ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಮೋಹನ್‌ ಸಿಂಗ್‌ ಹಾಗೂ ಪ್ರಧಾನಿ ಎರಡೂ ವಿರುದ್ಧಾರ್ಥಕ ಪದಗಳು!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಡಾ.ಮನಮೋಹನ್‌ ಸಿಂಗ್‌ ನಿಜಕ್ಕೂ ದುರ್ಬಲ ಪ್ರಧಾನಿಯಾ?

‘ಅದೆಷ್ಟು ಸಲ ಕೇಳಿದರೂ ಒಂದೇ ಉತ್ತರ ಸ್ವಾಮಿ. ಹೌದು, ಹೌದು, ಹೌದು.’

ಹಾಗಂತ ಕೇಂದ್ರದ ಮಾಜಿ ಮಂತ್ರಿ, ಕಾಂಗ್ರೆಸ್‌ ನಾಯಕ ನಟವರ್‌ ಸಿಂಗ್‌ ಖಡಾಖಡಿ ಉತ್ತರಿಸುತ್ತಾರೆ. ಸ್ವತಂತ್ರ ಭಾರತದಲ್ಲಿ ಯಾವ ಪ್ರಧಾನಿಯೂ ಇವರಷ್ಟು ದುರ್ಬಲರಾಗಿರಲಿಲ್ಲ. ಆದರೆ ನಮಗೆ ಗೊತ್ತಿಲ್ಲದ ಸಂಗತಿಯೇನೆಂದರೆ, ಡಾ.ಸಿಂಗ್‌ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ದುರ್ಬಲರು.

ಸಾವಧಾನವಾಗಿ ನಟವರ್‌ಸಿಂಗ್‌ ಹೇಳಿದ್ದನ್ನು ಕೇಳಿಸಿಕೊಳ್ಳಬೇಕು. ಪ್ರಾಯಶಃ ಯಾವ ಕಾಂಗ್ರೆಸ್‌ ಮಂತ್ರಿಯೂ ನಾಯಕನನ್ನಾಗಲಿ, ಪ್ರಧಾನಿಯನ್ನಾಗಲಿ ಈ ಪರಿ ಬಾಯಿಗೆ ಬಂದಂತೆ ಬೈದಿರಲಿಕ್ಕಿಲ್ಲ. ಆ ಪರಿ ಬೈದಿದ್ದಾರೆ. ತಮಾಷೆಯೆಂದರೆ ನಟವರ್‌ ಹೇಳಿಕೆಯನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಅವೆಲ್ಲ ಸತ್ಯಕ್ಕೆ ದೂರ ಎಂದು ಕಾಂಗ್ರೆಸ್ಸಿಗರು ನಿರಾಕರಿಸುತ್ತಿಲ್ಲ. ಪ್ರಧಾನಿ ದುರ್ಬಲ ಅಲ್ಲ ಎಂದು ಹೇಳುತ್ತಿಲ್ಲ. ಯಾಕೆಂದರೆ ನಟವರ್‌ ಅಲ್ಲಗಳೆಯುವಂಥದ್ದೇನನ್ನೂ ಹೇಳಿಲ್ಲ ಎಂದು ಕಾಂಗ್ರೆಸ್ಸಿಗರಿಗೂ ಗೊತ್ತಿದೆ. ನಿರಾಕರಿಸಲು, ಖಂಡಿಸಲು ಅವರು ಹೇಳಿದ್ದು ಸುಳ್ಳಲ್ಲವಲ್ಲ. ನಟವರ್‌ ಹಾಗೆ ಹೇಳಬಾರದಿತ್ತು ಎಂತಲೇ ಎಲ್ಲರೂ ಹೇಳುತ್ತಿದ್ದಾರೆಯೇ ಹೊರತು, ಅವರು ಹೇಳಿದ ಮಾತಿನ ಸತ್ಯಾಸತ್ಯತೆಯನ್ನು ಯಾರೂ ಪ್ರಶ್ನಿಸುತ್ತಿಲ್ಲ.

ನಟವರ್‌ ಹೇಳಿದ್ದಾದರೂ ಏನು ಅಂತ ಕೇಳಿಸಿಕೊಳ್ಳಿ -‘ಈ ದೇಶ ಕಂಡ ಅತ್ಯಂತ ದುರ್ಬಲ, ಅಶಕ್ತ ಪ್ರಧಾನಿ ಅಂದ್ರೆ ಡಾ.ಮನಮೋಹನ್‌ ಸಿಂಗ್‌. ಒಂದೂ ಚುನಾವಣೆ ಗೆಲ್ಲದವರು ಇಂದು ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಪಂಚಾಯಿತಿ, ಮುನ್ಸಿಪಾಲಿಟಿ ಚುನಾವಣೆ ಗೆಲ್ಲಲಾಗದವರು ಸಹ ಪ್ರಧಾನಿಯಾಗುತ್ತಾರೆ ಅಂದ್ರೆ ಏನರ್ಥ? ಡಾ.ಸಿಂಗ್‌ ಪ್ರಧಾನಿ ಪಟ್ಟಕ್ಕೆ ಅಯೋಗ್ಯ ಅಭ್ಯರ್ಥಿ’.

Manmohan Singhನಟವರ್‌ ಸಿಂಗ್‌ ದೃಷ್ಟಿಯಲ್ಲಿ ಪ್ರಧಾನಮಂತ್ರಿ ಮತ್ತು ಡಾ.ಮನಮೋಹನ್‌ ಸಿಂಗ್‌ ಎರಡೂ ವಿರುದ್ಧಾರ್ಥಕ ಪದಗಳು! ಇವೆರಡೂ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ! ನಟವರ್‌ ಹೇಳಿಕೆ ಯಾಕೆ ಈ ಪರಿ ಗಮನಸೆಳೆಯಿತೆಂದರೆ ಅವರು ಸತ್ಯವನ್ನಷ್ಟೇ ಅಲ್ಲ, ಕಟುಸತ್ಯ ಹೇಳಿದ್ದಾರೆ. ಲಾಗಾಯ್ತಿನಿಂದಲೂ ಕಾಂಗ್ರೆಸ್‌ನಲ್ಲಿ ಒಂದು ನಿಯಮವಿದೆ -ನಾಯಕತ್ವದ ವಿರುದ್ಧ ಯಾರೂ ಬಹಿರಂಗವಾಗಿ ಮಾತನಾಡುವಂತಿಲ್ಲ. ಅದರಲ್ಲೂ ಸತ್ಯವನ್ನು ಮಾತ್ರ ಹೇಳಲೇಬಾರದು.

ಹಾಗೆ ನೋಡಿದರೆ ನಟವರ್‌ ಹೇಳಿಕೆಯನ್ನು ಕಾಂಗ್ರೆಸ್ಸಿಗರು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವೇ ಇರಲಿಲ್ಲ. ಯಾರಿಗೂ ಗೊತ್ತಿರದ ಸಂಗತಿಯೇನನ್ನೂ ಅವರು ಹೇಳಿರಲಿಲ್ಲ. ಅವರು ಹೇಳಿದ್ದರಲ್ಲಿ ಹೊಸತೇನೂ ಇರಲಿಲ್ಲ. ಡಾ.ಸಿಂಗ್‌ ಅತ್ಯಂತ ದುರ್ಬಲ ಪ್ರಧಾನಿಯೆಂಬುದು ಇಡೀ ಜಗತ್ತಿಗೇ ಗೊತ್ತಿರುವ ಸಂಗತಿ. ಯಾವಾಗ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಸಿದರೋ ಆಗಲೇ ಈ ಸಂಗತಿ ಗೊತ್ತಾಗಿತ್ತು. ಅಂದಿನಿಂದ ಇಲ್ಲಿಯವರೆಗಿನ ಆಳ್ವಿಕೆಯಿಂದ ತಾವು ದುರ್ಬಲ ಎಂಬುದನ್ನು ಒಂದೆರಡು ಸಲವಲ್ಲ, ಅನೇಕ ಬಾರಿ ಸ್ವತಃ ಡಾ.ಸಿಂಗ್‌ ಅವರೇ ಮನವರಿಕೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಪದೇಪದೇ ದುರ್ಬಲ, ಅಶಕ್ತ ಎಂದು ಹೇಳಬೇಕಿಲ್ಲ. ಗೊತ್ತಿರುವ ವಿಷಯವನ್ನೇ ಪದೇಪದೇ ಹೇಳಿದರೆ ಯಾರಿಗಾದರೂ ಬೋರಾಗುವುದು, ಬೇಸರವಾಗುವುದು ಸಹಜ. ಈ ಕಾರಣದಿಂದಾದರೂ ಪ್ರಧಾನಿಯವರ ಬಗ್ಗೆ ರಿಯಾಯಿತಿ ತೋರಿಸಬೇಕು. ಇದು ಬಹುತೇಕ ಕಾಂಗ್ರೆಸ್ಸಿಗರ ನಿವೇದನೆ. ಹೀಗಿರುವಾಗ ಹಠಾತ್ತನೆ ಕಠೋರ ಸತ್ಯವನ್ನು ಬಡಬಡಿಸಿದರೆ ಒಮ್ಮೆಗೆ ದಿಕ್ಕೆಡುವುದು ಸಾಮಾನ್ಯ. ನಟವರ್‌ ಸಿಂಗ್‌ ಈ ತಪ್ಪು ಮಾಡಬಾರದಿತ್ತು ಅಥವಾ ಹೀಗೆ ಮಾಡಿದ್ದು ತಪ್ಪಾಯಿತು. ಅಷ್ಟೇ.

ಈ ದೇಶದ ಉನ್ನತ ಪ್ರಜಾಪ್ರಭುತ್ವದ ಮೌಲ್ಯದಂತೆ, ಪ್ರಧಾನಿಯಾದವನು ಜನರಿಂದ ನೇರವಾಗಿ ಚುನಾಯಿತನಾಗಬೇಕು. ಅಂದರೆ ಲೋಕಸಭೆಯ ಸದಸ್ಯನಾಗಬೇಕು. ಸಂಸತ್ತನ್ನು ಹಿಂಬಾಗಿಲಿನಿಂದ ಪ್ರವೇಶಿಸಬಾರದು. ಆಂದರೆ ರಾಜ್ಯಸಭೆ ಸದಸ್ಯನಾದವನು ಪ್ರಧಾನಿಯಾಗುವುದು ಸೂಕ್ತವಾಲ್ಲ. (ಆಗಬಾರದೆಂದೇನೂ ಇಲ್ಲ.) ಆದರೆ ಡಾ.ಸಿಂಗ್‌ ಲೋಕಸಭೆ ಸದಸ್ಯರಲ್ಲ. ಹಿಂಬಾಗಿಲಿನಿಂದ ಸಂಸತ್ತು ಪ್ರವೇಶಿಸಿದವರು. ಇರಲಿ. ಈ ಕಾರಣದಿಂದ ಡಾ.ಸಿಂಗ್‌ ಲೋಕಸಭೆಯಲ್ಲಿ ನಾಯಕರೂ ಅಲ್ಲ. ಅಲ್ಲಿ ಸೋನಿಯಾ ಗಾಂಧಿಯೇ ನಾಯಕಿ. ಪ್ರಧಾನಿಯಾದವನು ಲೋಕಸಭೆಯನಾಯಕನಾಗುವುದು ಸಂಪ್ರದಾಯ. ಇಲ್ಲಿಯ ತನಕ ಪ್ರಧಾನಿಯಾದವರೆಲ್ಲ ಲೋಕಸಭೆಯ ನಾಯಕ(ದೇವೇಗೌಡರು ರಾಜ್ಯಸಭೆ ಮೂಲಕ ಸಂಸತ್ತು ಪ್ರವೇಶಿಸಿದವರು)ರಾದವರೇ.

ಸಾಮಾನ್ಯವಾಗಿ ಪ್ರಧಾನಿಯಾದವರು ಅವರು ಪ್ರತಿನಿಧಿಸುವ ಪಕ್ಷದ ಅಧ್ಯಕ್ಷರಾಗಿರುವುದು ಸಹ ಸಂಪ್ರದಾಯ. ಡಾ.ಸಿಂಗ್‌ ಕಾಂಗ್ರೆಸ್‌ ಅಧ್ಯಕ್ಷರೂ ಅಲ್ಲ. ಅದಕ್ಕೂ ಸೋನಿಯಾ ಗಾಂಧಿಯೇ ನಾಯಕಿ. ಅಂದರೆ ಪ್ರಧಾನಿಯಾದವರು ಜನರ ಪ್ರತಿನಿಧಿಯೂ ಅಲ್ಲ, ಪಕ್ಷದ ನೇರ ಪ್ರತಿನಿಧಿಯೂ ಅಲ್ಲ ಅಂದಂತಾಯಿತು. ಅವರು ಪ್ರತಿಯಾಂದಕ್ಕೂ ಸೋನಿಯಾ ಗಾಂಧಿ ಅವರನ್ನೇ ಕೇಳಬೇಕು ಹಾಗೂ ಅವರು ಹೇಳಿದಂತೇ ಕೇಳಬೇಕು. ಅಷ್ಟೇ ಅಲ್ಲ ಅವರು ಹೇಳುವುದಷ್ಟನ್ನೇ ಕೇಳಬೇಕು. ಅಕ್ಷರಶಃ ಡಾ.ಸಿಂಗ್‌ ನಾಮ್‌ ಕೆ ವಾಸ್ಥೆ ಪ್ರಧಾನಿ. ಹಿಂದೆಂದು ದೇಶದ ಪ್ರಧಾನಿ ಇಷ್ಟೊಂದು ದುರ್ಬಲನಾಗಿರಲಿಲ್ಲ. ಸದನದಲ್ಲಾಗಲಿ, ಸರಕಾರದಲ್ಲಾಗಲಿ, ಪಕ್ಷದಲ್ಲಾಗಲಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವ ಸ್ವಾತಂತ್ರ್ಯ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗಿಲ್ಲ. ಜನಪಥದತ್ತ ಶತಪಥ ಹಾಕದೇ ಏನೂ ಆಗುವುದಿಲ್ಲ.

ಜವಾಹರಲಾಲ್‌ ನೆಹರು, ಇಂದಿರಾಗಾಂಧಿ, ರಾಜೀವ್‌ ಗಾಂಧಿ ಏನನ್ನೇ ಹೇಳಲಿ ಕಾಂಗ್ರೆಸ್‌ನಲ್ಲಿ ಅದು ವೇದವಾಕ್ಯವಾಗಿತ್ತು. ಸೂರ್ಯ ಚಂದ್ರನ ಸುತ್ತ ಸುತ್ತುತ್ತಾನೆ ಅಂದ್ರೆ ಎಲ್ಲ ಕಾಂಗ್ರೆಸ್ಸಿಗರು ‘ಹೌದೌದು ನಿನ್ನೆಯಿಂದ ಸೂರ್ಯನೇ ಚಂದ್ರನ ಸುತ್ತ ಗಿರಕಿ ಹೊಡೆಯಲು ನಿರ್ಧರಿಸಿದನಂತೆ ’ ಎಂದು ತಲೆಯಾಡಿಸುತ್ತಿದ್ದರು. ಅಷ್ಟೇನೂ ವರ್ಚಸ್ಸಿರದ ನರಸಿಂಹರಾವ್‌ನಂಥ ನಾಯಕನ ಮಾತನ್ನು ಧಿಕ್ಕರಿಸುವ ಎದೆಗಾರಿಕೆ ಯಾರಿಗೂ ಇರಲಿಲ್ಲ. ಹೈಕಮಾಂಡ್‌ ಅಂದ್ರೆ ಸುಮ್ನೆ ತಮಾಷೀನಾ? ಅದರಲ್ಲೂ ಇಂದಿರಾಗಾಂಧಿ ಅದೆಷ್ಟು ಪವರ್‌ಫುಲ್‌ ಆಗಿದ್ದರೆಂದರೆ, ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಸಚಿವರ್ಯಾರು ಮಾತೇ ಆಡುತ್ತಿರಲಿಲ್ಲ. ಮಾತಾಡುವಂತೆ ಇಂದಿರಾ ಅವರೇ ಹೇಳಬೇಕಾಗುತ್ತಿತ್ತು. ಬಹುತೇಕ ಕ್ಯಾಬಿನೆಟ್‌ ಮೀಟಿಂಗ್‌ಗಳಲ್ಲಿ ಇಂದಿರಾ ಗಾಂಧಿ ಹೇಳುವುದನ್ನೆಲ್ಲ ಹೇಳಿದ ಬಳಿಕ ಮೀಟಿಂಗ್‌ ಮುಗಿಯಿತೆಂದೇ ಭಾವಿಸಲಾಗುತ್ತಿತ್ತು. ಅವರು ಹೇಳಿದ್ದನ್ನು ಪ್ರಶ್ನಿಸುವವರಾಗಲಿ, ತಿದ್ದುವವರಾಗಲಿ, ಕೊಂಚ ಸೇರಿಸುವವರಾಗಲಿ ಯಾರೂ ಇರಲಿಲ್ಲ. ಇದ್ದರೆ ಅವರು ಅಲ್ಲಿ ಇರುತ್ತಿರಲಿಲ್ಲ ಅಷ್ಟೆ . ಇದು ಕಾಂಗ್ರೆಸ್‌ ಸಂಸ್ಕೃತಿ.

ಇಲ್ಲಿ ನಾನು ಡಾ.ಸಿಂಗ್‌ ಅವರನ್ನು ದೂಷಿಸುತ್ತಿಲ್ಲ, ಟೀಕಿಸುತ್ತಿಲ್ಲ. ಇದು ವಸ್ತುಸ್ಥಿತಿ. ಡಾ.ಸಿಂಗ್‌ ಪ್ರಧಾನಿ ಪಟ್ಟಕ್ಕೆ ಎಂದೂ ಆಸೆಪಟ್ಟವರಲ್ಲ. ಅದಕ್ಕಾಗಿ ಸಕ್ಷಿಂಚು ಹೊಸೆದವರಲ್ಲ. ಸ್ಕೀಮು ಮಾಡಿದವರಲ್ಲ. ಸೋನಿಯಾ ಆಗೊಲ್ಲ ಎಂದಾಗ, ಮುಂದ್ಯಾರು ಎಂಬ ಪ್ರಶ್ನೆ ಉದ್ಭವಿಸಿದಾಗ, ಡಾ.ಸಿಂಗ್‌ ಹೆಸರನ್ನು ಸೋನಿಯಾ ಅವರೇ ಪ್ರಸ್ತಾಪಿಸಿದಾಗ, ಬೇಡ ಉಸಾಬರಿ ಎಂದು ಸಿಂಗ್‌ ನಯವಾಗಿ ತಿರಸ್ಕರಿಸಿದರು. ಆದರೆ ನೀವೇ ಪ್ರಧಾನಿಯಾಗಬೇಕೆಂದು ಸೋನಿಯಾ ಒತ್ತಾಯಿಸಿದಾಗಷ್ಟೇ ಡಾ.ಸಿಂಗ್‌ ಒಪ್ಪಿಕೊಂಡಿದ್ದು. ಅಂದರೆ ಡಾ. ಸಿಂಗ್‌ ಅವರನ್ನು ದುರ್ಬಲಗೊಳಿಸಿದ್ದು, ಅಶಕ್ತರಾಗಿಸಿದ್ದು, ನಾಮಕಾವಸ್ತೆ ಪ್ರಧಾನಿಯಾಗಿರಿಸಿದ್ದು ಕಾಂಗ್ರೆಸ್‌ ಹೈಕಮಾಂಡ್‌ ಅರ್ಥಾತ್‌ ಸೋನಿಯಾ ಗಾಂಧಿ!

ಸಮಯ, ಸಂದರ್ಭ, ಸನ್ನಿವೇಷ ನೋಡಿಕೊಂಡು ಸಂವಿಧಾನದತ್ತ ಅಧಿಕಾರಪೀಠಗಳನ್ನು ದುರ್ಬಲಗೊಳಿಸಿದ ಅಗ್ಗಳಿಕೆ ಕಾಂಗ್ರೆಸ್‌ನದು. ಇತ್ತಿತ್ತಲಾಗಿ ಸಂವಿಧಾನ ತಿದ್ದುಪಡಿಯಾಗುವವರೆಗೂ ಅವೆಷ್ಟೋ ಜನಪ್ರಿಯ ಸರಕಾರಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಿದ ಕುಖ್ಯಾತಿಯೂ ಆ ಪಕ್ಷಕ್ಕೆ ಸೇರಬೇಕು. ಇವೆಲ್ಲ ಇರಲಿ, ರಾಷ್ಟ್ರಪತಿ ಹುದ್ದೆಯಂಥ ಸ್ಥಾನವನ್ನು ಸಹ ಕಾಂಗ್ರೆಸ್‌ ನಾಯಕರು ದುರ್ಬಲಗೊಳಿಸದೇ ಬಿಡಲಿಲ್ಲ.

ಫಕ್ರುದ್ದೀನ್‌ ಅಲಿ ಅಹಮದ್‌ ರಾಷ್ಟ್ರಪತಿಯಾಗಿದ್ದಾಗ ಪ್ರಧಾನಿ ಕಾರ್ಯಾಲಯ ಹೇಗೆ ವರ್ತಿಸುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿ, ರಾಷ್ಟ್ರಪತಿಯವರಿಗೆ ಸಲ್ಲಬೇಕಾದ ಕನಿಷ್ಠ ಶಿಷ್ಟಾರದ ಮರ್ಯಾದೆಯನ್ನೂ ಕೊಡುತ್ತಿರಲಿಲ್ಲ. ವಿದೇಶ ಪ್ರವಾಸ ಮುಗಿಸಿ ಬಂದಾಗ ರಾಷ್ಟ್ರಪತಿಯವರನ್ನು ಭೇಟಿ ಮಾಡಿ, ಅಲ್ಲೇನಾಯಿತು ಎಂದು ವಿವರಿಸುವುದು ಸಂಪ್ರದಾಯ ಹಾಗೂ ಶಿಷ್ಟಾಚಾರ. ಆದರೆ ಇಂದಿರಾ ಗಾಂಧಿ ಈ ಸಂಪ್ರದಾಯವನ್ನು ಉಲ್ಲಂಘಿಸಿದರು. ತಮಗೆ ನಿತ್ಯ ಸಲಾಮು ಹೊಡೆಯುವವರನ್ನೇ ಅವರು ರಾಜ್ಯಪಾಲ, ರಾಷ್ಟ್ರಪತಿ ಹುದ್ದೆಗೆ ನೇಮಿಸುತ್ತಿದ್ದರು. ತನ್ನ ಕೃಪಾಕಟಾಕ್ಷದಿಂದ ಆ ಹುದ್ದೆಯನ್ನು ಅಲಂಕರಿಸಿರುವ ಅವರಿಗೇಕೆ ತಾನು ತಲೆಬಾಗಬೇಕೆಂದು ಅವರು ಭಾವಿಸಿದ್ದಿರಬೇಕು.

1975ರಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಮುಂಚೆ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹಮದ್‌ ಅವರನ್ನು ಸಂಪರ್ಕಿಸಿದ ಇಂದಿರಾ ಗಾಂಧಿ, ಎಮರ್ಜೆನ್ಸಿ ಘೋಷಣೆಗೆ ತಕ್ಷಣ ಅಂಕಿತ ಹಾಕುವಂತೆ ಮನವಿ(ಆದೇಶಿಸಿದರು ಎಂದು ಓದಿಕೊಳ್ಳಿ) ಮಾಡಿಕೊಂಡರು. ಆಗ ಫಕ್ರುದ್ದೀನ್‌ ಅಲಿ ಅಹಮದ್‌ರು ಬಾತ್‌ಟಬ್‌ನಲ್ಲಿ ಶರೀರವನ್ನು ಚೆಲ್ಲಿಕೊಂಡು ಹಾಯಾಗಿ ಸ್ನಾನ ಮಾಡುತ್ತಿದ್ದರಂತೆ. ಬಾತ್‌ಟಬ್‌ನಿಂದಲೇ ತುರ್ತು ಪರಿಸ್ಥಿತಿ ಘೋಷಣೆಗೆ ಅಂಕಿತ ಹಾಕಿದರಂತೆ. ರಾಷ್ಟ್ರಪತಿ ವರಹಾಗಿರಿ ವೆಂಕಟಗಿರಿ ಸಹ ಇದಕ್ಕೆ ಹೊರತಾಗಿರಲಿಲ್ಲ. ಇಂದಿರಾ ಗಾಂಧಿ ಹೇಳಿದರೆ ಓಡೋಡಿ ಬರುವ ಧಾವಂತ, ಕಳಕಳಿ, ನಿಷ್ಠೆ. ಆಗ ಅವರಿಗೆ ತಾನು ಈ ದೇಶದ ರಾಷ್ಟ್ರಪತಿ, ಶಿಷ್ಟಾಚಾರದ ಪ್ರಕಾರ ಪ್ರಧಾನಿಗಿಂತ ಮೇಲಿನವನು ಎಂಬುದೆಲ್ಲ ಮರೆತು ಹೋಗುತ್ತಿತ್ತು. ಇಂದಿರಾ ಗಾಂಧಿ ಎದುರು ಕೈಕಾಲು ಮಡಚಿಕೊಂಡು ಹೆದರಿ ಕುಳಿತುಕೊಳ್ಳುತ್ತಿದ್ದರು. ಇಂಥವರನ್ನೇ ಇಂದಿರಾ ಈ ಹುದ್ದೆಗೆ ನೇಮಿಸುತ್ತಿದ್ದರು -ಆ ಹುದ್ದೆಗೇರಿದ್ದೇ ತಮ್ಮ ಏಳೇಳು ಜನ್ಮದ ಪುಣ್ಯ ಎಂಬಂತೆ ಕೃತಾರ್ಥರಾಗಿ, ಸದಾ ಶಿರಬಾಗಿ ಎಂಥ ಕೈಂಕರ್ಯಕ್ಕೂ ಕೈಕಟ್ಟಿ ನಿಂತುಬಿಡುತ್ತಿದ್ದರು.

ಆದರೆ ತಾವು ಅಲಂಕರಿಸಿದ ಹುದ್ದೆಯ ಘನತೆ ಮೂರಾಬಟ್ಟೆಯಾಗುತ್ತಿದೆಯೆಂಬ ಕಲ್ಪನೆ ಕೈಕಟ್ಟಿ ನಿಂತವರಿಗಾಗಲಿ, ನಿಲ್ಲಿಸುವವರಿಗಾಗಲಿ ಇರುತ್ತಿರಲಿಲ್ಲ.

ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ರಾಷ್ಟ್ರಪತಿ ಜೈಲ್‌ಸಿಂಗ್‌ರನ್ನು ನಿರ್ಲಕ್ಷಿಸಿದ್ದರು. ರಾಷ್ಟ್ರಪತಿ ಭವನ ಮತ್ತು ಪ್ರಧಾನಿ ಕಾರ್ಯಾಲಯ ಕೂಗಳತೆ ದೂರದಲ್ಲಿದ್ದರೂ, ಸಂಪರ್ಕವೇ ಇಲ್ಲ ಎನ್ನುಂತಿತ್ತು. ರಾಷ್ಟ್ರಪತಿಯವರಿಗೆ ರಾಜೀವ್‌ ಏನನ್ನೂ ತಿಳಿಸುತ್ತಿರಲಿಲ್ಲ. ಪ್ರಮುಖ ನಿರ್ಧಾರಗಳ ಬಗ್ಗೆ ವರದಿ ಮಾಡುತ್ತಿರಲಿಲ್ಲ. ಜೈಲ್‌ಸಿಂಗ್‌ ಹಾವಭಾವ, ಮಾತು, ಭಂಗಿಗಳನ್ನು ತಮ್ಮ ಸ್ನೇಹಿತ ಮುಂದೆ ರಾಜೀವ್‌ ಅಣಕಿಸಿ ಗೇಲಿ ಮಾಡುತ್ತಿದ್ದರು ಎಂಬ ಮಾತು ಪ್ರಚಲಿತದಲ್ಲಿತ್ತು. ದೇಶದ ರಾಷ್ಟ್ರಪತಿ ಜೋಕ್‌ ಆಗಿದ್ದರು. ಸ್ವತಃ ಪ್ರಧಾನಿಯೇ ವ್ಯಂಗ್ಯ ಮಾಡಿದರೆ ಏನಾಗಬೇಡ? ತಮ್ಮ ಅಧಿಕಾರ ಅವಧಿ ಮುಗಿಯಲು ಕೆಲ ತಿಂಗಳುಗಳಿದ್ದಾಗ ಜೈಲ್‌ಸಿಂಗ್‌ ರಾಜೀವ್‌ಗೆ ಪಾಠ ಕಲಿಸಿದರು. ಅದರಿಂದ ಎರಡೂ ಹುದ್ದೆಗಳ ಘನತೆಗೆ ಕುಂದುಂಟಾಯಿತು.

ರಾಜೀವ್‌ ಗಾಂಧಿ ಜತೆ ಹಾಗೇಕೆ ನಡೆದುಕೊಂಡಿರಿ ಎಂದು ಜೈಲ್‌ಸಿಂಗ್‌ರನ್ನು ಕೇಳಿದಾಗ ಅವರು ಹೇಳಿದ್ದರಂತೆ -‘ಅವರ ದೃಷ್ಟಿಯಲ್ಲಿ ನಾನು ಕತ್ತೆಯೇ ಇರಬಹುದು. ಆದರೆ ನಾನು ಈ ದೇಶದ ರಾಷ್ಟ್ರಪತಿ, ನೆನಪಿಡಿ.’

ಡಾ.ಮನಮೋಹನ್‌ ಸಿಂಗ್‌ ಒಳ್ಳೆಯ ಮನುಷ್ಯ. ಅವರು ನಮ್ಮ ನಡುವಿನ ಉತ್ತಮ ಆರ್ಥಿಕತಜ್ಞರಲ್ಲೊಬ್ಬರು. ಉದಾರ ಆರ್ಥಿಕ ನೀತಿಯ ಹರಿಕಾರರು. ಆದರೆ ಏನು ಮಾಡುವುದು, ಪ್ರಧಾನಿಯಾಗಿ ದುರ್ಬಲ, ದುರ್ಬಲ. ಪ್ರಧಾನಿಯನ್ನು ಈ ಸ್ಥಿತಿಗೆ ತಂದಿಟ್ಟವರು ಯಾರು? ಸೋನಿಯಾ ಗಾಂಧಿಯವರಲ್ಲವೇ?

ದುರ್ಬಲ ಪ್ರಧಾನಿ ದುರ್ಬಲ ವ್ಯವಸ್ಥೆಗೆ, ದುರ್ಬಲ ದೇಶಕ್ಕೆ ಕಾರಣನಾಗುತ್ತಾನೆ. ಪ್ರಧಾನಿಯನ್ನು ದುರ್ಬಲಗೊಳಿಸುವುದು ದೇಶವನ್ನು ದುರ್ಬಲಗೊಳಿಸಿದಂತೆ. ನಟವರ್‌ ಸಿಂಗ್‌ ಹೇಳಿಕೆಯನ್ನು ಈ ಅರ್ಥದಲ್ಲಿ ಗ್ರಹಿಸಿದರೆ ಅದರ ಗಾಂಭೀರ್ಯ ಅರ್ಥವಾದೀತು.

(ಸ್ನೇಹ ಸೇತು : ವಿಜಯ ಕರ್ನಾಟಕ)


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X