• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಗ ಜೋಕರ್‌ ಎನಿಸಿಕೊಂಡ ಲಾಲೂ ಈಗ ಜಗದೇಕವೀರ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ಆ ಮನುಷ್ಯ ಬದಲಾದ ಪರಿ ಕಂಡು ಅಚ್ಚರಿಯಾಗುತ್ತಿದೆ!

ಕಳೆದ ಹದಿನೈದು ವರ್ಷಗಳಲ್ಲಿ ಆತನನ್ನು ಹೊಗಳಿದವರು ತೀರಾ ಕಡಿಮೆ. ಹೊಗಳುವುದಿರಲಿ, ಎಲ್ಲರೂ ಆತನನ್ನು ಜೋಕರ್‌, ಬಪೂನ್‌ ಎಂದು ಲೇವಡಿ ಮಾಡಿದವರೇ. ಯಾರು ಆತನನ್ನು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಎಲ್ಲ ನೆಗೆಟಿವ್‌ಗಳಿಗೆ ಆತ ಸಂಕೇತವಾಗಿದ್ದ. ಅದರಲ್ಲಿ ಅತಿಶಯೋಕ್ತಿಯೇನೂ ಇರಲಿಲ್ಲ. ಅಕ್ಷರಶಃ ಆತ ಜೋಕರ್‌ ಥರಾನೇ ನಡೆದುಕೊಂಡಿದ್ದ.

ಲಾಲೂ ಪ್ರಸಾದ್‌ ಯಾದವ್‌ ಅಂತ ಅವನನ್ನು ಕರೆಯುತ್ತೇವೆ!

‘ಹಾಯ್‌ ಬೆಂಗಳೂರ್‌’ ಪತ್ರಿಕೆಯಲ್ಲಿ ಐದಾರು ವರ್ಷಗಳ ಹಿಂದೆ ನಾನೇ ಆತನ ಬಗ್ಗೆ ‘ಲಾಲೂ ಕತೆ ಬಿಹಾರದ ವ್ಯಥೆ’ ಎಂದು ಸುಮಾರು 75 ವಾರ ಧಾರಾವಾಹಿ ಬರೆದಿದ್ದೆ. ಆಗ ಲಾಲೂ ತನ್ನ ಹೆಂಡತಿ ರಾಬ್ಡಿದೇವಿಯನ್ನು ಮುಖ್ಯಮಂತ್ರಿಯಾಗಿ ಮಾಡಿದ್ದ. ಲಾಲೂ ವಿರೋಧಿಗಳೆಲ್ಲ ಬಿಹಾರದಲ್ಲಿ ‘ಜಂಗಲ್‌ ರಾಜ್‌’ ನೆಲೆಸಿದೆಯೆಂದು ಜರಿಯುತ್ತಿದ್ದರು. ಸಾರ್ವಜನಿಕ ಜೀವನದ ಎಲ್ಲ ಕೊಳಕು, ಕೆಡಕುಗಳಿಗೆ ‘ಬಿಹಾರೀಕರಣ’ ಎಂದೇ ಕರೆಯಲಾಗುತ್ತಿತ್ತು. ಕರ್ನಾಟಕದಲ್ಲಿ ರಾಜಕೀಯ ಪ್ರೇರಿತ ಕೊಲೆ, ಸುಲಿಗೆ, ಅತ್ಯಾಚಾರಗಳಾದರೂ, ‘ಕರ್ನಾಟಕ ಬಿಹಾರ ಮಾರ್ಗದಲ್ಲಿ ಹೊರಟಿದೆ’ ಎಂದು ಹೇಳಲಾಗುತ್ತಿತ್ತು. ರಾಜಕಾರಣ ಹಾಗೂ ಸಮಾಜ ಜೀವನದ ಎಲ್ಲ ಲೋಪ-ದೋಷ, ಅತಿರೇಕ, ಅಂಕು-ಡೊಂಕು, ಅಪಸವ್ಯಗಳಿಗೆಲ್ಲ ನಮಗೆ ನೆನಪಾಗುತ್ತಿದ್ದುದು ಬಿಹಾರವೇ. ಬಿಹಾರವೆಂದರೆ ಯಾವ ಕಾನೂನು ಕಟ್ಟಳೆಗಳೂ ಲಾಗೂ ಆಗದ, ಅರಾಜಕತೆಯಾಂದೇ ಮೆರೆಯುವ, ಲಾಲೂನ ದುರಾಡಳಿತಕ್ಕೊಳಗಾದ ರಾಜ್ಯವೆಂದೇ ಕುಖ್ಯಾತ. ಇಷ್ಟೇ ಅಲ್ಲ, ಬಿಹಾರದಿಂದ ನರಕಕ್ಕೆ ಫೋನ್‌ ಮಾಡಿದರೆ, ‘ಲೋಕಲ್‌ ಕಾಲ್‌’ಎಂದು ಆ ರಾಜ್ಯದ ಬಗ್ಗೆ ಜೋಕ್‌ ಹೇಳಿ ನಕ್ಕವರು ನಾವು.

ಕೇವಲ ಹದಿನೈದು ವರ್ಷಗಳಲ್ಲಿ ಲಾಲೂ ಏನೆಲ್ಲ ಅನಾಚಾರ ಮಾಡಬಹುದೋ ಅವೆಲ್ಲವನ್ನೂ ಬಿಹಾರದ ಮೇಲೆ ಮಾಡಿದ್ದಾನೆ. ಅಕ್ಷರ, ಆಡಳಿತ ಗೊತ್ತಿಲ್ಲದ ತನ್ನ ಹೆಂಡತಿಯನ್ನೇ ಮುಖ್ಯಮಂತ್ರಿಯಾಗಿ ಮಾಡಿ, ಈ ದೇಶದ ಯಾವ ರಾಜಕಾರಣಿಯೂ ಮಾಡಲು ಹೇಸುವ ಕೆಲಸಕ್ಕೆ ಸಹಾ ಮುಂದಾಗಿದ್ದಾನೆ. ಅನಾಚಾರಗಳ ಖಾತೆ ಕಿರ್ದಿ ತೆರೆಯುತ್ತಾ ಹೋದರೆ, ಆತ ಮಾಡದೇ ಬಿಟ್ಟ ಕೆಲಸಗಳು ಸಿಗಲಿಕ್ಕಿಲ್ಲ. ತನನ್ನು ಜೈಲಿನಲ್ಲಿಟ್ಟಾಗಲೂ ಆತ ಸುಮ್ಮನಾಗಲಿಲ್ಲ. ‘ಮುಖ್ಯಮಂತ್ರಿ’ಯನ್ನೇ ಅಲ್ಲಿಗೆ ಕರೆಯಿಸಿಕೊಂಡು ಆದೇಶ ನೀಡಿದ ಲಾಲೂ, ಪ್ರಜಾಪ್ರಭುತ್ವ ಬಯಸುವ ಎಲ್ಲ ಸಭ್ಯತೆಗಳನ್ನೂ ಗಾಳಿಗೆ ತೂರಿದವ.

ಆತ ಮುಖ್ಯಮಂತ್ರಿಯಾದಾಗ ನೋಡಬೇಕಿತ್ತು. ಮರದ ಕೆಳಗೆ, ಕೊಟ್ಟಿಗೆಯಲ್ಲಿ ಕ್ಯಾಬಿನೆಟ್‌ ಸಭೆ ನಡೆಸಿದ. ದನಕರುಗಳ ಮೈ ತೊಳೆದು, ಅವುಗಳ ಮೇಲೇರಿ ಫೋಟೊ ತೆಗೆಸಿಕೊಂಡ. ಸಗಣಿ ಬಳಿದು ಸುದ್ದಿ ಮಾಡಿದ. ಬಡಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸಿ ಫೋಟೊ ತೆಗೆಸಿಕೊಂಡ. ಪಾಟ್ನಾದ ನಾಲ್ಕು ಕೂಡು ರಸ್ತೆಯಲ್ಲಿ ಟ್ರಾಫಿಕ್‌ ಪೊಲೀಸ್‌ನಂತೆ ನಿಂತು ವಾಹನಗಳಿಗೆ ಸಿಗ್ನಲ್‌ ಕೊಡುತ್ತಾ ಸುದ್ದಿ ಮಾಡಿದ. ಮುಖ್ಯಮಂತ್ರಿ ಮನೆಯಲ್ಲಿಯೇ 40-50 ದನಕರುಗಳನ್ನು ಕಟ್ಟಿ, ಮನೆ ಮುಂದೆ ಬೂತು ಮಾಡಿ ಹಾಲು, ಮೊಸರು, ಸಗಣಿ ಮಾರಾಟ ಮಾಡಿದ. ತನ್ನ ಮನೆಯಲ್ಲಿಯೇ ಕುಖ್ಯಾತ ರೌಡಿ, ದರೋಡೆಕೋರರಿಗೆ ಆಶ್ರಯ ನೀಡಿದ. ಇಂಥವರನ್ನು ಜೈಲಿಗೆ ಹೋಗಿ ಭೇಟಿ ಮಾಡಿ ಬರುತ್ತಿದ್ದ. ರಾಜಕೀಯ ವೈರಿಗಳನ್ನು ಮುಲಾಜಿಲ್ಲದೇ ಮುಗಿಸಿದ. ಚುನಾವಣೆಯಲ್ಲಂತೂ ಕೊಲೆಗಡುಕರಿಗೆ, ರೌಡಿಗಳಿಗೆ ಟಿಕೆಟ್‌ ಕೊಟ್ಟು ಅವರೆಲ್ಲ ಗೆಲ್ಲುವಂತೆ ಕಾಳಜಿ ವಹಿಸಿದ. ಸಜ್ಜನರ್ಯಾರೂ ರಾಜಕಾರಣದತ್ತ ಸುಳಿಯದಂತೆ ನೋಡಿಕೊಂಡ.

ಬಿಹಾರ ಎಲ್ಲ ರೀತಿಯಿಂದಲೂ ‘ಗೂಂಡಾ ರಾಜ್ಯ’ವೇ ಆಯಿತು. ಲಾಲೂಗೆ ಎದುರು ನಿಲ್ಲುವವರೆಲ್ಲ ತರಗೆಲೆಗಳಂತೆ ತರಿದು ಹೋದರು. ಈ ಎಲ್ಲ ದುರಾಡಳಿತದ ನಡುವೆಯೂ ಲಾಲೂ ಚುನಾವಣೆಯಲ್ಲಿ ಗೆದ್ದುಬರುತ್ತಿದ್ದ. ಆತನನ್ನು ಸೋಲಿಸುವುದು ಸಾಧ್ಯವೇ ಇಲ್ಲವೆಂದಾಯಿತು. ಬಹುಕೋಟಿ ಮೇವು ಹಗರಣದಲ್ಲಿ ಸಿಲುಕಿಕೊಂಡಾಗ ‘ಮುಗಿಯಿತು ಅವನ ಕತೆ’ ಎಂದು ಎಲ್ಲರೂ ಅಂದುಕೊಂಡರು. ಸಿಬಿಐ ಆತನನ್ನು ಬಂಧಿಸಿದಾಗ ಎಲ್ಲಾ ಸೇರಿ ಆತನ ರಾಜಕೀಯ ಸಮಾಧಿ ತೋಡಿದ್ದರು.

ಆದರೆ ಅವೆಲ್ಲವನೂ ಕೊಡವಿ ಮೇಲೆದ್ದು ಬಂದ, ‘ಸಮೋಸಾದಲ್ಲಿ ಆಲೂ ಇರುವ ತನಕ, ಬಿಹಾರದಲ್ಲಿ ಲಾಲೂ’ ಎಂಬ ಮಾತು ಚಾಲ್ತಿಗೆ ಬಂತು. ಬಿಹಾರದಂಥ ಪ್ರಮುಖ ರಾಜ್ಯವನ್ನು ತನ್ನ ಆಡುಂಬೊಲದಂತ ಬಳಸಿಕೊಂಡು ತನ್ನ ಆಧಿಪತ್ಯ ಸ್ಥಾಪಿಸಿದ ಲಾಲೂ, ಹದಿನೈದು ವರ್ಷಗಳ ಕಾಲ ಮನಬಂದಂತೆ ಆಳಿದ.

ಪರಿಣಾಮ ಬಿಹಾರ ಬೋರಾಲಾಗಿ ಬಿತ್ತು. ರಾಜ್ಯ ದಿವಾಳಿಯೆದ್ದು ಹೋಯಿತು. ಬಂಡವಾಳದಾರರು ಅತ್ತ ಮುಖ ಹಾಕಲಿಲ. ಇದ್ದವರು ಎದ್ದು ಹೋದರು. ಮಾಫಿಯಾಗಳು ಆಯಕಟ್ಟಿನ ಜಾಗದಲ್ಲಿ ಕುಳಿತರು. ವಿದ್ಯುತ್‌, ರಸ್ತೆ, ಮುಂತಾದ ಮೂಲಭೂತ ಸೌಕರ್ಯಗಳಿಲ್ಲದೇ ಕೈಗಾರಿಕೆಗಳೆಲ್ಲ ಮುಚ್ಚಿ ಹೋದವು. ನಿರುದ್ಯೋಗ ಹೆಚ್ಚಿತು. ಕೊಲೆ, ಸುಲಿಗೆಗಳೇ ಜನರ ಮುಖ್ಯ ಕಸುಬಾದವು. ಕಾನೂನ-ಸುವ್ಯವಸ್ಥೆ ಗಾಳುಮೇಳಾಯಿತು. ಇವೆಲ್ಲವುಗಳಿಗೆ ಪ್ರತ್ಯಕ್ಷ ಕಾರಣನಾದ ಲಾಲೂ ಇಡೀ ದೇಶದ ಕಣ್ಣಿಗೆ ‘ಖಳನಾಯಕ’ ನಾಗಿ ಕಂಡಿದ್ದಂತೂ ನಿಜ. ಇಂಥವನನ್ನು ಯಾರು ತಾನೇ ಹೊಗಳಿಯಾರು? ಟೀಕಿಸದೇ ಬಿಟ್ಟಾರು?

ಇದೇ ಲಾಲೂ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಅಧಿಕಾರ ಕಳೆದುಕೊಂಡ. ಒಂದೂವರೆ ದಶಕಗಳ ಲಾಲೂ ಚಕ್ರಾಧಿಪತ್ಯ ಕೊನೆಗೊಂಡಿತು.

ಆದರೆ ಕೇಂದ್ರದಲ್ಲಿ ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಸರಕಾರದಲ್ಲಿ ಲಾಲೂ ರೈಲ್ವೆ ಮಂತ್ರಿಯಾದ. ಪುನಃ ಟೀಕಿಸುವ ಬಾಯಿಗಳು ವಟಗುಟ್ಟಲಾರಂಭಿಸಿದವು. ಜಗತ್ತಿನಲ್ಲಿಯೇ ಎರಡನೇ ಅತಿದೊಡ್ಡ ವ್ಯವಸ್ಥೆಯೆಂದೇ ಪರಿಗಣಿಸಲಾಗಿರುವ ರೈಲ್ವೆ ಖಾತೆಯನ್ನು ಹಠಕ್ಕೆ ಬಿದ್ದು ಪಡೆದುಕೊಂಡಿದ್ದ ಲಾಲೂ, ‘ದೇಶದ ಜೀವನಾಡಿ’ ಎಂದೇ ಭಾವಿಸಲಾಗಿರುವ ರೈಲ್ವೆಯನ್ನು ಸಂಪೂರ್ಣ ಹದಗೆಡಿಸಿಬಿಡುತ್ತಾನೆಂದು ಬಹುತೇಕ ಮಂದಿ ಭಾವಿಸಿದ್ದರು.

ಆದರೆ ರೈಲ್ವೆ ಮಂತ್ರಿಯಾಗಿ ಕೇವಲ ಎರಡು ವರ್ಷಗಳಲ್ಲಿ ಇಡೀ ದೇಶವೇನು, ವಿಶ್ವವೇ ಬೆರಗಾಗುವ ರೀತಿಯಲ್ಲಿ ಕೆಲಸ ಮಾಡಿ ತೋರಿಸಿದ್ದಾನೆ. ತನ್ನ ರಾಜಕೀಯ ವೈರಿಗಳಾದ, ಮಾಜಿ ರೈಲ್ವೆ ಸಚಿವರಾದ ಜಾರ್ಜ್‌ ಫರ್ನಾಂಡಿಸ್‌, ನಿತೀಶ್‌ಕುಮಾರ್‌ ಹಾಗೂ ರಾಂ ವಿಲಾಸ್‌ ಪಾಸ್ವಾನ್‌ ಅವರಿಗಿಂತಲೂ ‘ಉತ್ತಮ ರೈಲ್ವೆ ಮಂತ್ರಿ’ ಎಂಬ ಅಭಿದಾನಕ್ಕೆ ಪಾತ್ರನಾಗಿದ್ದಾನೆ. ‘ಹೇಗಿದ್ದವ ಹೇಗಾದ? ಹೀಗಿದ್ದವ ಹಾಗಾಗಿಬಿಟ್ಟನಲ್ಲ’ ಎಂಬ ರೀತಿಯಲ್ಲಿ ಬದಲಾಗಿ ಅಚ್ಚರಿ ಮೂಡಿಸಿದ್ದಾನೆ. ಹತ್ತು ಹನ್ನೆರಡು ವರ್ಷಗಳ ಹಿಂದೆ ನೋಡಿದ ಲಾಲೂ ಎಲ್ಲಿ, ಎರಡು ವರ್ಷಗಳಿಂದ ನೋಡುತ್ತಿರುವ ಲಾಲೂ ಯಾರು ಎಂದು ನಾವೇ ಕೇಳಿಕೊಳ್ಳುವಂತಾಗಿದೆ.

ಭಾರತೀಯ ರೈಲ್ವೆಯ ಅಗಾಧತೆಯೇ ಅದ್ಭುತವಾದುದು. ಸುಮಾರು 75ಸಾವಿರ ಕಿ.ಮೀ. ಹಳಿ, 20ಲಕ್ಷಕ್ಕೂ ಅಧಿಕ ಸಿಬ್ಬಂದಿ, 10ಸಾವಿರಕ್ಕೂ ಅಧಿಕ ರೈಲು, ಹತ್ತಾರು ವಿಭಾಗ, ವಲಯಗಳು, ದೇಶವ್ಯಾಪಿ ಹರಡಿರುವ ಜಾಲ, ಪ್ರತ್ಯೇಕ ಸಚಿವಾಲಯ, ಪ್ರತ್ಯೇಕ ಬಜೆಟ್‌... ಇತ್ಯಾದಿ. ಕೇಂದ್ರ ಸರಕಾರದ ಬೇರಾವ ಖಾತೆಯಲ್ಲೂ ಈ ಪರಿ ಸಿಬ್ಬಂದಿಯಾಗಲಿ, ಜಾಲವಾಗಲಿ ಇಲ್ಲ. ಭಾರತೀಯ ರೈಲ್ವೆಯನ್ನು ಅರ್ಥ ಮಾಡಿಕೊಳ್ಳುವುದು ಸಣ್ಣ ಮಾತಲ್ಲ. ಇಡೀ ವ್ಯವಸ್ಥೆ ಅರ್ಥಮಾಡಿಕೊಳ್ಳುವುದಿರಲಿ, ರೈಲ್ವೇ ಟೈಮ್‌ಟೇಬಲ್ಲನ್ನೇ ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ತಮಾಷೆಯಿಂದ ಹೇಳುವುದುಂಟು. ಹೀಗಿರುವಾಗ ಇಡೀ ವ್ಯವಸ್ಥೆಗೆ ಕಾಯಕಲ್ಪ ಕೊಡುವುದಿದೆಯಲ್ಲ, ನಿಜಕ್ಕೂ ಹರಸಾಹಸವದು.

ಲಾಲೂ ರೈಲ್ವೆಮಂತ್ರಿಯಾದ ತಕ್ಷಣ ಇಡೀ ವ್ಯವಸ್ಥೆಗೆ ಕಾಯಕಲ್ಪ ನೀಡಲು ನಿರ್ಧರಿಸಿದ. ದೇಶಾದ್ಯಂತ ರೈಲು ಬೋಗಿ ಹಾಗೂ ರೈಲು ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ಕಪ್‌ಗಳನ್ನು ನಿಷೇಧಿಸಿದ. ಇದರಿಂದ ಗ್ರಾಮೀಣ ಉದ್ಯೋಗಾವಕಾಶಗಳು ಹೆಚ್ಚಿದವಲ್ಲದೇ, ನಿಲ್ದಾಣಗಳು ಸ್ವಚ್ಛವಾದವು. ಆನಂತರ ಮಜ್ಜಿಗೆ ಹಾಗೂ ಖಾದಿಯನ್ನು ಉಪಯೋಗಿಸಲು ಸೂಚಿಸಿದ. ಗ್ರಾಮೀಣ ಉದ್ಯೋಗ ಅವಕಾಶಕ್ಕೆ ಒತ್ತು ನೀಡುವುದೇ ಇದರ ಆಶಯ. ರೈಲಿನಲ್ಲಿಯೇ ಪ್ರಯಾಣ ಮಾಡುವುದಾಗಿ ಘೋಷಿಸಿದ ಲಾಲೂ, ಪ್ರಯಾಣಿಕರ ಕುಂದು-ಕೊರತೆಗಳನ್ನು ರೈಲಿನಲ್ಲಿಯೇ ಕೇಳಿ, ಪರಿಹರಿಸುವ ಪರಿಪಾಠ ಆರಂಭಿಸಿದ.

ರೈಲು ನಿಲ್ದಾಣಗಳಿಗೆ ರಾತ್ರಿ ವೇಳೆ ಆಕಸ್ಮಿಕವಾಗಿ ಭೇಟಿಯಿತ್ತು ಮೈಗಳ್ಳ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ. ಹೊಸದಿಲ್ಲಿಯಲ್ಲಿರುವ ರೈಲು ಭವನಕ್ಕೆ ಹೇಳದೇ ಕೇಳದೇ ದಿಢೀರ್‌ ಭೇಟಿ ನೀಡಿದಾಗ, ಐನೂರಕ್ಕೂ ಹೆಚ್ಚು ಮಂದಿ ಕೆಲಸಕ್ಕೆ ತಡವಾಗಿ ಬರುತ್ತಿರುವುದು ತಿಳಿಯಿತು. ಇವರೆಲ್ಲರ ಸಂಬಳ ಕಡಿತಗೊಳಿಸಿದ. ಮುಂಬೈನಿಂದ ದಾನಾಪುರಕ್ಕೆ ಆಗಮಿಸುತ್ತಿದ್ದ ಗೂಡ್ಸ್‌ರೈಲನ್ನು ಅಡ್ಡಗಟ್ಟಿದ ಲಾಲೂ ರೈಲ್ವೆ ಅಧಿಕಾರಿಗಳು ಹಾಗೂ ಟ್ರಾನ್ಸ್‌ಪೋರ್ಟರ್‌ಗಳ ನಡುವಿನ ಅಪವಿತ್ರ ಮೈತ್ರಿಯಿಂದಾಗಿ ರೈಲ್ವೆಗೆ ಆಗುತ್ತಿರುವ ನೂರಾರು ಕೋಟಿ ರೂಪಾಯಿಗಳ ಹಗರಣ ಬಯಲಿಗೆಳೆದ. ತೂಕ ಹಾಗೂ ಅಳತೆಯಲ್ಲಿ ಮೋಸ ಮಾಡಿ ಇವರೆಲ್ಲ ರೈಲ್ವೆಗೆ ಅಪಾರ ನಷ್ಟವನ್ನುಂಟುಮಾಡುತ್ತಿದ್ದರು. ಲಾಲೂ ರೈಲ್ವೆ ಮಂತ್ರಿಯಾದ ಬಳಿಕ ರೈಲು ಅಪಘಾತಗಳೇ ಸಂಭವಿಸಲಿಲ್ಲ ಎಂದಲ್ಲ, ಆದರೆ ಹಿಂದಿನವರಿಗೆ ಹೋಲಿಸಿದರೆ, ಬಹಳ ಕಮ್ಮಿ. ರೈಲಿನಲ್ಲಿನ ಅಪರಾಧಗಳ ತಡೆಗೆ ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌ ಹಾಗೂ ರೈಲ್ವೆ ಪೊಲೀಸರ ಜಂಟಿ ಕಾರ್ಯಾಚರಣೆ ಶುರು ಮಾಡಿಸಿದ.

ಲಾಲೂ ಮೊದಲ ಬಜೆಟ್‌ ಮಂಡಿಸಿದ. ಮೊದಲ ಬಾರಿಗೆ ಪ್ರಯಾಣ ದರ ಏರಿಕೆ ಮಾಡದ ಬಜೆಟ್‌ ಅದಾಗಿತ್ತು. ಹೊಸ ರೈಲುಗಳನ್ನು ಪ್ರಕಟಿಸಿದ. ಲಾಲೂ ಮಾಡಿದ ಮತ್ತೊಂದು ಪ್ರಮುಖ ಕೆಲಸವೆಂದರೆ ಸರಕು-ಸಾಗಣೆಯತ್ತ ಗಮನ ಹರಿಸಿದ್ದು. ಈ ನಿಟ್ಟಿನಲ್ಲಿ ಹಿಂದಿನ ಯಾವ ಮಂತ್ರಿಗಳೂ ಮಾಡದ ಕೆಲಸವನ್ನು ಆತ ಮಾಡಿದ. ರೈಲ್ವೆಗೆ ಆದಾಯದಲ್ಲಿ ಸಿಂಹಪಾಲು ಸರಕು-ಸಾಗಣೆಯಿಂದಲೇ ಬರುತ್ತದೆ. ಲಾಲೂ ಗೂಡ್ಸ್‌ ರೈಲುಗಳ ಮಾರ್ಗ, ವೇಳೆ, ವೇಗಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ನಿರ್ಧಾರ ತೆಗೆದುಕೊಂಡ. ಪ್ರಯಾಣಿಕ ರೈಲುಗಳೊಂದನ್ನಷ್ಟೇ ಅಲ್ಲ ಗೂಡ್ಸ್‌ ರೈಲುಗಳನ್ನು ಜಾಸ್ತಿಗೊಳಿಸಿದ.

ಪರಿಣಾಮ ವಿಸ್ಮಯಕಾರಿಯಾಗಿತ್ತು. ಇಡೀ ರೈಲ್ವೆ ಮೈಕೊಡವಿ ಎದ್ದು ನಿಂತಿತು. ಎಲ್ಲೆಡೆ ಸಂಚಲನ ಕಾಣಲಾರಂಭಿಸಿತು. ರೈಲ್ವೆ ಇಲಾಖೆ ಲಾಭ ಗಳಿಸಿದ್ದು ಬಲು ಅಪರೂಪ. ರೈಲಿಗೂ ನಷ್ಟಕ್ಕೂ ಹಲವಾರು ವರ್ಷಗಳ ಅವಿನಾಭಾವ ಸಂಬಂಧ. ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದಂತೆ, ಲಾಲೂ ನೇತೃತ್ವದಲ್ಲಿ ರೈಲ್ವೆ ಶೇಕಡಾ 15.5ರಷ್ಟು ಅಧಿಕ ಲಾಭ ಗಳಿಸಿದೆ.

ಲಾಲೂ ಕಾರ್ಯವೈಖರಿ, ಯಶಸ್ಸಿನ ಸೂತ್ರಗಳು ಪ್ರತಿಷ್ಠಿತ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳನ್ನು ಬೆರಗುಗೊಳಿಸಿವೆ. ಅಹಮದಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌(ಐಐಎಂಎ) ಲಾಲೂನನ್ನು ಪಠ್ಯದಲ್ಲಿ ಸೇರಿಸಿದೆ. ಅಷ್ಟೇ ಅಲ್ಲ ಹಾರ್ವರ್ಡ್‌ ವಿಶ್ವವಿದ್ಯಾಲಯ ಹಾಗೂ ಫ್ರಾನ್ಸ್‌ನ ಎಚ್‌ಇಸಿ ಮ್ಯಾನೇಜ್‌ಮೆಂಟ್‌ ಸ್ಕೂಲ್‌ ಲಾಲೂನ ಕಾರ್ಯಸಾಧನೆಯನ್ನು ಪಠ್ಯದಲ್ಲಿ ಸೇರಿಸಲು ಉತ್ಸುಕವಾಗಿವೆ.

ಕೆಲವು ವಿದೇಶಿ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳು ಭಾರತೀಯ ರೈಲ್ವೆಯ ಕೇಸ್‌ ಸ್ಟಡಿ ಕೈಗೊಂಡಿದ್ದು, ಅವರಿಗೆಲ್ಲ ಲಾಲೂ ಹೊಸ ಆಕರ್ಷಣೆಯಾಗಿದ್ದಾನೆ. ವಾಷಿಂಗ್ಟನ್‌ ಟೈಮ್ಸ್‌ ಪತ್ರಿಕೆ ಭಾರತೀಯ ರೈಲ್ವೆಯ ಯಶಸ್ಸಿನ ಗಾಥೆ ಬರೆದ ಲಾಲೂನ ಬಗ್ಗೆ ಲೇಖನ ಬರೆದು ಕೊಂಡಾಡಿದೆ. ಇಂಡಿಯಾ ಟುಡೇ ಪತ್ರಿಕೆಯ ಸಮೀಕ್ಷೆ ಪ್ರಕಾರ ಲಾಲೂ ಕೇಂದ್ರದ ಎರಡನೇ ಅತ್ಯುತ್ತಮ ಮಂತ್ರಿ. ಲಾಲೂನಂಥ ವ್ಯಕ್ತಿಯ ಸ್ಪರ್ಶದಿಂದ ಇಡೀ ರೈಲ್ವೆ ಈಗ ಹಳಿ ಮೇಲೆ ಮರಳಿ ನಿಂತಿದೆ.

ಒಮ್ಮೆ ಜೋಕರ್‌ ಎನಿಸಿಕೊಂಡವ ಈಗ ಜಗದೇಕವೀರನಂತೆ ಕಂಗೊಳಿಸುತ್ತಿದ್ದಾನೆ. ಭೇಷ್‌!

(ಸ್ನೇಹ ಸೇತು : ವಿಜಯ ಕರ್ನಾಟಕ)

(ಓದುಗರ ಗಮನಕ್ಕೆ : ವಿಶ್ವೇಶ್ವರ ಭಟ್ಟರ ‘ನೂರೆಂಟು ಮಾತು’ ಅಂಕಣ ಇನ್ನು ಮುಂದೆ ಗುರುವಾರವೇ ಪ್ರಕಟವಾಗಲಿದೆ. ಮತ್ತೊಬ್ಬ ಅಂಕಣಕಾರ ಡಾ. ‘ಜೀವಿ’ ಕುಲಕರ್ಣಿ ಅವರ ಅಂಕಣ ‘ಜೀವನ ಮತ್ತು ಸಾಹಿತ್ಯ’ ಶನಿವಾರ ಪ್ರಕಟವಾಗಲಿದೆ. - ಸಂಪಾದಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more