ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಳೆ ನಾ ಸತ್ತರ ನನ್ನ ಅಕೌಂಟದ್ದ ಏನ ಗತಿ?

By Prasad
|
Google Oneindia Kannada News

ಇತ್ತೀಚಿಗೆ ಯಾಕೊ ಏನೋ ಗೊತ್ತಿಲ್ಲಾ ರಾತ್ರಿ ಮಲ್ಕೊಂಡಾಗ ಕೆಟ್ಟ ಕೆಟ್ಟ ಕನಸ ಭಾಳ ಬರಲೀಕತ್ತಾವ, ಸುಮ್ಮನ ನಮ್ಮ ವಿನಾಯಕ ಭಟ್ಟರಗೆ ಕೇಳಿ ಪಲ್ಲಂಗ ಬುಡಕ ಒಂದ ಹೋಮಾ ಹವನರ ಮಾಡಸಬೇಕೊ ಏನೊ ಗೊತ್ತಿಲ್ಲಾ.

'ಅಲ್ಲಾ, ಯಾಕ, ಏನಾತ ಕನಸಿನಾಗು ಹೆಂಡ್ತಿ ಬಂದಿದ್ಲೇನೊ?' ಅಂತ ಅನಬ್ಯಾಡರಿ ಮತ್ತ. ಹಂಗ ನಂಗ ಸಂಸಾರನ ಒಂದ ಕೆಟ್ಟ ಕನಸ ಆಗಿ ಬಿಟ್ಟದ ಆ ಮಾತ ಬ್ಯಾರೆ. ಆದರ ಮೊನ್ನೆ ಒಂದ ನನ್ನ ಹೆಂಡತಿ ಕಿಂತಾ ಕೆಟ್ಟ ಕನಸ ಬಿದ್ದಿತ್ತ. ಇನ್ನ ಅಕಿ ಕಿಂತಾ ಕೆಟ್ಟ ಕನಸ ಅಂದರ ಏನು ಅಂತ ಭಾಳ ತಲಿಕೆಡಸಿಗೊಳ್ಳಿಕ್ಕ ಹೋಗಬ್ಯಾಡರಿ ನಂಗ ಬಿದ್ದಿದ್ದ ಕನಸ ಏನಪಾ ಅಂದರ...

'ನಾ ಒಂದ ದಿವಸ ಬೆಳಿಗ್ಗೆ ಏದ್ದ ನೋಡೊದರಾಗ ನನ್ನ ಎಲ್ಲಾ ಡಿಜಿಟಲ್ ಅಕೌಂಟ್ಸ (gmail, facebook, twitter) ಡಿಲೀಟ್ ಆಗಿಬಿಟ್ಟಿದ್ವು, ನಂಗ ಯಾಕ ಡಿಲೀಟ್ ಮಾಡಿದರಿ ಅಂತ ಅವರನ ಕೇಳಲಿಕ್ಕೆ ಕಂಟ್ಯಾಕ್ಟ ಮಾಡಲಿಕ್ಕು ಡಿಜಿಟಲ್ ಐಡಿ ಇಲ್ಲದಂಗ ಆಗಿತ್ತ. ಏನ್ಮಾಡಬೇಕ ಒಂದು ತಿಳಿಲಿಲ್ಲಾ. ಅಲ್ಲಾ, ಜಿಮೇಲ್ ಇಲ್ಲಾ, ಫೇಸಬುಕ್ಕಿಲ್ಲಾ ಅಂದರ ನಾ ಬದಕೋದರ ಹೆಂಗ? ಹಿಂಗ ನಮ್ಮ ಡಿಜಿಟಲ್ ಇಡೆಂಟಿಟಿನ ಇಲ್ಲಾ ಅಂದರ ಮುಂದ ಹೆಂಗ ಅಂತ ನಾ ಕಡಿಕೆ ಅವರ ಕಸ್ಟಮರ್ ಕೇರ ನಂಬರ ತೊಗೊಂಡ ಫೋನ ಮಾಡಿ ಕೇಳಿದರ...

'ಇಲ್ಲಾ, ನಾವ ಒಮ್ಮೆ ಮನಷ್ಯಾ ತೀರಕೊಂಡಾ ಅಂದರ ಅವರ ಡಿಜಿಟಲ್ ಅಕೌಂಟ ಎಲ್ಲಾ ಡಿಲೀಟ್ ಮಾಡಿಬಿಡ್ತೇವಿ' ಅಂತ ಹೇಳಿ ನಾ ಜೀವಂತ ಇದ್ದೇನಿ, ಅವೆಲ್ಲಾ ನಂದ ಅಕೌಂಟ, ಅವನ್ನ reinstate ಮಾಡರಿ ಅಂತ ಹೇಳಲಿಕ್ಕೂ ಅವಕಾಶ ಕೊಡಲಾರದ ಫೋನ ಇಟ್ಟ ಬಿಟ್ಟರು.' [ಫೇಸ್ ಬುಕ್ ಅಕೌಂಟಿಗೆ ಎರಡು ನಿಮಿಷದ ಮೌನ]

What will happen to digital account when one dies

ನಾ ಗಾಬರಿ ಆಗಿ ಧಡಕ್ಕನ ಎದ್ದೆ. ಬಾಜುಕ ಹೆಂಡ್ತಿ ಗೊರಕಿ ಹೊಡಿಲಿಕತ್ತಿದ್ಲು. ನಂಗ ಕನಫರ್ಮ ಆತ ನಾ ಇನ್ನೂ ಜೀವಂತ ಇದ್ದೇನಿ, ನಂಗ ಕೆಟ್ಟ ಕನಸ ಬಿದ್ದಿತ್ತು ಅಂತ. ಟೈಮ ನೋಡಿದರ 4.40 ಆಗಿತ್ತ. ಆದರೂ ಯಾಕೋ ಮನಸ್ಸಿಗೆ ಸಮಾಧಾನ ಆಗಲಿಲ್ಲಾ. ಭಡಾ ಭಡಾ ಬಾಜುಕ ನನ್ನ ಹೆಂಡ್ತಿ ತಲಿದಿಂಬ ಬುಡಕ ಇದ್ದದ್ದ ಸ್ಮಾರ್ಟ್ ಫೋನ್ ಆನ್ ಮಾಡಿ ನೋಡಿದೆ ಜಿಮೇಲ್, ಫೇಸಬುಕ್, ಟ್ವಿಟ್ಟರ್ ಎಲ್ಲಾದರ್ ನೋಟಿಫಿಕೇಶನ್ ಬರಲಿಕತ್ವು, ಮನಸ್ಸಿಗೆ ಸಮಾಧಾನ ಆತ.

ಅಲ್ಲಾ ಹಂಗ ಇವೆಲ್ಲಾ ಅಕೌಂಟ ಡಿಲೀಟ್ ಆಗಿ ಬಿಟ್ಟರ ಮುಂದ ನಾ ಜೀವಂತ ಇದ್ದರು ಸತ್ತಂಗ ಬಿಡ್ರಿ. ಈಗ ನಂಬದೆಲ್ಲಾ ವರ್ಚ್ಯುವಲ್ ಪ್ರೆಸೆನ್ಸ್, ಡಿಜಿಟಲ್ ಅಕೌಂಟ ಮ್ಯಾಲೆ ಜೀವನ ನಡದಿದ್ದ. ಅದರಾಗ ನನ್ನ ಫೇಸಬುಕ್ ನಾಗ ಒಂದೊಂದ ಅಕೌಂಟನಾಗ ಐದ- ಐದ ಸಾವಿರ ಮಂದಿ ಇದ್ದಾರ. ಹಂಗ ನಂಗ ಹೆಂಡ್ತಿ ಒಬ್ಬೊಕಿನ ಇದ್ದರು ಫೇಸಬುಕ್ ಅಕೌಂಟ ಎರಡ ಅವ, ಒಮ್ಮೊಮ್ಮೆ ಎರಡೆರಡ ಫೇಸಬುಕ್ಕ್ ಅಕೌಂಟಕಿಂತಾ ಎರಡೆರಡ ಹೆಂಡಂದರ ಕಟಗೋಳೊದ ಭಾಳ ಛಲೊ ಅಂತ ಅನಸ್ತದ, ಆ ಮಾತ ಬ್ಯಾರೆ. ಆದರ ಫೇಸಬುಕ್ಕಿಗೆ ಮಕ್ಕಳ ಆಗಂಗಿಲ್ಲಾ ಅಂತ ನಡಿಸಿಗೊಂಡ ಹೊಂಟೇನಿ. ಆದ್ರು ನನ್ನ ಅಕೌಂಟಿಗೆ ಏನ ಆಗಿಲ್ಲ ಅಂತ ಕನಫರ್ಮ ಆದಮ್ಯಾಲೆ ಸ್ವಲ್ಪ ಸಮಾಧಾನ ಆತ. ಎದ್ದ ಒಂದ ಗ್ಲಾಸ ನೀರ ಕುಡದ ಬಂದ ಮತ್ತ ಮಲಗಿದೆ.

ಅಲ್ಲಾ, ಹಂಗ ನಾ ಖರೇನ ನಾಳೆ ಸತ್ತರ ನನ್ನ ಈ ಎಲ್ಲಾ ಅಕೌಂಟದ್ದ ಗತಿ ಏನು ಅಂತ ಚಿಂತಿ ಹತ್ತಲಿಕತ್ತ. ಜನಾ ಹೂಯ್ಯಿ ಅಂತ ಆಸ್ತಿ ಮಾಡಿ ಸಾಯಬೇಕಾರ ಯಾರಿಗೆ ಕೊಡ್ಲಿ ಯಾರಿಗೆ ಬಿಡ್ಲಿ. ನಾಳೆ ನಾ ಇಲ್ಲಾಂದರ ನನ್ನ ಆಸ್ತಿ ಗತಿ ಏನು ಅಂತ ಚಿಂತಿ ಮಾಡಿದರ ನಂಗ ನನ್ನ ಡಿಜಿಟಲ್ ಅಕೌಂಟ್ಸದ್ದ ಚಿಂತಿ ಹತ್ತತ. ಅಲ್ಲಾ ನನ್ನ ಆಸ್ತಿನ ನನ್ನ ಫೇಸಬುಕ್ಕಲ್ಲಾ ಹಿಂಗಾಗಿ ಹಂಗೇನರ ನನ್ನ ಡಿಜಿಟಲ್ ಅಕೌಂಟ, ನನ್ನ ಆನ್ ಲೈನ್ ಲೈಫ್ ನಾ ಸತ್ತಮ್ಯಾಲೇನೂ ಮ್ಯಾನೇಜ ಮಾಡಬಹುದೇನು, ಇಲ್ಲಾ ನಾಳೆ ನಾವ ಇಲ್ಲದ್ದ ಕಾಲಕ್ಕ ನಮ್ಮ ಅಕೌಂಟದ ಗತಿ ಏನು ಅಂತ ತಲಿಕೆಡಸಿಗೊಂಡ ಗೂಗಲನಾಗ ಹುಡಕಲಿಕತ್ತೆ.

ಗೂಗಲನವರ ಅಂದರ ನಮ್ಮ ಜಿಮೇಲ್ ಅಕೌಂಟನವರ ಅಂತು ನಾವ ಜೀವಂತ ಇದ್ದಾಗ 'ನಾಳೆ ನಾವ ಸತ್ತರ ನಮ್ಮ ಅಕೌಂಟ ಏನ ಮಾಡಬೇಕ' ಅಂತ ನಮಗ ಡಿಸಿಜನ್ ಮಾಡಲಿಕ್ಕೆ inactive account manager ಅಂತ ಒಂದ ಟೂಲ್ ಮಾಡಿ ಬಿಟ್ಟಾರ, ಏನ್ಮಾಡ್ತೀರಿ? ಎಷ್ಟ ಅಧಿಕ ಪ್ರಸಂಗಿ ಇದ್ದಾರ ಈ ಗೂಗಲನವರ ಅಂತೇನಿ. ಈ ಟೂಲನಾಗ ನಾವ ನಮಗ ಯಾರಿಗೆ ಬೇಕ ಅವರಿಗೆ ನಾಮಿನಿ ಮಾಡಿ ನಮ್ಮ ಗೂಗಲದ ಅಕೌಂಟ ಎಲ್ಲಾ ಜೀವಂತ ಇದ್ದಾಗ will ಬರದಂಗ ಬರದ ಕೊಡಬಹುದು. ಹಂಗ ಹೆಂಡ್ತಿ ಕಲತಕಿ ಇದ್ಲ ಅಂದರ ಅಕಿ ಹೆಸರಿಗೆ ಮಾಡಬಹುದು.

ಇನ್ನ ನಮ್ಮ ಭಾಳ ದೊಡ್ಡ ಆಸ್ತಿ ಅಂದರ ಫೇಸಬುಕ್! ಇವರೇನ ಮಾಡ್ತಾರ ಅಂದರ, ಅವರು ನಾವು ಸತ್ತರು ನಮ್ಮ ಪೈಕಿ ಮಂದಿಗೆ ನಮ್ಮ ಅಕೌಂಟಿಗೆ access ಕೊಡಂಗಿಲ್ಲಾ. ಭಾಳ ಅಂದರ ನಮ್ಮ ಮನಿ ಮಂದಿ ನಮ್ಮ ಅಕೌಂಟ ನೋಡಿ profile photoದ ಮುಂದ ಒಂದ ದೀಪಾ ಹಚ್ಚಿ ಇಡಬಹುದ ಇಷ್ಟ. ಹಂಗ ನಮ್ಮ ಸೆಟ್ಟಿಂಗ್ಸ್, ಅಂದರ Privacy settings ಮತ್ತ. ನೀವೆಲ್ಲರ ಹೊರಗಿನ ಸೆಟ್ಟಿಂಗ್ಸ್ ಅಂತ ತಿಳ್ಕೊಂಡಿರಿ! ಅವೆಲ್ಲಾ ನಾವ ಸತ್ತರೂ ಫೇಸಬುಕ್ಕಿನಾಗ ಸೇಫ ಆಗಿ ಹಂಗ ಉಳಿತಾವ. ಇದ ಒಪ್ಪೊ ಮಾತ ಬಿಡ್ರಿ. ಮತ್ತೆಲ್ಲರ ಯಾರಿಗರ ಅಕೌಂಟ ಟ್ರಾನ್ಸಫರ್ ಆಗಿ ಅವರ ನಮ್ಮ ಹೆಸರ ಹಳ್ಳಾ ಹಿಡಿಸಿದರ ಏನ್ಮಾಡ್ತೀರಿ? ಅಲ್ಲಾ ಹಂಗ ನಾವೇನ ಆವಾಗ ಇರಂಗಿಲ್ಲ ಬಿಡ್ರಿ ಆದರು ಸತ್ತಮ್ಯಾಲೇನೂ ಯಾಕ ಕೆಟ್ಟ ಆಗಬೇಕಂತ?

ಇನ್ನ ಟ್ವಿಟ್ಟರನವರ ನಾವ ಸಾಯೋದ ತಡಾ ನಮ್ಮ ಮನಿ ಮಂದಿ ಯಾರರ death certificate ಜಿಮೇಲ ಮಾಡಿಬಿಟ್ಟರ ನಮ್ಮ ಅಕೌಂಟ deactivate ಮಾಡಿ ಒಗದ ಬಿಡ್ತಾರಂತ. ಏನ್ಮಾಡ್ತೀರಿ? ಇವರಂತು 140 ಕ್ಯಾರೆಕ್ಟರ ಮಂದಿ, ಸೀದಾ ಕ್ಯಾರೆಕ್ಟರ ಡಿಲಿಟ್ ಮಾಡಿ ಬಿಡ್ತಾರ! [ಫೇಸ್ ಬುಕ್ ನ್ಯಾಗ ಜೆಂಡರ್ ಗೊಂದಲ]

ಈಗ ಗೊತ್ತಾತಲಾ ನಾಳೆ ನಾವ ಇಲ್ಲಾಂದರ ನಮ್ಮ ಡಿಜಿಟಲ್ ಅಕೌಂಟ್ಸದ್ದ ಗತಿ ಏನ ಆಗ್ತದ ಅಂತ? ಅಲ್ಲಾ ಹಂಗ ಹೆಂಡ್ರು ಮಕ್ಕಳು ಮುಂದ ಹೆಂಗರ ಇರವಲ್ಲರಾಕ, ಆದ್ರ ನಮಗ ಈಗ ಭಾಳ ಚಿಂತಿ ಇದ್ದದ್ದ ನಮ್ಮ ಈ ಸುಡಗಾಡ ಅಕೌಂಟ್ಸದ್ದ. ಯಾಕಂದರ ಇವತ್ತ ನಾವು ನಮ್ಮ ಟೈಮ ಜಾಸ್ತಿ ಕೊಡೊದ ಇವಕ್ಕ ಹೊರತು ಹೆಂಡ್ರು ಮಕ್ಕಳಿಗೆಲ್ಲಲಾ ಅದಕ್ಕ ಹೇಳಿದೆ.

ಆದ್ರು ಒಂದ ಕೆಟ್ಟ ಕನಸ ಬಿದ್ದ ಇಷ್ಟೆಲ್ಲಾ ಬರಿಯೋಹಂಗ ಆತ. ಇರಲಿ ಈಗ ಹಂತಾದ ಏನ ಆಗಿಲ್ಲಾ ಸದ್ಯೇಕ ನಾನು ಜೀವಂತ ಇದ್ದೇನಿ, ನನ್ನ ಅಕೌಂಟು ಜೀವಂತವ ಅಷ್ಟ ಸಾಕ. ಅಲ್ಲಾ ನಂದು ನಿಂಬದು ಇಬ್ಬರದು ಡಿಜಿಟಲ್ ಅಕೌಂಟ ಜೀವಂತ ಇದ್ದದ್ದಕ್ಕ ಇವತ್ತ ನೀವು ನನ್ನ ಈ ಆರ್ಟಿಕಲ್ ಓದಲಿಕತ್ತಿರಿ.. ಹೌದಲ್ಲ ಮತ್ತ?

English summary
What will happen to digital account when one dies? Prashant Adur has asked this logical question to himself. Almost everybody who is using digital media has social media account. Have you ever thought about it?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X