ಬ್ರಾಡ್ ಬ್ಯಾಂಡ್ ಬಳಕೆದಾರರ ಜ್ಞಾನಕೋಶಕ್ಕೆ ಸುಸ್ವಾಗತ!
ಬ್ರಾಡ್ ಬ್ಯಾಂಡ್ ಸೇವೆಗಳನ್ನು ಒದಗಿಸುತ್ತಿರುವ ಏರ್ಟೆಲ್, ಬಿಎಸ್ಎನ್ಎಲ್, ರಿಲಯನ್ಸ್, ಎಂಟಿಎನ್ಎಲ್, ಸಿಫಿ, ಹಾಥ್ವೇ ಮುಂತಾದ ಕಂಪನಿಗಳ ನೀಡುವ ಸೇವೆಗಳನ್ನು ಇಲ್ಲಿ ಪರಾಮರ್ಶಿಸಲಾಗುತ್ತದೆ. ಸೇವಾಕರ್ತ ನಿರ್ದಿಷ್ಟ ಚರ್ಚೆ ಸಾಧ್ಯವಾಗಿಸುವ ಸಲುವಾಗಿ ಈ ಎಲ್ಲ ಕಂಪನಿಗಳಿಗೂ ಬೇರೆಬೇರೆಯಾದ ವಿಭಾಗಗಳು ( ಕೊಂಡಿಗಳು ) ಈ ವೆಬ್ತಾಣದಲ್ಲಿ ಲಭ್ಯವಿದೆ. ಅಂದಹಾಗೆ ನಿಮ್ಮ ಇಂಟರ್ನೆಟ್ಗೆ ಬ್ರಾಡ್ ಬ್ಯಾಂಡ್ ಪ್ರೊವೈಡರ್ ಯಾರು ? ಚೆಕ್ ಮಾಡಿ.
- ಎಸ್ಕೆ. ಶಾಮಸುಂದರ
ಭಾರತ ಸರಕಾರವು ಇಸವಿ 2007ನ್ನು ಬ್ರಾಡ್ ಬ್ಯಾಂಡ್ ವರ್ಷ ಎಂದು ಆಚರಿಸುತ್ತಿದೆ. ಸಂಪರ್ಕ ಕ್ಷೇತ್ರದಲ್ಲಿ ವಿಸ್ತಾರ ಮತ್ತು ಉನ್ನತಿಯನ್ನು ಬಯಸುತ್ತಿರುವ ನಮ್ಮ ದೇಶ ಬಾಂಧವರಿಗೆ ಅಂತರ್ಜಾಲ ಬಳಕೆ ಸುಲಭವಾಗಿ ಕೈಗೆಟುಕಬೇಕು ಮತ್ತು ಅದರ ಕುರಿತು ಅರಿವು ಹೆಚ್ಚಾಗಬೇಕು ಎನ್ನುವುದೇ ವರ್ಷಾಚರಣೆಯ ಉದ್ದೇಶವಾಗಿರುತ್ತದೆ.
ಭಾರತದಲ್ಲಿ ಇಂಟರನೆಟ್ ಬಳಕೆದಾರರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. 2007ರ ಅಂತ್ಯಕ್ಕೆ 75 ದಶಲಕ್ಷ ಇಂಟರ್ ಬಳಕೆದಾರರು ಅಂತರ್ ಜಾಲದ ಪ್ರಯೋಜನ ಪಡೆಯುತ್ತಾರೆಂದು ಸಂಪರ್ಕ ತಜ್ಞರು ಅಂದಾಜು ಮಾಡಿದ್ದಾರೆ. ಹೀಗಾಗಿಯೇ, ಕಂಪ್ಯೂಟರ್ ಮಾರಾಟಮಾಡುವ ನಾನಾ ಕಂಪನಿಯ ಮಳಿಗೆಗಳು ದೇಶಾದ್ಯಂತ ತಲೆ ಎತ್ತಿವೆ. ಟಿವಿ, ಫ್ರಿಜ್, ವಾಷಿಂಗ್ ವಿಷಿನ್ ಖರೀದಿಸುವಷ್ಟೆ ಸಹಜವಾಗಿ ಕಂಪ್ಯೂಟರ್ ಬಳಸುವುದು ಸಾಧ್ಯವಾಗಿದೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಮನೆಯಲ್ಲಿ ಕಂಪ್ಯೂಟರ್ ಸಂಪರ್ಕ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಮನೆಗೆ ಅಥವಾ ಒಂದು ಮಾಧ್ಯಮಿಕ ಶಾಲೆಗೆ ಅಥವಾ ಒಂದು ಸಂಸ್ಥೆಗೆ (ಉದಾ : ಸಾಹಿತ್ಯ ಪರಿಷತ್, ಬೆಂಗಳೂರು ) ಕೇವಲ ಒಂದು ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ತಂದರೆ ಕೆಲಸ ಮುಗಿಯುವುದಿಲ್ಲ. ಅದಕ್ಕೆ ನೆಟ್ ಸಂಪರ್ಕವೂ ಬೇಕಲ್ಲವೆ.
ಅಂತೆಯೇ, ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಕಂಪನಿಗಳೂ ಹತ್ತಾರು ಹುಟ್ಟಿಕೊಂಡಿವೆ. ಆದರೆ ಈ ಎಲ್ಲ ಕಂಪನಿಗಳು ಈಗ ಪೂರೈಸುತ್ತಿರುವ ಸೇವಾಸೌಲಭ್ಯಗಳು ಚೆನ್ನಾಗಿದೆಯೇ? ಚೆನ್ನಾಗಿಲ್ಲವೆ? ಸೇವೆಗಳಲ್ಲಿನ ಒಳ್ಳೆಯ ಅಂಶ ಯಾವುದು? ದೋಷಗಳೇನು? ಯಾವುದು ತುಟ್ಟಿ? ಯಾವುದು ಅಗ್ಗ ? ಬ್ರಾಡ್ ಬ್ಯಾಂಡ್ ಸೇವೆಗಳಲ್ಲಿನ ವ್ಯತ್ಯಾಸ ಎಂಥದು ಎಂದು ತಾಳೆಹಾಕಿ ನೋಡುವುದು ತಾಂತ್ರಿಕ ವಿಷಯಗಳ ಬಗೆಗೆ ಪರಿಣತಿಯಿಲ್ಲದ ಬಳಕೆದಾರನಿಗೆ ಸವಾಲಾಗಿ ಪರಿಣಮಿಸುತ್ತದೆ. ಇವುಗಳನ್ನೆಲ್ಲ ಕಲಿತುಕೊಳ್ಳಲು ಸ್ಕೂಲಿಗೆ ಹೋಗುವುದಕ್ಕಾಗುವುದಿಲ್ಲ.
ಈ ಸವಾಲುಗಳನ್ನು ಮನಗಂಡವರು ಬ್ರಾಡ್ ಬ್ಯಾಂಡಿಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಸಂದೇಹ ನಿವಾರಣೆಗಾಗಿ ಒಂದು ವೇದಿಕೆ ನಿರ್ಮಿಸಿದ್ದಾರೆ. ಅದರ ಹೆಸರು ಇಂಡಿಯಾ ಬ್ರಾಡ್ ಬ್ಯಾಂಡ್ ಫೋರಂ. ಈ ಆನ್ ಲೈನ್ ವೇದಿಕೆಯನ್ನು ಬಳಸುವ ಮೂಲಕ ಗ್ರಾಹಕರು ಬ್ರಾಡ್ ಬ್ಯಾಂಡ್ ಬಗೆಗೆ ಹೆಚ್ಚು ಅರಿಯಬಹುದು ಹಾಗೂ ಸೇವೆಗಳಿಗೆ ಸಂಬಂಧಿಸಿದ ತಮ್ಮ ಹಲವು ಹತ್ತು ಅನುಮಾನಗಳನ್ನು ಅಲ್ಲಲ್ಲೆ ಪರಿಹರಿಸಿಕೊಳ್ಳಬಹುದು.
ನೋಡಿ : http://www.broadbandforum.co.in/ ಈ ಕೊಂಡಿಯನ್ನು ಸೇವ್ ಮಾಡಿಟ್ಟುಕೊಳ್ಳಿ.
ಬ್ರಾಡ್ ಬ್ಯಾಂಡ್ ಸೇವೆಗಳನ್ನು ಒದಗಿಸುತ್ತಿರುವ ಏರ್ಟೆಲ್, ಬಿಎಸ್ಎನ್ಎಲ್, ರಿಲಯನ್ಸ್, ಎಂಟಿಎನ್ಎಲ್, ಸಿಫಿ, ಹಾಥ್ವೇ ಮುಂತಾದ ಕಂಪನಿಗಳ ನೀಡುವ ಸೇವೆಗಳನ್ನು ಇಲ್ಲಿ ಪರಾಮರ್ಶಿಸಲಾಗುತ್ತದೆ. ಸೇವಾಕರ್ತ ನಿರ್ದಿಷ್ಟ ಚರ್ಚೆ ಸಾಧ್ಯವಾಗಿಸುವ ಸಲುವಾಗಿ ಈ ಎಲ್ಲ ಕಂಪನಿಗಳಿಗೂ ಬೇರೆಬೇರೆಯಾದ ವಿಭಾಗಗಳು ( ಕೊಂಡಿಗಳು ) ಈ ವೆಬ್ತಾಣದಲ್ಲಿ ಲಭ್ಯವಿದೆ. ಅಂದಹಾಗೆ ನಿಮ್ಮ ಇಂಟರ್ನೆಟ್ಗೆ ಬ್ರಾಡ್ ಬ್ಯಾಂಡ್ ಪ್ರೊವೈಡರ್ ಯಾರು ? ಚೆಕ್ ಮಾಡಿ.
ದಟ್ಸ್ ಕನ್ನಡದಲ್ಲಿ ನಾವು ನೀಡುತ್ತಿರುವ ಕಾಮೆಂಟ್ಸ್ ವಿಭಾಗ ಇದ್ದಹಾಗೆ ಎಂತಿಟ್ಟುಕೊಳ್ಳಿ. ಈ ವೆಬ್ ತಾಣದಲ್ಲಿ ಗ್ರಾಹಕರು ತಮ್ಮ ಅನಿಸಿಕೆ, ಸಮಸ್ಯೆಗಳನ್ನು ಬರೆದುಕೊಳ್ಳುತ್ತಾರೆ. ತಾವು ಬಳಸುತ್ತಿರುವ ಸೇವೆಗಳ ಬೆಲೆ, ಗುಣಮಟ್ಟ, ತಾಂತ್ರಿಕ ವಿಷಯಗಳು ಮತ್ತು ಇತಿಮಿತಿಗಳನ್ನು ಅರಿಯುವ ವಿಚಾರ ಮಂಟಪವಾಗುತ್ತದೆ ಈ ವೇದಿಕೆ. ಇತರ ಬಳಕೆದಾರರು ತಮ್ಮತಮ್ಮೊಳಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುವುದರ ಮೂಲಕ ಬ್ರಾಡ್ ಬ್ಯಾಂಡ್ ಕುರಿತ ತಿಳಿವಳಿಕೆ ಒಬ್ಬರಿಂದೊಬ್ಬರಿಗೆ ಹರಡುತ್ತದೆ.
ಬ್ರಾಡ್ ಬ್ಯಾಂಡ್ ಫೋರಂ ಬರಲಿರುವ ದಿನಗಳಲ್ಲಿ ತನ್ನ ವೆಬ್ಸೈಟಿನಲ್ಲಿ ಇನ್ನೂ ಹೆಚ್ಚು ಹೆಚ್ಚು ಸೇವಾಕೇಂದ್ರಗಳನ್ನು ತೆರೆಯಲು ಉತ್ಸುಕವಾಗಿದೆ. ಉದಾಹರಣೆಗೆ ಟಾಟಾ ಸ್ಕೈ, ಡಿಶ್ ಟಿವಿ, ಡಿಟಿಎಚ್ ಸರ್ವೀಸ್,ವೈಮ್ಯಾಕ್ಸ್, ಮೊಬೈಲ್ ಫೋನುಗಳನ್ನು ಕುರಿತು ಮಾಹಿತಿ, ಚರ್ಚೆ, ಚಿಂತನ ಮಂಥನ ನಡೆಸುವ ವಿಭಾಗಗಳನ್ನು ಆರಂಭಿಸಲಿದೆ. ರಿಪೇರಿ ಅಂಗಡಿಗೆ ಹೋಗದೆ ನಮ್ಮ ಎಷ್ಟೋ ಅನುಮಾನಗಳು ಇಂಟರ್ನೆಟ್ ಬಳಸುವುದರಿಂದಲೇ ಪರಿಹಾರವಾಗುವುದಾದರೆ ಅದಕ್ಕೆ ಯಾವತ್ತೂ ಸ್ವಾಗತವಿದೆ.
ಟಾಟಾ ಸ್ಕೈ ಚೆನ್ನಾಗಿದೆ ಎಂದು ಯಾರೋ ಹೇಳುತ್ತಾರೆ. ಅಥವಾ ಪಕ್ಕದ ಮನೆಯವರು ಹಾಕಿಸಿದ್ದಾರೆ ಅಂತ ನಾವೂ ಹಾಕಿಸುತ್ತೇವೆ. ಅದರಲ್ಲಿರುವ ಅನೇಕಾನೇಕ ಸವಲತ್ತುಗಳನ್ನು ಬಳಸುವುದಕ್ಕೆ ಅನೇಕರಿಗೆ ಗೊತ್ತಿರುವುದಿಲ್ಲ. ತೋರಿಸಿಕೊಡುವ ಅಂಗಡಿ ಹುಡುಗ ಫೋನು ಮಾಡಿದ ತಕ್ಷಣ ಓಡಿಬರುವುದಿಲ್ಲ. ಚಡಪಡಿಕೆಯಿಂದ ಹೊರಬರಲು ದಾರಿ ಯಾವುದು ? ಕಂಪ್ಯೂಟರ್,ಇಂಟರ್ರ್ನೆಟ್ಟು , ಬೆಲೆಬಾಳುವ ಮೊಬೈಲು ಫೋನುಗಳನ್ನು ಸಮರ್ಥವಾಗಿ ಬಳಸುವ ಸವಾಲುಗಳೂ ಕ್ಲಿಷ್ಟಕರವಾಗಿರುತ್ತವೆ. ಕಂಪ್ಯೂಟರು ಎಂಜಿನಿಯರುಗಳಾದರೆ ತಾವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ನಾವೇನು ಮಾಡೋಣ?
ಭಾರತದಲ್ಲಿನ,ಪ್ರಗತಿಶೀಲ ರಾಷ್ಟ್ರಗಳಲ್ಲಿನ ಮನೆ, ಸಣ್ಣಪುಟ್ಟ ಕಚೇರಿಗಳಿಗೂ ಈಗ ಕಂಪ್ಟೂಟರ್ ಕನೆಕ್ಷನ್ ಪ್ರವೇಶಿಸಿರುವುದರಿಂದ ಎಲ್ಲರಿಗೂ ತಾಂತ್ರಿಕ ಸಂಗತಿಗಳ ಅರಿವು ಇರುವುದಿಲ್ಲ. ಮಕ್ಕಳು, ಗೃಹಿಣಿಯರು,ಉಪಾಧ್ಯಾಯಿನಿಯರು, ನಿವೃತ್ತಿ ಹೊಂದಿದ ನಂತರ ಅಂತರ್ಜಾಲವನ್ನು ಬಳಸಲು ಉತ್ಸಾಹ ತೋರಿಸುವವರು, ವಿದ್ಯಾರ್ಥಿಗಳು ಎಲ್ಲರಿಗೂ http://www.broadbandforum.co.in/ ಉಪಯೋಗವಾಗುತ್ತದೆ. ಸಿನಿಮಾ, ಹಾಡು, ಕ್ರಿಕೆಟ್ಟು, ಆರ್ಕುಟ್ಟು, ಚಾಟ್ ಮಾಡುವುದಕ್ಕೆ ಸ್ವಲ್ಪ ವಿರಾಮ ನೀಡಿ ಈ ಬಗೆಯ ವೆಬ್ಸೈಟುಗಳಿಗೆ ಸ್ವಲ್ಪ ಸಮಯ ವಿನಿಯೋಗಿಸಿದರೆ ಅನುಕೂಲವಾಗುವುದು ನಮಗೇನೆ.












Click it and Unblock the Notifications