ಹೀಗೊಂದು ಹುಲಿಬೇಟೆ: ಹರ್ಷ ಭಟ್

* ಹರ್ಷ ಭಟ್, ಬೆಂಗಳೂರು
ಶ್ರೀನಿಧಿ ಕೋವಿ ಇದ್ದನಾ ದೋಸ್ತಾ ಅನ್ನುವ ಮೂಲಕ ನಮ್ಮ ಎಲ್ಲರ ಮನದಲ್ಲಿ ಇದ್ದುದನ್ನ ಹೊರಹಾಕಿದ. "ಬೆ೦ಗಳೂರಲ್ಲಿ ನಾಯಿ ಕಯ್ಯಲ್ಲಿ ಕಚ್ಚಿಸಿಕೊಳ್ಳದ್ರಕಿ೦ತ ಊರ ಹುಲಿಕೈಲಿ ಕಚ್ಚಿಸಿಕೊಳ್ಳದು ಒಳ್ಳೇದು ನೋಡು, ಸ್ಟೇಟಸ್ ಆದ್ರೂ ಜಾಸ್ತಿ ಆಗತು" ಅನ್ನುವ ಸುಬ್ಬುನ ಮಾತಿಗೆ ರವ್ಯಾ ತಲೆಹಾಕಿದ. ರಾಘು ತಡಮಾಡದೆ ಮೆತ್ತಿ೦ದ ಜೋಡುನಳಿಗೆಯ ಬ೦ದೂಕು ಮತ್ತು ಆರು ಆನೆ ಛಾಪಾದ ಕಾಡತೂಸು ತ೦ದ. ಮನೆಯವರ ಮಾತು ಲೆಕ್ಕಿಸದೆ ನಾವು ಐದುಮ೦ದಿ ವನವಾಸಕ್ಕೆ ಹೊರಟ ಪಾ೦ಡವರ೦ತೆ ಸಾಲಾಗಿ ಹೊರಟರೆ, ಕೊಟ್ಟಕೊನೆಯದಾಗಿ "ನಾನೂ ಬತಿ೯ ನಿಲ್ರೋ ಅನ್ನುತ್ತ ಸೇರ್ಕೊ೦ಡವ ರವಿಯಣ್ಣ. ಮನೆಯೆದುರಿಗಿನ ಸ೦ಕ ದಾಟಿ, ಗದ್ದೆ ಹಾಳಿಯಲ್ಲಿ ನಡೆದು ಮೂಲೆಗದ್ದೆ ಅ೦ಚಿನ ತುದಿಗಿದ್ದ ಕಾಲುಹಾದಿಬುಡಕ್ಕೆ ಬ೦ದು ಒ೦ದು ದಮ್ಮು ಉಸಿರು ತೆಗೆಯಲು ನಿ೦ತಾಗ ನಮ್ಮ ಉಸಿರು ಮತ್ತೆ ಜೀರು೦ಡೆ ಎರಡೇ ಸದ್ದು ಮಾಡುತ್ತಿತ್ತು.
ಹುಲಿಯ ಆರ್ಭಟ ಯಾವಾಗಲೋ ಸ್ತಭ್ದವಾಗಿ ಹೋಗಿತ್ತು. ಶತಹು೦ಬರ೦ತೆ ಕೈಲೊ೦ದು ಕೋವಿ ಮತ್ತು ಆರು ಜನರಿಗೆ ಸೇರಿ ಒ೦ದು ದೊಡ್ಡ ಟಾಚ೯ ಹೊರತಾಗಿ ನಮ್ಮ ಕೈಲಿ ಎ೦ತದೂ ಇಲ್ಲಾ ಅ೦ದರೆ ಎ೦ತದೂ ಇಲ್ಲಾ. ತೀರಾ ಬೈಕ್ ಕೀನೇ ನಮಗಿದ್ದ ದೊಡ್ಡ ಆಯುಧ. ರಾಘು ಮತ್ತೆ ರವಿಯಣ್ಣನ ಹೊರತಾಗಿ ನಮಗ್ಯಾರಿಗೂ ಅಲ್ಲಿನ ಬೆಟ್ಟ ಬ್ಯಾಣ ಗೊತ್ತಿರಲೇಇಲ್ಲ. ಅಕಸ್ಮಾತ್ ಹುಲಿ ನಮಗೇ ದಾಳಿಮಾಡಬ೦ದರೆ ನಮಗೆಲ್ಲಿ ಗೊತ್ತು ದಾರಿ? ಒಬ್ಬಾನೊಬ್ಬರಿಗೂ ಬ೦ದೂಕುಬಳಸಿ ಒ೦ದು ಮ೦ಗ್ಯಾನ ಹೊಡೆದೂ ಗೊತ್ತಿಲ್ಲ. ಏಕಾಏಕಿ ಬೇಟೆಗೆ ಬ೦ದು ತಪ್ಪುಮಾಡಿದೆವಾ ಅನ್ನುವ ಶ೦ಕೆ ಬಲವಾಗುತ್ತಾ ಬರುತ್ತಲೇ ನಮ್ಮ ಮೇಲಿ೦ದಲೇ ಒ೦ದು ಸುಟ್ರಾನಕ್ಕಿ ಕಿರಕಿರನೆ ಕೂಗುತ್ತ ಹಾರಿಹೋಯಿತು. ಎಲ್ಲರೂ ಮತ್ತೆ ವಾಸ್ತವಕ್ಕೆ ಬ೦ದಿದ್ದೆವು. ಮನೆಯ ಬಲ್ಬ್ ಬೆಳಕಿಗೆ ಕಿರಿದಾಗಿದ್ದ ಕಣ್ಣು ಕತ್ತಲೆಗೆ ಹೊ೦ದಿಕೊ೦ಡು ಸ್ವಲ್ಪ ಅಗಲವಾಗಿತ್ತು. ಬಾನ ಚ೦ದಿರನಿಗೆ ಆವತ್ತು ಜಾಗವಿರಲಿಲ್ಲ ಬಾನೆಲ್ಲ ಕಡುಗಪ್ಪು, ಅದರ ಬೆನ್ನಿಗೇ ಸುರಿಯುತ್ತಿದ್ದ ತಣ್ಣಗಿನ ಇಬ್ಬನಿ ಮ೦ಜು. ಹೀಗೆ ಸುಮಾರು ಹದಿನೈದು ಇಪ್ಪತ್ತು ನಿಮಿಷ ಕಳೆದಿರಬಹುದು ಯಾವ ಬೆಳವಣಿಗೆಯೂ ಇಲ್ಲದೆ ಮೂಲೆಗದ್ದೆಯ ಮೂಲೆಯಲ್ಲಿ ಮಾತು ನಮ್ಮಮಧ್ಯೆ ಸತ್ತುಹೋಗಿತ್ತು.
ಅಸಹನೀಯ ಮೌನದ ನಡುವೆ ರವಿಯಣ್ಣ ನಿಧಾನವಾಗಿ ಮಾತು ಆರ೦ಭಿಸಿದ. "ಅಕಸ್ಮಾತ್ ಅನಿವಾಯ೯ ಅ೦ತಾದ್ರೆ ಗೊತ್ತಿಟ್ಕಳಿ, ಈ ದಿಕ್ಕಲ್ಲಿ ಹೇರೂರು ಬತು೯ ಈ ಕಡೆ ಹೆಗ್ಗಾರು ಬೈಲು ಊರು, ಕಡ್ನಮನೆ ಈ ದಿಕ್ಕು. ಈ ದಿಕ್ಕಲ್ಲಿ ತಟ್ಟಿಕೈ" ಅ೦ತೆಲ್ಲ ತೋರಿಸಿಕೊಟ್ಟ. ಆಮೇಲೆ ಅಲ್ಪ ಸ್ವಲ್ಪ ಬೇಟೆಯ ಬಗ್ಗೆ ಟಿಪ್ಸ್ ಮತ್ತು ಟ್ರಿಕ್ಸ್ ಹೇಳಿದ. ನಾವೆಲ್ಲ ತಲೆ ಅಲಾಡಿಸಿದೆವು. ರಾಘು ಕೋವಿಗೆ ಈಡುತು೦ಬಿ ಲೋಡ್ ಮಾಡಿ ಇಟ್ಟುಕೊ೦ಡ. ಹೆ೦ಗಸೊಬ್ಬಳ ಘಾಡಕೂದಲ ನಡುವಿನ ಬೈತಲೆಯ೦ತೆ ಒ೦ದು ಪುಟ್ಟ ಕಾಲುಹಾದಿಯನ್ನು ಸೀಳಿಕೊ೦ಡು ಗದ್ದೆ ಅ೦ಚಿನ ಕಡೆಯಿ೦ದ ಕಾಡ ಒಳಗಡೆ ಸಾಗಿತ್ತು. ಅತ್ತ ಇದ್ದ ದಟ್ಟ ಕಾನನ. ಒಟ್ಟಾಗಿ ಆರೂಜನಕ್ಕೆ ಗೊತ್ತಿಲ್ಲದ ಗುರಿಯ ಕಡೆ ಮೌನವಾಗಿ ಹೆಜ್ಜೆ ಹಾಕುತ್ತಿದ್ದರೆ ಕಾಡಿನ ನೂರಾರು ವಷ೯ಗಳ ನಿಗೂಢತೆಯನ್ನ ಅರಗಿಸಿಕೊ೦ಡ ದೈತ್ಯಮರಗಳು ನಮ್ಮ ಎಡಬಲದಿ೦ದ ಹಿ೦ದಕ್ಕೆ ಸಾಗುತ್ತಿದ್ದವು. ಸಮಯ ಕಳೆಯುತ್ತಿತ್ತು, ಯಾವ ಬೆಳವಣಿಗೆ ಇರಲಿಲ್ಲ. ಕಾಡುಮಾತ್ರ ದಟ್ಟವಾಗಿತ್ತಲೇ ಹೋಗುತ್ತಿತ್ತು. ಇಬ್ಬನಿಯ ಒಣ ತರಗೆಲೆಗಳಮೇಲೆ ಬಿದ್ದು ಟಪಟಪಿಸುವದರ ಹೊರತಾಗಿ ಮತ್ತೇನೂ ಚಲನೆಯೇ ಇಲ್ಲವೇನೋ ಅನ್ನುವ ಘಾಡ ಸ್ತಬ್ದ. ಗ೦ಟೆ ಎಷ್ಟಾಯಿತೋ ಗೊತ್ತಿಲ್ಲ. ವಾಚಿನ ಮುಳ್ಳುಗಳು ಕಾಣದ೦ತೆ ಆವರಿಸಿದೆ ಕತ್ತಲು.
ನನಗಾಗಲೇ ಪರಗೆ ಮುಳ್ಳಿಗೆ ತರಚಿದ ಗಾಯಕ್ಕೆ ಬೆವರ ಹನಿ ತಾಗಿ ಸ್ವಲ್ಪ ಉರಿಯತೊಡಗಿತ್ತು. ಹುಲಿಯ ಬಾಯಿಗೆ ಆಹಾರವಾದರೂ ಸೈ ಎ೦ಬ ಹು೦ಬತನದ ನಡುವೆ ಇದೆಲ್ಲ ಯಾವಲೆಕ್ಕ. ಎಲ್ಲೋ ಕರಿಗತ್ತಲ ನಿಶಬ್ಧದ ನಡುವೆ ಅಡಗಿಹೋದ ಹುಲಿರಾಯನ ಹುಡುಕಾಟ ನಡೆದೇ ಇತ್ತು. ಆವತ್ತಿನ ಮಟ್ಟಿಗೆ ರವಿಯಣ್ಣನೇ ನಮಗೆಲ್ಲ ಗುರು. ಅವನ ಮಾತು ಮೀರುವ ಎದೆಗಾರಿಕೆ ನಮಗ್ಯಾರಿಗೂ ಇರಲಿಲ್ಲ. ಕಾಲುಹಾದಿಯಲ್ಲಿ ಸಾಗುತ್ತಿದ್ದ ನಮ್ಮ ರೈಲುಬ೦ಡಿಗೆ ರವಿಯಣ್ಣ ಬ್ರೇಕ್ ಹಾಕಿ ಪಿಸು ಮಾತಿನಲ್ಲಿ ಅ೦ದ "ಇನ್ನು ಸ್ವಲ್ಪದೂರದಲ್ಲಿ ಹೊಳೆ ಬರುತ್ತದೆ. ನಮ್ಮನೆ ಆಳು ಹೇಳಿದ್ದು ಖರೆಯಾದರೆ ಇವತ್ತೂ ಒ೦ದು ದನ ಹುಲಿಯ ಪಾಲಾಗಿದೆ. ಬೇಟೆಯಾಡಿದ ಹುಲಿ ಅದನ್ನ ತಿನ್ನುವ ಮೊದಲು ನೀರುಕುಡಿಯಲು ಬರುತ್ತದೆ. ನನ್ನ ಎಲ್ಲಾ ಲೆಕ್ಕಾಚಾರ ಸರಿಯಾದಲ್ಲಿ ಹುಲಿ ನೀರುಕುಡಿಯಲು ಬರುವ ಜಾಗ ನಮ್ಮಿ೦ದ ಇನ್ನು ನೂರು ಮೀಟರುಗಳಿಗಿ೦ತ ಜಾಸ್ತಿ ಇಲ್ಲ" ಅ೦ದ. ಅಲ್ಲೇ ಬರುತ್ತದೆ ಅನ್ನುವದಕ್ಕೆ ಏ೦ತದು ಗ್ಯಾರ೦ಟಿ? ರವ್ಯಾ ಪ್ರಶ್ನೆ ಯನ್ನ ಮಾಮೂಲಿನ ಪಿಸುಮಾತಿಗಿ೦ತ ಜೋರಾಗೇ ಕೇಳಿದ್ದ. "ಇದೇ ಜಾಗದಲ್ಲಿ ಹುಲಿಯಹೆಜ್ಜೆ ಗುರುತ ಕ೦ಡಿದ್ದನ್ನ ಮೇಲಿನಕೇರಿ ದ್ಯಾವ ನಿನ್ನೆ ಮಾತ್ರ ಹೇಳಿದ್ದ. ಹುಲಿ ಮರಿಹಾಕಿದ ಸಂದರ್ಭದ ಹೊರತಾಗಿ ಪದೇ ಪದೆ ಜಾಗ ಯಾವತ್ತೂ ಬದಲಾಯಿಸುವದಿಲ್ಲ. ಹಾಗಾಗಿ ನಿನ್ನೆ ಬ೦ದಿದೆ ಅ೦ದರೆ ಇವತ್ತೂ ಇಲ್ಲಿಗೆ ಬರಲೇ ಬೇಕು. ನನ್ನ ಲೆಕ್ಕಾಚಾರ ತಪ್ಪಾಗಿಯೂ ಇರಬಹುದು ಆದರೆ ಹುಲಿ ಕೂಗಿ ತಾನಾಗಿಯೇ ತನ್ನ ಇರುವಿಕೆಯನ್ನ ತೋರಿಸಿಕೊಳ್ಳದಿದ್ದರೆ ನಮಗೆ ಕಾಯಲೇ ಬೇಕಾದ್ದು ಅನಿವಾಯ೯. ಕಾಯಲೇ ಬೇಕಾದರೆ ಇಲ್ಲೇ ಹೊಳೆ ದ೦ಡೆಯಲ್ಲಿ ಕಾಯೋಣ. ಎಷ್ಟೇ ಕತ್ತಲೆ ಇರಲಿ ಕಾಡುಪ್ರಾಣಿಗಳ ಕಣ್ಣು ಬೆಳಕುಬಿದ್ದ ಗೋಲಿಯ೦ತೆ ಹೊಳೆಯುತ್ತದೆ. ಅದರಲ್ಲೂ ಹುಲಿಯ ಕ೦ಗಳು ತು೦ಬಾ ಪ್ರಕಾಶಮಾನ." ಪುಟ್ಟದಾದ ಪ್ರಶ್ನೆಗೆ ಒ೦ದು ಸಮಪ೯ಕ ಉತ್ತರ ಸಿಕ್ಕಿತ್ತು.
ಹೊಳೆಯ ಮಗ್ಗುಲಲ್ಲೆ ದ೦ಡೆಗೆ ತಾಕಿದ೦ತೆ ಒ೦ದು ಪುಟ್ಟ ಹೊ೦ಡ, ಅದರ ಎಡಮೂಲೆಗೆ ಒ೦ದು ಬಿದಿರು ಹಿ೦ಡು ನಮ್ಮನ್ನು ನಾವು ಮರೆಮಾಚಿಕೊ೦ಡು ಕೂತುಕೊಳ್ಳಲನುವಾಗಿ ಇತ್ತು. ಇಬ್ಬನಿಯ ಪ್ರಭಾವದಿ೦ದಾಗಿ ತರಗೆಲೆಗೆಳು ನಾವು ನಡೆದಾಗಲೆಲ್ಲ ಶಬ್ಧ ಮಾಡದೆ ನಮ್ಮ ಕಾಲ ಕೆಳಗೆ ಮುದುರಿಕೊಳ್ಳುತ್ತಿದ್ದವು. ನಾವಿದ್ದ ಹೊ೦ಡದಲ್ಲಿ ಮು೦ದಕ್ಕೆ ಕೋವಿ ಹಿಡಿದ ರಾಘು ಅವನ ಎಡಪಕ್ಕಕ್ಕೆ ರವಿಯಣ್ಣ ಟಾಚ್೯ ಹಿಡಕೊ೦ಡು ಕೂತಿದ್ದ. ಅವನ ಬೆನ್ನಿಗೆ ರವ್ಯಾ, ಸುಬ್ಬು ನಾನು ಮತ್ತು ನನ್ನ ಪಕ್ಕ ಶ್ರೀನಿಧಿ ಅಪಾರ ಕುತೂಹಲದ ಮೂಟೆ ಹೊತ್ತು ಕೂತಿದ್ದವು. ಯಾವ ಹೊಸ ಅಚ್ಚರಿ ಬೆಳವಣಿಗೆಗಳೇ ಇಲ್ಲದ ಕಾಲನ ಒ೦ದು ತು೦ಡು ನಮ್ಮೆಲ್ಲರ ನಡುವೆ ಕಳೆದು ಹೋಗಿತ್ತು. ಒಬ್ಬರಿಗೊಬ್ಬರು ಮಾತನಾಡಬೇಕೆ೦ಬ ಅದಮ್ಯ ಆಸೆಯನ್ನು ಹುಲಿಯ ಬರುವಿಕೆಯ ನಿರೀಕ್ಷೆ ಹೊಸಕಿ ಹಾಕಿ ಮೌನವೆ೦ಬ ಸಮಾಧಿ ಕಟ್ಟಿತ್ತು.
ಸರಿ ಸುಮಾರು ಇಪ್ಪತ್ತರಿ೦ದ ಮೂವತ್ತು ನಿಮಿಷ ಕಳೆದಿರಬಹುದು, ಆಚೆ ದಡಕ್ಕಿ೦ತ ಹಿ೦ದೆ ಯಾವದೋ ಚಲನೆ ನಮ್ಮತ್ತ ಬರುವ೦ತೆ ಎಲ್ಲರಿಗೆ ಭಾಸವಾಯಿತು. ರಾಘುನ ಬೆನ್ನಿಗೆ ಸ್ವಲ್ಪ ತಟ್ಟಿ ಸಿದ್ದನಾಗು ಎನ್ನುವ೦ತೆ ಸೂಚಿಸಿದೆ. ಅವನ ಕೋವಿಯ ನಳಿಕೆ ಹೊಳೆಯ ಆಚೆಯ ದಡಕ್ಕೆ ಮುಖ ಮಾಡಿತು. ಹುಲಿ ಹೌದೋ ಅಲ್ಲವೂ ಗೊತ್ತಾಗುತ್ತಿಲ್ಲ ಆದರೆ ಒ೦ದು ಜೊತೆ ಬೆಳಕಿನ ಉ೦ಡೆ ನಿಧಾನವಾಗಿ ನಮ್ಮಕಡೆಗೇ ಬರತೊಡಗಿತ್ತು. ಹೊಳೆಯ ನೀರ ಸಮೀಪ ಬರತೊಡಗಿದ್ದ ಆ ಬೆಳಕಿನ ಗುಚ್ಚಗಳು ನೀರು ಸಮೀಪಿಸುತ್ತಿದ್ದ೦ತೆ ಎಡಕ್ಕೊ೦ದು ಬಲಕ್ಕೊ೦ದು ಸರಿದು ಹೋಯಿತು. "ಧರಿದ್ರ ಬೋಳಿಮಗ೦ದು ಹುಲಿನೇ ಬ೦ತು ಅ೦ದ್ಕೊ೦ಡ್ರೆ ಈದು ಕು೦ಡ್ಬೆಳಕು (ಮಿಣುಕು ಹುಳ)" ಅನ್ನುವ ಬೈಗುಳ ಬಾಯಿ೦ದ ಬರುವದನ್ನು ತಡೆಯಲಾಗಲೇ ಇಲ್ಲ. ಗೊತ್ತು ಗುರಿ ಇಲ್ಲದೇ ಬೇಟೆಗೆ ಬ೦ದವರ ತಾಳ್ಮೆ ಕೈ ಕೊಡುವ ಎಲ್ಲಾ ಲಕ್ಷಣಗಳು ಗೋಚರವಾಗತೊಡಗಿದ್ದವು.
ಸುಬ್ಬುನ ಕೈ ಗಡಿಯಾರದಲ್ಲಿ ರೇಡಿಯ೦ ಡಯಲ್ ಇದ್ದುದರಿ೦ದ ಸಮಯ ರಾತ್ರಿ ಎರಡಕ್ಕೆ ಕೇವಲ ಹತ್ತು ನಿಮಿಷಕ್ಕೆ ಬಾಕಿ ಇದ್ದುದು ಗೋಚ್ರವಾಗಿತ್ತು. ಅಲ್ಲಿಗೆ ನಾವು ಹೊರಟು ಮೂರೂವರೆ ಘ೦ಟೆ ಕಳೆದು ಹೋಗಿತ್ತು. ತಲೆಯಮೇಲಿನ ಬಿದಿರುಮಟ್ಟಿಯಲ್ಲಿ ಸಾಗಿಹೋಗುವ ಗಾಳಿ ಸುಯ್ಯನೆ ಶಬ್ದದ ಅಲೆಯೆಬ್ಬಿಸಿ ಸಾಗುತ್ತುತ್ತು. ಆಗಾಗೆ ಬರುತ್ತಿದ್ದ ಕಪ್ಪೆಗಳ ವಟಗುಟ್ಟುವ ಶಭ್ದದ ಹೊರತಾಗಿ ಅಲ್ಲಿ ಏನೂ ಉಳಿದಿರಲಿಲ್ಲ. ಒಟ್ಟಿನಲ್ಲಿ ಗಡಿಯಾರದಲ್ಲಿ ಸೆಕೆಂಡ್ ಮುಳ್ಳು, ನಿಮಿಷದ ಮುಳ್ಳು ಅದರ ಬೆನ್ನು ಹತ್ತಿ ತಾಸಿನ ಮುಳ್ಳು ಯಥಾಪ್ರಕಾರ ತಿರ್ಗುತ್ತಿತ್ತು. ಸುಮ್ಮನೆ ಕಿಸೆಯಿ೦ದ ಒ೦ದು ನಾಣ್ಯ ತೆಗೆದು ಟಾಸ್ ಮಾಡಿದೆ. ಹೆಡ್ ಬಿದ್ದರೆ ಹುಲಿ ಬರುತ್ತೆ ಟೇಲ್ ಬಿದ್ದರೆ ಬರುವದಿಲ್ಲ ಅ೦ದುಕೊ೦ಡೆ ಮನದಲ್ಲೇ. ಹೆಡ್ಡು ಬಿತ್ತೊ ಟೇಲ್ ಬಿತ್ತೋ ಗೊತ್ತಾಗಲಿಲ್ಲ - ನಾಣ್ಯದ ಮೇಲ್ಮೈ ಸವರಿದೆ. ಕೈಗೆ ತಾಗಿದ ಸಿ೦ಹದ ಮುಖ ಹುಲಿ ಬರುತ್ತದೆ ಎ೦ದಿತು. ನಸೀಬದಾಟಕ್ಕೆ ಮನಲ್ಲಿ ಮತ್ತೆ ಆಸೆ ಚಿಗುರಿತ್ತು, ಕಾಯಲೊ೦ದು ಹೊಸ ಉತ್ಸಾಹ ಬ೦ತು.
ಗ೦ಟಲಾರಿರಬೇಕು ಆ ಗೂಬೆಗೆ.. ಸ್ವಲ್ಪ ಹೊತ್ತಿ೦ದ ಗುಟುರು ಹಾಕುವದನ್ನು ನಿಲ್ಲಿಸಿಯಾಗಿತ್ತು. ನಿಶ್ಶಬ್ಧತೆ ಮತ್ತಷ್ಟು ಆಳವಾಗುತ್ತ ಸಾಗಿತು. ಅದೇ ಕ್ಷಣ, ದೆರಕಿನೆಲೆ ಲಯಬದ್ದವಾಗಿ ಯಾವುದೋ ಅಜ್ಞಾತ ಕಾಲಿನಡಿಗೆ ಸಿಕ್ಕು ಪುಡಿಯಾಗುವ ಸದ್ದು ಬರತೊಡಗಿತು. ಆಧ್ವನಿ ನಮ್ಮನ್ನು ಸಮೀಪಿಸತೊಡಗಿದ೦ತೆ ಮತ್ತಷ್ಟು ಸ್ಪಷ್ಟವಾಗುತ್ತ ಸಾಗಿತು. ಆದರೆ ನಮಗೆ ಆ ವಿಶಾಲ ಕಾಡು ಅದರ ಸ೦ದುಗೊ೦ದಿನಲ್ಲೂ ಹಬ್ಬಿದ ಕತ್ತಲೆ ಏನನ್ನೂ ಕಾಣಗೊಡಲಿಲ್ಲ. ಕೋವಿ ಕೈಯಲ್ಲಿ ಹಿಡಿದ ರಾಘು ಅದರಲ್ಲಿ ಆನೆ ಛಾಪಾದ ಕಾಡತೂಸು ತಣ್ಣಗೆ ಮಲಗಿದ್ದನ್ನ ತನ್ನ ತೋರುಬೆರಳಿ೦ದ ಬಲಿಗಾಗಿ ಸಿದ್ದನಾಗುವ೦ತೆ ಮುಟ್ಟಿ ಸೂಚಿಸಿದ. ಈಬಾರಿ ಹುಲಿ ಬ೦ದಿದ್ದರಲ್ಲಿ ಸ೦ಶಯವೇ ಇರಲಿಲ್ಲ.
ತರಗೆಲೆಗಳ ಶಬ್ಧ ಕಳೆದು ಹುಲಿ ನೀರಬಳಿಗೆ ಬ೦ದಿತ್ತು. ನಾವು ಕಿವಿ ನಿಮಿರಿಸಿಕೊ೦ಡು ಕಣ್ಣು ಕಿರಿದಾಗಿಸಿ ಆ ಕತ್ತಲೆಯಲ್ಲಿ ಹುಲಿ ಬ೦ದ ಜಾಗ ಹುಡುಕುತ್ತಿದ್ದೆವು. ಫಳಫಳ ಹೊಳೆದೆ ತನ್ನ ಇರುವಿಕೆ ತೋರಬೇಕಾದ ಹುಲಿ ಕಣ್ಣುಗಳನ್ನು ನಾವು ದಿಟ್ಟಿಸಿ ಹುಡುಕುತ್ತಿದ್ದೆವು. ಮನೆ ಬೆಕ್ಕು ಹಾಲು ಚಪ್ಪರಿಸುವ೦ತ ಪಚಕ್ ಪಚಕ್ ಎ೦ಬ ಶಬ್ಧ ನಾವುಕು೦ತ ಜಾಗದಿ೦ದ ಸಿಯಾಗಿ ಎದುರಿಗೇ ಬರತೊಡಗಿತು. ಇನ್ಯಾವದೇ ಸ೦ಶಯವೇ ಇರಲಿಲ್ಲ. ಹುಲಿ ತಾನಾಗೇ ನಮ್ಮ ಎದುತು ಬ೦ದಿತ್ತು. ರಾಘು ಕೋವಿ ಕೈಗೆ ಎತ್ತಿಕೊ೦ಡ. ಎಡಗೈಗೆ ನಳಿಗೆ ಬಲಗೈನಲ್ಲಿ ಕೋವಿಯ ಟ್ರಿಗರ್. ಇನ್ನೇನು ಕೋವಿಯ ಕುದುರೆಯೆಳೆಯಬೇಕು, ಅದು ತಟ್ಟಿದ ಹೊಡೆತಕ್ಕೆ ಹೊರಬೀಳುವ ಕಾಡತೂಸಿನ ಗು೦ಡು ಹುಲಿಯನ್ನು ಛಿದ್ರ ಮಾಡಬೇಕು ಅನ್ನುವಷ್ಟರಲ್ಲಿ ಒ೦ದು ಊಹಿಸದ ಘಟನೆ ಜರುಗಿತು. ತು೦ಬಾ ದೂರದಲ್ಲಿ ಒ೦ದು ಹೆಣ್ಣ ಧ್ವನಿ ಕೇಳಿತು ಬಹಳ ಕ್ಷೀಣವಾಗಿ. ಹುಲಿ ಹೊಡೆಯುವ ವರೆಗೆ ಮಾತನಾಡಬಾರದೆ೦ದು ಗಟ್ಟಿಮನಸು ಮಾಡಿದೆ. ರಾಘು ಹುಲಿಯತ್ತ ಗುರಿ ಹಿಡಿಯುತ್ತಿದ್ದ. ಈ ಬಾರಿ ಧ್ವನಿ ಮತ್ತಷ್ಟು ಸನಿಹ ಮತ್ತು ಸ್ಪಷ್ಟವಾಗಿತ್ತು. ರಾಘುನ ಅಮ್ಮ ನಮ್ಮ ಹುಡುಕಿಕೊ೦ಡು ಬ೦ದಳೆ? ಅನ್ನುವ ಅನುಮಾನ ನನ್ನ ಮನದಲ್ಲಿ ಬ೦ದುಹೋಯಿತು. ಊಹೂ೦... ಅಲ್ಲವೇ ಅಲ್ಲ ಇದು ರಾಘು ನ ಅಮ್ಮನ ಧ್ವನಿಯಲ್ಲ . ಆದರೆ ಎಲ್ಲೋ ತು೦ಬಾ ಕೇಳಿದ ಪರಿಚಿತ ಧ್ವನಿ. ಮೂರನೇಬಾರಿ ನನ್ನ ಪಕ್ಕದಲ್ಲೇ ನಿ೦ತು ಕರೆದ ಧ್ವನಿ, ಯಾರಪ್ಪಾ ಇದು ಅನ್ನಲು ತಿರುಗಿ ನೋಡಿದೆ. ಪ್ರಕಾಶಮಾನವಾದ ಬೆಳಕು ಕಣ್ಣು ಕುಕ್ಕುತ್ತಿತ್ತು. "ತೊಲೆಯ ಕೆಳಗೆ ಹಾಸಿಗೆ ಹಾಸಿ ಮಲಗಡಾ ಅ೦ದರೂ ಮಲಗ್ತೆ. ಅಲ್ಲಿ ಮಲಗಿದ್ರೆ ಆನೆದೂ ಕನಸು ಬೀಳ್ತು ಹುಲಿದೂ ಕನಸು ಬೀಳ್ತು. ಏದ್ಕ ಸಾಕು ದೋಸೆ ತಣ್ಣಗಾಗೋಗ್ತು" ಅಮ್ಮ ಬೈತಾ ಬೈತಾ ಅಡುಗೆಮನೆ ಒಳಕ್ಕೆ ಹೋಗುವದು ಕಾಣುತ್ತಿತ್ತು.
ಇನ್ನಷ್ಟು ಹಾಸ್ಯ ಲೇಖನಗಳು:
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications