಂದು ಹಂತಹಂತವಾಗಿ ಬೆಳೆದು, ಸುಂದರ ಲೇಖನವಾಗುವ ಕ್ರಿಯೆಯೇ ಬಲು ಸೊಗಸಿನದು. ನೆರೆದಿರುವ ಜನಸಮುದಾಯದ ಎದುರು ತನ್ನ ಅಂಗೈಯನ್ನು ಅಗಲವಾಗಿ ಬಿಡಿಸಿ ತೋರಿಸಿ, ನಂತರ ಅದೇ ಬರಿಗೈಯಿಂದ ಬೂದಿ,ಉಂಗುರಗಳನ್ನು ಸೃಷ್ಟಿಸಿ ತೋರಿಸುವ ಪವಾಡಪುರುಷರು ನಮ್ಮಲ್ಲಿದ್ದಾರೆ. ಜನರಿಗೆ ಮಂಕುಬೂದಿ ಎರಚುವ ಪವಾಡಪುರುಷರು ‘‘ವಿಭೂತಿಯ ಬದಲು ಕುಂಬಳಕಾಯಿ ಬರಿಸಿ ತೋರಿಸಿ, ನೋಡೋಣ'' ಎಂಬ ವಿಚಾರವಾದಿಗಳ ಸವಾಲಿನೆದುರು ಸೋತು ಹೋಗಿದ್ದಾರೆ. ಆದರೆ ಸೃಜನಶೀಲ ಲೇಖಕನಿಗೆ ಯಾವುದೂ ಅಸಾಧ್ಯವಲ್ಲ. ‘‘ಇಲ್ಲ ಅಂದುಕೊಳ್ಳಬೇಡಿ, ಇದೆ ಅಂದುಕೊಳ್ಳಿ'' ಎಂಬ ಉಕ್ತಿಯನ್ನು ನೆನಪಿಸುತ್ತಾ, ಏನೂ ಇಲ್ಲ ಎನ್ನುತ್ತಲೇ ಏನೋ ಹೊಸದನ್ನು ನೀಡುತ್ತಲೇ ಬಂದಿರುವ ಜೋಶಿಯವರಿಗೆ ನನ್ನ ಅಭಿನಂದನೆಯನ್ನಂತೂ ಇಲ್ಲ ಎನ್ನುವಂತಿಲ್ಲ!

*

ವಿಚಿತ್ರಾನ್ನ ಓದುಗರಿಗೆಲ್ಲ ಮುಂಗಡವಾಗಿ ಹೊಸವರ್ಷ 2007ರ ಶುಭಾಶಯಗಳು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vichitranna readers have responded splendidly to the request of Srivathsa Joshi to write about nothing, everything, something, anything.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more