ನೀವೇನೇ ಸಾಧನೆ ಮಾಡಿದ್ರೂ, ನೀವು ಕಥೆ ಹೇಳುವ ತಾತನೆ!

By: ಜಯನಗರದ ಹುಡುಗಿ
Subscribe to Oneindia Kannada

ಪ್ರೀತಿಯ ತಾತ,

ನೀವು ಕಾಲವಾಗಿ ಇಂದಿಗೆ 14 ವರ್ಷ. ನನ್ನ ಜೊತೆ ಇದ್ದಷ್ಟು ದಿನಗಳಿಗಿಂತ ನೀವು ಇಲ್ಲದ ದಿನಗಳೇ ಈ ಬಾರಿ ಜಾಸ್ತಿ ಆಯಿತು. ಇನ್ನೂ ನಿಮ್ಮ ಬಗ್ಗೆ ಬರೆಯುವುದು ಬಹಳಷ್ಟಿದೆ. ದಿನ ದಿನವೂ ನಿಮ್ಮ ನೆನಪು ತುಂಬಾ ಕಾಡುತ್ತದೆ. ಎಷ್ಟೆ ತರ್ಕಬದ್ಧವಾಗಿ ಇರಬೇಕೆಂದು ನೀವು ಹೇಳಿಕೊಟ್ಟಿದ್ದರೂ ಸಹ ಅಲ್ಲೆಲ್ಲೋ ನಿಮ್ಮ ಪುನರ್ಜನ್ಮ ಆಗುತ್ತದೆ ಎಂದು ನಂಬಿದವಳು ನಾನು.

ಅಪ್ಪಾ... ಐ ಲವ್ ಯೂ ಪಾ.. ಅಪ್ಪನೇ ಆಕಾಶದ ಪ್ರತಿರೂಪ

ಚಿಕ್ಕವಳ್ಳಿದ್ದಾಗ ಏನೇನೋ ಪ್ರಶ್ನೆ ಕೇಳಿ ಕೇಳಿ ತಲೆ ತಿನ್ನುತ್ತಿದ್ದೆ. ಮತ್ತ್ಯಾರು ನಿಮ್ಮ ಜೊತೆ ಮಾತಾಡಬಾರದು ಎಂದು ಹತ್ತಿರ ಬರುವುದಕ್ಕೂ ಬಿಡುತ್ತಿರಲ್ಲಿಲ್ಲ. ನಿಮ್ಮ ಪಾಠ ಹೇಳುವ ಪರಿ ಕೇಳಿಸಿಕೊಂಡು ನನಗೆ ನೀವು ಮೇಷ್ಟ್ರಾಗಿದ್ರಿ ಅನ್ನಿಸುತ್ತಿತ್ತು. ಅಸಲಿಗೆ ನಿಮ್ಮ ಕೆಲಸವೇನು ಎಂದು ಕೇಳುವುದಕ್ಕೆ ಹೋಗಿರಲ್ಲಿಲ್ಲ.

Letter to my dearest grand father on his death anniversary

ಮನೆಗೆ ಅಚಾನಕ್ಕಾಗಿ ಪತ್ರಕರ್ತರ ಸಂಘದಿಂದ ನಿಮಗೆ ಪ್ರಶಸ್ತಿ ಬಂದಿರುವ ಆಮಂತ್ರಣ ಪತ್ರಿಕೆ ನೋಡಿ "ತಾತ ನೋಡಿ ನಿಮ್ಮ ಹೆಸರದ್ದೆ ಯಾರಿಗೋ ಪ್ರಶಸ್ತಿ ಬಂದಿದೆ" ಅಂತ ಮುಂಬಾಗಿಲಿನಲ್ಲಿ ಕೂಗುತ್ತಿದ್ದೆ. ಅಮ್ಮ ಕರೆದು ಪ್ರಶಸ್ತಿ ಬಂದಿದ್ದು ತಾತನಿಗೆ ಎಂದು ಹೇಳಿದಾಗ ನಾನು ಆಶ್ಚರ್ಯದಿಂದ ತಾತನನ್ನೇ ನೋಡುತ್ತಿದ್ದೆ. ಅಂದಿನವರೆಗೆ ಅವರು ಇಷ್ಟು ದೊಡ್ಡ ಪತ್ರಕರ್ತರೆಂದು ತಿಳಿದೇ ಇರಲ್ಲಿಲ್ಲ.

ನನ್ನ ಶಾಲೆಯ ಬರವಣಿಗೆಗೆ ಆಗಾಗ ತಿದ್ದುಪಡಿ ಹೇಳುತ್ತಿದ್ದದ್ದು ಯಾಕೆಂದು ಆವಾಗ ಗೊತ್ತಾಯಿತು. ತಾತ (ಎಚ್ ಆರ್ ನಾಗೇಶರಾಯರು) ನೀವು ಮನೆಯಲ್ಲಿ 'ಸಂಯುಕ್ತ ಕರ್ನಾಟಕ' ದಿನಪತ್ರಿಕೆಯ ನಿವೃತ್ತ ಸ್ಥಾನಿಕ ಸಂಪಾದಕರಾಗಿರಲಿಲ್ಲ, ಕಥೆ ಹೇಳುವ ನನ್ನ ತಾತನಾಗಿದ್ದಿರಿ.

Letter to my dearest grand father on his death anniversary

ನನಗಿನ್ನೂ ನೆನಪಿದೆ, ಮನೆಗೆ ಬರುವ ಕನ್ನಡ ದಿನಪತ್ರಿಕೆಯನ್ನ ನೀವು ನನಗೆ ಕೊಟ್ಟು, ತೊಡೆಯ ಮೇಲೆ ಕೂಡಿಸಿಕೊಂಡು ಓದಿಸುತ್ತಿದ್ದದ್ದು. ಪ್ರತಿ ಒತ್ತಕ್ಷರ, ದೀರ್ಘಾಕ್ಷರ ಸರಿಯಾಗಿ ಓದಿದ್ದಕ್ಕೆ ಬೆಟ್ಟಲ್ಲಿ ಕಾಫಿ ಅದ್ದಿ ಬಾಯಿಗೆ ಇಡುತ್ತಿದ್ರಿ. ಈಗ್ಲೂ ಯಾವ ದೇಶದಲ್ಲಿ ಕಾಫಿ ಕುಡಿದ್ರೂ ಇದು ನೆನಪಾಗುತ್ತದೆ. ಕೆಲಸದ ಬಗ್ಗೆ ಏನಾದ್ರೂ ಕೇಳಿದ್ರೆ ಮೆಲ್ಲಗೆ ಜಾರಿಕೊಂಡು ನಾನು ಏನು ಮಾಡಬೇಕೆಂದು ತಿಳಿಸಿ ಹೇಳುತ್ತಿದ್ರಿ.

ಸ್ವಿಟ್ಜರ್ಲೆಂಡಲ್ಲಿ ನಾ ಕಂಡ ಐನ್ಸ್ಟೀನ್ ಎಂಬ ಕೌತುಕ!

ದಿನಾ ರಾತ್ರಿ ಹೇಳುತ್ತಿದ್ದ ರಾಮಾಯಣ, ಮಹಾಭಾರತದ ಕಥೆ ಎಂದಿಗೂ ಮರೆಯೋದಕ್ಕೆ ಸಾಧ್ಯವಿಲ್ಲ. ರಾಮನನ್ನ ಹೊಗಳುವಾಗ, ಅವನ ಆದರ್ಶಗಳನ್ನ ಹೇಳುವಾಗ, ಅವನು ಊರು ಬಿಟ್ಟ ದುಃಖವನ್ನ ವರ್ಣಿಸುವಾಗ ಎಂದಿಗೂ ನೀವು ಅನಿವಾರ್ಯವಾಗಿ ಊರು ಬಿಡಬೇಕಾದ ಪರಿಸ್ಥಿತಿಯ ಬಗ್ಗೆ ತಿಳಿಸಿ ಹೇಳಲ್ಲಿಲ್ಲ. ಒಮ್ಮೊಮ್ಮೆ ನಿಮ್ಮ ಓರಗೆಯವರೆಲ್ಲರ ಬಗ್ಗೆ ಟೀವಿಯಲ್ಲಿ, ಪತ್ರಿಕೆಯಲ್ಲಿ ಬಂದಾಗ ಅಪ್ಪ ಅಥವಾ ಅಜ್ಜಿ ನೆನಪಿಸಿದ್ದರೆ, ನನ್ನ ಮುಂದೆ ಅದರ ಬಗ್ಗೆ ಮಾತಾಡೋಕೆ ಹಿಂಜರಿಯುತ್ತಿದ್ರಿ.

Letter to my dearest grand father on his death anniversary

ನೀವು ನನಗೆ ಸಂಸಾರಸ್ಥ ವಿರಾಗಿಯಾಗಿ ಕಾಣಿಸುತ್ತಿದ್ದುದ್ದರಲ್ಲಿ ಆಶ್ಚರ್ಯವೇನಿಲ್ಲ. ಯಾರಾದ್ರೂ ಹೇಗೆ ಅವರ ಸಾಧನೆಗಳನ್ನೆ ಮರೆತು, ಅದರ ಬಗ್ಗೆ ಒಮ್ಮೆಯೂ ಮಾತಾಡದೇ ಇರೋದಕ್ಕೆ ಸಾಧ್ಯ ಎಂಬ ಯೋಚನೆ ಈವಾಗ್ಲೂ ಕಾಡತ್ತೆ. ತಾತನಾಗಿ ನೀವು ನನ್ನ ಜೊತೆ ಇದ್ದಾಗ ನಿಮ್ಮ ಬಗ್ಗೆ ಬಹಳಷ್ಟು ಕಲಿತುಕೊಂಡೆ. ಆದರೆ, ನೀವು ಹೋದ ನಂತರವೆ ನಿಮ್ಮ ಹಿರಿತನ ಗೊತ್ತಾಗಿದ್ದು.

ವ್ಯಕ್ತಿತ್ವ ಬೆಳೆಸಿದ ಕನ್ನಡ ಕಲಿಸಿದ ನನ್ನ ಪ್ರೀತಿಯ ಶಾಲೆ

Letter to my dearest grand father on his death anniversary

ನೀವು ಪುಸ್ತಕ ಪ್ರಿಯ ಎಂದು ವಿಮರ್ಶೆ ಬರೆಯುತ್ತಿದ್ದದ್ದು, ಲೇಖಕರೇ ಮೆಚ್ಚಿಕೊಂಡು ನಿಮಗೆ ಬರೆದ್ದಿದ್ದು, ನಿಮ್ಮ ದಿನಚರಿ, ಚಾತಕ ಪ್ರಕಾಶನ ಎಂಬ ನಿಮ್ಮ ಪ್ರಕಾಶನ ಸಂಸ್ಥೆಯಲ್ಲಿ ಪುಸ್ತಕ ಬರೆದ್ದಿದ್ದು, ಸುದ್ದಿಜೀವಿಯಾಗಿ ಪತ್ರಿಕೆಗಳಿಗೆ ಬರೆದ್ದಿದ್ದು, ಕನ್ನಡದ ಮೊದ ಮೊದಲ ದಿನಪತ್ರಿಕೆ ತಾಯಿನಾಡುವಿನಲ್ಲಿ ನೀವು ಕೆಲ್ಸ ಮಾಡಿದ್ದು, ಶಾಲೆಯಲ್ಲಿದ್ದಾಗಲೆ ಕೈ ಬರಹ ದಿನಪತ್ರಿಕೆಯನ್ನ ಹೊರತಂದ್ದಿದ್ದು, ದಿನಚರಿ ತಪ್ಪದೆ ಬರಿತ್ತಿದ್ದದ್ದು, ಮನೆ ಲೆಕ್ಕವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದೆಲ್ಲ ನೋಡಿದರೆ ಇಷ್ಟೆಲ್ಲಾ ಮಾಡಿ, ಕಥೆ ಹೇಳುವ ತಾತನಾಗಿ ಯಾಕೆ ನನ್ನ ಮನಸಲ್ಲಿ ಉಳಿದು ಬಿಟ್ಟಿರಿ ಎಂದು ಸಂಶಯ ಅವಗಾವಾಗ ಬರತ್ತೆ.

Letter to my dearest grand father on his death anniversary

ಮನೆಯಲ್ಲಿಯೂ ಸಹ ಕಥೆಗಳ ಮೂಲಕ ಜೀವನದ ಬಹು ದೊಡ್ಡ ಪಾಠಗಳನ್ನ ಹೇಳಿಕೊಟ್ಟಿದ್ದಿರಿ. ಮೊದಲು ಹೇಳಿಕೊಟ್ಟಿದ್ದೇ, 'ಜೀವನದಲ್ಲಿ ಯಾವುದೇ ಕಾರಣಕ್ಕೆ ದುಬಾರಿಯಾದ ಹವ್ಯಾಸವನ್ನ ಇಟ್ಟುಕೊಳ್ಳಬೇಡ' ಎಂಬುದನ್ನು. ಸರಳ ಜೀವನವನ್ನ ನುಡಿದಂತೆ ನಡೆಯುವುದನ್ನ ಕಲಿಸಿದ್ದು ನೀವೆ. ಒಮ್ಮೆ ಎಲ್ಲೊ ಅಬ್ಬರದ ಮದುವೆಯೋ/ಮುಂಜಿಯೋ/ತಿಥಿಯೋ ಆದಾಗ ದುಡ್ಡಿನ ಬಗ್ಗೆ, ಆದರ್ಶಗಳನ್ನೇ ಪಾಲಿಸದೆ ನಡೆಯುವ ಆಚರಣೆಯ ಬಗ್ಗೆ ಎಲ್ಲವನ್ನು ತಿಳಿಸಿ ಹೇಳುತ್ತಿದ್ರಿ.

ಬೆಳಗ್ಗೆ ಎದ್ದು ಪಾರಿಜಾತ ಆಯುವ ನಿಮ್ಮ ಶಿಸ್ತು, ದಿನಪತ್ರಿಕೆಯೊಂದಿಗೆ ನಿಮ್ಮ ಕಾಫಿ, ದಿನನಿತ್ಯ ನಾವು ಚರ್ಚೆ ಮಾಡುತ್ತಿದ್ದ ರಾಜಕೀಯ, ಕ್ರಿಕೆಟ್, ಪಾರ್ಲಿಮೆಂಟ್ ನ ಲೈವ್ ಪ್ರಸಾರ, ಅದರಲ್ಲಿ ನೀವು ಅದರ ಮಹತ್ವವನ್ನ ತಿಳಿಸುತ್ತಿದ್ದದ್ದು ಎಲ್ಲ ನೆನಪಾಗಿ, ನಿಮ್ಮನ್ನು ನೆನೆಸಿಕೊಂಡರೆ ಈಗಲೂ ಕಣ್ಣು ಒದ್ದೆ ಆಗುತ್ತದೆ. ನಾನು ನಿಮಗೇನು ಗೊತ್ತಾಗಲ್ಲ ತಾತ ಅಂದಾಗ ಸುಮ್ಮನ್ಯಾಕಿದ್ರಿ ಎಂದು ಈಗಲೂ ತಿಳಿದುಕೊಳ್ಳಲಾಗದ ಸತ್ಯ.

Letter to my dearest grand father on his death anniversary

ಯಾವಗ್ಲೂ ಬಿಳಿ ಪಂಚೆ, ಶರ್ಟ್ ಅಥ್ವಾ ಆಚೆ ಹೋಗಬೇಕಾದ್ರೆ ಸಾಧಾರಣ ಬಟ್ಟೆಯನ್ನೆ ಹಾಕಿಕೊಂಡು ಓಡಾಡಿದ್ದು, ಪಂಚೆ ಬಿಳುಪು ಕಡಿಮೆ ಆದಾಗ ಬೇರೆ ಪಂಚೆ ತಗೊಳ್ಳಿ ತಾತ ಅಂದಾಗ "ನಿನ್ನ ಸಂಪಾದನೆಯಲ್ಲಿ ಕೊಡಿಸು" ಎಂದು ತೀರ ನನ್ನ ಹತ್ತನೇ ಕ್ಲಾಸ್ ಅಂಕವನ್ನ ನೋಡದೇ ಹೊರಟು ಹೋದಿರಿ.

"ಗುಡ್ಡಿ, ಬಾ ಪತ್ರಿಕೆಯಲ್ಲಿ ಬರೆದಿರುವ ಸುದ್ದಿಯ ಬಗ್ಗೆ ಹೇಳುತ್ತೀನಿ" ಅಂತ ಮತ್ತೆ ಕರೆದು ಹೇಳ್ತೀರೇನೋ ಅನ್ನೋ ಆಸೆ ಆವಗಾವಾಗ ಬರುತ್ತದೆ. ಬಿಳಿ ಪಂಚೆ, ಅದೇ ದೂರದರ್ಶನದ ನ್ಯೂಸ್ ನೋಡಿದಾಗ ಅರ್ರೆ ತಾತ ಇನ್ನೂ ಚೆನ್ನಾಗಿ ಹೇಳುತ್ತಿದ್ರು ಎಂದು ನಿಮಗಾಗಿ ಇಂದೂ ಕಾಯುತ್ತಾ ಕುಳಿತ್ತಿದ್ದೀನಿ.

Letter to my dearest grand father on his death anniversary

ಶಾಲೆಯ ಪತ್ರ ಲೇಖನದಲ್ಲಿ ಒಮ್ಮೆಯೂ ನಿಮಗೆ ಪತ್ರ ಬರೆಯದೆ ಇದ್ದವಳು ಇವತ್ತು ಮಾಸ್ಟರ್ಸ್ ಮುಗಿಸಿ ಪತ್ರಿಕೆಯ ಅಂಕಣದಲ್ಲಿ ಪತ್ರ ಬರೆದಿದ್ದೀನಿ. ಯಾಕಂದ್ರೆ ಯಾವುದನ್ನೂ ಓದದೆ ಬಿಡುತ್ತಿರಲ್ಲಿಲ್ಲ. ಈಗ್ಲಾದ್ರೂ ಓದಿರ್ತೀರಿ ಅನ್ನೋ ನಂಬಿಕೆ.

Siddaramaiah is the uncle of Dawood Ibrahim, says Pralhad Joshi

ಇತಿ
ನಿಮ್ಮ ಗುಡ್ಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Meghana Sudhindra in her Kannada column has remembered her grand father H R Nagesharao (father of Haldodderi Sudhindra) by writing a letter to him on his 14th death anniversary. Nagesharao was not just resident editor of Samyukta Karnataka, he was beloved grand father, who used to tell stories.
Please Wait while comments are loading...