ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕೇಶ್ವರರು ‘ಸಮಸ್ತ ಕನ್ನಡಿಗರ ಹೆಮ್ಮೆ’ ಸೃಷ್ಟಿಸಿದ ಸಾಹಸಗಾಥೆ!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಯಾರು ನಂಬಿರಲಿಲ್ಲ!

ವಿಜಯ ಸಂಕೇಶ್ವರ ಅವರು ಪತ್ರಿಕೆ ಮಾಡ್ತಾರಂತೆ ಅಂದಾಗ, ಅಂದು ಯಾರೂ ಅವರ ಮಾತನ್ನು ಸೀರಿಯಸ್ಸಾಗಿ ತೆಗೆದುಕೊಂಡರಲಿಲ್ಲ. ‘ ಎಲ್ಲಾದರೂ ಉಂಟಾ? ಲಾರಿ ಮಾಲೀಕರು ಪೇಪರ್‌ ನಡೆಸೋದು ಅಂದ್ರೆ ತಮಾಷೀನಾ?’ ಅಂತ ಕೇಳಿದರೆ, ಇನ್ನು ಕೆಲವರು ‘ ತಮಾಷೀನಾ ಅಲ್ಲಾ ಸ್ವಾಮಿ ತಮಾಷೆನೇ. ಅಂಬಾನಿ, ಥಾಪರ್‌ಗಳಂಥವರೇ ಪತ್ರಿಕೆ ನಡೆಸಲಾಗದೇ ತಿಪ್ಪರಲಾಗ ಹಾಕಿದರು. ಎಂಥೆಂಥವರೇ ಕೈ ಎತ್ತಿದರು. ಹೀಗಿರುವಾಗ ಪತ್ರಿಕೋದ್ಯಮದ ಹಿಂದುಮುಂದು ಗೊತ್ತಿಲ್ಲದ ಸಂಕೇಶ್ವರರಿಗೆ ಈ ಭಯಂಕರ ಐಡಿಯಾ ಕೊಟ್ಟವರಾರು? ಇದು ಅವರಿಗೆ ಕೈಹಿಡಿಯೋ ದಂಧೆಯಲ್ಲ ಕಣ್ರಿ’ ಅಂತ ಇನ್ನು ಕೆಲವರು ಹೇಳಿದರೆ, ಮತ್ತೆ ಹಲವರು, ‘ ಅವೆಲ್ಲ ನಂಬೋ ಮಾತೇನ್ರಿ? ಸುಮ್ಕಿರಿ’ ಎಂದು ಗೇಲಿ ಮಾಡಿದ್ದರು.

ಸಂಯುಕ್ತ ಕರ್ನಾಟಕ ಏರುಗತಿಯಲ್ಲಿದ್ದ ದಿನಗಳವು. ಗುಲ್ಬರ್ಗದ ಕಾರ್ಯಕ್ರಮವೊಂದರಲ್ಲಿ ಆ ಪತ್ರಿಕೆಯ ಶಾಮರಾಯರು, ಪತ್ರಿಕೆ ನಡೆಸೋದು ಅಂದ್ರೆ ಲಾರಿ ನಡೆಸಿದಂತಲ್ಲ. ಯಾರೋ ಸಂಕೇಶ್ವರರಂತೆ ಪೇಪರ್‌ ಮಾಡ್ತಾರಂತೆ. ಮೂರು ತಿಂಗಳಿಗೆ ಬಾಗಿಲು ಮುಚ್ಕೊಂದು ಅವರದೇ ಲಾರೀಲಿ ಹೇರ್ಕೊಂಡು ಹೋಗ್ಲಿಲ್ಲ ಅಂದ್ರೆ ಆಗ ಕೇಳ್ರೀ’ ಎಂದು ಛೇಡಿಸಿದ್ದರು.

ಆಗ ಸಂಕೇಶ್ವರರು ಲೋಕಸಭೆ ಸದಸ್ಯರಾಗಿದ್ದರೂ, ಶಾಮರಾಯರು ಯಾರೋ ಅನಾಮಧೇಯರೊಬ್ಬರು ಪೇಪರ್‌ ಮಾಡ್ತಾರಂತೆ ಎಂಬ ಧಾಟಿಯಲ್ಲಿ ಮಾತಾಡಿದ್ದರು. ಅಂದು ಶಾಮರಾಯರ ಮಾತುಗಳನ್ನು ತೆಗೆದು ಹಾಕುವಂತಿರಲಿಲ್ಲ. ಹೀಗಾಗಿ ಅವರ ಮಾತುಗಳನ್ನು ‘ ಛೇಡನೆ’ ಎಂದು ಭಾವಿಸದೇ ಎಲ್ಲರೂ ತಲೆಯಾಡಿಸಿದ್ದರು. ಪ್ರಾಯಶಃ ಸಂಕೇಶ್ವರರಿಗೆ ಒಬ್ಬನೇ ಒಬ್ಬ, ‘ಪೇಪರ್‌ ಮಾಡ್ರಿ ನಿಮಗೆ ಒಳ್ಳೆಯದಾಗುತ್ತದೆ’ ಎಂದು ಹೇಳಿರಲಿಕ್ಕಿಲ್ಲ. ಪ್ರತಿಯಾಬ್ಬರೂ ಅವರನ್ನು ಡಿಸ್‌ಕರೇಜ್‌ ಮಾಡಿದವರೇ. ಅವರೆಲ್ಲ ಹಾಗೆ ಹೇಳಲು ಕಾರಣವೂ ಇತ್ತು. ಸಂಕೇಶ್ವರ ಹಾಗೂ ಪತ್ರಿಕೋದ್ಯಮಕ್ಕೆ ಸಂಬಂಧವೇ ಇರಲಿಲ್ಲ. ಅವರ ತಂದೆಯವರಾದ ಬಸವಣ್ಣೆಪ್ಪನವರು ಆರಂಭಿಸಿದ ಪ್ರಸಿದ್ಧ ಸಂಕೇಶ್ವರ ಪ್ರಿಂಟಿಂಗ್‌ ಹಾಗೂ ಪ್ರಕಾಶನದಲ್ಲಿ ಕೆಲಕಾಲ ಪ್ರೂಫ್‌ ರೀಡರ್‌ ಆಗಿದ್ದನ್ನು ಬಿಟ್ಟರೆ, ಅಕ್ಷರಗಳೊಂದಿಗೆ ಸಖ್ಯ ಅಷ್ಟಕ್ಕಷ್ಟೆ.

ಆದರೆ ಅವರು ತೀವ್ರ ಛಲಗಾರ, ಹಠವಾದಿ, ಖಡಾಖಡಿ ಶಿಸ್ತಿನ ಮನುಷ್ಯ. ಅವರದ್ದು ಪಕ್ಕಾ ಉದ್ಯಮಿ ಮನಸ್ಸು. ಇಪ್ಪತ್ತಾರು ವರ್ಷಗಳ ಹಿಂದೆ, ಕುಟುಂಬದಲ್ಲಿ ಯಾರು ಇಳಿಯದ ವ್ಯವಹಾರಕ್ಕಿಳಿಯಬೇಕೆಂದು ಏಕಾಂಗಿಯಾಗಿ ಒಂದು ಲಾರಿಯನ್ನು ಸಾಲ ಮಾಡಿ ಖರೀದಿಸಿ, ತಾವೇ ಚಾಲಕರಾಗಿ, ಊರೂರಿಗೆ ಅದನ್ನು ಓಡಿಸಿಕೊಂಡು, ವಾಪಸು ಬರುವಾಗ ಕಲೆಕ್ಷನ್‌ ಮಾಡಿಕೊಂಡು ಅಗ್ದೀ ಸಣ್ಣ ಪ್ರಮಾಣದಲ್ಲಿ ದಂಧೆ ಆರಂಭಿಸಿದ್ದರು. ಅವರೇ ಕ್ಲೀನರ್‌, ಚಾಲಕ ಮತ್ತು ಮಾಲೀಕ! ಆ ದಿನಗಳಲ್ಲಿ ಅವರದ್ದೇ ಆದದ್ದೊಂದು ಫೋನ್‌ ಸಹ ಇರಲಿಲ್ಲ. ಪಿಪಿ ನಂಬರು! ಓಡಾಡಲಿಕ್ಕೆಂದು ಸೆಕೆಂಡ್‌ ಹ್ಯಾಂಡ್‌ ಲೂನಾ! ಹುಬ್ಬಳ್ಳಿ-ಗದಗ ಮಧ್ಯೆ ಒಂದೇ ರೂಟಿನಲ್ಲಿ ಲಾರಿ ಓಡಿಸುತ್ತಿದ್ದರು.

ಒಂದು ಲಾರಿ ಎರಡಾಯಿತು. ಎರಡು ಲಾರಿ ನಾಲ್ಕಾಯಿತು. ನಾಲ್ಕು ಹತ್ತಾಯಿತು. ಹತ್ತು ನೂರಾಯಿತು. ಅದು ಐನೂರಾಯಿತು. ದಿನಗಳು, ವರ್ಷಗಳಾಗುತ್ತಿದ್ದಂತೆ ಐನೂರು ಸಾವಿರವಾಯಿತು. ನಂತರ ಎರಡು ಸಾವಿರವಾಯಿತು. ಲಾರಿ ಪಕ್ಕಕ್ಕೆ ಬಸ್ಸುಗಳೂ ಬಂದವು. ಅದರ ಜತೆಗೆ ಕೊರಿಯರ್‌ ಹುಟ್ಟಿಕೊಂಡಿತು. ಕೇವಲ ಎರಡು ದಶಕಗಳಲ್ಲಿ ವಿಆರ್‌ಎಲ್‌ ಎಂಬ ಸಾಮ್ರಾಜ್ಯ ತಲೆಎತ್ತಿ ನಿಂತಿತು. ಹುಬ್ಬಳ್ಳಿಯ ದುರ್ಗದಬೈಲಿನ ರಾಧಾಕೃಷ್ಣ ಗಲ್ಲಿಯ ದತ್ತಾತ್ರೇಯ ದೇವಸ್ಥಾನದ ಎದುರಿನ ಪುಟ್ಟ ಬಾಡಿಗೆ ಮನೆಯಲ್ಲಿ ಆರಂಭವಾದ ಕಚೇರಿ ಇಂದು ದೇಶದ ಹದಿನೆಂಟು ರಾಜ್ಯಗಳಿಗೆ ವಿಸ್ತರಿಸಿದೆ. ದೇಶದೆಲ್ಲೆಡೆ ಸಾವಿರಕ್ಕೂ ಹೆಚ್ಚು ಕಚೇರಿಗಳಿವೆ. ಹತ್ತಾರು ಸಹಸ್ರ ಮಂದಿ ದುಡಿಯುತ್ತಿದ್ದಾರೆ. ಇದಕ್ಕೆ ಎರಡು-ಮೂರುಪಟ್ಟು ಮಂದಿ ಈ ಸಂಸ್ಥೆಯನ್ನು ಅವಲಂಬಿಸಿದ್ದಾರೆ. ಹುಬ್ಬಳ್ಳಿಗೆ ಸಮೀಪದ ವರೂರಿನಲ್ಲಿ 40ಎಕರೆ ಜಾಗದಲ್ಲಿ ವಿಆರ್‌ಎಲ್‌ ಕಚೇರಿ ತಲೆಎತ್ತಿ ನಿಂತಿದೆ.

ವಿಆರ್‌ಎಲ್‌ ಸಾಮ್ರಾಜ್ಯದ ಅಧಿಪತಿ ನಾಲ್ಕು ಬಸ್ಸು, ಲಾರಿ ಖರೀದಿಸುತ್ತಾರೆಂದರೆ ಯಾರೂ ಏನು ಅಂದುಕೊಳ್ಳಲಿಕ್ಕಿಲ್ಲ. ಆದರೆ ಪೇಪರ್‌ ಮಾಡ್ತೀನಿ ಅಂದ್ರೆ ಜನ ಆಡಿಕೊಳ್ಳದೇ ಬಿಟ್ಟಾರೆಯೇ? ಅಂದು ಜನ ಬಾಯಿಗೆ ಬಂದಂತೆ ಆಡಿಕೊಂಡರು. ಹುಟ್ಟಿದ ಮಗುವಿನ ಭವಿಷ್ಯ ಹಾಗೂ ಆಯುಸ್ಸನ್ನು ನಿರ್ಧರಿಸಿದರು.

ಏಳು ವರ್ಷಗಳ ಹಿಂದೆ ‘ವಿಜಯ ಕರ್ನಾಟಕ’ ಹುಟ್ಟಿತು.

ಅಕ್ಷರ ಕೆತ್ತುವ ಕೆಲಸವನ್ನು ಸಂಪಾದಕೀಯ ಬಳಗಕ್ಕೆ ಬಿಟ್ಟು, ಸಂಕೇಶ್ವರರು ಪತ್ರಿಕೆಯನ್ನು ಕಟ್ಟುವ ಕೆಲಸಕ್ಕೆ ನಿಂತುಬಿಟ್ಟರು. ಹತ್ತಾರು ಕಡೆ ಓಡಾಡಿ ಪ್ರಿಂಟಿಂಗ್‌ ಮಶೀನು ತಂದರು. ಊರೂರು ಸುತ್ತಿ ಏಜೆಂಟರನ್ನು ನೇಮಿಸಿದರು. ಪತ್ರಿಕೆಯನ್ನು ಕಳಿಸುವ ರೂಟ್‌ಗಳನ್ನು ಸ್ವತಃ ನಿರ್ಧರಿಸಿದರು. ಎಲ್ಲೆಲ್ಲಿ ಆವೃತ್ತಿಗಳನ್ನು ತೆರೆಯಬೇಕೆಂಬುದನ್ನು ಯೋಚಿಸಿದರು. ನೆನಪಿಡಿ, ಬೆಂಗಳೂರಲ್ಲಿ ಪ್ರಿಂಟಾಗುತ್ತಿದ್ದ ಪತ್ರಿಕೆ ಬೀದರ್‌ಗೆ ಹೋಗುತ್ತಿದ್ದವು. ರಾತ್ರಿ ಒಂಬತ್ತಕ್ಕೆ ಪ್ರಿಂಟಾಗಿ ಹೊರಟರೆ ಸಾಯಂಕಾಲ ಆರಕ್ಕೆ ತಲುಪುತ್ತಿತ್ತು. ಸುತ್ತಲಿನ ತಾಲೂಕು, ಹಳ್ಳಿಗಳಿಗೆ ಮರುದಿನ ಸರಬರಾಜು ಆಗುತ್ತಿತ್ತು. ಅಂದರೆ ಪ್ರಿಂಟಾದ ಮೂವತ್ತಾರು ಗಂಟೆಗಳ ನಂತರ ಓದುಗರ ಕೈಸೇರುತ್ತಿತ್ತು.

ಸಂಕೇಶ್ವರರು ಕನ್ನಡ ಪತ್ರಿಕೋದ್ಯಮದ ಆಳ ಹರವನ್ನು ಎಷ್ಟು ಚೆನ್ನಾಗಿ ಅರಿತರೆಂದರೆ, ಎರಡು ನೂರು ಕಿ.ಮಿ.ಗೊಂದು ಆವೃತ್ತಿ, ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಪುಟ, ದಿನಕ್ಕೊಂದು ಪುರವಣಿ, ಸುಂದರ ಮುದ್ರಣ, ಹೆಚ್ಚು ಪುಟ, ಕಡಿಮೆ ದರ ನಿಗದಿಪಡಿಸಿದರು. ಅಲ್ಲಿ ತನಕ ಪತ್ರಿಕೋದ್ಯಮದಲ್ಲಿ ದಿಗ್ಗಜರೆನಿಸಿಕೊಂಡವರೂ ಸಹ ಈ ದಿಕ್ಕಿನಲ್ಲಿ ಯೋಚಿಸಿರಲಿಕ್ಕಿಲ್ಲ.

ಇಷ್ಟರಲ್ಲಿ ಪತ್ರಿಕೆ ಆರಂಭವಾಗಿ ಒಂದೂವರೆ ವರ್ಷವಾಗಿರಬಹುದು. ಪತ್ರಿಕೆಯ ಬಿಸಿ ಕೈ ಸುಡಲಾರಂಭಿಸಿತ್ತು. ಆದರೆ ಸಂಕೇಶ್ವರರು ಸ್ವಲ್ಪವೂ ಜಗ್ಗಲಿಲ್ಲ. ತೆೆವಳುತ್ತಿದ್ದ ಪತ್ರಿಕೆ ನಿಧಾನವಾಗಿ ರೆಕ್ಕೆ ಬಿಚ್ಚಿ ಹಾರಲಾರಂಭಿಸಿತು. ಬೆಳಗ್ಗೆ ಆರೇಳು ಗಂಟೆಯಾಳಗೆ ಹಳ್ಳಿ-ಹಳ್ಳಿಗೆ, ಮನೆ-ಮನೆಗೆ ಪತ್ರಿಕೆ. ರಸ್ತೆ ಹೋಗದ, ಬಸ್ಸು ಹೋಗದ, ಫೋನ್‌ ಹೋಗದ, ಕರೆಂಟ್‌ ಹೋಗದ, ಟೀವಿ, ಫ್ರಿಡ್ಜು ಹೋಗದ ಊರುಗಳಲ್ಲೆಲ್ಲ ವಿಜಯಕರ್ನಾಟಕ! ಪತ್ರಿಕೆಯೆಂಬ ಒಂದು ವಸ್ತುವಿದೆಯೆಂದೇ ಗೊತ್ತಿರದ, ಹುಟ್ಟಾ ಪತ್ರಿಕೆಯನ್ನೇ ನೋಡದ, ಓದದ ಜನರೆಲ್ಲರ ಕೈಗಳಲ್ಲಿ ವಿಜಯಕರ್ನಾಟಕ!

ಯಾವ ಶಾಮರಾಯರು ಅದ್ಯಾರೋ ಸಂಕೇಶ್ವರ ಪತ್ರಿಕೆ ಆರಂಭಿಸುತ್ತಾರಂತೆ ಎಂದು ಶಂಕೆ ವ್ಯಕ್ತಪಡಿಸಿ ಗುದುಮಿದ್ದರೋ, ಅದೇ ರಾಯರು ವಿಜಯಕರ್ನಾಟಕಕ್ಕೆ ಅಂಕಣ ಬರೆಯಲಾರಂಭಿಸಿದ್ದರು!

ಎರಡೂ ಮುಕ್ಕಾಲು ವರ್ಷ ತಲುಪುವ ಹೊತ್ತಿಗೆ ವಿಜಯಕರ್ನಾಟಕ ನಂಬರ್‌ 1 ಪತ್ರಿಕೆಯಾಗಿ ನಿಜ ಅರ್ಥದಲ್ಲಿ ‘ಸಮಸ್ತ ಕನ್ನಡಿಗರ ಹೆಮ್ಮೆ ’ಆಗಿತ್ತು. ಕೇರಳದ ‘ಮಳಯಾಳ ಮನೋರಮಾ’ದ ಸಂಪಾದಕ, ಹಿರಿಯಜ್ಜ ಕೆ.ಎಂ.ಮ್ಯಾಥ್ಯೂ ಅವರನ್ನು ಭೇಟಿಯಾದಾಗ ನನ್ನನ್ನು ಕೇಳಿದ್ದರು -117 ವರ್ಷಗಳ ಇತಿಹಾಸವಿರುವ ನಮ್ಮ ಪತ್ರಿಕೆ ಐದು ಲಕ್ಷ ಪ್ರಸಾರ ದಾಟಲು 102ವರ್ಷಗಳು ಬೇಕಾದವು. ನೀವು ಮೂರ್ನಾಲ್ಕು ವರ್ಷಗಳಲ್ಲಿ ಐದು ಲಕ್ಷ ಪ್ರಸಾರ ಹೇಗೆ ಗಳಿಸಿದಿರಿ? ಇದು ಕನ್ನಡದಲ್ಲೊಂದೇ ಅಲ್ಲ, ಭಾರತೀಯ ಪತ್ರಿಕೋದ್ಯಮದಲ್ಲೇ ಒಂದು ಮೈಲಿಗಲ್ಲು.

ಹುಬ್ಬಳ್ಳಿ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಸಂಕೇಶ್ವರರು ಹೇಳಿದ್ದರು -ಇನ್ನು ಮೂರು ವರ್ಷಗಳಲ್ಲಿ ಪತ್ರಿಕೆಯ ಪ್ರಸಾರವನ್ನು ಆರು ಲಕ್ಷಕ್ಕೆ ಏರುಸುತ್ತೇನೆ.

ಆಗ ಬೆಂಗಳೂರು ಆವೃತ್ತಿಯಾಂದನ್ನೇ ಹೊಂದಿದ್ದ ಪತ್ರಿಕೆ ಪ್ರಸಾರ 40ಸಾವಿರವಿತ್ತು. ಈ ಘೋಘಣೆಯನ್ನು ಅಲ್ಲಿ ಸೇರಿದ್ದ ಮಂದಿ ನಂಬುವುದಿರಲಿ,ಅಂದಿನ ಸಂಪಾದಕರೇ ‘ಕನ್ನಡದ ಎಲ್ಲ ಪತ್ರಿಕೆಗಳ ಒಟ್ಟು ಪ್ರಸಾರವೇ 6 ಲಕ್ಷ ಇಲ್ಲ. ಹೀಗಿರುವಾಗ ವಿಜಯ ಕರ್ನಾಟಕದ ಪ್ರಸಾರವನ್ನು ಅದ್ಹೇಗೆ ಆ ಮಟ್ಟಕ್ಕೇರಿಸುತ್ತೀರಿ? ’ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಮುಂದೇನಾಯಿತು ಎಂಬುದು ನಿಮಗೆಲ್ಲ ತಿಳಿದೇ ಇದೆ.

ವಿಜಯ ಸಂಕೇಶ್ವರರ ಜತೆ ಕೆಲಸ ಮಾಡಲು ಬೇಕಾಗಿರುವ ಅರ್ಹತೆಯೆಂದರೆ -ಶಿಸ್ತು, ಶ್ರದ್ಧೆ, ದಕ್ಷತೆ, ವೇಗ ಮತ್ತು ಸಮಯದ ಮಹತ್ವ. ಮೂಲತಃ ಅವರು ಇವೆಲ್ಲವುಗಳ ಪಾಲಕರು. ಬೆಳಗ್ಗೆ ನಾಲ್ಕು ಗಂಟೆಗೆ ಶುರುವಾಗುವ ಅವರ ದಿನ ಕರಾರುವಕ್ಕು ಅವರು ನಿಮಗೆ ಸಮಯ ಕೊಟ್ಟರೆಂದರೆ ಸೆಕೆಂಡಿನ ಮುಳ್ಳು ಆಚೀಚೆ ಸರಿದಾಡಲಿಕ್ಕಿಲ್ಲ. ಮಾತು ಅಂದ್ರೆ ಮಾತು. ತಮ್ಮ ಜತೆಯಲ್ಲಿ ಕೆಲಸ ಮಾಡುವವರೂ ಹೀಗೇ ಇರಬೇಕೆಂದು ಅಪೇಕ್ಷಿಸುತ್ತಾರೆ. ಅಚ್ಚುಕಟ್ಟುತನ, ಗುಣಮಟ್ಟವಿಲ್ಲದ ಏನನ್ನೂ ಅವರು ಸಹಿಸುವುದಿಲ್ಲ. ಸ್ವೀಕರಿಸುವುದೂ ಇಲ್ಲ. ಏನೇ ಮಾಡಲಿ, ಅವರಿಗೆ ನಂ.1 ಆಗಬೇಕು. ‘ಥಿಂಕ್‌ ಬಿಗ್‌, ಡೂ ಬಿಗ್‌, ಅಚಿವ್‌ ಬಿಗ್‌’ ಇದು ಅವರ ಪಾಲಿಸಿ. ವಿಜಯಕರ್ನಾಟಕದಲ್ಲೂ ಅವರು ಇದನ್ನೇ ಮಾಡಿದರು. ಅವರು ಒಂದು ಭಾನುವಾರವನ್ನೂ ರಜೆ ಬಿಟ್ಟವರಲ್ಲ. ಆ ಪರಿ ಕೆಲಸ, ತಿರುಗಾಟ. ಸಾಧನೆಯ ಮಾರ್ಗದಲ್ಲಿ ಅವರದು ಅರ್ಜುನದೃಷ್ಟಿ.

ಸಂಕೇಶ್ವರರ ಮಗ ಆನಂದ ಇದ್ದಾರಲ್ಲ, ಈ ಎಲ್ಲ ಗುಣಗಳ ಎರಕ. ಅವರದು ದಣಿವರಿಯದ ಉತ್ಸಾಹ. ಇನ್ನೂ ಅವರಿಗೆ 31. ವಿಜಯಕರ್ನಾಟಕದ ಸಾಧನೆಯಲ್ಲಿ ಅವರಿಗೂ ದೊಡ್ಡ ಪಾಲು ಸಿಗಬೇಕು. ವಿಜಯಕರ್ನಾಟಕದಂಥ ಪತ್ರಿಕೆಯನ್ನು ಲಾಭದ ಹಳಿ ಮೇಲೆ ತಂದಿಡಲು ಕನಿಷ್ಠ ಐದಾರು ವರ್ಷಗಳಾದರೂ ಬೇಕು. ಈ ಅವಧಿಯಲ್ಲೇ ಪತ್ರಿಕೆ ಮುಗ್ಗರಿಸುವುದು. ಆದರೆ ಪತ್ರಿಕೆಯ ಮಾರುಕಟ್ಟೆ ಹಾಗೂ ಜಾಹೀರಾತು ವಿಭಾಗದ ಸಂಪೂರ್ಣ ಜವಾಬ್ದಾರಿಯನ್ನು ಆನಂದ ಸಂಕೇಶ್ವರ ವಹಿಸಿಕೊಂಡಿದ್ದು ನಿರ್ಣಾಯಕ. ಮೂರು ವರ್ಷಗಳ ಅವಧಿಯಲ್ಲಿ ವಿಜಯಕರ್ನಾಟಕವನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಿದರು.

ಆನಂದ್‌ ಸಹ ಒಂದು ದಿನವನ್ನೂ ರಜೆ ಎಂದು ಎತ್ತಿಡಲಿಲ್ಲ. ಹವ್ಯಾಸ, ಬಿಡುವು ಎಂದು ಬಿಟ್ಟುಕೊಡಲಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಿದರು. ಜಾಹೀರಾತು ಏಜೆನ್ಸಿ ಮುಂದೆ ದಿನಗಟ್ಟಲೇ ಕಾದು ಜಾಹೀರಾತು ತಂದರು. ವಿಜಯ ಕರ್ನಾಟಕ ಪ್ರಸಾರದಲ್ಲಿ ನಂ.1 ಎಂದರೆ ಯಾರೂ ನಂಬುತ್ತಿರಲಿಲ್ಲ. ಎರಡೂ ಮುಕ್ಕಾಲು ವರ್ಷಗಳಲ್ಲಿ ನಂಬರ್‌ 1 ಅಂದ್ರೆ ಸಣ್ಣ ಮಾತೇನು? ಒಂದೊಂದು ಏಜೆನ್ಸಿಗೆ ಎಷ್ಟು ಸಲ ಅಲೆದಿದ್ದಾರೋ ಅವರಿಗೇ ಗೊತ್ತು. ಅಷ್ಟಾದರೂ ಜಾಹೀರಾತು ಸಿಕ್ಕೀತೆಂಬ ಗ್ಯಾರಂಟಿಯಿಲ್ಲ. ಆದರೆ ಆನಂದ ಸಂಕೇಶ್ವರ ಪತ್ರಿಕೆಯ ಶಕ್ತಿಯನ್ನು ಮನವರಿಕೆ ಮಾಡಿ ಜಾಹೀರಾತು ತರುವ ತನಕ ವಿರಮಿಸುತ್ತಿರಲಿಲ್ಲ.

ಬೆಳಗ್ಗೆ ಬೆಳಗ್ಗೆಯೇ ಎಲ್ಲ ಪತ್ರಿಕೆಗಳನ್ನು ಹರವಿಕೊಂಡು, ಎಲ್ಲ ಜಾಹೀರಾತುಗಳ ಮೇಲೆ ದೃಷ್ಟಿ ಹಾಯಿಸಿ, ತಮ್ಮಲ್ಲಿ ಬರದ ಜಾಹೀರಾತನ್ನು ಪಟ್ಟಿ ಮಾಡಿ, ಅದನ್ನು ಬೆನ್ನಟ್ಟುವಂತೆ ಎಕ್ಸಿಕ್ಯುಟಿವ್‌ಗಳನ್ನು ಅಟ್ಟುತ್ತಿದ್ದರು. ಬೆಳಗ್ಗೆ ಎಂಟು ಗಂಟೆಯಾಳಗೆ ಏನಿಲ್ಲವೆಂದರೂ 50-60 ಎಸ್ಸೆಮ್ಮೆಸ್‌ ಆದೇಶ ಹೊರಟು ಹೋಗುತ್ತಿದ್ದವು. ಅವರಿಗೆ ಯಾವ ಸಬೂಬೂ ಹೇಳುವಂತಿಲ್ಲ. ಕೆಲಸವಾದರೇ ಖರೆ. ಇಲ್ಲದಿದ್ದರೆ ಅನುಕ್ಷಣವೂ ಬೆಂಬಿಡದ ವರಾತ, ಒತ್ತಡ. ಅವರು ಏಳು ವರ್ಷಗಳಲ್ಲಿ ಒಂದೇ ಕಡೆ ಮೂರು ದಿನ ಸತತ ಮಲಗಿರಲಿಕ್ಕಿಲ್ಲ. ಆ ಪರಿ ಸುತ್ತಾಟ. ದೇಶದಲ್ಲಿರುವ ಸುಮಾರು ಐದು ಸಾವಿರ ಜಾಹೀರಾತು ಏಜೆನ್ಸಿಗಳ ಪೈಕಿ ಅವರು ಏನಿಲ್ಲವೆಂದರೂ ಶೇ.98ರಷ್ಟು ಏಜೆನ್ಸಿಗಳಿಗೆ ಭೇಟಿ ನೀಡಿರಬಹುದು. ದಿನಕ್ಕೆ ಏನಿಲ್ಲವೆಂದರೂ 12-14ತಾಸು ಕೆಲಸ ಮಾಡುವ ಆನಂದ್‌ ಸಂಕೇಶ್ವರರ ಕೆಲಸದ ಪರಿ ಕಂಡರೆ ಎಂಥವನೂ ನಿಬ್ಬೆರಗಾಗಬೇಕು.

ಪತ್ರಿಕೆಯ ಜಾಹೀರಾತು ಮನೆಯಾಳಗೆ ಆನಂದ್‌ ನಡೆದು ಬಂದಾಗ ಮಾರ್ಕೆಟಿಂಗ್‌ನಲ್ಲಿ ಅವರಿಗೆ ಯಾವುದೇ ಅನುಭವವಾಗಿ, ಫಾರ್ಮಲ್‌ ಎಜ್ಯೂಕೇಷನ್‌ ಆಗಲೀ ಇರಲಿಲ್ಲ. ಎಲ್ಲವನ್ನೂ ಸ್ವಯಂ ಕಲಿಕೆಯಿಂದಲೇ ಸಾಧಿಸಿದರು. ಆದರೆ ಕೇವಲ ಐದಾರು ವರ್ಷದೊಳಗೆ, ಈ ದೇಶದ ಜಾಹೀರಾತು, ಮಾರ್ಕೆಟಿಂಗ್‌ ಕ್ಷೇತ್ರಗಳಲ್ಲಿ ದಿಗ್ಗಜರು ಮತ್ತು ಪ್ರಮುಖ ಉದ್ಯಮಿಗಳ ಜತೆ ಭುಜ ತಾಕಿಸುವಷ್ಟು ಸಲುಗೆ-ಸ್ನೇಹ ಸಂಪಾದಿಸಿದರು. ‘ಈ ನಾಡು ’ ರಾಮೋಜಿರಾವ್‌, ‘ಲೋಕಮತ್‌’ನ ವಿಜಯ ದರಡಾ ಅವರಂಥವರೇ ವಿಜಯಕರ್ನಾಟಕದ ಜಾಹೀರಾತು ಕಾರ್ಯಾಚರಣೆ ಕಂಡು ಅಚ್ಚರಿಪಟ್ಟಿದ್ದುಂಟು. ಬಿಸಿನೆಸ್‌ ಜರ್ನಲಿಸಂ, ವರ್ಷದ ಜಾಹೀರಾತು ವ್ಯಕ್ತಿ ಸೇರಿದಂತೆ ಜಾಹೀರಾತು ರಂಗದ ಪ್ರತಿಷ್ಠಿತ ಪ್ರಶಸ್ತಿಗಳೂ ಅವರನ್ನು ಹುಡುಕಿಕೊಂಡು ಬಂದವು.

ಪ್ರತಿಷ್ಠಿತ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ಪ್ರಸಿದ್ಧ ಸಂಪಾದಕ ಬೆಂಜಮಿನ್‌ ಬ್ರ್ಯಾಡ್ಲಿ ಒಂದೆಡೆ ಹೇಳುತ್ತಾನೆ -ಸಂಪಾದಕನ ಬತ್ತಳಿಕೆಯಲ್ಲಿ ಎಂಥದೇ ಅಸ್ತ್ರಗಳಿರಲಿ, ಅವುಗಳಿಗೆಲ್ಲ ಶಕ್ತಿ ಬರುವುದು ಉತ್ತಮ ಪ್ರಕಾಶಕ ಅಥವಾ ಮಾಲೀಕನಿಂದ. ಇಲ್ಲದಿದ್ದರೆ ನಾವಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಿಲ್ಲ. ನನಗೆ ಕ್ಯಾಥರೀನ್‌ ಗ್ರಾಹಂ ಅವಳಂಥ ಪಬ್ಲಿಷರ್‌ ಸಿಕ್ಕಿದ್ದರಿಂದ ವಾಷಿಂಗ್ಟನ್‌ ಪೋಸ್ಟ್‌ ಕಟ್ಟಲು ಸಾಧ್ಯವಾಯಿತು.

ಬ್ರ್ಯಾಡ್ಲಿ ಮಾತುಗಳನ್ನು ನೆನಪಿಸಿಕೊಂಡಾಗಲೆಲ್ಲ ನನಗೆ ವಿಜಯ ಸಂಕೇಶ್ವರ ಮತ್ತು ಆನಂದ ಸಂಕೇಶ್ವರ ನೆನಪಾಗುತ್ತಾರೆ.

ಹಾಗೂ ಬ್ರ್ಯಾಡ್ಲಿ ಮಾತು ನಿಜ ಎನಿಸುತ್ತದೆ.


ಪೂರಕ ಓದಿಗೆ :
ನೂರಾ ಎಪ್ಪತ್ತೊಂದು ಕೋಟಿಗಳಿಗೆ ಪತ್ರಿಕೆಯನ್ನು ಮಾರಿದ ನಂತರ...
ಎಷ್ಟು ಮೆಟ್ಟಿಲು ಹತ್ತಬೇಕು ಅಂತಲೂ ಎಣಿಸದೆ ಏಣಿ ಇಡುವವರು
ವಿಜಯ್‌ಟೈಮ್ಸ್‌, ಉಷಾಕಿರಣ ಪತ್ರಿಕೆಗಳ ಭವಿಷ್ಯಏನು?
ವಿಜಯಕರ್ನಾಟಕ : ಹೊಸ ಅಧ್ಯಕ್ಷರಾಗಿ ಚಿನ್ನನ್‌ ದಾಸ್‌
ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X