ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಮಹಾದೇವಿಯ ಒಂದು ಜನಪ್ರಿಯ ವಚನದ ಅಂತರಾರ್ಥ

By Staff
|
Google Oneindia Kannada News

Akka Mahadeviತೀರ್ಥಯಾತ್ರೆ, ಸರೋವರ ನದೀಸ್ನಾನ, ಅಲ್ಲಿನ ಸಾಂಪ್ರದಾಯಿಕ ಆರಾಧನೆಗಳೇ ಮುಖ್ಯವೆಂದುಕೊಂಡು, ಹೊರಗಿನ ಕೊಳೆ ಕಳೆದುಕೊಳ್ಳುವ ಪ್ರಯತ್ನದಲ್ಲೇ ಬಾಳ ಸವಿಸುವುದಕ್ಕೆ ತೊಡಗಿದ್ದರೆ, ಎಷ್ಟು ಬಾರಿ ಮುಳುಗೆದ್ದರೂ, ಈಸಿದರೂ ನಿಮ್ಮ ಕೈಗೆ ಅವನು ಎ ಹೇಳಿ, ಎಲ್ಲೇ ಇರಲಿ, ಅವನು ನಿಮಗೆ ಸಿಕ್ಕಾನೇನು? ಇದೇ ಅಕ್ಕ ನಮಗೆಲ್ಲ ಕೇಳುವ ಪ್ರಶ್ನೆ!


ಕನ್ನಡದ ಮೊಟ್ಟ ಮೊದಲ ವಿದ್ವತ್ಪೂರ್ಣ ಕವಯತ್ರಿ ಎಂಬ ಗೌರವಕ್ಕೆ ಪಾತ್ರಳಾದ ಮಹಾದೇವಿ ಅಕ್ಕ, ತನ್ನ ಒಂದು ಪ್ರಖ್ಯಾತ ವಚನದಲ್ಲಿ ಹೀಗೆ ಹೇಳುತ್ತಾಳೆ:

ಚಿಲಿಮಿಲಿಯಿಂದೋದುವ ಗಿಳಿಗಳಿರಾ, ನೀವು ಕಾಣಿರೇ, ನೀವು ಕಾಣಿರೇ;
ಸರವೆತ್ತಿ ಪಾಡುವ ಕೋಗಿಲೆಗಳಿರೇ ನೀವು ಕಾಣಿರೆ, ನೀವು ಕಾಣಿರೇ;
ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೇ;
ಕೊಳನ ತಡಿಯೊಳಗಾಡುವ ಹಂಸಗಳಿರಾ, ನೀವು ಕಾಣಿರೆ, ನೀವು ಕಾಣಿರೇ;
ಗಿರಿಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೇ;
ಚನ್ನಮಲ್ಲಿಕಾರ್ಜುನ ಎಲ್ಲಿದ್ದಹನೆಂದು ನೀವು ಹೇಳಿರೇ.||

ಹೊರನೋಟಕ್ಕೆ, ಮೊದಲ ಓದಿನಲ್ಲಿ, ನಮಗನಿಸುವುದು: ಈ ಭಾವುಕ ವಿರಹಿಣಿ ಯೋಗಿನಿ ಕಾಡಿನಲ್ಲಿ ಅಲೆದಾಡುತ್ತ, ಗಿಡಮರಗಳನ್ನೂ, ಪ್ರಾಣಿಪಕ್ಷಿಗಳನ್ನೂ ಮಾತನಾಡಿಸಿ ಕೇಳುತ್ತಿದ್ದಾಳೆ- ತನ್ನ ಆರಾಧ್ಯದೈವ ಎಲ್ಲಿದ್ದಾನೆ, ನಿಮಗೆ ಗೊತ್ತೆ? ತನ್ನ ಕನಸಿನ ಮನಸಿನ ಇನಿಯ ಚೆನ್ನಮಲ್ಲಿಕಾರ್ಜುನ ನೀವು ನೋಡಿದ್ದೀರಾ? ಅವನೀಗ ಎಲ್ಲಿದ್ದಾನೆ ಎಂಬುದು ನಿಮಗೆ ತಿಳಿದಿದ್ದರೆ ನನಗೆ ಕೂಡಲೇ ಹೇಳಿ- ಎಂಬ ಅವಳ ಆರ್ತತೆಯ ಮೊರೆ ಇಲ್ಲಿದೆ, ಎಂಬ ವಿಚಾರ.

ಹೌದು, ಹರನೇ ಗಂಡನಾಗಬೇಕೆಂದು ಅನಂತಕಾಲ ತಪಸ್ಸಿದ್ದವಳು ಅವಳು, ನೋಡಾ; ಮದುವೆಯ ಮಂಟಪದಲ್ಲಿ ಹಸೆಯನ್ನೇರಿ ಸಂಸಾರಬಂಧನದಲ್ಲಿ ಸಿಲುಕಲೆಂದು ಅರಿಯದವರು ಮಾತನಾಡ ತೊಡಗಿದರೆ, ತಿಳಿದವರು ಅವಳನ್ನ ಶಿವನಹತ್ತಿರ ಕಳಿಸಿದರು. ಗುರುವೇ ತೆತ್ತಿಗ ಹಿತೈಷಿಯಾದ; ಪಚ್ಚೆಯ ನೆಲಗಟ್ಟು, ಕನಕದ ತೋರಣ, ವಜ್ರದ ಕಂಭ, ಹವಳದ ಚಪ್ಪರವಿಕ್ಕಿ ಮಾಣಿಕ್ಯದ ಮೇಲುಕಟ್ಟು ಕಟ್ಟಿ, ಕಂಕಣ ಕೈಧಾರೆ, ಸ್ಥಿರಸೇಸೆಯನ್ನ ಇಕ್ಕಿ- ಸಾದೃಶ್ಯನಾದ ವರನ ನೋಡಿ, ಚೆನ್ನಮಲ್ಲಿಕಾರ್ಜುನನೆಂಬ ಲಿಂಗದೇವ ಮದುವಣಿಗನೊಡನೆಯೇ ಅವಳ ಮದುವೆ ಮಾಡಿದರು, ಇಲ್ಲ ಲಗ್ನ ಆಯಿತು.

ಇವಳು ಉತ್ಕಟ ಪ್ರಣಯಿ. ಕನಸು ಮನಸ್ಸಿನಲ್ಲೂ ಶಿವನಲ್ಲದೇ ಬೇರೊಂದನ್ನ ನೆನೆಯದವಳು. ಹೇಳುತ್ತಾಳೆ: ಗಿರಿಯಲ್ಲಲದೆ ಈ ನವಿಲು ಹುಲ್ಲುಮೊರಡಿಯಲ್ಲಿ ಆಡುತ್ತದೆಯೇ? ಕೊಳವನ್ನು ಬಿಟ್ಟು ಕಿರುಹಳ್ಳವನ್ನು ಹುಡುಕಿಕೊಂಡು ಹಂಸ ಹೋಗದು; ಮಾವಿನಮರದ ತಳಿರು ಸವಿಯದೆ ಕೋಗಿಲೆ ಸುಮ್ಮನೆ ಹಾಡದು; ಪರಿಮಳದ ಹೂಗಳಲ್ಲದೆ ಬೇರೆಡೆಗೆ ದುಂಬಿ ಹೋಗದು- ಹಾಗೆ ನನ್ನ ಮನಸ್ಸೂ ಸಹ ಚೆನ್ನಮಲ್ಲಿಕಾರ್ಜುನನನ್ನು ಬಿಟ್ಟು ಬೇರೆ ಕಡೆಗೆ ಹೋಗಲಾರದು- ಅಂತ. ಅವನು ಕೇಳಿದರೆ ಕೇಳಲಿ, ಇಲ್ಲದಿದ್ದರೆ ಮಾಣು; ತಾನು ಅವನ ಬಗ್ಗೆ ಹಾಡದೆ ಸೈರಿಸಳು. ನೋಡಿದರೆ ನೋಡಲಿ, ಇಲ್ಲದಿದ್ದರೆ ಬಿಡಲಿ; ತಾನಂತೂ ಅವನನ್ನು 'ನೋಡಿ" ಹಿಗ್ಗದೆ ತಣಿಯಳು. ಅವನು ಮೆಚ್ಚಲಿ ಮೆಚ್ಚದಿರಲಿ, ಒಲಿಯಲಿ ಒಲಿಯದಿರಲಿ; ತಾನು ಮಾತ್ರ ಅವನ ರೂಪವನ್ನ ತನ್ನ ಕಣ್ಣುಗಳಲ್ಲಿ ತುಂಬಿಕೊಂಡು, ತನ್ನವನನ್ನಾಗಿಸಿಕೊಂಡು ಇರದೇ ಬಿಡಳು.

ಇಷ್ಟು ತೀಕ್ಷ್ಣವಾಗಿ ಮನಸಾರೆ ಹುಡುಕಿದರೇನೇ 'ಅವನು" ಸಿಗುವುದು; ನಾವೆಷ್ಟೆಷ್ಟರ ಪ್ರಮಾಣದಲ್ಲಿ 'ಶಬರಿ"ಯಾಗಬಲ್ಲೆವೋ, ಅಷ್ಟಷ್ಟು ಬೇಗ ನಮ್ಮ 'ರಾಮ" ನಮ್ಮ ಬಳಿ ಬಂದಾನು! ಪ್ರಾಣಿ ಪಕ್ಷಿಗಳನ್ನೂ ಅಂಗಲಾಚಿ ಕೇಳುವ, ಬೇಡುವ ಈ ವಾಚ್ಯಾರ್ಥ, ವ್ಯಾಖ್ಯಾನ ಈ ವಚನಕ್ಕೆ ಸರಿಯೇ, ತಪ್ಪೇನಿಲ್ಲ. ಆದರೆ, ಇನ್ನೊಂದು ಒಳ ಅರ್ಥ, ಶ್ಲೇಷೆ, ಧ್ವನಿ ಇಲ್ಲಿ ಅಡಗಿದೆ. ಆದನ್ನ ಕವಯತ್ರಿ ನವಿರಾಗಿ, ಸೂಚ್ಯವಾಗಿ ನಮ್ಮ ಗಮನಕ್ಕೆ ತರುತ್ತಿದ್ದಾಳೆ. ಏನದು?

** ** **

ಹದಿನಾಲ್ಕು-ಹದಿನೈದನೇ ಶತಮಾನ ಭಾರತದ ಸಂತಯುಗ: ಉತ್ತರದಲ್ಲಿ ರಾಮಾನಂದ, ತುಲಸೀದಾಸ ನಾನಕ್ ಕಬೀರ ಮೀರಾಬಾಯಿ ಮುಂತಾದವರು, ದಕ್ಷಿಣದಲ್ಲಿ ವಲ್ಲಭಾಚಾರ್ಯ, ಪೂರ್ವದಲ್ಲಿ ಬಂಗಾಳದ ಚೈತನ್ಯ ಚಂಡೀದಾಸ ವಿದ್ಯಾಪತಿಗಳು, ಕಾಶ್ಮೀರದಲ್ಲಿ ಲಲ್ಲೇಶ್ವರಿ- ಹೀಗೆ ಈ ಕಾಲಮಾನದಲ್ಲಿ ಸಂತರೋ ಸಂತರು. ಕಾಶ್ಮೀರದ ಲಲ್ಲಾ, ತಮಿಳು ನಾಡಿನ ಆಂಡಾಳ್, ಮಹಾರಾಷ್ಟ್ರದ ಮುಕ್ತಾಬಾಯಿ, ಜನಾಬಾಯಿ ಮತ್ತು ರಾಜಾಸ್ಥಾನದ ಮೀರಾಬಾಯಿಯರಂತೆ ಕರ್ನಾಟಕದ ಅಕ್ಕ ಮಹಾದೇವಿ ಭಕ್ತಿ ಪಂಥದ ಶ್ರೇಷ್ಠ ಚಿಂತಕರ ಸಾಲಿನಲ್ಲಿ ಮೆರೆದ ಮಹಿಳೆ.

ಗಂಡ ರಾಣಾನನ್ನು ತೊರೆದು, ರಾಜವಂಶದವಳಾದರೂ ಕಾಲಿಗೆ ಗೆಜ್ಜೆ ಕಟ್ಟಿ ದೇವದಾಸಿಯಂತೆ ಭಜನ್‌ಗಳನ್ನು ಹಾಡಿ ಕುಣಿದಾಡಿ, ತನ್ನ ಗಿರಿಧರ ಗೋಪಾಲನನ್ನು ಅರಸುತ್ತ, ಕೊನೆಗೆ ರಾಜಾಸ್ಥಾನದ ಮರಳುಗಾಡಿನಲ್ಲಿ ಮರೆಯಾಗುತ್ತಾಳೆ, ಮೀರಾ. ಯುವಕ ಕೃಷ್ಣನ ನೆನಪಿನಲ್ಲೇ ಆಂಡಾಳ್ ತಮಿಳು ಪಾಶುರಗಳನ್ನ ಹಾಡುತ್ತಾ, ಕೃಷ್ಣನಲ್ಲೇ ಲೀನಳಾಗಿಬಿಡುತ್ತಾಳೆ.

ಕಾರಿಕಲ್ ಅಮ್ಮೆಯಾರ್ ಸಮುದ್ರದ ಬಂದರಿನ ಒಬ್ಬ ಶ್ರೀಮಂತ ವರ್ತಕನ ಮಗಳು. ಈ ಪುಣಿದವತಿ (ನಿಷ್ಕಳಂಕ ಪುಣ್ಯವತಿ)ಗೆ ಚಿಕ್ಕಂದಿನಿಂದಲೂ ಶಿವ ನಟರಾಜನೇ ಆರಾಧ್ಯ ದೈವ. ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಗಂಡ ಪರಮದತ್ತನಿಂದ ಪರಿತ್ಯಕ್ತಳಾಗಿ, ಶಿವನನ್ನು ಬೇಡಿಕೊಂಡು ಕೊನೆಗೆ, ಒಣಗಿದ ಮುದುಕಿಯಾಗಿ, ಶಿವನ ಗಣಗಳಲ್ಲಿ ಒಬ್ಬಳಾಗುವಳು. ತಿರುವಾಲನ್‌ಗಾಡಿನ ನಟರಾಜನ ನೃತ್ಯ ಕುರಿತು ಹಾಡಿದ ಭಕ್ತಿಮಾಲೆಗಳು, ಅರ್ಪುದ ತಿರುವನತಾದಿ ಮುಂತಾದ ಕಾವ್ಯಮಯ ಸ್ತುತಿಗಳಿಂದ ಹೆಸರಾದವಳು.

ಅವ್ವೆಯಾರ್ ತನ್ನ ರೂಪವೇ ತನ್ನ ಸಾಧನೆಗೆ ಅಡ್ಡಿ ಬರುತ್ತದೆಂದು ಕಂಡು, ತನ್ನ ಆರಾಧ್ಯದೈವ ವಿಘ್ನೇಶ್ವರನಿಗೆ ಮೊರೆಯಿಟ್ಟು, ತನ್ನನ್ನು ಒಬ್ಬ ಸಾಮಾನ್ಯ ಮುದುಕಿಯಾಗಿಬಿಡುವಂತೆ ಕೇಳಿಕೊಳ್ಳುತ್ತಾಳೆ. ಊರೂರು ಅಲೆಯುತ್ತ, ಜನರಿಗೆ ರಾಜರಿಗೆ ಬುದ್ಧಿವಾದ ಹೇಳುತ್ತಾ ಅವರನ್ನ ಸನ್ಮಾರ್ಗಕ್ಕೆಳೆಯುತ್ತಾಳೆ. ಈ ಕವಯಿತ್ರಿ ತನ್ನ ತಮಿಳು ಆತ್ತಿ ಚೂಡಿ (ಸವಿನುಡಿ)ಗಳಿಂದ, ನೀತಿ ವೆಣ್ಬಾ ಚೌಪದಿಗಳಿಂದ ಪ್ರಖ್ಯಾತಳು.

ವಿಷ್ಣುಚಿತ್ತನಿಗೆ ತುಳಸೀವನದಲ್ಲಿ ಸಿಕ್ಕ ಮಗು ಗೋದಾ ಬೆಳೆಬೆಳೆಯುತ್ತಲೇ ಬೃಂದಾವನದ ಕೃಷ್ಣನನ್ನು ಮನಸ್ಸಿನಲ್ಲಿ ತುಂಬಿಕೊ೦ಡವಳು. ತನ್ನ ಸೌಂದರ್ಯ ಮತ್ತು ಪ್ರೇಮ ಆ ಕೃಷ್ಣನಿಗೇ ಮೀಸಲಿಟ್ಟುದೆಂಬುದನ್ನ ತೋರಲು, ದೇವರಿಗೆ ತೊಡಿಸುವ ಪುಷ್ಪಹಾರವನ್ನು ತಾನು ಮೊದಲು ಧರಿಸಿ, ತನಗೆ ಒಪ್ಪಿಗೆಯಾದಮೇಲೆ ಅದನ್ನು ದೇವರಿಗೆ ಸಮರ್ಪಿಸುತ್ತಿದ್ದಳೆಂಬ ಕತೆ ಹೇಳುತ್ತಾರೆ. ಬೆಳೆದ ಹುಡುಗಿ ಯಾರನ್ನಾದರೂ ಅನುರೂಪನನ್ನು ಮದುವೆಯಾಗೆಂದು ತಂದೆ ಒತ್ತಾಯಿಸಿದಾಗ, ಶ್ರೀರಂಗದ ರಂಗನಾಥನನ್ನೇ ಹಂಬಲಿಸುತ್ತಾ ಅವನಲ್ಲೇ ಐಕ್ಯಳಾದವಳು ಇವಳು. ಜಗತ್ತನ್ನೇ ಆಳುವ, ಪ್ರೇಮಸಾಗರದಲ್ಲಿ ಮುಳುಗಿದ್ದ ಈ ಆಂಡಾಳ್ ತನ್ನ ತಿರುಪ್ಪಾವೈ, ತಿರುಮೊಳಿಗಳಿಂದ ಚಿರಂಜೀವಿನಿ.

ಸಾಮಾನ್ಯವಾಗಿ ಸಂತರೆಲ್ಲರೂ ಕವಿಗಳು- ಎಂಬ ಮಾತಿದ್ದರೂ, ಕಾವ್ಯಾಂಶ ಬೇರೆ ಬೇರೆ ಪ್ರಮಾಣದಲ್ಲಿ ಅವರ ಕೃತಿಗಳಲ್ಲಿ ಬೆಳಗುತ್ತಿರುತ್ತದೆ. ಅಷ್ಟಾಗಿ ಓದಿರದಿದ್ದರೂ, ಲಲ್ಲಳದು ಅನುಭವಜನ್ಯವಾದ ವಾಖ್‌ಗಳು. ರಾಜವಂಶದ ಮೀರಾಳದ್ದು ಭಕ್ತಿಸಾಹಿತ್ಯದ ಉತ್ತಮ ರಚನೆಗಳು. ಆಂಡಾಳ್‌ಳ ಕೃತಿಗಳು ಅವಳ ಸ್ವೋಪಜ್ಞತೆಯ ಆಳವನ್ನೂ, ವ್ಯಾಸಂಗದ ಹರವನ್ನೂ ತೋರಿಸುತ್ತದೆ.

ಇವರುಗಳ ಮಧ್ಯೆ ಅಕ್ಕ ವಿಭಿನ್ನಳು. ಉಡುತಡಿಯ ಮಹಾದೇವಿ ಅಕ್ಕ ಕೌಶಿಕರಾಜನ ಅಂತ:ಪುರವನ್ನು ಧಿಕ್ಕರಿಸಿ, ಹೊಸಿಲು ದಾಟಿ, ಬಟ್ಟೆಬರೆಗಳನ್ನು ಬಿಸುಟು, ಚನ್ನಮಲ್ಲಿಕಾರ್ಜುನನೇ ತನ್ನಿನಿಯನೆಂದು ಸಾರುತ್ತಾ ವಚನಗಳನ್ನ ಪಾಡುತ್ತಾ, ಅನುಭವಮ೦ಟಪದಲ್ಲಿ ಪುಟವಿಟ್ಟ ಚಿನ್ನವಾಗಿ ಎದ್ದು ಬಂದು, ಕೊನೆಗೆ ಕದಳೀವನದಲ್ಲಿ ಬಯಲಾಗುತ್ತಾಳೆ. ಅವಳು ಚಿಕ್ಕಂದಿನಲ್ಲೇ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದವಳು, ವೇದೋಪನಿಷತ್ತುಗಳನ್ನು ಸಾಕಷ್ಟು ಓದಿಕೊಂಡವಳು, ವ್ಯಾಸಂಗಮಾಡಿದವಳು ಎಂಬುದು ಅವಳ ವಚನಗಳಿಂದಲೇ ವ್ಯಕ್ತವಾಗುತ್ತದೆ. ಅವಳ ಹಲವು ವಚನಗಳಲ್ಲಿ ಆಗಮಗಳಿಂದ ಸಂಸ್ಕೃತ ಮಂತ್ರ, ಶ್ಲೋಕಗಳನ್ನ ಉದ್ಧರಿಸುತ್ತಾಳೆ. ಬಾಣ, ಮಯೂರ, ಕಾಳಿದಾಸ, ಓಹಿಲ, ಉದ್ಭಟ ಮುಂತಾದವರನ್ನೆಲ್ಲಾ ಚೆನ್ನಾಗಿ ಓದಿಕೊಂಡವಳು; ಹಾಗೆ ತಾನೇ ಹೇಳಿಕೊಂಡಿದ್ದಾಳೆ. ಕನ್ನಡದಲ್ಲಂತೂ ಈ ಮಹಾದೇವಿ ಅಕ್ಕನೇ ಪ್ರಥಮ ಕವಯಿತ್ರಿ ಎಂಬ ಹೆಗ್ಗಳಿಕೆಯೂ ಹುಸಿ ಮಾತಲ್ಲ. ಮರಮರ ಮಥಿನಿಸಿ ಹುಟ್ಟಿದ ಕಿಚ್ಚಿನಂತೆ, ಅವಳ ಅನುಭಾವ. ಈ ಅನುಭಾವಿಯ ತತ್ತ್ವಪದರೂಪದ ಅರ್ಥಗರ್ಭಿತ ವಚನಗಳನ್ನ ಅವು ಸ್ಫುರಿಸುವ ವಿಶೇಷಾರ್ಥದ ಬೆಳಕಿನಲ್ಲಿ ದರ್ಶಿಸಬೇಕು.

** ** **

ಈಗ ಮತ್ತೊಮ್ಮೆ ಅಕ್ಕನ ಆ ವಚನವನ್ನ ನೋಡೋಣ; ಅಕ್ಕ ಹೇಳುತ್ತಾಳೆ:
ಚಿಲಿಮಿಲಿಯಿಂದೋದುವ ಗಿಳಿಗಳಿರಾ, ನೀವು ಕಾಣಿರೇ, ನೀವು ಕಾಣಿರೇ;
ಸರವೆತ್ತಿ ಪಾಡುವ ಕೋಗಿಲೆಗಳಿರೇ ನೀವು ಕಾಣಿರೆ, ನೀವು ಕಾಣಿರೇ;
ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೇ;
ಕೊಳನ ತಡಿಯೊಳಗಾಡುವ ಹಂಸಗಳಿರಾ, ನೀವು ಕಾಣಿರೆ, ನೀವು ಕಾಣಿರೇ;
ಗಿರಿಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೇ;
ಚನ್ನಮಲ್ಲಿಕಾರ್ಜುನ ಎಲ್ಲಿದ್ದಹನೆಂದು ನೀವು ಹೇಳಿರೇ.||

ಅರ್ಥ ತಿಳಿಯದೆ, ಭಾವ ಅರಿಯದೆ, ಬರಿ ಮಂತ್ರಗಳನ್ನೇ ಹೇಳಿಕೊಂಡು, ಅದನ್ನೇ 'ಪೂಜೆ" ಎಂದು ನಂಬಿಕೊಂಡವರಿದ್ದಾರೆ; ನೀವು ಆ ಬಗೆಯವರೇನು? ಬರೀ ಕ೦ಠಪಾಠ ಮಾಡಿಕೊಂಡು, ಗಿಳಿಗಳಂತೆ ಮಂತ್ರೋಚ್ಚಾರಣೆಗೇ ಒತ್ತು ಕೊಡುವ, ಆದ್ಯತೆಯೀವ ನೀವು ದೇವರು ಕಾಣುವನೆಂಬ ಭ್ರಮೆಯಲ್ಲಿದ್ದೀರಾ? ಇಲ್ಲ, ನಿಮಗವನು ಕಾಣಲಾರ!

ಕೋಗಿಲೆಯಂತೆ ಸುಶ್ರಾವ್ಯವಾಗಿ ಹಾಡುತ್ತ ನೀವು ಪ್ರಾರ್ಥನೆ, ಭಜನೆ ಮಾಡುತ್ತಿರಬಹುದು; ಆದರೆ, ನಿಮ್ಮ ಮನೋಧರ್ಮವೆಂತಹುದು? ನವಿಲಿನಂತೆ ಚೇತೋಹಾರಿಯಾಗಿ ದೇವರೆದುರು ನೃತ್ಯಮಾಡುತ್ತಿರಬಹುದು. ಅವೆಲ್ಲವೂ ಭಗವಂತನಿಗೆ ಸಮರ್ಪಿಸುವ ನಮ್ಮ ಕಲಾರಾಧನೆ- ಎಂಬ ಭಾವನೆಯೂ ನಿಮ್ಮಲ್ಲಿದ್ದಿರಬಹುದು.

ಆದರೆ, ನಿಮ್ಮ ಗಮನದ ಒಜ್ಜೆಯೆಲ್ಲ ಸ೦ಗೀತಶಾಸ್ತ್ರದ ಅಥವಾ ನೃತ್ಯಶಾಸ್ತ್ರನಿಯಮಗಳ ಪರಿಪಾಲನೆಗೇ ಆದುದಾದರೆ, ನಿಮಗೂ ಭಕ್ತಿಗೂ ದೂರ, ದೂರ ತಾನೆ? ಸಾಹಿತ್ಯವೇನೂ ಬೇಕಿಲ್ಲದೆ, ರಾಗ ವೈಖರಿಯ ವಿನ್ಯಾಸದ ವೈಭವೀಕರಣಕ್ಕಾಗಿಯೇ ಗಂಟೆಗಟ್ಟಲೆ ಹಾಡಬಲ್ಲವರು ನೀವೇನು? ಇಡುವ ಹೆಜ್ಜೆ ಎಲ್ಲಿ ತಪ್ಪೀತೆಂಬ ನಡುಕದ ನಡುವೆಯೂ ನಿಮ್ಮ ಎದೆಯ ಮಿಡಿತ ಮೃಡನ ಜೊತೆಗೂಡೀತೆ? ನಿಮಗವನು ದೊರಕಲಾರ.

ಮಕರಂದಭರಿತ ಪುಷ್ಪಗಳನ್ನರಸಿ ಎತ್ತೆತ್ತಲೋ ಹಾರಾಡುವ ದುಂಬಿಗಳಂತೆ, ಆ ದೇವರು, ಈ ದೇವರು ಎ೦ದುಕೊಂಡು ಕಂಡಕಂಡೆಡೆಯೆಲ್ಲ ಅಲೆಯುತ್ತ ಕೈಮುಗಿಯುತ್ತ, ಏಕಾಗ್ರಚಿತ್ತತೆಯನ್ನ ಕಳೆದುಕೊಂಡರೆ ನಿಮಗೆ ಅವನು ಸಿಗುವನೇನು? ತೀರ್ಥಯಾತ್ರೆ, ಸರೋವರ ನದೀಸ್ನಾನ, ಅಲ್ಲಿನ ಸಾಂಪ್ರದಾಯಿಕ ಆರಾಧನೆಗಳೇ ಮುಖ್ಯವೆಂದುಕೊಂಡು, ಹೊರಗಿನ ಕೊಳೆ ಕಳೆದುಕೊಳ್ಳುವ ಪ್ರಯತ್ನದಲ್ಲೇ ಬಾಳ ಸವಿಸುವುದಕ್ಕೆ ತೊಡಗಿದ್ದರೆ, ಎಷ್ಟು ಬಾರಿ ಮುಳುಗೆದ್ದರೂ, ಈಸಿದರೂ ನಿಮ್ಮ ಕೈಗೆ ಅವನು ಎ ಹೇಳಿ, ಎಲ್ಲೇ ಇರಲಿ, ಅವನು ನಿಮಗೆ ಸಿಕ್ಕಾನೇನು? ಇದೇ ಅಕ್ಕ ನಮಗೆಲ್ಲ ಕೇಳುವ ಪ್ರಶ್ನೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X