ಸ್ಮಾರ್ಟ್ ಸಿಂಗಪುರದಲ್ಲಿ ಪ್ರತಿಯೊಂದಕ್ಕೂ ಸ್ಮಾರ್ಟ್ ಕಾರ್ಡ್

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ಹದಿನಾಲ್ಕು ವರ್ಷಗಳ ಹಿಂದೆ ನಾನು ಸಿಂಗಪುರಕ್ಕೆ ಬಂದಿಳಿದಾಗ ಬೆಳಗಿನ ಸುಮಾರು ಹತ್ತು ಗಂಟೆ. ಅಲ್ಲಿಂದ ನೇರವಾಗಿ ಆಫೀಸಿಗೆ ಹೋಗಿ ರಿಪೋರ್ಟ್ ಮಾಡಿಕೊಳ್ಳುವುದಿತ್ತು. ಆದ್ದರಿಂದ ಬೇಗ ಬೇಗನೇ ನಡೆದು ಅಲ್ಲಿನ ಟ್ಯಾಕ್ಸಿಯೊಂದರಲ್ಲಿ ಕುಳಿತೆ. ನನ್ನ ಹತ್ತಿರ ಸ್ವಲ್ಪ ಮಾತ್ರ ಸಿಂಗಪುರದ ಹಣ ಇತ್ತು. ಆದರೆ ಅಲ್ಲಿನ ಟ್ಯಾಕ್ಸಿ ದರ ಏನೆಂದು ಗೊತ್ತಿರದೇ ಅದರಲ್ಲಿ ಹತ್ತಿ ಕುಳಿತಿದ್ದೆ.

ಚಾಲಕನಿಗೇ ನಾನು ಹೋಗುತ್ತಿರುವ ಸ್ಥಳವನ್ನು ಹೇಳಿ ಅಲ್ಲಿಗೆ ಎಷ್ಟಾಗಬಹುದೆಂದು ಕೇಳಿದೆ. ಅವನು ಅಂದಾಜು ಹಣ ಹೇಳಿ, ಕ್ರೆಡಿಟ್ ಕಾರ್ಡ್ ಮೂಲಕ ಕೂಡಾ ಕೊಡಬಹುದೆಂದು ತಿಳಿಸಿದ. ಈ ವಿಷಯ ನನಗೆ ಆಶ್ಚರ್ಯ ತಂದಿತು. ಆ ದಿನಗಳಲ್ಲಿ ಭಾರತದಲ್ಲಿ ದೊಡ್ಡ ಅಂಗಡಿಗಳಲ್ಲಿ ಕೂಡಾ ಕ್ರೆಡಿಟ್ ಕಾರ್ಡ್ ಅಷ್ಟೊಂದು ನಡೆಯುತ್ತಿರಲಿಲ್ಲ. ಎಲ್ಲ ನಗದು ವ್ಯವಹಾರ. ಸಿಂಗಪುರದಲ್ಲಿ ಟ್ಯಾಕ್ಸಿ ಚಾಲಕರು ಕೂಡ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುತ್ತಾರೆ ಎನ್ನುವುದು ನಿಜವಾಗಿಯೂ ಅಚ್ಚರಿಯ ಸಂಗತಿ ಆಗಿತ್ತು.

ಸಿಂಗಪುರದಂತಹ ಒಂದು ಮುಂದುವರೆದ ದೇಶದಲ್ಲಿದ್ದುಕೊಂಡು, ಇತರ ಅನೇಕ ಮುಂದುವರೆದ ದೇಶಗಳಿಗೆ ಭೆಟ್ಟಿ ನೀಡಿದ ನನಗೆ ಕ್ರಮೇಣ ತಿಳಿದ ಒಂದು ಮುಖ್ಯ ಅಂಶವೇನೆಂದರೆ, ಬಹುತೇಕ ಮುಂದುವರೆದ ದೇಶಗಳಲ್ಲಿ ನಗದು ವ್ಯವಹಾರ ಕಡಿಮೆ. ಎಲ್ಲ ವಾಣಿಜ್ಯ ವ್ಯವಹಾರಗಳು ಬಹುತೇಕ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಚೆಕ್ಕುಗಳು ಅಥವಾ ಇತ್ತೀಚೆಗೆ ಸ್ಮಾರ್ಟ್ ಕಾರ್ಡುಗಳಿಂದ ನಡೆಯುತ್ತವೆ. [ಜನವರಿಯಿಂದ ಬಿಎಂಟಿಸಿ ಸ್ಮಾರ್ಟ್ ಕಾರ್ಡ್]

Smart card is used for everything in Singapore! Why not in India?

ಇದರಿಂದ ಎಲ್ಲ ವ್ಯವಹಾರಗಳ ಯುಕ್ತ ದಾಖಲಾತಿ ಉಂಟಾಗುತ್ತದಲ್ಲದೇ, ಇದು ತುಂಬಾ ಅನುಕೂಲಕರ ಕೂಡ. ಅದರಲ್ಲೂ ಈಚಿನ ಒಂದೆರಡು ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಮಾರ್ಟ್ ಕಾರ್ಡುಗಳನ್ನು ಇತರ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳಂತೆ ಸ್ವೈಪ್ ಕೂಡ ಮಾಡಬೇಕಾಗಿಲ್ಲ. ಸುಮ್ಮನೇ ಓದುವ ಯಂತ್ರಕ್ಕೆ ತೋರಿಸಿಬಿಟ್ಟರೆ (ಟ್ಯಾಪ್ ಮಾಡಿದರೆ) ಸಾಕು. ವೈಫೈ ಮೂಲಕ ಹಣ ತನ್ನಿಂತಾನೇ ಸಂದಾಯವಾಗುತ್ತದೆ.

ಸ್ಮಾರ್ಟ್ ಕಾರ್ಡುಗಳನ್ನು ಸಿಂಗಪುರದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಮೊದಲು ಮೆಟ್ರೋ ರೈಲುಗಳಲ್ಲಿ ನಿಲ್ದಾಣದ ಪ್ರವೇಶಕ್ಕಾಗಿ ಉಂಟಾಗುವ ಜನಸಂದಣಿಯನ್ನು ಕಡಿಮೆಗೊಳಿಸಲು ಹದಿನೈದು ವರ್ಷಗಳ ಹಿಂದೆ ಸಂಪರ್ಕರಹಿತ ಸ್ಮಾರ್ಟ್ ಕಾರ್ಡುಗಳನ್ನು ಜಾರಿತರಲಾಯಿತು. ಇಂದು Ezlink ಎಂದರೆ ಎಲ್ಲರಿಗೂ ಗೊತ್ತು. ಈ ಸ್ಮಾರ್ಟ್ ಕಾರ್ಡನ್ನು ಸಿಂಗಪುರದ ಎಲ್ಲ ತರಹದ ಸಾರಿಗೆ ವ್ಯವಸ್ಥೆ (ಮೆಟ್ರೊ ಮತ್ತು ಬಸ್)ಗಳಲ್ಲಿ ಉಪಯೋಗಿಸಬಹುದಲ್ಲದೇ ಕೆಲವು ಟ್ಯಾಕ್ಸಿಗಳಲ್ಲಿ ಕೂಡ ಬಳಸಬಹುದು. ಪೆಟ್ರೋಲ್ ಪಂಪುಗಳು, ಆಟೋಮ್ಯಾಟಿಕ್ ಫುಡ್ ಮತ್ತು ಡ್ರಿಂಕ್ ಡಿಸ್ಪೆನ್ಸಿಂಗ್ ಮಶೀನುಗಳಲ್ಲಿ ಕೂಡ ಉಪಯೋಗಿಸಲಾಗುತ್ತಿದೆ. ಹಲವಾರು ಹೋಟೆಲುಗಳು ಕೂಡ ಇವುಗಳನ್ನು ಬಳಸುತ್ತಿವೆ.

ಸಿಂಗಪುರದ ಎಲ್ಲ ವಿದ್ಯಾರ್ಥಿಗಳಿಗೆ ಅಲ್ಲಿನ ಶಿಕ್ಷಣ ಮಂತ್ರಾಲಯವು ಗುರುತಿನ ಕಾರ್ಡನ್ನು ಕೊಡುತ್ತದೆ. ಇದರಲ್ಲಿ ಸ್ಮಾರ್ಟ್ ಕಾರ್ಡ್ ಇರುವುದರಿಂದ ವಿದ್ಯಾರ್ಥಿಗಳು ಗುರುತಿನ ಕಾರ್ಡ್ ಮಾತ್ರವಲ್ಲದೇ, ಅದೇ ಕಾರ್ಡನ್ನು ಅವರು ಬಸ್ಸು ಮತ್ತು ಮೆಟ್ರೋ ಟ್ರೇನುಗಳಿಗೆ ಬಳಸಲು, ಅಲ್ಲದೇ ಅವರು ತಮ್ಮ ಶಾಲೆಗಳಲ್ಲಿ ತಿಂಡಿಗಳನ್ನು ಕೊಳ್ಳಲು ಕೂಡ ಉಪಯೋಗಿಸುತ್ತಾರೆ. ಹೇಗಿದೆ ನೋಡಿ ಸ್ಮಾರ್ಟ್ ಕಾರ್ಡ್ ಮಹಾತ್ಮೆ! [ಟಿಕೆಟ್ ಪಡೆಯಲು ಕ್ಯೂನಲ್ಲಿ ನಿಲ್ಲದಿರಿ, ಆಯಾಸ ಪಡದಿರಿ]

Smart card is used for everything in Singapore! Why not in India?

ಅಲ್ಲದೇ ಈ ತಂತ್ರಾಂಶವನ್ನು ಇತ್ತೀಚೆಗೆ ಅನೇಕ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳು ಕೂಡ ಉಪಯೋಗಿಸುತ್ತಿವೆ. ಹೀಗಾಗಿ ಹಳೆಯ ಮ್ಯಾಗ್ನೆಟಿಕ್ ಕಾರ್ಡುಗಳು ಕ್ರಮೇಣ ಮರೆಯಾಗುತ್ತಿವೆ. ಸಂಪರ್ಕ ರಹಿತ ತಂತ್ರಾಂಶ ಎಲ್ಲರ ಮನವನ್ನು ಗೆದ್ದಿದೆ ಮತ್ತು ಜೀವನದ ಅವಿಭಾಜ್ಯ ಅಂಗವೇ ಆಗಿಹೋಗಿದೆ. ಹೀಗಾಗಿ ನಗದು ಹಣವನ್ನು ಕಡ್ಡಾಯವಾಗಿ ಇಟ್ಟುಕೊಳ್ಳಲೇ ಬೇಕಾಗಿಲ್ಲ. ಎಲ್ಲೆಲ್ಲೂ ಈ ಸ್ಮಾರ್ಟ್ ಕಾರ್ಡುಗಳು ವಿಜ್ರಂಭಿಸುತ್ತಿವೆ ಮತ್ತು ತಮ್ಮ ಇರುವಿಕೆಯನ್ನು ಸಮರ್ಥಿಸಿಕೊಳ್ಳುತ್ತಿವೆ.

ಕಪ್ಪು ಹಣದ ಮೇಲೆ ಮಾತು ಜಾಲಿ ನೋಟುಗಳ ಮೇಲೆ ವಿಜಯ ಸಾಧಿಸಲು ಮೋದಿ ಅನಿರೀಕ್ಷಿತವಾಗಿ 500 ಮತ್ತು 1000ದ ನೋಟುಗಳನ್ನು ರದ್ದುಪಡಿಸಿದ್ದರಿಂದ ಭಾರತದಲ್ಲಿ ಸಾಮಾನ್ಯ ಜನರಿಗೆ ಅದರಲ್ಲೂ ಗ್ರಾಮೀಣ ಜನ ಮತ್ತು ಅಶಿಕ್ಷಿತರಿಗೆ ಆಗುತ್ತಿರುವ ವ್ಯತ್ಯಯಗಳ ಬಗ್ಗೆ ಅನೇಕ ಮಾಧ್ಯಮಗಳು ಅನೇಕ ತರಹದ ವರದಿಗಳನ್ನು ಬಿತ್ತರಿಸುತ್ತಿವೆ. ಅನೇಕ ರಾಜಕೀಯ ನಾಯಕರು ಪರ ಮತ್ತು ವಿರೋಧಿ ಹೇಳಿಕೆಗಳನ್ನು ಭಾವಾತಿರೇಕದಿಂದ ಜನರ ಮುಂದೆ ಹೇಳಿಕೊಳ್ಳುತ್ತಿದ್ದಾರೆ.

Smart card is used for everything in Singapore! Why not in India?

ಆದರೆ ಯಾವುದೋ ಕಾರಣಕ್ಕಾಗಿ ನೋಟುಗಳ ರದ್ದತಿ ಈಗ ಆಗಿ ಹೋಗಿದೆ. ಸ್ವಲ್ಪವಾದರೂ ಅದರಿಂದ ದೇಶಕ್ಕೆ ಒಳ್ಳೆಯದೇ ಆಗುತ್ತದೆ ಎಂಬುದು ನನ್ನ ಅನಿಸಿಕೆ. ನಾನು ಅನೇಕರ ಜೊತೆ ಮಾತನಾಡಿದ್ದೇನೆ ಮತ್ತು ಇದು ಅವರ ಅನಿಸಿಕೆ ಕೂಡ.

ಈಗ ಮುಖ್ಯವಾಗಿ ದೇಶದ ಮುಂದಿರುವುದು ಈ ರದ್ದತಿಯಿಂದಾಗಿರುವ ಸಮಸ್ಯೆಗಳ ಪರಿಹಾರಗಳನ್ನು ಕುರಿತು ಚಿಂತಿಸುವುದು ಮತ್ತು ಕಾರ್ಯರೂಪಕ್ಕೆ ತರುವುದು. ಆದರೆ ಯಾವುದೇ ಮಾಧ್ಯಮಗಳಲ್ಲಿ ಇವುಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆಯೇ? ಭಾರತಕ್ಕೆ ಈ ಪರಿಸ್ಥಿತಿ ಏಕೆ ಉಂಟಾಯಿತು? ಇದರ ಮೂಲ ಕಾರಣಗಳ ಬಗ್ಗೆ ಚರ್ಚೆ ನಡೆಯುತ್ತಿದೆಯೇ?

Smart card is used for everything in Singapore! Why not in India?

ನನಗೆ ತಿಳಿದ ಮಟ್ಟಿಗೆ ಅಂತಹ ಚರ್ಚೆಗಳು ಗಂಭೀರ ಸ್ವರೂಪದಲ್ಲಿ ನಡೆಯುತ್ತಿಲ್ಲ. ಅನುಷ್ಠಾನಕ್ಕೆ ತರಲು ಅಲ್ಲದೇ ಉಪಯೋಗಿಸಲು ಕೂಡ ಸುಲಭವಾಗಿರುವ ಸ್ಮಾರ್ಟ್ ಕಾರ್ಡುಗಳನ್ನು ವ್ಯಾಪಕವಾಗಿ ಹೊರತಂದರೆ, ಈ ಸಮಸ್ಯೆ ಸಾಕಷ್ಟು ಬಗೆಹರಿಯಬಹುದಲ್ಲವೇ? ರಿಚಾರ್ಜ್ ಮಾಡಲು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳನ್ನು ಬಳಸಿಕೊಳ್ಳಬಹುದಲ್ಲ?

ದೇಶಹಿತಕ್ಕಾಗಿ ಒಳ್ಳೆಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದನ್ನು ಕುರಿತು ಗಂಭೀರ ಚರ್ಚೆ ಮಾಡುವುದನ್ನು ಬಿಟ್ಟು, ಒಬ್ಬರಿನ್ನೊಬ್ಬರ ಮೇಲೆ ಇಲ್ಲ ಸಲ್ಲದ ಆರೋಪ ಪ್ರತ್ಯಾರೋಪಗಳನ್ನು ಹೊರಿಸುವುದರಲ್ಲೇ ಸಮಯ ವ್ಯರ್ಥ ಮಾಡುವ ರಾಜಕಾರಣಿಗಳು, ಸಮಸ್ಯೆಯನ್ನು ಬೆಳೆಸಿ ಪೆಡಂಭೂತಗಳನ್ನಾಗಿ ಮಾಡುತ್ತಾರೆಯೇ ಹೊರತು ಅವುಗಳ ಪರಿಹಾರ ಕಂಡು ಕೊಳ್ಳುವುದಿಲ್ಲ. ಇದು ನಮ್ಮೆಲ್ಲರ ದೌರ್ಭಾಗ್ಯ ಅಲ್ಲವೇ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Smart card is used for everything in Singapore! For bus, travel, petrol, buying grosseries, food packets in schools, taxis and for anything and everything. Smart cards have replaced currency notes and credit cards. Everyone knows Ezlink. Why not in India too?
Please Wait while comments are loading...