‘ಏರುವನು ರವಿ ಏರುವನು... ನೀರನು ಬಿಸಿಬಿಸಿ ಮಾಡುವನು... ಏರಿರುವ ವಿದ್ಯುತ್‌ ಬಿಲ್ಲನು ಸರ್ರನೆ... ಜಾರಿಸುತ ಕೆಳ ದೂಡುವನು....’- ಮುಂದೆ ?


*ಶ್ರೀವತ್ಸ ಜೋಶಿ

Vichitraanna !!ಆತ್ಮೀಯ ಓದುಗರಿಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಹಬ್ಬಕ್ಕೆ ನೀವು ಮಾಡುವ ವಿಶೇಷ ಅಡುಗೆಯ ಜತೆಯಲ್ಲೇ ನನ್ನದೂ ಒಂದು - ವಿಚಿತ್ರಾನ್ನ. ನೀವೂ ಸೇವಿಸಿ; ನಿಮ್ಮ ಸ್ನೇಹಿತ-ಅತಿಥಿಗಳಿಗೂ ರುಚಿನೋಡಲು ಹೇಳಿ!

* *

‘ಸುದ್ದಿಗೆ ಗುದ್ದು’ ಅಂತ ನೀವು ಕೇಳಿದ್ದೀರಾ? ನನ್ನ ನೆನಪಿನಂತೆ ಕನ್ನಡದ ಪ್ರಖ್ಯಾತ ದಿನಪತ್ರಿಕೆಯಲ್ಲಿ ಆ ಹೆಸರಿನ ಅಂಕಣವೊಂದಿತ್ತು. ಅದೇ ರೀತಿಯದು ‘ಮಯೂರ’ದಲ್ಲೂ ‘ತಿಂಗಳ ತಿಳಿಗಾಳು’ ಅಂತ ಒಂದು ಅಂಕಣ (ಇತ್ತೀಚೆಗೆ ಇದೆಯೋ ಗೊತ್ತಿಲ್ಲ), ‘ತುಷಾರ’ದಲ್ಲಿ ‘ಕಡಲಾಚೆಯ ಕುಡಿನೋಟ’ ಎನ್ನುವ ಸೇಮ್‌ ಟೈಪ್‌ ಕಾಲಮ್‌, ಮತ್ತು ‘ಕೊರವಂಜಿ’ಯಲ್ಲಿ (ಈಗ ಕೊರವಂಜಿಯ ಮಗಳು ‘ಅಪರಂಜಿ’ಯಲ್ಲಿ) ಒಂದು ಸ್ಥಿರಶೀರ್ಷಿಕೆ ‘ಕಿಡಿ’ ಎಂದು. ಇವೆಲ್ಲದರ ಸ್ಥೂಲ ಸ್ವರೂಪ ಒಂದೇ. ಗಂಭೀರವಾದ ಸುದ್ದಿಯಾಂದಿದ್ದರೆ ಅದಕ್ಕೆ ಸ್ವಾರಸ್ಯವಾದ, ತಮಾಷೆಯ, ಚಾಟಿಯೇಟಿನಂತಿರುವ ಪ್ರತಿಕ್ರಿಯೆ. ಉದಾಹರಣೆಗೆ, ‘ವೀರಪ್ಪನ್‌ ಗುಂಪಿನಲ್ಲಿ ಕೇವಲ ನಾಲ್ಕು ಮಂದಿ ಇರುವುದು - ಎಸ್‌.ಟಿ.ಎಫ್‌ ವರದಿ’ ಎಂಬ ಸುದ್ದಿಗೆ ಅಪರಂಜಿಯ ಜುಲೈ ಸಂಚಿಕೆಯಲ್ಲಿದ್ದ ಕಿಡಿ - ‘ಪ್ಲಸ್‌ ಎರಡು ಸರ್ಕಾರಗಳು!’ ಇನ್ನೊಂದು ಸುದ್ದಿಯ ಹೆಡ್‌ಲೈನ್‌ - ‘ಯುದ್ಧ ಆರಂಭಿಸಲಾರೆ: ಮುಷರಫ್‌’. ಅದಕ್ಕೆ ಅಪರಂಜಿಯ ಕಿಡಿ - ‘ಆಧುನಿಕ ಅರ್ಜುನ?’

ಇಂಗ್ಲೀಷ್‌ ಪತ್ರಿಕೆಗಳಲ್ಲೂ ಇಂತಹ ಹಾಸ್ಯಭರಿತ ಗುದ್ದುಗಳನ್ನು ನೋಡುತ್ತೇವೆ. ವ್ಯಂಗ್ಯಚಿತ್ರಕಾರರಂತೂ ಸುದ್ದಿಗೆ ಗುದ್ದು ಕೊಡುವುದರಲ್ಲಿ ನಿಸ್ಸೀಮರು. ಆರ್‌.ಕೆ.ಲಕ್ಷ್ಮಣ್‌ ಅವರ You said it ನಲ್ಲಿ ದೊಡ್ಡ, ಚಿಕ್ಕ ಸುದ್ದಿಗಳಿಗೆಲ್ಲ ಗುದ್ದುಕೊಡುತ್ತ ಅವರು ಕಾರ್ಟೂನ್‌ ರಚಿಸಿ ಆ ಸುದ್ದಿಯನ್ನು ರಂಜಿಸುತ್ತಾರೆ. ಜಾಹೀರಾತು ಜಗತ್ತಿನಲ್ಲೂ ಸುದ್ದಿಗೆ ಗುದ್ದುಗಳು ಕಾಣಸಿಗುತ್ತವೆ. ಕೋಕಾಕೋಲಾ ಮತ್ತು ಥಮ್ಸ್‌ಅಪ್‌ ಕಂಪೆನಿಗಳು ವಿಲೀನವಾದಾಗ ಪೆಪ್ಸಿ ಕಂಪೆನಿಯವರು, ‘ಅಯ್ಯೋ, ನೀವು ಥೋಕ್‌ ಕುಡಿಯಬಯಸುತ್ತೀರಾ?’ ಎಂದು ಜಾಹೀರಾತಿನ ಗುದ್ದು ಕೊಟ್ಟಿದ್ದರು. ಹಾಗೆಯೇ ವರ್ಲ್ಡ್‌ಕಪ್‌ ಕ್ರಿಕೆಟ್‌ನ ಪ್ರಾಯೋಜಕತ್ವ ಕೋಕಾಕೋಲಾಕ್ಕೆ ಹೋದಾಗ, ಕೋಕ್‌ ಆಫೀಷಿಯಲ್‌ ಕೂಲ್‌ಡ್ರಿಂಕ್‌ ಆಫ್‌ ಇಂಡಿಯನ್‌ ಟೀಮ್‌ ಆದಾಗ ಪೆಪ್ಸಿಯ ಜಾಹೀರಾತು ‘ನಥಿಂಗ್‌ ಅಫೀಷಿಯಲ್‌ ಅಬೌಟ್‌ ಇಟ್‌ ...’ ಬಹಳ ಜನಪ್ರಿಯವಾಗಿತ್ತು.

Utterly Butterly Delicious ಅಮುಲ್‌ ಕಂಪೆನಿಯ ಜಾಹೀರಾತುಗಳ ಹೋರ್ಡಿಂಗ್‌ಗಳಲ್ಲಿ ನೀವು ಆಕರ್ಷಕ ಸುದ್ದಿಗೆ-ಗುದ್ದುಗಳನ್ನು ಕಾಣಬಲ್ಲಿರಿ. ಇತ್ತೀಚೆಗೆ ಅಬ್ದುಲ್‌ ಕಲಾಮ್‌ ರಾಷ್ಟ್ರಪತಿಯಾದಾಗ ‘ಕಯಾಮತ್‌ ಸೇ ಕಲಾಮತ್‌ ತಕ್‌’ ಎಂದೂ, ಲಲ್ಲೂ ಪ್ರಸಾದ್‌ ಮಗಳ ಮದುವೆಯ ವೇಳೆ ‘ಯಾದವೋಂಕೀ ಬಾರಾತ್‌’ ಎಂದೂ, ಗುಟ್ಕಾ ನಿಷೇಧದ ವೇಳೆ ‘ಗುಟ್‌ ಮತ್‌ ಖಾ...’ ಎಂದೂ ಅದ್ಭುತ ಹೋರ್ಡಿಂಗ್‌ಗಳು! ಅಮುಲ್‌ನ ಜಾಹೀರಾತುಗಳು ಯಾವಾಗಲೂ ಮೆಚ್ಚುವಂಥವೇ ಆಗಿರುತ್ತವೆ. 1976ರಿಂದಲೂ ಅಮುಲ್‌ ಜಾಹೀರಾತುಗಳು ನೀಡಿರುವ ಸುದ್ದಿಗೆ-ಗುದ್ದುಗಳನ್ನು ನೋಡಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ: www.amul.com/hits.html

ರಾಜಕೀಯ ಸುದ್ದಿಗಳಿಗಷ್ಟೇ ಮತ್ತು ಪತ್ರಿಕೆಯ ಅಂಕಣಗಳಲ್ಲಿ ಅಥವಾ ಜಾಹೀರಾತು-ವ್ಯಂಗ್ಯಚಿತ್ರಗಳಲ್ಲಿ ಮಾತ್ರ ಗುದ್ದು ಕೊಡಬೇಕೆಂದೇನಿಲ್ಲ. ನಮ್ಮ ದೈನಂದಿನ ಚಟುವಟಿಕೆಗಳಲ್ಲೂ ತಮಾಷೆ ಸ್ವೀಕರಿಸುವ ಮಂದಿ ಇದ್ದರೆ ಈ ತರಹ ಸುದ್ದಿಗೆ ಗುದ್ದು ಕೊಡುವುದರಿಂದ ಒಳ್ಳೆಯ ಮಜಾ ಬರುತ್ತದೆ. ದೆಹಲಿಯಲ್ಲಿ ನಾನು ಎನ್‌.ಟಿ.ಪಿ.ಸಿಯಲ್ಲಿದ್ದಾಗ ನಮಗೆ ಬಿ.ಪಿ.ಝಾಡೂ (ಝಾಡೂ ಎಂಬುದು ಪಂಜಾಬಿ ಸರ್‌ನೇಮ್‌) ಎಂಬ ಟ್ರೈನಿಂಗ್‌ ಅಧಿಕಾರಿಯಿದ್ದರು. ತುಂಬ ಹಾಸ್ಯಪ್ರವೃತ್ತಿಯ ಮತ್ತು ತಮಾಷೆಯನ್ನು ಸ್ಪೋರ್ಟಿವ್‌ ಆಗಿ ತೆಗೆದುಕೊಳ್ಳುವ ವ್ಯಕ್ತಿ. ಆ ವರ್ಷ ಏಪ್ರಿಲ್‌ನಲ್ಲಿ ಝಾಡೂ ಅವರಿಗೆ ಪ್ರಮೋಶನ್‌ ಸಿಕ್ಕಿತು. ಆ ಸುದ್ದಿಯನ್ನು ನಮಗೆ ಅವರು ಹೇಳಿದಾಗ ನಾವೆಲ್ಲ, ‘ಹಾಗಿದ್ದರೆ ಇಂದಿನಿಂದ ನಿಮ್ಮನ್ನು ವಾಕ್ಯೂಮ್‌ ಕ್ಲೀನರ್‌ ಎನ್ನಲಡ್ಡಿಯಿಲ್ಲ...?’ ಎಂದಿದ್ದೆವು! ‘ಝಾಡೂ’ ಗೆ ಪ್ರಮೋಷನ್‌ ಸಿಕ್ಕರೆ ‘ವಾಕ್ಯೂಮ್‌ ಕ್ಲೀನರ್‌’ ಆಗುವುದು ಆಶ್ಚರ್ಯವಲ್ಲ ತಾನೆ?

ಇನ್ನೊಂದು ಸುದ್ದಿಗೆ-ಗುದ್ದು ನೆನಪಾಗುವುದೆಂದರೆ, ಮೈಸೂರಲ್ಲಿ ಸ್ಕೂಲ್‌ ಟೀಚರ್‌ ಆಗಿರುವ ನಮ್ಮಕ್ಕ ಮೊನ್ನೆ ಪತ್ರದಲ್ಲಿ ‘ನಮ್ಮ ಮನೆಯಲ್ಲೀಗ ಸೋಲಾರ್‌ ವಾಟರ್‌ಹೀಟರ್‌ ಅಳವಡಿಸಿದ್ದೇವೆ...’ ಎಂದು ಬರೆದಿದ್ದರು. ಆ ಸುದ್ದಿಗೆ ನನ್ನ ಗುದ್ದು - ‘ಮೂಡುವನು ರವಿ ಮೂಡುವನು... ಕತ್ತಲೊಡನೆ ಜಗಳಾಡುವನು...’ ಪದ್ಯವನ್ನೀಗ ‘ಏರುವನು ರವಿ ಏರುವನು... ನೀರನು ಬಿಸಿಬಿಸಿ ಮಾಡುವನು... ಏರಿರುವ ವಿದ್ಯುತ್‌ ಬಿಲ್ಲನು ಸರ್ರನೆ... ಜಾರಿಸುತ ಕೆಳ ದೂಡುವನು.... ’ ಎಂಬ ಚರಣವನ್ನು ಸೇರಿಸಿ ಶಾಲಾಮಕ್ಕಳಿಗೆ ಕಲಿಸಲಾಗುತ್ತದೆ!

ವಿಚಿತ್ರಾನ್ನದ ತುತ್ತಿನ ಸುದ್ದಿಗೆ ಗುದ್ದು ಕೊಡುತ್ತ ನೀವೂ ಪ್ರತಿಕ್ರಿಯಿಸಿ. ಹೇಗೆ ಗೊತ್ತೇ? ಮೊನ್ನೆ ವಿಚಿತ್ರಾನ್ನದ ಎರಡನೆ ತುತ್ತಿನಲ್ಲಿ, ‘ನಾಲ್ಕಕ್ಷರಗಳ ನಾಮಪದಗಳ ಪಟ್ಟಿ ಕಳಿಸಿ...’ ಎಂದಿದ್ದಕ್ಕೆ ನನ್ನ ಮಿತ್ರ ಪುರುಷೋತ್ತಮ್‌ ರಾವ್‌(ಮೇರಿಲ್ಯಾಂಡ್‌) ಬರೆದಿದ್ದರು - ‘ನಾಲ್ಕಕ್ಷರದ ನಾಮಪದಗಳನ್ನು ಹುಡುಕುತ್ತಲೇ ನನ್ನ ತಲೆ ಚಿಂದಿ-ಚಿತ್ರಾನ್ನ ಆಯಿತು’! ಅಷ್ಟೇ ಅಲ್ಲದೆ ವಿಚಿತ್ರಾನ್ನಕ್ಕೆ ಒಂದು ಫಾಸ್ಟ್‌-ಗನ್‌ (ಸ್ಲೋಗನ್‌ಗಿಂತ ಸ್ವಲ್ಪ ಫಾಸ್ಟ್‌!) ಕೂಡ ಅವರು ಕಳಿಸಿದ್ದಾರೆ. ಅದೇನೆಂದರೆ, Good > Better > Best ಇದ್ದ ಹಾಗೆ Bread > Butter > Toast; ಅದೇರೀತಿಯಲ್ಲಿ, ಅನ್ನ - ಚಿತ್ರಾನ್ನ - ವಿಚಿತ್ರಾನ್ನ !

ನಿಮಗೆ ಹೇಗನಿಸಿತು? ನಿಮ್ಮ ವಸ್ತುನಿಷ್ಠ ಪ್ರತಿಕ್ರಿಯೆಯಿಂದಲೇ ಈ ಅಡಿಗೆಭಟ್ಟನಿಗೆ ಸ್ವಾದಿಷ್ಟ ವಿಚಿತ್ರಾನ್ನ ತಯಾರಿಸಿ ಬಡಿಸಲು ಸ್ಫೂರ್ತಿ ಬರುವುದು! ವಿಳಾಸ ಗೊತ್ತಿದೆಯಲ್ಲ - [email protected]

* *

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+