ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾನ್ಯ ರೋಗಗಳು ಮತ್ತು ಪ್ರಕೃತಿ ಯೋಗ ಚಿಕಿತ್ಸೆ(3)

By Staff
|
Google Oneindia Kannada News

ಮಲಬದ್ಧತೆ : ಏನು ಮಾಡಬೇಕು? ಏನು ಮಾಡಬಾರದು?

ಮಲಬದ್ಧತೆಯಿಂದ ಪೀಡಿತ ಒಬ್ಬ ರೋಗಿ ಹಾಗೂ ನಿಸರ್ಗ-ಯೋಗ ಚಿಕಿತ್ಸಾ ತಜ್ಞರ ಸಂದರ್ಶನ ಇಲ್ಲಿದೆ. ಈ ವಾರದ ಲೇಖನದಲ್ಲಿ ಯಾವಾಗ ಏನು ತಿನ್ನಬೇಕು? ಏನು ತಿನ್ನಬಾರದು? ಸೇರಿದಂತೆ ಆರೋಗ್ಯ ಸಂಬಂಧಿ ವಿಚಾರಗಳನ್ನು ಅರ್ಥಮಾಡಿಕೊಳ್ಳೋಣ.


ನಿಸರ್ಗದೊಂದಿಗೆ ಹೊಂದಾಗ ಬೇಕು.. ಆಗಲೇ ಆರೋಗ್ಯ!! ರೋಗಿ: ನನಗೀಗ 55ವರ್ಷ..ನನಗೆ ಈಗ...

ತಜ್ಞ: ನಂಬಿಕೆ ಆಗ್ತಾ ಇಲ್ಲ. ನೀವು 65ರ ಹಾಗೆ ಕಾಣ್ತಾ ಇದ್ದೀರಲ್ಲ.

ರೋಗಿ: ಏನು ಮಾಡೋದು ಹೇಳಿ, ಯಾವುದೂ ನಮ್ಮ ಕೈಯಲ್ಲಿ ಇಲ್ಲ. ನಮ್ಮ ಆರೋಗ್ಯ ಕೂಡ. ನಾನು ಬ್ಯಾಂಕಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದೆ. ಹೆಂಡತಿ ಜೀವ ವಿಮಾ ನಿಗಮದಲ್ಲಿ ಅಧಿಕಾರಿ. ಮಕ್ಕಳು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ನನ್ನ ನೌಕರಿ ಇನ್ನು ಹತ್ತು ವರ್ಷ ಇದ್ದಾಗ ಐಚ್ಛಿಕ ನಿವೃತ್ತಿಯ ಲಾಭ ಪಡೆದೆ. ಆರ್ಥಿಕವಾಗಿ ಲಾಭವಾಯ್ತು, ಆದರೆ ನನ್ನ ಜೀವನದಲ್ಲಿ ಹಾನಿಯಾಯ್ತು. ಎಲ್ಲಿಯೋ ಲೆಕ್ಕ ತಪ್ಪಿತು. ಖಾಲಿತನ ತಲೆತಿನ್ನತೊಡಗಿತು. ಬೇರೆಯ ಕೆಲಸ ಹುಡುಕಿದೆ, ಸಂಭಾವನೆ ಬಹಳ ಕಡಿಮೆ ಇತ್ತು. ಅವಮಾನಕಾರಕವಾಗುವಷ್ಟು ಕಡಿಮೆ. ನನ್ನ ಸ್ವಾಭಿಮಾನಕ್ಕೆ ಆತ್ಮಗೌರವಕ್ಕೆ ಧಕ್ಕೆ ಉಂಟಾಯಿತು. ಮನೆಯಲ್ಲೇ ಕುಳಿತೆ. ಬ್ಲಡ್‌ಪ್ರೆಶರ್ ಮತ್ತು ಡಯಬಿಟಿಕ್ಸ್ ದೇಹದ ಕೋಟೆಯನ್ನು ಭೇದಿಸಿದವು. ಸಣ್ಣಪುಟ್ಟ ಕಾಯಿಲೆಗಳಂತೂ ಇದ್ದವು. ಆದರೆ ಮುಖ್ಯವಾಗಿ ಮಲಬದ್ಧತೆ ಕಾಡುತ್ತಿದೆ, ಜೊತೆಗೆ ನಿದ್ರಾಹೀನತೆ, ಆತಂಕ, ಖಿನ್ನತೆಗಳೂ ಇವೆ. ಅಲೋಪತಿ, ಆಯುರ್ವೇದ, ಹೋಮಿಯೋಪತಿ ಎಲ್ಲ ಆಯಿತು. ಈಗ ನಿಮ್ಮ ನಿಸರ್ಗ-ಯೋಗಚಿಕಿತ್ಸೆಯ ಮಾರ್ಗವನ್ನು ಅನುಸರಿಸಿ ನೋಡೋಣ ಅಂತ ತಮ್ಮ ಬಳಿಗೆ ಬಂದೆ.

ತಜ್ಞ: ನಿಮ್ಮ ದೈನಂದಿನ ಕಾರ್ಯಕ್ರಮ ಏನು? ಮುಂಜಾನೆ ವಾಯುವಿಹಾರಕ್ಕೆ ಹೋಗ್ತೀರಾ? ಯೋಗಾಭ್ಯಾಸ ಮಾಡ್ತೀರಾ? ಸಾಮಾಜಿಕ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಂಡಿದ್ದೀರಾ? ಊಟದ ವಿಷಯದಲ್ಲಿ ನಿಯಮಿತತೆ, ಪಥ್ಯಾಹಾರದ ಶಿಸ್ತು, ಪಾಲಿಸುತ್ತೀರಾ?

ರೋಗಿ: ಇದಾವುದೂ ಇಲ್ಲ. ಮೊದಲೂ ಆಸಕ್ತಿ ಇರಲಿಲ್ಲ. ಕೆಲಸದಲ್ಲಿರುವಾಗ ಪ್ರವಾಸ ಬಹಳ ಆಗುತ್ತಿತ್ತು, ಕೆಲಸದ ಒತ್ತಡ ಬಹಳ ಇತ್ತು. ಈಗ ನಿವೃತ್ತಿಯ ನಂತರ ಆತಂಕ ಕಾಡುತ್ತಿದೆ. ಮನೆಯಲ್ಲೇ ಇರುತ್ತೇನೆ. ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತಿರುತ್ತೇನೆ. ಕಣ್ಣಿನ ತೊಂದರೆ ಪ್ರಾರಂಭವಾಗಿದೆ. ಬೆರಳುಗಳು ಒರಟಾಗುತ್ತಿವೆ. ಬೆನ್ನು ನೋವು ಶುರುವಾಗಿದೆ. ನಿದ್ರಾಹೀನತೆ ಕಾಡುತ್ತಿದೆ. ಹೆಚ್ಚಾಗಿ ಮಲಬದ್ಧತೆ ಇದೆ.

ತಜ್ಞ: ಮಲಬದ್ಧತೆಗೆ ಮೂಲಕಾರಣ ಸಂತುಲಿತ ಆಹಾರ ಸೇವಿಸದೇ ಇರುವುದು ಹಾಗೂ ತಪ್ಪು ರೀತಿಯ ಜೀವನ ಪದ್ಧತಿ. ನಿಮ್ಮ ಆಹಾರದಲ್ಲಿ ನಾರಿನಂತಹ ಪದಾರ್ಥ ಸೇವಿಸದಿದ್ದರೆ ಮಲವಿಸರ್ಜನೆ ಸುಲಭವಾಗುವುದಿಲ್ಲ. ಅದಕ್ಕೆ 'ರಫೇಜ್" ಅನ್ನುತ್ತಾರೆ. ಕರುಳಿನ ಚಲನೆಗೆ ಉತ್ತೇಜನ ಕೊಡುವ ಧಾನ್ಯದ ತವಡು, ಕಾಯಿಪಲ್ಲೆಯ ನಾರು, ಧಾನ್ಯದ ಕಚ್ಚಾಭಾಗ ಸೇವಿಸದಿದ್ದರೆ ಮಲಬದ್ಧತೆ ಉಂಟಾಗುತ್ತದೆ. ನೀವು ದಿನದಲ್ಲಿ ಎಷ್ಟು ನೀರು ಕುಡಿಯುತ್ತೀರಿ?

ರೋಗಿ: ನೀರು ಅಷ್ಟಾಗಿ ಕುಡಿಯುವುದಿಲ್ಲ. ಕೆಲಸಮಾಡುತ್ತಿದ್ದಾಗ ಚಹ ಕಾಫೀ ಬಹಳ ಸಲ ಕುಡಿಯುತ್ತಿದ್ದೆ. ಸ್ಟ್ರಾಂಗ ಕಾಫಿ ಮತ್ತು ಟೀ ನನಗೆ ಬಹಳ ಸೇರುತ್ತದೆ. ಈಗ ಡಯಬಿಟಿಕ್ಸ್ ಲಕ್ಷಣ ಕಂಡುಬಂದುದರಿಂದ ಸಕ್ಕರೆರಹಿತ ಚಹ-ಕಾಫಿ ಕುಡಿಯುತ್ತೇನೆ.

ತಜ್ಞ: ಚಹ-ಕಾಫಿ ಸೇವನೆ ನೀರಿಗೆ ಪರ್ಯಾಯವಲ್ಲ. ಅದಕ್ಕೆ ನಮ್ಮ ಹಿರಿಯರು ಬೆಳಿಗ್ಗೆ ತಾಮ್ರದ ತಂಬಿಗೆಯಲ್ಲಿ ನೀರು ಕುಡಿಯುತ್ತಿದ್ದರು. ಅದಕ್ಕೆ ಪೂರ್ವಜರು 'ಉಷಃಪಾನ" ಎಂದು ಕರೆಯುತ್ತಿದ್ದರು. ಅದನ್ನೇ ಇಂದು ಜಪಾನಿಗಳು 'ಹೈಡ್ರೋಥೆರಪಿ" ಎಂಬ ಹೆಸರಿಟ್ಟು ಮುಂಜಾನೆ ೧.೨ ಲೀಟರ್ ನೀರು ಕುಡಿಯಲು ಹೇಳುತ್ತಾರೆ. ಹಲವಾರು ರೋಗಗಳಿಂದ ಮುಕ್ತಿದೊರೆಯುತ್ತದೆ ಎಂದು ಪ್ರಚಾರ ಮಾಡುತ್ತಾರೆ. ಅದು ಬೇರೆ ಮಾತು. ಮಾಂಸಾಹರ, ಅಧಿಕ ಚಹಾ-ಕಾಫಿ ಸೇವನೆ, ಅನಿಯಮಿತ ಆಹಾರ, ಆಧುನಿಕ ಕಾಲದಲ್ಲಿ ಪ್ರಚಾರ ಪಡೆಯುತ್ತಿರುವ 'ಜಂಕ್-ಫುಡ್" ಸೇವನೆ, ದೈಹಿಕ ಕ್ರಿಯಾಹೀನತೆಗಳು ಮಲಬದ್ಧತೆಗೆ ಕಾರಣಗಳಾಗಿವೆ. ಕಿಪ್ಪೊಟ್ಟೆಯ ಸ್ನಾಯುಗಳು ಅಶಕ್ತವಾಗಿದ್ದರೆ ಮಲವಿಸರ್ಜನೆ ಸುಲಭವಾಗುವುದಿಲ್ಲ. ವಯಸ್ಸಾದಂತೆ ಸಂಧಿವಾತ ಸೇರಿಕೊಂಡರೆ, ಮಾನಸಿಕ ಹಾಗೂ ದೈಹಿಕ ಅಶಾಂತಿ, ಹಲ್ಲಿನ ತೊಂದರೆಯಿಂದ ಆಹಾರವನ್ನು ಸರಿಯಾಗಿ ನುರಿಸಲು ಸಾಧ್ಯವಾಗದಿದ್ದರೆ, ಪಚನಕ್ರಿಯೆ ಬಹಳ ಮಂದವಾದರೆ ಅರ್ಥಾತ್ ಜಠರಾಗ್ನಿ ಮಂದವಾದರೆ, ಮಲಬದ್ಧತೆ ಶುರುವಾಗುತ್ತದೆ. ಕೆಲವರಿಗೆ ವಂಶಪರಂಪರೆಯಾಗಿ ಈ ತೊಂದರೆ ಕಾಡುತ್ತದೆ. ಕೆಲಸದ ಚಿಂತೆಗಿಂತ ಕೆಲಸವಿಲ್ಲದ ಚಿಂತೆ ಹೆಚ್ಚು ತಾಪದಾಯಕ.

ರೋಗಿ: ನಾನು ಬಿ.ಪಿ. ಮಾತ್ರೆ ತೆಗೆದುಕೊಳ್ಳುತ್ತೇನೆ. ನಿದ್ರಾಹೀನತೆಯೂ ಕಾಡುತ್ತದೆ. ಮೊದಲು ಮಲಬದ್ಧತೆಗೆ ಮಾತ್ರೆ ಸೇವಿಸುತ್ತಿದ್ದೆ. ಈಗ ಮಾತ್ರೆ ಸೇವಿಸಿದರೂ ಯಾವ ಪ್ರಯೋಜನ ಆಗುತ್ತಿಲ್ಲ.

ತಜ್ಞ: ನಿದ್ರಾಹೀನತೆ, ಆತಂಕ, ಹಸಿವೆಯಾಗದಿರುವುದು ಮಲಬದ್ಧತೆಯಿಂದ ಉಂಟಾಗುತ್ತವೆ. ಮಲಬದ್ಧತೆಗೆ ನೀವು ಸೇವಿಸುವ ಆಹಾರ ಮುಖ್ಯ ಕಾರಣವಾಗಿದೆ. ಆದ್ದರಿಂದ ಮೊದಲು ನಿಮ್ಮ ಆಹಾರದ ಬಗ್ಗೆ ಹೆಚ್ಚು ಗಮನವಿರಲಿ. ಆಹಾರ ಹೆಚ್ಚು ನೈಸರ್ಗಿಕವಾಗಿರಲಿ, ಸಾಮಾನ್ಯವಾಗಿರಲಿ. ಧಾನ್ಯ-ಬೇಳೆಕಾಳುಗಳಲ್ಲಿ ಹೊಟ್ಟು ಇರಲಿ. ಊಟದಲ್ಲಿ ಜೇನುತುಪ್ಪ, ಬೆಲ್ಲದ ಕಾಕಂಬಿ, ಹಸಿರುತೊಪ್ಪಲುಳ್ಳ ತರಕಾರಿ, ಬಸಲೆಸೊಪ್ಪು, ಅವರೆ, ತಿಂಗಳವರೆ, ಟೊಮೆಟೋ, ಈರುಳ್ಳಿ, ಹೂಕೋಸು(ಫ್ಲಾವರ್), ಕೋಸುಗಡ್ಡೆ(ಕ್ಯಾಬೇಜ್), ವಠಾಣಿ, ಗಜ್ಜರಿ, ಮೂಲಂಗಿ, ಸೋರೆಕಾಯಿ, ಕುಂಬಳಕಾಯಿ ಇರಲಿ. ಹಣ್ಣುಗಳು ಊಟದ ಭಾಗವಾಗಿರಲಿ. ಹಣ್ಣಿನಲ್ಲಿ ಮುಖ್ಯವಾಗಿ ಪೇರು(ಪೇರ್), ದ್ರಾಕ್ಷಿ, ಅಂಜೂರ, ಪಪ್ಪಯಾ, ಮಾವು, ಪೇರಲ ಇರಲಿ. ಡ್ರೈಫ್ರುಟ್ಸ್‌ನಲ್ಲಿ ಅಂಜೂರ, ದ್ವೀಪದ್ರಾಕ್ಷಿ, ಅಪ್ರಿಕಾಟ್, ಖಜೂರ ಇರಲಿ. ಮಜ್ಜಿಗೆ ಒಳ್ಳೆಯದು. ಸ್ವಲ್ಪ ಪ್ರಮಾಣದಲ್ಲಿ ತುಪ್ಪ ಕೆನೆ ಸೇವಿಸಬಹುದು. ಆಹಾರವನ್ನು ಚೆನ್ನಾಗಿ ನುರಿಸಿ ತಿನ್ನಬೇಕು. ೩೨ ಸಲ ನುರಿಸಬೇಕೆಂದು ಶಾಸ್ತ್ರವಿದೆ. ಕನಿಷ್ಟ ೧೦-೧೫ ಸಲ ನುರಿಸುವ ಅಭ್ಯಾಸ ಮಾಡಿರಿ. ಕರುಳಿನಲ್ಲಿ ಪಚನಕ್ರಿಯೆ ನಡೆಯುತ್ತದೆ. ಪಚನಕ್ಕೆ ವಿಟಮಿನ್ 'ಬಿ" ಅವಶ್ಯಕ. ಸಕ್ಕರೆ, ಸಿಹಿತಿಂಡಿಗಳು ವಿಟಮಿನ್ 'ಬಿ"ಗೆ ಮಾರಕ. ಆದ್ದರಿಂದ ಅವುಗಳನ್ನು ವರ್ಜಿಸಬೇಕು. ಮೈದಾದಿಂದಾದ ಭಕ್ಷ್ಯ, ಬಿಸ್ಕಿಟ್, ಗಿಣ್ಣ, ಉಪ್ಪಿನಕಾಯಿ, ಮೊಟ್ಟೆಯಿಂದ ಮಲಬದ್ಧತೆ ಉಂಟಾಗುತ್ತದೆ. ಮಾಂಸಾಹರ ಮಲಬದ್ಧತೆ ಹೆಚ್ಚಿಸುತ್ತದೆ. ಇವುಗಳನ್ನು ತ್ಯಜಿಸಬೇಕು.

ರೋಗಿ: ನೀರನ್ನು ಯಾವಾಗ ಎಷ್ಟು ಸೇವಿಸಬೇಕು? ಅದರ ಕ್ರಮವನ್ನು ತಿಳಿಸಿರಿ.

ತಜ್ಞ: ಪ್ರತಿದಿನ ಕನಿಷ್ಠ 8 ಗ್ಲಾಸ್ ನೀರು ಕುಡಿಯಬೇಕು. ಊಟಕ್ಕಿಂತ ಅರ್ಧಗಂಟೆ ಮೊದಲು ಅಥವಾ ಊಟವಾದಮೇಲೆ ಒಂದು ಗಂಟೆಯ ನಂತರ ನೀರು ಸೇವಿಸಬೇಕು.

ರೋಗಿ: ಊಟದ ವೇಳೆಯಲ್ಲಿ ನೀರು ಕುಡಿದರೆ ಹಾನಿಯಿದೆಯೇನು?

ತಜ್ಞ: ನಾವು ಊಟಮಾಡುವಾಗ ನಮ್ಮ ಬಾಯಿಯಲ್ಲಿ ಮತ್ತು ಗಂಟಲಲ್ಲಿ ಸ್ರವಿಸುವ ರಸಗಳು ಅನ್ನದೊಡನೆ ಬೆರೆತು ಪಚನಕ್ರಿಯೆ ಸುಲಭಗೊಳಿಸುತ್ತವೆ. ನೀರು ಕುಡಿದರೆ ಅದು ತೆಳ್ಳಗಾಗಿಬಿಡುತ್ತದೆ.

ರೋಗಿ: ಬಾಳೆಹಣ್ಣು ತಿನ್ನ ಬಹುದೇ?

ತಜ್ಞ: ಬಾಳೆಹಣ್ಣು ಒಳ್ಳೆಯ ಹಣ್ಣು. ಇದು ಸರ್ವಕಾಲಕ್ಕೂ ದೊರೆಯುವ ಫಲ. ಆದರೆ ಇದು ಮಲಬದ್ಧತೆ ಇದ್ದವರಿಗೆ ಒಳ್ಳೆಯದಲ್ಲ. ಅದರಂತೆ ಹಲಸು ಕೂಡ ಒಳ್ಳೆಯದಲ್ಲಿ. ಪೇರು (ಪಿಯರ್ಸ್) ಒಳ್ಳೆಯದು. ಅದು ವಿರೇಚಕದಂತೆ ಕೆಲಸಮಾಡುತ್ತದೆ. ದ್ರಾಕ್ಷೆ ಕೂಡ ಇದೇ ಕೆಲಸ ಮಾಡುತ್ತದೆ. ದಿನಾಲೂ ಕಾಲು ಕಿಲೋ ಸೇವಿಸಬಹುದು. ದ್ರಾಕ್ಷೆ ಸಿಗದ ಋತುವಿನಲ್ಲಿ ಕರಿಯ ದ್ವೀಪದ್ರಾಕ್ಷಿ (೮-೧೦) ನೀರಲ್ಲಿ ೧೨ ಗಂಟೆ ಅಥವಾ ೨೪ ಗಂಟೆ ನೆನೆಹಾಕಬೇಕು. ಬೆಳಿಗ್ಗೆ ಅದನ್ನು ಸೇವಿಸಬೇಕು. ನೆನೆಹಾಕಿದ ನೀರನ್ನೂ ಕುಡಿಯಬೇಕು.

ರೋಗಿ: ನನಗೆ ಆಹಾರದ ಬಗ್ಗೆ ಒಂದು ಚಾರ್ಟ್ ಮಾಡಿಕೊಡಿ ಮತ್ತು ಇತರ ಸಲಹೆ ಇದ್ದರೆ ಕೊಡಿ.

ತಜ್ಞ: ಮೂರು ದಿನ ಉಪವಾಸ ಮಾಡಬೇಕು. ಮೂರು ದಿನ ಬರಿ ನೀರಿನ ಮೇಲೆ ಇರಬೇಕು. ದಿನದಲ್ಲಿ ಮೂರು ಸಲ ದೊಡ್ಡ ಗ್ಲಾಸ್ ನೀರು ಕುಡಿಯಬೇಕು. ಅದರಲ್ಲಿ ಒಂದು ನಿಂಬೆರಸ ಬೆರೆಸಬೇಕು. ಅದರಲ್ಲಿ ಒಂದು ದೊಡ್ಡ ಸ್ಪೂನ್ ಜೇನುತುಪ್ಪ ಇರಲಿ. ನೀರು ಸೇವಿಸುವದರಿಂದ ಮಲವಿಸರ್ಜನೆ ಆಗುವುದಿಲ್ಲ. ಅದಕ್ಕಾಗಿ ಪ್ರತಿದಿನ ಬೆಳಿಗ್ಗೆ ಎನಿಮಾ ತೆಗೆದುಕೊಳ್ಳಬೇಕು. ಕೆಲದಿನ ನಿಸರ್ಗೋಪಚಾರ ಕೇಂದ್ರದಲ್ಲಿ ಇದ್ದರೆ ಒಳ್ಳೆಯದು. ಮನೆಯಲ್ಲಿ ಕೂಡ ಎನಿಮಾ ತೆಗೆದುಕೊಳ್ಳಬಹುದು. ಮೆಡಿಕಲ್ ಶಾಪ್‌ನಲ್ಲಿ ಎನಿಮಾ ಪಾಟ್ ದೊರೆಯುತ್ತದೆ. ಅವನ್ನು ಸ್ನಾನಗೃಹದಲ್ಲಿ ಗೋಡೆಗೆ 4ರಿಂದ 5 ಫೂಟು ಎತ್ತರದಲ್ಲಿ ಮೊಳೆಹೊಡೆದು ಇಳಿಬಿಡಬೇಕು. ಅದರಲ್ಲಿ ಒಂದು ಲೀಟರ್ ಬೆಚ್ಚನೆಯ ನೀರು ತುಂಬಬೇಕು. ಅಲ್ಲ ಅಂಗಾತ ಮಲಗಿ ಅದಕ್ಕಿರುವ ರಬ್ಬರ್ ಟ್ಯೂಬಿನ ಕೊನೆಗೆ ಇರುವ ನಾಜಲ್ ಬಳಸಿ, ಗುದದ್ವಾರದಲ್ಲಿಸೇರಿಸಿ, ನೀರು ಹರಿಯುವಂತೆ ನಾಬ್ ತಿರುಚಬೇಕು. ಗುದದ್ವಾರದ ಮೂಲಕ ನೀರು ದೊಡ್ಡಕರುಳನ್ನು ಪ್ರವೇಶಿಸುತ್ತದೆ. ನೀರು ಖಾಲಿಯಾದಮೇಲೆ ಎನಿಮಾ ಸಲಕರಣೆಯನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದಿಡಬೇಕು. ಐದು ನಿಮಿಷ ನಡೆದಾಡಬೇಕು. ಹೊಟ್ಟೆಯಲ್ಲಿಯ ವಿಷಾಣುಗಳು (ಟಾಕ್ಸಿನ್ಸ್) ಬೇಧಿಯ ಮುಖಾಂತರ ಹೊರಬೀಳುತ್ತವೆ. ಉಪವಾಸವಿರಲು ಸಾಧ್ಯವಾಗದಿದ್ದರೆ ಹಣ್ಣಿನ ರಸದ ಮೇಲೆ ಇರಬೇಕು. ಇದಕ್ಕೆ ಫ್ರುಟ್-ಫಾಸ್ಟ್ ಎನ್ನುತ್ತಾರೆ. ನಾಲ್ಕನೆಯ ದಿನ ಲಘು ಆಹಾರ ಸೇವಿಸಬೇಕು. ನಂತರ ಸಾಮಾನ್ಯ ಊಟ ಮಾಡ ಬೇಕು. ನಂತರ ಶಾಖಾಹರಿ ಭೋಜನ ಮಾಡಬೇಕು. ಹೆಚ್ಚು ಖಾರ, ಗರಂ-ಮಸಾಲಾ ಬಳಸಬಾರದು. ಮುಂಜಾನೆ ಎಂಟಕ್ಕೆ ಬ್ರೆಕ್-ಫಾಸ್ಟ್ ಆದರೆ ಮಧ್ಯಾಹ್ಮ ಹನ್ನೆರಡಕ್ಕೆ ಲಂಚ್, ಸಂಜೆ ನಾಲ್ಕಕ್ಕೆ ಹಣ್ಣು ಅಥವಾ ಹಣ್ಣಿನ ರಸ. ರಾತ್ರಿ ಎಂಟಕ್ಕೆ ಊಟ. (ರಾಜನಂತೆ ಬ್ರೆಕ್-ಫಾಸ್ಟ್, ಸಾಮಾನ್ಯನಂತೆ ಲಂಚ್, ಕಡುಬಡವನಂತೆ ರಾತ್ರಿಯೂಟ- ನೆನಪಿರಲಿ). ಮಿತಾಹಾರವಿರಬೇಕು. ಹಣ್ಣು ಆಹಾರದ ಅಂಗವಾಗಿರಲಿ. ಒಂದುಭಾಗ ಅನ್ನ(ಚಪಾತಿ/ರೊಟ್ಟಿ) ಇದ್ದರೆ ಇನ್ನೊಂದುಭಾಗ ಹಣ್ಣು, ಮತ್ತೊಂದು ಭಾಗ ತರಕಾರಿ ಇರಲಿ. ಗಜ್ಜರಿ, ಮೂಲಂಗಿ, ಸೌತೆಕಾಯಿ ಇವನ್ನು ತುಂಡುಮಾಡಿ ಕಚ್ಚಾ ರೂಪದಲ್ಲೇ ತಿನ್ನಬೇಕು. ಗಟ್ಟಿಯಾದ ಆಹಾರ ಉಂಡ ಮೇಲೆ ನಾಲ್ಕು ಗಂಟೆ ಏನನ್ನೂ ಸೇವಿಸಬಾರದು. ಮಧ್ಯೆ ನೀರು ಕುಡಿಯಬಹುದು. ಬೆಳಿಗ್ಗೆ ಒಂದು ಲಿಟರ್ ನೀರು ಕುಡಿಯಬೇಕು. (ಚಹ ಕುಡಿಯುವುದಕ್ಕಿಂತ ಮೊದಲು.)

ರೋಗಿ: ಯಾವ ಆಸನ ಹಾಕಬೇಕು?

ತಜ್ಞ: ಭುಜಂಗಾಸನ, ಶಲಭಾಸನ, ಧನುರಾಸನ, ಪಶ್ಚಿಮೊತ್ತಾನಾಸನ ಒಳ್ಳೆಯದು. ಪ್ರಾಣಾಯಮ ಮಾಡಬೇಕು. ಕಪಾಲಭಾತಿ, ಅಗ್ನಿಸಾರ ಒಳ್ಳೆಯದು.

ರೋಗಿ: ಈ ವಯಸ್ಸಿನಲ್ಲಿಯೂ ಆಸನ ಕಲಿಯಬಹುದೇ?

ತಜ್ಞ: ನೀವು ಕಲಿಯಲು ಸಿದ್ಧರಿದ್ದರೆ ನಾವು ಕಲಿಸಲು ಬದ್ಧ. ಡೆನ್ಮಾರ್ಕಿನ ಎಪ್ಪತ್ತರ ಹರಯದ ರಾಣಿಗೆ ಶ್ರೀ ಅಯ್ಯಂಗಾರರು ಶೀರ್ಷಾಸನ ಹಾಕಲು ಕಲಿಸಿದ್ದರು. ನಿಮಗೆ ನಾವು ಶೀರ್ಷಾಸನ ಹಾಕಲು ಕಲಿಸಬಹುದು. ಆದರೆ ಬ್ಲಡ್‌ಪ್ರೆಶರ್ ಇರುವವರು ಹೊಟ್ಟೆಯಲ್ಲಿ ಅಲ್ಸರ್ ಇರುವವರು ಶೀರ್ಷಾಸನ ಹಾಕಬಾರದು. ಟಿವಿ ನೋಡಿ, ಸಿ.ಡಿ. ನೋಡಿ ಕೂಡ ಆಸನ ಕಲಿತವರಿದ್ದಾರೆ. ಆದರೆ ಯೋಗಶಿಕ್ಷಕರ ಬಳಿಯಲ್ಲಿ, ಒಬ್ಬ ಗುರುವಿನ ಬಳಿಯಲ್ಲಿ ಕಲಿಯುವುದು ವಿಹಿತ. ನಿದ್ರಾಹೀನತೆಗೆ ಶವಾಸನ ಒಳ್ಳೆಯದು. ಶವಾಸನ ಎಂದರೆ ಮಲಗುವುದಲ್ಲ. ಅದನ್ನೂ ಕಲಿಯಬೇಕಾಗುತ್ತದೆ. ಒಂದು ಮಾತು ಲಕ್ಷ್ಯದಲ್ಲಿ ಇಡಬೇಕು. ಯೋಗ ಎಂದರೆ ಕಸರತ್ತಲ್ಲ. ಯೋಗ ಎಂದರೆ ಚಿತ್ತವೃತ್ತಿ ನಿರೋಧ. ಆಸನಗಳು ದೈಹಿಕ ವ್ಯಾಯಮದ ಜೊತೆಗೆ ಚಿತ್ತದ ಮೇಲೆ ನಿಯಂತ್ರಣ ಸಾಧಿಸಲು ಸಹಕಾರಿಯಾಗಿವೆ. ಜಿಮ್‌ಗೆ ಹೋದರೆ ತೆಳ್ಳಗಾಗುವುದಿಲ್ಲ. ಆದರೆ ಯೋಗಾಸನ ತೆಳ್ಳಗಿದ್ದವರನ್ನು ದಪ್ಪ ಮಾಡುತ್ತದೆ, ಸ್ಥೂಲಕಾಯವಿದ್ದವರನ್ನು ತೆಳ್ಳಗೆ ಮಾಡುತ್ತದೆ. ಇದೇ ಅದರ ವೈಶಿಷ್ಟ್ಯ. ವ್ಯಾಯಾಮದೊಂದಿಗೆ ಸರಿಯಾದ ಆಹಾರ ಸೇವನೆಯೂ ಮುಖ್ಯ ಪಾತ್ರವಹಿಸುತ್ತದೆ. ಮನದ ತಲ್ಲಣ, ಉದ್ವೇಗ, ಸಂತಾಪಗಳನ್ನು ನಿಯಂತ್ರಿಸಲು ಧ್ಯಾನ ಮಾಡಲು ಕಲಿಯಬೇಕು.

ರೋಗಿ: ನೀವು ಹೇಳಿದ ದಾರಿಯಲ್ಲಿ ನಡೆಯಲು ಪ್ರಯತ್ನಿಸುವೆ.

ತಜ್ಞ: ಮನವಿದ್ದಲ್ಲಿ ಮಾರ್ಗವಿದೆ. ಬೆಳಕಿದ್ದಲ್ಲಿ ಕತ್ತಲೆಯಿಲ್ಲ, ಯೋಗವಿದ್ದಲ್ಲಿ ರೋಗವಿಲ್ಲಿ.

ಪೂರಕ ಓದಿಗೆ :

ಮಲಬದ್ಧತೆ ತಪ್ಪಿಸಲು ಸುಲಭ ಮತ್ತು ಸರಳ ಉಪಾಯಗಳು
ಮಲಬದ್ಧತೆ : ಇದು ಅಂತಾರಾಷ್ಟ್ರೀಯ ಮಟ್ಟದ ಕಾಯಿಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X