• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಫ್ ಕಾಪ್ ಬಿ.ಕೆ.ಶಿವರಾಂ ಏಕೆ ರಿಟೈರಾದರು?

By Staff
|

B.K. Shivaramಮೂವತ್ತು ವರ್ಷಗಳ ಸರ್ವೀಸಿನಲ್ಲಿ ಅತ್ಯಂತ ಶಿಸ್ತಿನ, ಖಡಕ್ ಪೊಲೀಸ್ ಅಧಿಕಾರಿ ಎನಿಸಿಕೊಂಡಿದ್ದ ಬಿ.ಕೆ.ಶಿವರಾಂ 55ನೇ ವಯಸ್ಸಿಗೇ ಲಾಠಿಯನ್ನು ಕೆಳಗಿಟ್ಟಿದ್ದಾರೆ. ಜನಾನುರಾಗಿಯಾಗಿರುವ ಅವರು ಜನರೋದ್ಧಾರಕ್ಕಾಗಿ ಮೀಸಲಿಡುವುದಾಗಿ ಹೇಳಿದ್ದಾರೆ. ರಾಜಕೀಯ ಸೇರುವ ಹವಣಿಕೆಯಲ್ಲಿರುವ ಶಿವರಾಂ ಇನ್ನಿತರ ಪೊಲೀಸ್ ಅಧಿಕಾರಿಗಳಾದ ಅಬ್ದುಲ್ ಅಜೀಂ, ರೇವಣಸಿದ್ದಯ್ಯ, ಸಾಂಗ್ಲಿಯಾನಾ, ಕೋದಂಡರಾಮಯ್ಯ, ಬಿಸಿ ಪಾಟೀಲ್ ಹಾದಿ ತುಳಿದಿದ್ದಾರೆ.

  • ರವಿ ಬೆಳಗೆರೆ

ಶಿವರಾಂ ಕೆಲವು ವಿಷಯಗಳಲ್ಲಿ ತುಂಬ ಶಿಸ್ತಿನ ಮನುಷ್ಯ. ಅವರು ತಮ್ಮ ಪೇದೆಗಳನ್ನು ಎಂದಿಗೂ ಏಕವಚನದಲ್ಲಿ ಮಾತನಾಡಿಸಿದವರಲ್ಲ. ಪರೇಡಿಗೆ ಐದು ನಿಮಿಷ ತಡವಾಗಿ ಹೋದವರಲ್ಲ. ಬಂದೋಬಸ್ತ್ ಡ್ಯೂಟಿ ತಪ್ಪಿಸಿಕೊಂಡವರಲ್ಲ. ಅವರ ಕೈಕೆಳಗೆ ದುಡಿದ ಇನ್ಸ್‌ಪೆಕ್ಟುರುಗಳಾದ ನಂಜುಂಡೇಗೌಡ, ರೇವಣ್ಣ, ಅಶೋಕನ್ ಮುಂತಾದವರು ಧೈರ್ಯದಿಂದ ಮುನ್ನುಗ್ಗಿದ್ದಾರೆಂದರೆ, "ನಮ್ಮ ಶಿವರಾಂ ಸಾಹೇಬರಿದ್ದಾರೆ, ನೋಡ್ಕತಾರೆ ಬಿಡು" ಎಂಬ ನಂಬಿಕೆಯಿಂದ. ಹಿರಿಯ ಅಧಿಕಾರಿಗಳಾದ ಮರಿಸ್ವಾಮಿ, ಜಯಪ್ರಕಾಶ್, ರಾಮಕೃಷ್ಣ, ಕಸ್ತೂರಿ ರಂಗನ್, ಟಿ.ಶ್ರೀನಿವಾಸುಲು, ಕೋದಂಡರಾಮಯ್ಯ, ಗೋಪಾಲ ಹೊಸೂರ್, ರವಿಕಾಂತೇಗೌಡ ಮುಂತಾದವರು ನೆಮ್ಮದಿಯಾಗಿ ಕೆಲಸ ಒಪ್ಪಿಸಿದರೆಂದರೆ, "ನಮ್ಮ ಶಿವರಾಂ ಇದ್ದಾನೆ ಬಿಡು" ಎಂಬ ನಂಬಿಕೆಯಿಂದ. ಆಗಷ್ಟೇ ಕ್ರೈಂ ರಿಪೋರ್ಟರುಗಳಾದ ನಾವು ಬಿ.ಕೆ.ಶಿವರಾಂ, ಬಿ.ಬಿ.ಅಶೋಕ್ ಕುಮಾರ್, ಕೆ.ವಿ.ಕೆ.ರೆಡ್ಡಿ, ನಾಗರಾಜ್, ಸಂಗ್ರಾಮಸಿಂಗ್, ಭೀಮಯ್ಯ, ರಮೇಶ್ ಚಂದ್ರ ಮುಂತಾದವರನ್ನು ನೋಡಿ ಮಾತಾಡಿಕೊಳ್ಳುತ್ತಿದ್ದುದು, "ಇವರು ಪಂಟರುಗಳು ಕಣೋ..." ಅಂತ.

ಬೆಂಗಳೂರಿನಂಥ ಊರು ಶಿವರಾಂ ಅವರಿಗೆ ಕೆಲವು ಕಾರಣಗಳಿಗೆ ಋಣಿಯಾಗಿರಬೇಕಾಗುತ್ತದೆ. 1977ರಿಂದ 2007ರ ತನಕ, ಮೂವತ್ತು ವರ್ಷ ಬೆಂಗಳೂರಿನ ಭೂಗತ ಲೋಕದ ವಿರುದ್ಧ ರಸಾಭಸ ಬಡಿದಾಡಿದ್ದಾರೆ ಬಿ.ಕೆ.ಶಿವರಾಂ. ಅವರು ಕೊತ್ವಾಲ ರಾಮಚಂದ್ರನನ್ನು ಮೊಬೈಕಿನಲ್ಲಿ ಛೇಸ್ ಮಾಡಿಕೊಂಡು ಹೋದದ್ದೇ ಒಂದು ರೋಚಕ ಪ್ರಸಂಗ. ರೌಡಿ ಜಯರಾಜ್ ಹೆದರುತ್ತಿದ್ದ ಕೆಲವೇ ಅಧಿಕಾರಿಗಳಲ್ಲಿ ಶಿವರಾಂ ಒಬ್ಬರು. ಕೋಳಿ ಫಯಾಜ್ ಈ ಅಧಿಕಾರಿಯ ಎದುರು ಕೈಎತ್ತಿ ಶರಣಾಗತನಾಗಿದ್ದ. ಚಕ್ರೆ ಅಕ್ಷರಶಃ ಮೂತ್ರ ಮಾಡಿಕೊಂಡಿದ್ದ. ತನ್ವೀರ್ ಕೈಲಿ ಚಿಕ್ಕಪೇಟೆ ಠಾಣೆಯ ಅಷ್ಟೂ ಕಕ್ಕಸ್ಸುಗಳನ್ನು ಬರಿಗೈಲಿ ತಿಕ್ಕಿ ತೊಳಿಸಿದ್ದರು ಶಿವರಾಂ. ಅವನ ಕಾಲು ಶಾಶ್ವತವಾಗಿ ಊನವಾಗುವಂತೆ ಮುರಿದುಹಾಕಿದ್ದರು. ಶಿವರಾಂ ಹೊಡೆತಕ್ಕೆ ನುಗ್ಗಾದವನು ಕಾಲಾಪತ್ಥರ್.

ಯಾವಾಗ್ಯಾವಾಗ ಬೆಂಗಳೂರಿನಲ್ಲಿ 'ನಾನು' ಅಂತ ಎದೆಸೆಟೆಸಿ ರೌಡಿಯೊಬ್ಬನು ಎದ್ದು ನಿಂತಿದ್ದಾನೋ, ಅವಾಗಾವಾಗಲೆಲ್ಲ ಅವನೆದೆಗೆ ಎಡಗಾಲಿಟ್ಟು 'ಎಲ್ಲರಿಗಿಂತ ದೊಡ್ಡದು ಕಾನೂನು' ಅಂತ ಖಚಿತಪಡಿಸಿದ ಶಿವರಾಂ, ಎಲ್ಲ ಕಾಲಕ್ಕೂ ನಾಗರಿಕರಿಗೆ ಮಿತ್ರರೇ.

ಒಂದೇ ಚಿಕ್ಕ ತೂತು! : ಶ್ರೀಪೆರಂಬುದೂರಿನಲ್ಲಿ ರಾಜೀವಗಾಂಧಿಯವರನ್ನು ಕೊಂದ ಶುಭಾ ಮತ್ತು ಶಿವರಾಸನ್ ತಂಡ ಬೆಂಗಳೂರಿನ ಕೋಣನಕುಂಟೆ ಮನೆಗೆ ಬಂದು ಅವಿತು ಕುಳಿತಾಗ ಅಂದಿನ ಡಿಸಿಪಿ ಕೆಂಪಯ್ಯ ಮೊದಲು ಅಲರ್ಟ್ ಮಾಡಿದುದೇ ಶಿವರಾಂ, ಬಾಲಾಜಿ ಸಿಂಗ್, ರಮೇಶ್ ಚಂದ್ರ, ರಾಮಲಿಂಗಪ್ಪ ಮತ್ತು ಎಂ.ಸಿ.ಶ್ರೀನಿವಾಸ್‌ರನ್ನ. ಕೆಲಸಕ್ಕೆ ಅಂತ ನಿಂತರೆ ಶಿವರಾಂ ಕೇವಲ ಗ‌ಡಿಯಾರವನ್ನಲ್ಲ, ಕ್ಯಾಲೆಂಡರನ್ನೇ ಮರೆಯುತ್ತಾರೆ. ಅವರು ಮಾಡಿದ ಮೊಟ್ಟ ಮೊದಲ ಎನ್‌ಕೌಂಟರ್ ಮಡಿಕೇರಿ ರಘು ಎಂಬ ಗಂಧಕಳ್ಳನದು. ದೊಡ್ಡ ಗ್ಯಾಂಗು ಕಟ್ಟಿಕೊಂಡು ನೇರಾನೇರ ಎದುರಿಗೆ ಬಂದ ಮಡಿಕೇರಿ ರಘು ಹಣೆಗೆ ಶಿವರಾಂ ಅದ್ಯಾವ ಪರಿ ಗುರಿಯಿಟ್ಟು ಫೈರ್ ಮಾಡಿದ್ದರೆಂದರೆ, ಹಣೆಯಲ್ಲಿ ಒಂದೇ ಒಂದು ಚಿಕ್ಕ ತೂತು. ತಲೆಯ ಹಿಂಭಾಗ ಮಾತ್ರ ಬಿಚ್ಚಿಕೊಂಡ ಕಾಲಿ ಫ್ಲವರ್!

ಇತ್ತೀಚೆಗೆ ಶಿವರಾಂ ಕೊಂದು ಹಾಕಿದ್ದು ಪಾತಕಿ ನಸ್ರುವನ್ನ. ಲೈವ್ ಬ್ಯಾಂಡ್ ಹುಡುಗಿಯರನ್ನು ಹೊತ್ತೊಯ್ದು ಅತ್ಯಾಚಾರ ಮಾಡುತ್ತಿದ್ದ ನಸ್ರುವನ್ನು ಗುಂಡಿಕ್ಕಿ ಕೊಂದು ಬಂದ ಶಿವರಾಂ ಅವತ್ತು ಅಂಗಿಯ ತುಂಬ ನೆತ್ತರು ಮಾಡಿಕೊಂಡು ನಿಂತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಕೆಲ ದಿನಗಳ ನಂತರ ಹೊಸಕೋಟೆಯ ನಜೀರ್‌ನನ್ನು ಕಿಡ್ನಾಪ್ ಮಾಡಿ ಲಕ್ಷಾಂತರ ರುಪಾಯಿ ಬೇಡಿಕೆಯಿಟ್ಟಿದ್ದ ಗೂರ್ ಮತ್ತು ಗಫೂರ್ ಇಬ್ಬರನ್ನೂ ಶಿವರಾಂ ಕೊಂದು ಹಾಕಿದರು.

ಕಠೋರತೆಯ ಹಿಂದೆಯೂ ಮಾನವೀಯತೆ : ಶಿವರಾಂ ನಿಜಕ್ಕೂ ನನಗೆ ಅತ್ಯಂತ ಹಟಮಾರಿ ಮತ್ತು ಕರ್ತವ್ಯನಿಷ್ಠ ಅಧಿಕಾರಿಯಾಗಿ ಕಂಡುಬಂದದ್ದು ಭಾರತಿ ಅರಸು ಪ್ರಕರಣದಲ್ಲಿ. ಖುದ್ದು ದೇವರಾಜ ಅರಸು ಮಗಳು ಆಕೆ. ಸಾಲ ವಾಪಸು ಕೊಡಲಾಗದ ಕಾರಣಕ್ಕೆ ಚಿತ್ರಲೇಖಾ ಎಂಬಾಕೆಯನ್ನು ಎದುರಿಗೆ ನಿಂತು ಕೊಲ್ಲಿಸಿಬಿಟ್ಟಳು. ಶವವನ್ನು ಒಯ್ದು ಭಗವಂತನ ಕಣ್ಣಿಗೂ ಕಾಣದಂಥ ಶಿರಾಡಿ ಘಾಟ್ನಲ್ಲಿ ಎಸೆಯಿಸಿಬಿಟ್ಟಳು. ಈ ಹತ್ಯೆ ನಡೆದದ್ದು ವೈಟ್ ಕಾಲರ್ಡ್ ಪಾತಕಿ ಮತ್ತು ಸಮಸ್ತ ರಾಜಕಾರಣಿಗಳ ಸಖ್ಯವುಳ್ಳ ಹರಿಖೋಡೆಯ ಕಚೇರಿಯಲ್ಲಿ! ಅದು ದೇವರಾಜ ಅರಸು ಪಕ್ಷದ ಕಚೇರಿಯೂ ಹೌದು. ಅಸಲಿಗೆ ಶವಸಿಗುವುದೇ ಅನುಮಾನ ಎಂಬ ಪರಿಸ್ಥಿತಿಯಿತ್ತು. ಆದರೆ ಶಿವರಾಂ ಭಾರತಿ ಅರಸುವಿನ ಬೆನ್ನು ಬಿದ್ದುಬಿಟ್ಟರು. ಎಂಥ ರಾಜಕೀಯ ಒತ್ತಡಗಳ ನಡುವೆಯೂ ಎಷ್ಟು ಬಿಗಿಯಾಗಿ ಕೇಸು ಮಾಡಿ ಭಾರತಿ ಅರಸುವನ್ನು ಶಿವರಾಂ ಜೈಲಿಗೆ ಕಳಿಸಿದರೆಂದರೆ, ಪಾಪಿ ಹೆಂಗಸಿಗೆ ಇವತ್ತಿಗೂ ಜೈಲಿನಿಂದ ಹೊರಬರಲಾಗಿಲ್ಲ.

ಇದೇ ಶಿವರಾಂ, ಹೊಟೇಲೊಂದರಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಗುಜರಾತಿ ವೈದ್ಯ ದಂಪತಿಗಳು ಹಾಗೂ ಮಗುವನ್ನು ರಕ್ಷಿಸುವುದಕ್ಕೋಸ್ಕರ ಆಕಾಶ-ಭೂಮಿ ಏಕವಾಗುವಂತೆ ಪರದಾಡಿದ್ದು ನನಗೆ ನೆನಪಿದೆ. ಗುಜರಾತದಿಂದ ಮುಂಬೈಗೆ ಹೋಗಿ ಪ್ರಾಕ್ಟೀಸ್ ಮಾಡುತ್ತಿದ್ದ ವೈದ್ಯ ದಂಪತಿಗಳಿಗೆ ಅಲ್ಲಿ ಶಿವಸೇನೆಯವರ ಹಫ್ತಾವಸೂಲಿಯ ಕಾಟ. ಅದರಿಂದ ಬೇಸತ್ತು ಅವರು ಬೆಂಗಳೂರಿಗೆ ಬಂದು ರೂಮು ಪಡೆದು drips ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಬಾಗಿಲು ಮುರಿದು ಒಳನುಗ್ಗಿದ ಶಿವರಾಂ, ತಾಯಿ ಮಗು ಬದುಕಿರುವುದು ಗೊತ್ತಾಗಿ ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದರು. ಟ್ರೀಟ್‌ಮೆಂಟ್ ಕೊಡುವುದಕ್ಕೆ ಮುಂಚೆ ಹಣ ಕೇಳಿದ ವೈದ್ಯನನ್ನು ಶಿವರಾಂ ಅಕ್ಷರಶಃ ಒದೆಯಲು ಹೋಗಿದ್ದರು! ಬಂದೂಕು ಹಿರಿದು ಅನಾಮತ್ತು ಏಳು ಎನ್‌ಕೌಂಟರ್ ಮಾಡಿದ್ದು ಇವರೇನಾ ಅಂತ ಆಶ್ಚರ್ಯವಾಗಿತ್ತು.

ಸೆಂಕೆಂಡ್ ಸ್ಕಿನ್ : ಮೂವತ್ತು ವರ್ಷಗಳ ಹಿಂದೆ ನೂರಾರು ಜನ ಎಸ್ಸೈಗಳ ಮಧ್ಯೆ ತಾವೂ ಒಬ್ಬ ಎಸ್ಸೈ ಆಗಿ ಪೊಲೀಸ್ ಇಲಾಖೆಗೆ ಸೇರಿಕೊಂಡ ಶಿವರಾಂ, ಎಸಿಪಿ ಆಗಿ ರಿಟೈರಾಗಿದ್ದಾರೆ. ಮಧ್ಯೆ ಒಂದಷ್ಟು ದಿನ non executive ಹುದ್ದೆಯಲ್ಲಿದ್ದುದು ಬಿಟ್ಟರೆ ಖಾಕಿ ಬಟ್ಟೆ ಅವರ ಪಾಲಿನ ಸೆಕೆಂಡ್ ಸ್ಕಿನ್‌ನಂತೆಯ್ ಇತ್ತು. ಎಂಥ ಗೆಳೆಯರೂ ಮೆಚ್ಚುವಂಥ ಹೆಸರು ಮಾಡಿದರು. ಆ ಕಾರಣಕ್ಕೇ ಇಲಾಖೆಯಲ್ಲಿ ಅವರಿಗೆ ಸ್ಪರ್ಧಿಗಳೂ, ಆಗದವರೂ ಹುಟ್ಟಿಕೊಂಡರು. ಅವರಿಗೆ ಹೆದರಿ ರಿಟೈರಾಗುತ್ತಿದ್ದೀರಾ? ಇನ್ನೂ ಮೂರು ವರ್ಷ ಸರ್ವೀಸಿದೆಯಲ್ಲವೆ ಅಂತ ಕೇಳಿದರೆ, ಸುಮ್ಮನೇ ನಕ್ಕರು.

ಭೂಮಿ ತೂಕದ ಹೆಣ್ಣು : ಶಿವರಾಂ ಶಾಶ್ವತವಾಗಿ ಋಣಿಯಾಗಿರಬೇಕಿರುವುದು ಅವರ ತಾಯಿ ಗುಣವತಿ ಅವರಿಗೆ. ತಂದೆ ಕೆಂಪಯ್ಯ ಕೋದಂಡರಾಮಪುರದ ಚಿಕ್ಕ ವ್ಯಾಪಾರಿ. ತಾಯಿ ಗುಣವತಿ ಹಸು ಕಟ್ಟಿ, ಹಾಲು ಮಾರಿ ಅಷ್ಟೂ ಮಕ್ಕಳನ್ನು ಓದಿಸಿದ ಭೂಮಿ ತೂಕದ ಹೆಣ್ಣುಮಗಳು. ರೇಣುಕಾಚಾರ್ಯ ಕಾಲೇಜಿನಲ್ಲಿ ಬಿಎಸ್ಸಿ ಓದಿದ ಶಿವರಾಂ ಪೊಲೀಸ್ ಇಲಾಖೆ ಸೇರಿದರೆ, ಅವರ ತಮ್ಮ ಬಿಕೆ ಹರಿಪ್ರಸಾದ್ ದೀರ್ಘ ಕಾಲದ ಸಂಸದ. ಮಗಳು ಸ್ಪಂದನ ನಟ ವಿಜಯ್ ರಾಘವೇಂದ್ರನ ಹೆಂಡತಿ. ಮೂವತ್ತು ವರ್ಷಗಳ ಸರ್ವೀಸಿನಲ್ಲಿ ಶಿವರಾಂ ಅವರಿಗೆ ರಾಷ್ಟ್ರಪತಿ ಪದಕ, ಮುಖ್ಯಮಂತ್ರಿಗಳ ಚಿನ್ನದ ಪದಕ, ಬೆಳ್ಳಿಪದಕ, ಕೆಂಪೇಗೌಡ ಪ್ರಶಸ್ತಿ ಲಭಿಸಿವೆ.

ತಾವು ಓದಿದ ನಾಗರೆಡ್ಡಿ ಶಾಲೆ, ಚೊಕ್ಕಸಂದ್ರ ಶಾಲೆಗಳನ್ನು ಶಿವರಾಂ ಅಭಿವೃದ್ಧಿ ಮಾಡಿದ್ದಾರೆ. ಅನೇಕ ಮಕ್ಕಳನ್ನು ದತ್ತುಪಡೆದು ಓದಿಸಿದ್ದಾರೆ. ಲೈಂಗಿಕ ಕಾರ್ಯಕರ್ತೆಯರ ಬದುಕು ಬದಲಾಯಿಸಲು ಯತ್ನಿಸಿದ್ದಾರೆ. ಇದರೊಂದಿಗೆ, ದೇವರಿಗೂ ಒಂದಿಷ್ಟು ಇರಲಿ ಅಂತ ಕಾಡು ಮಲ್ಲೇಶ್ವರ, ದಕ್ಷಿಣ ಮಷ ನಂದಿತೀರ್ಥ ನರಸಿಂಹ ಸ್ವಾಮಿ, ಗಂಗಮ್ಮ ದೇವಿ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದ್ದಾರೆ.

(ಸ್ನೇಹಸೇತು : ಹಾಯ್ ಬೆಂಗಳೂರು)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more