ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರಾಧಿ ನಾನಲ್ಲ ! ಈ ಅಪವಾದವೂ ಸಲ್ಲ !

By Staff
|
Google Oneindia Kannada News
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
[email protected]

ಆಗಿನ್ನೂ ಅಮೆರಿಕಾದಲ್ಲಿ ಉದಯ ಟೀವಿ ಬಂದಿರಲಿಲ್ಲ. ಪತ್ರಿಕೆಗಳಲ್ಲಿ ಕ್ರೈಂ ಸ್ಟೋರಿ, ಕ್ರೈಂ ಡೈರಿಗಳನ್ನು ನಿಷೇಧಿಸಬೇಕೆಂಬ ಪ್ರತಿಭಟನೆಗಳ ಕುರಿತು ಆಗಾಗ ಓದುತ್ತಿದ್ದ ನನಗೆ ಅವುಗಳ ಬಗ್ಗೆ ಅಂತಹ ಒಳ್ಳೆಯ ಅಭಿಪ್ರಾಯವೇನೂ ಇರಲಿಲ್ಲ. ಇಂತಹ ಕ್ರೈಮ್‌ ಧಾರಾವಾಹಿಗಳೆಂದರೆ- ಕೊಲೆ, ಸುಲಿಗೆ, ರೇಪ್‌... ಮುಂತಾದ ಪ್ರತಿದಿನವೂ ನಡೆಯುತ್ತಲೇ ಇರುವ, ನೂರೆಂಟು ಅನಾಚಾರಗಳನ್ನು, ಹಾಗೆ ಹಾಗೆ ಎತ್ತಿ ತಂದು ಹಸಿಯಾಗಿ ಉಣಬಡಿಸುವ ಯಾವುದೋ ಅನಾಹುತಕಾರೀ ಕಾರ್ಯಕ್ರಮವಿರಬಹುದೆಂದೇ ನಾನೂ ತಿಳಿದಿದ್ದೆ. ಆದರೆ ಈಚೆಗೆ ಕೆಲವು ದಿನಗಳಿಂದ, ಒಂದು ದಿನವೂ ತಪ್ಪದಂತೆ, ಅದನ್ನು ನೋಡುತ್ತಾ ಬಂದ ಮೇಲೆ ನನಗೆ ಕ್ರೈಂ ಸ್ಟೋರಿಯ ಹಿಂದೆ ಅಡಗಿರುವ ನಿಜ ತಿಳಿಯತೊಡಗಿತು. ಅದನ್ನೇ ನಾನಿಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಇವು ನನ್ನ ಸ್ವಂತ ಅನಿಸಿಕೆ, ಅಭಿಪ್ರಾಯಗಳೇ ಹೊರತು, ಇದನ್ನು ಎಲ್ಲರೂ ಒಪ್ಪುತ್ತಾರೆಂಬ ಭ್ರಮೆ ನನಗಿಲ್ಲ !

ಪ್ರಜಾಪ್ರಭುತ್ವದ ಪ್ರಮುಖ ಅಂಗವೆನಿಸಿಕೊಂಡಿರುವ ಪತ್ರಿಕೆಗಳು ಇವತ್ತಿಗೂ ಕೂಡ ಆಳುವ ಪಕ್ಷಗಳ ಅಡಿಯಾಳಾಗಿ, ನಿಜ ಹೇಳಲು ಹೆದರುತ್ತಿರುವಾಗ, ತನ್ನದೇ ಆದ ಇತಿಮಿತಿಗಳನ್ನು ಹೊಂದಿರುವ, ದೃಶ್ಯಮಾಧ್ಯಮವೊಂದು ಆ ಕೆಲಸವನ್ನು ಸಮರ್ಥವಾಗಿ ಮಾಡುತ್ತಿರುವ ಪರಿಯನ್ನು ಕಂಡು ನನಗೆ ನಿಜವಾಗಿಯೂ ಬಹಳ ಆಶ್ಚರ್ಯ, ಸಂತೋಷವಾಯಿತು. ವಿದೇಶೀ ಚಾನೆಲ್‌ಗಳಲ್ಲಿ ಅನ್ಯಾಯ, ಅಕ್ರಮಗಳನ್ನು ಬಯಲಿಗೆಳೆಯುವ ಇಂತಹ ಕಾರ್ಯಕ್ರಮಗಳು ಅಪರೂಪವೇನಲ್ಲ. ದಿನ ನಿತ್ಯದ ಸುದ್ದಿಯ ಭಾಗವಾಗಿ ಕೂಡ ಇಂತಹ ತನಿಖಾ ವರದಿಗಳು ಪ್ರಸಾರವಾಗುವುದುಂಟು. ಭ್ರಷ್ಟಾಚಾರದ ಆಪಾದನೆಗೊಳಗಾದ ಅಧಿಕಾರಿ, ಆಡಳಿತಗಾರ ಎಲ್ಲೇ ಇರಲಿ - ಮಕ್ಕಳನ್ನು ಶಾಲೆಗೆ ಬಿಡುತ್ತಿರಲಿ, ಪತ್ನಿಯಾಡನೆ ಶಾಪಿಂಗ್‌ ಮಾಡುತ್ತಿರಲಿ, ಪ್ರೇಯಸಿಯಾಡನೆ ಪಬ್ಬಿನಲ್ಲಿ ಮೈಮರೆತಿರಲಿ.... ಅಲ್ಲೇ ಹಿಂಬಾಲಿಸಿ, ಪ್ರಶ್ನೆಗಳನ್ನು ಕೇಳಿ, ಪೇಚಿಗೆ ಸಿಕ್ಕಿಸುವ ವರದಿಗಾರರಿಂದ ತಪ್ಪಿಸಿಕೊಳ್ಳಲು, ಅವರು ಮುಖ ಮರೆಸಿಕೊಂಡು ಓಡಿಹೋಗುವ ದೃಶ್ಯ ಕೆಲವು ಸಲ ನಗು ತರಿಸುವಂತಿರುತ್ತದೆ.

ಕ್ರೈಂ ಸ್ಟೋರಿಯೆಂದರೆ ಅನೇಕರಿಗೆ ಬಹಳ ಕೋಪ. ಅದು ಸಹಜವಾಗಿಯೇ ಇದೆ. ಏಕೆಂದರೆ ಅದು ಕಂಡಿದ್ದು ಕಂಡಂತೆ ಹೇಳಿದಾಗ ಬರುವ ಕೆಂಡ ಕೋಪ! ಇಂತಹವರು ಈ ಕಾರ್ಯಕ್ರಮದ ಮೇಲೆ ಹೊರಿಸುತ್ತಿರುವ ಒಂದು ಪ್ರಮುಖ ಆರೋಪವೆಂದರೆ- ಇದು ಯುವಜನತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿ, ಅವರನ್ನು ದಾರಿ ತಪ್ಪಿಸುತ್ತಿದೆ ಎಂಬುದು. ಇದೊಂದು ಶುದ್ಧ ಸುಳ್ಳು. ಈಗ ಬಿಡುಗಡೆಯಾಗುತ್ತಿರುವ ದರ್ಶನ್‌, ಸಾಯಿಕುಮಾರ್‌ ಮುಂತಾದವರ ಸಿನಿಮಾಗಳಲ್ಲಿರುವ ಹಿಂಸೆ, ಕ್ರೌರ್ಯಕ್ಕಿಂತಲೂ ಹೆಚ್ಚಿನ ಕ್ರೈಮ್‌ ದೃಶ್ಯಗಳು ಇನ್ನೆಲ್ಲೂ ಇರಲೂ ಸಾಧ್ಯವಿಲ್ಲ. ನಮ್ಮ ಕೆಲವು ಸಿನಿಮಾಗಳಲ್ಲಿ ತೋರಿಸುವ ಕೊಲೆಗಳು, ವಿಕೃತ ಮಾನಭಂಗದ ದೃಶ್ಯಗಳು ನಿಜವಾಗಿಯೂ ಬಹಳ ಆಘಾತಕಾರಿಯಾಗಿರುತ್ತವೆ. ಇಂತಹವುಗಳನ್ನು ದಿನವೂ ನೋಡಿ ಅರಗಿಸಿಕೊಂಡಿರುವ ಯುವಜನಾಂಗ, ಕ್ರೈಮ್‌ ಧಾರಾವಾಹಿಗಳನ್ನು ನೋಡಿದ ಮಾತ್ರಕ್ಕೆ, ಮಚ್ಚು, ಲಾಂಗು, ಕುಡಗೋಲನ್ನು ಕೈಗೆತ್ತಿಕೊಂಡುಬಿಡುತ್ತದೆ ಎಂಬ ವಾದ ತೀರಾ ಹಾಸ್ಯಾಸ್ಪದ!

‘ಇದು ಅಪರಾಧ ಜಗತ್ತಿನ ವೈಭವೀಕರಣ ಅಲ್ಲ’- ಎಂದು ಸಾರಿ ಸಾರಿ ಹೇಳುವ ಈ ಕಾರ್ಯಕ್ರಮ ಸಮಾಜಘಾತುಕರ, ರೌಡಿಗಳ ಖಾಸಗೀ ಬದುಕು ಗೆದ್ದಲು ಹಿಡಿದ ಮರದಂತೆ, ಹೇಗೆ ಒಳಗೇ ನಾಶವಾಗಿ ಹೋಗಿರುತ್ತದೆ, ಅವರ ಜೀವನಕ್ಕೊಂದು ದಾರುಣ ಅಂತ್ಯ ಹೇಗೆ ಕಾದಿರುತ್ತದೆ ಎಂದು ಪ್ರತಿ ಸಂಚಿಕೆಯಲ್ಲೂ ಮನವರಿಕೆ ಮಾಡಿಕೊಡುತ್ತದೆ. ಬರೀ ಅಪರಾಧವನ್ನು ಮಾತ್ರವಲ್ಲದೆ, ಅಂತಹದೊಂದು ಘೋರ ಅಪರಾಧ ನಡೆದುಹೋಗಲು ಕಾರಣವಾಗುವ ಕೌಟುಂಬಿಕ, ಸಾಮಾಜಿಕ ಸಂಗತಿಗಳ ಮೇಲೂ ಕ್ಷಕಿರಣ ಹಾಯಿಸುತ್ತದೆ. ಇಂತಹ ಧಾರಾವಾಹಿಗಳನ್ನು ನೋಡಿ ಯಾರಾದರೂ ದಾರಿ ತಪ್ಪುವಂತಿದ್ದರೆ, ಅವರು ತಪ್ಪು ತಿದ್ದಿಕೊಂಡು ಮತ್ತೆ ಸರಿದಾರಿಗೆ ಬರಲೂ ಕೂಡ ಇಲ್ಲಿ ಅಷ್ಟೇ ವಿಪುಲ ಅವಕಾಶಗಳಿವೆ.

ಯಾವುದೇ ಊಹೆ, ಗಾಳಿಸುದ್ದಿಗಳನ್ನು ಆಧಾರಿಸದೆ, ಪ್ರಕರಣಗಳ ಒಳಹೊಕ್ಕು ನೋಡುವ, ಸಮಾಜದ್ರೋಹಿ ಕೃತ್ಯಗಳ ಒಳಹೊರಗನ್ನು ತೆರೆದಿಡುವ ಈ ಕಾರ್ಯಕ್ರಮದ ಹೆಗ್ಗಳಿಕೆಯೆಂದರೆ ಅದರ ನಿಷ್ಪಕ್ಷಪಾತತನ! ಕೆಲವು ತಿಂಗಳ ಹಿಂದೆ, ಮಂಡ್ಯ ಜಿಲ್ಲೆಯ ಸ್ವಾಮೀಜಿಯಾಬ್ಬರು ತಮ್ಮದೇ ಶಾಲೆಯ ಶಿಕ್ಷಕಿಯಾಡನೆ, ಅನುಚಿತವಾಗಿ ವರ್ತಿಸಿದರೆಂಬ ಆರೋಪಕ್ಕೊಳಗಾದಾಗ, ಕ್ರೈಂ ಸ್ಟೋರಿ ಇಡೀ ಪ್ರಕರಣದಲ್ಲಿ, ಕಾಯಿಲೆಯಿಂದ ನರಳುತ್ತಿರುವ ವೃದ್ಧ ಸ್ವಾಮಿಯವರನ್ನು ಬಲಿಪಶುವನ್ನಾಗಿ ಮಾಡುತ್ತಿರಬಹುದೇ? ಎಂದು ಪ್ರಕರಣವನ್ನು ಇನ್ನೊಂದು ಮಗ್ಗುಲಿನಿಂದಲೂ ವಿಶ್ಲೇಷಣೆ ಮಾಡಿನೋಡಿತು. ಇದು ಒಂದು ಉದಾಹರಣೆ ಮಾತ್ರ! ಹೇಳುತ್ತಾ ಹೋದರೆ, ಇಂತಹವು ಬಹಳ ಇವೆ. ಆದರೆ ಇದು ಹೀಗಿದೆ, ಹೀಗೂ ನಡೆದಿರಬಹುದು ಎಂಬ ಒಳನೋಟಗಳನ್ನು ಮಾತ್ರ ಈ ಕಾರ್ಯಕ್ರಮ ಕೊಡುತ್ತದಲ್ಲದೆ, ಇದೇ ಸರಿ ಎಂದು ತೀರ್ಪು ನೀಡುವ ಅಧಿಕಪ್ರಸಂಗಕ್ಕೆ ಹೋಗುವುದಿಲ್ಲ, ಘಟನೆಯ ವಿವರಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು ಕೊನೆಗೆ - ‘ಈಗ ನೀವೇನಂತೀರಿ?’ ಎಂದು ಮುಂದಿನದನ್ನು ವೀಕ್ಷಕರ ವಿವೇಚನೆಗೆ ಬಿಟ್ಟು ಸುಮ್ಮನಾಗಿಬಿಡುತ್ತದೆ.

ಈ ಕಾರ್ಯಕ್ರಮದ ಬಗ್ಗೆ ನಮ್ಮ ಆರಕ್ಷಕರಲ್ಲಿಯೂ ದೊಡ್ಡ ಅಸಮಾಧಾನವಿದೆ. ಪೋಲೀಸರಿಂದಲೇ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡು, ನಂತರ ಅವರನ್ನೇ ಅವಹೇಳನ ಮಾಡಲಾಗುತ್ತಿದೆ ಎಂಬುದೇ ಅವರ ಅಳಲು. ಇದೂ ಕೂಡ ಅರ್ಧ ಸತ್ಯ. ಕೆಲವು ಎಪಿಸೋಡುಗಳಲ್ಲಿ ಪೋಲೀಸ್‌ ಇಲಾಖೆಯ ಹುಳುಕುಗಳನ್ನು ಎತ್ತಿ ತೋರಿಸಿದ್ದುಂಟು. ಆದರೆ ಅಲ್ಲೆಲ್ಲಾ ಅದು ಸಕಾರಣ. ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಅಪ್ರಾಪ್ತವಯಸ್ಕ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ - ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿದ್ದ ಸಂದೇಶ್‌ ಕುಮಾರ್‌ ಎನ್ನುವ ಅಧಿಕಾರಿಯ ಬಗ್ಗೆ ಅತಿ ಹೀನಾಯ ಮಾತುಗಳನ್ನು ಆಡಲಾಯಿತು. ನಡೆದಿರುವ ಘಟನೆಯ ಗಂಭೀರತೆಯನ್ನು ಅರಿಯದೆ, ಹೊಣೆಗೇಡಿಯಂತೆ ವರ್ತಿಸಿ, ದೂರು ತೆಗೆದುಕೊಳ್ಳಲು ಕೂಡ ನಿರಾಕರಿಸಿದ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಕ್ರೈಂ ಸ್ಟೋರಿಯ ತಂಡದವರಲ್ಲ , ಆ ಅಧಿಕಾರಿಯ ವರ್ತನೆಯಿಂದ ರೋಸಿಹೋಗಿದ್ದ ಆ ಊರಿನ ಜನ! ಸಾರ್ವಜನಿಕರ ಹಿತ ಕಾಯಲು ಕುಳಿತಿರುವ ರಕ್ಷಕರೇ ಭಕ್ಷಕರಾದರೆ, ಅಂತವರು ಅವಮಾನಕ್ಕಲ್ಲದೆ, ಇನ್ನು ಯಾವ ರೀತಿಯ ಸನ್ಮಾನಕ್ಕೆ ಅರ್ಹರಾಗುತ್ತಾರೆ?

ಆದರೆ ಇಂತಹ ಕೆಲವು ಪ್ರಕರಣಗಳನ್ನು ಹೊರತು ಪಡಿಸಿದರೆ, ಬಹಳ ಕಡೆ ನಿಷ್ಟಾವಂತ ಪೋಲೀಸ್‌ ಅಧಿಕಾರಿಗಳನ್ನು ಮುಕ್ತಕಂಠದಿಂದ ಪ್ರಶಂಸಿಸಲಾಗಿದೆ. ಸಿ.ಬಿ.ಐ ಅಧಿಕಾರಿಗಳಂತೆ ನಟಿಸಿ, ಒಂಟಿಯಾಗಿ ನಡೆದುಹೋಗುತ್ತಿದ್ದ ವೃದ್ಧರಿಂದ ಹಣ, ಒಡವೆ ಕಸಿಯುತ್ತಿದ್ದ ವಿದೇಶಿ ವಂಚಕರನ್ನು ಸೆರೆಹಿಡಿದ ಸಂದರ್ಭ, ಕೆಲಸದ ಆಸೆಯಿಂದ ಹೋಗಿ, ಅರಬ್‌ ದೇಶವೊಂದರಲ್ಲಿ ಯಾತನೆಪಡುತ್ತಿದ್ದ ಸುಜಾತಳನ್ನು ಲೋಕಾಯುಕ್ತ ವೆಂಕಟಾಚಲಯ್ಯನವರ ಮಾರ್ಗದರ್ಶನದಲ್ಲಿ ಮರಳಿ ಕರೆತಂದ ಘಟನೆ...... ಹೀಗೆ ಅನೇಕ ಸಂಚಿಕೆಗಳಲ್ಲಿ ನಿಷ್ಟಾವಂತ, ಪ್ರಾಮಾಣಿಕ ಪೋಲಿಸ್‌ ಅಧಿಕಾರಿಗಳನ್ನು ಮಾತಾಡಿಸಿ ಅವರ ಬಗೆಗೆ ಹೆಮ್ಮೆ, ಗೌರವ ವ್ಯಕ್ತಪಡಿಸಲಾಗಿದೆ. ಪೋಲೀಸ್‌ ಇಲಾಖೆಯ ತುಂಬಾ ಅದಕ್ಷತೆ, ಲಂಚಗುಳಿತನ, ಭ್ರಷ್ಟಾಚಾರವೇ ತಾಂಡವವಾಡುತ್ತಿದೆ ಎಂಬ ಭಾವನೆ ಸಾರ್ವತ್ರಿಕವಾಗುತ್ತಿರುವ ಈ ದಿನಗಳಲ್ಲಿ , ಸದ್ದಿಲ್ಲದೆ ತಮ್ಮ ಕರ್ತವ್ಯ ಮಾಡುತ್ತಿರುವ ಅಧಿಕಾರಿಗಳ ಬಗೆಗೆ ಜನರಲ್ಲಿ ಆದರ, ಅಭಿಮಾನ ಮೂಡಿಸಿದ್ದು ಇದೇ ಧಾರಾವಾಹಿಗಳೇ.ಅಷ್ಟು ಮಾತ್ರ ಏಕೆ? ಈಚೆಗೆ ನಡೆದ ಕೋಕಿಲಾ ಎಂಬ ಹಿಜಡಾ ಪ್ರಕರಣವನ್ನೇ ನೋಡಿ - ಕೋಕಿಲಾ ಎಂಬ ಹಿಜಡಾ ಮೇಲೆ ಪೋಲೀಸರು ದೌರ್ಜನ್ಯವೆಸಗಿದರು ಎಂಬ ಆರೋಪ ಮುಗಿಲು ಮುಟ್ಟುತ್ತಿರುವ ಸಂದರ್ಭದಲ್ಲಿ, ಇಲ್ಲಿ ಪೋಲೀಸರದೇನೂ ತಪ್ಪಿಲ್ಲ , ಹಿಜಡಾಗಳೇ ದಾರಿಯಲ್ಲಿ ಹೋಗಿಬರುವ ಜನರನ್ನು ಲೈಂಗಿಕವಾಗಿ ಪ್ರಚೋದಿಸಿ, ನಂತರ ಅವರಲ್ಲಿದ್ದ ಹಣ, ಒಡವೆ, ಮೊಬೈಲುಗಳನ್ನು ದೋಚುತ್ತಿದ್ದರು ಎಂಬ ನಿಜಸ್ಥಿತಿಯನ್ನು ಬೆಳಕಿಗೆ ತಂದು, ಸಾರ್ವಜನಿಕರ ಸಹಾನುಭೂತಿಯನ್ನು ಪೊಲೀಸರ ಪರವಾಗಿ ರೂಪಿಸಿದ್ದು ಇದೇ ಕ್ರೈಂಸ್ಟೋರಿಯೇ.

ಇತ್ತೀಚೆಗೆ ಪ್ರಸಾರವಾದ, ಕರ್ನಾಟಕದ ಹೆಮ್ಮೆಯ ಪುತ್ರ, ಭೂಗತಲೋಕದ ಪಾತಕಿಗಳ ಹುಟ್ಟಡಗಿಸುವಲ್ಲಿ ನಿಷ್ಣಾತರಾದ, ‘ಎನ್‌ಕೌಂಟರ್‌ಗಳ ಸರದಾರ’ ಎಂದೇ ಪ್ರಖ್ಯಾತರಾದ ದಯಾನಾಯಕ್‌ ಅವರ ವೃತ್ತಿಬದುಕಿನ ಬಗೆಗಿನ ರೋಚಕ ವರದಿ ಮತ್ತು ಭುಗಿಲೆದ್ದಿರುವ ಕುದುರೆಮುಖ ನಕ್ಸಲ್‌ ಚಳುವಳಿಯ ಒಳಹೊರಗನ್ನು ತೆರೆದಿಟ್ಟ ಮೂರು ಕಂತುಗಳು ಬಹುಶಃ ಕನ್ನಡ ಕಿರುತೆರೆಯ ಇತಿಹಾಸ ಕಂಡ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದೆನ್ನಬಹುದು. ನಕ್ಸಲೀಯ ನಾಯಕ ಪ್ರೇಮ್‌ ಮತ್ತು ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಸಂದರ್ಶನ ಕೂಡ ಜೊತೆಯಲ್ಲಿದ್ದುದು ಕಾರ್ಯಕ್ರಮದ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿಬಿಟ್ಟಿತು!

ಬೇರೆಲ್ಲಾ ಕಾರ್ಯಕ್ರಮಗಳಲ್ಲಿ ಕನ್ನಡದ ತಪ್ಪು ಉಚ್ಚಾರಣೆ ಸಾಮಾನ್ಯವಾಗಿದ್ದರೆ, ಇಲ್ಲಿನ ನಿರೂಪಣಾ ಸಾಹಿತ್ಯ ಸರಳ, ಸುಂದರ. ತಾವು ಹೇಳಬೇಕಾಗಿದ್ದುದನ್ನು ಸುತ್ತಿ ಬಳಸಿ ಹೇಳದೆ, ಕಡ್ಡಿ ಎರಡು ತುಂಡು ಮಾಡಿದಂತೆ ನೇರ ಮಾತುಗಳಲ್ಲಿ ಒಪ್ಪಿಸಿಬಿಡುವ ಬಾಲಕೃಷ್ಣ ಕಾಕತ್ಕರ್‌ ಅವರ ಗಟ್ಟಿದನಿಯ ಮಾತುಗಳು, ಮೊದಮೊದಲು ಕೇಳುವುದು ಕಷ್ಟ ಅನ್ನಿಸಿದರೂ, ಕೇಳುತ್ತಾ ಕೇಳುತ್ತಾ ಅದೇ ಇಷ್ಟವಾಗಿ ಹೋಗುವುದೊಂದು ಮಹಾ ಸೋಜಿಗ!

ಈ ಮೇಲಿನ ಎಲ್ಲಾ ಮಾತುಗಳನ್ನು ನಾನು ಉದಯ ಟೀವಿಯ ‘ಕ್ರೈಂ ಸ್ಟೋರಿ’’ಯನ್ನು ಮಾತ್ರ ನೋಡಿ ಬರೆದಿದ್ದೇನೆಯೇ ಹೊರತು, ಇದೇ ಸಮಯಕ್ಕೆ ಈಟೀವಿಯಲ್ಲಿ ಪ್ರಸಾರವಾಗುವ ಕ್ರೈಂಡೈರಿಯ ಒಂದೇ ಒಂದು ಕಂತನ್ನೂ ನಾನು ಈವರೆಗೂ ನೋಡಿಲ್ಲ. ಆದರೂ ರವಿಬೆಳಗೆರೆಯಂತಹ ಜವಾಬ್ದಾರಿಯುತ ಪತ್ರಕರ್ತನ ಸಾರಥ್ಯದಲ್ಲಿ ಹೊರಬರುತ್ತಿರುವ ಕ್ರೈಂಡೈರಿ ಕೂಡ, ಈ ಸಮಾಜಕ್ಕೆ ಏನಾದರೂ ಕೆಟ್ಟದ್ದನ್ನು ಮಾಡುತ್ತಿದೆ ಎಂದು ಯಾರಾದರೂ ಹೇಳಿದರೆ, ಅದನ್ನು ವಿಚಾರಿಸದೆ, ಅಷ್ಟು ಸುಲಭವಾಗಿ ನಂಬಿಬಿಡಲು ನಾನಂತೂ ತಯಾರಿಲ್ಲ !

ಬಡವರ, ನಿರ್ಬಲರ ಮೂಕ ನೋವಿಗೆ ದನಿಯಾಗಿರುವ, ನೊಂದ ಹೆಣ್ಣುಗಳ ಕಣ್ಣೀರೊರೆಸುತ್ತಿರುವ, ಅಸಮಾನತೆಯ ವಿರುದ್ಧ ಒಂಟಿ ಸೈನಿಕನಂತೆ ಸೆಣೆಸುತ್ತಿರುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿರುವ ಇಂತಹ ಕಾರ್ಯಕ್ರಮಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು!

‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು’ - ಈ ಅರಿವು ಜನರಲ್ಲಿ ದಟ್ಟವಾಗಿ ಹರಡುವ ತನಕ, ಅವರ ಶೋಷಣೆ ನಡೆಯುವುದು ನಿಲ್ಲುವುದಿಲ್ಲ. ಆ ದಿನ ಬರುವವರೆಗೂ, ನಾಗರೀಕ ಸಮಾಜವನ್ನು ಕಾವಲು ಕಾಯಲು ಇಂತಹ ಕಾರ್ಯಕ್ರಮಗಳು ಇರಲೇಬೇಕು- ಭ್ರಷ್ಟ ನಾಗರಗಳನ್ನು ಸದೆಬಡಿಯಲು ಹೊಂಚು ಹಾಕಿ ಕುಳಿತ ನಿಷ್ಟ ಗರುಡನಂತೆ!!

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X