ಬೆರಗು ಹುಟ್ಟಿಸುವ ಅಮೆರಿಕ ನಮ್ಮನ್ನು ಚಿಂತೆಗೂ ಹಚ್ಚುತ್ತದೆ!
![]() | ವಿಶ್ವೇಶ್ವರ ಭಟ್ |
ಕಳೆದ ಹದಿನಾರು ದಿನಗಳಿಂದ ಅಮೆರಿಕದಲ್ಲಿ ಸುತ್ತುತ್ತಿದ್ದೇನೆ. ನಾಲ್ಕು ವರ್ಷಗಳ ಹಿಂದೆ ಅಮೆರಿಕಕ್ಕೆ ಬಂದಿದ್ದೆ. ಆಗ ಸೆಪ್ಟೆಂಬರ್ ಹನ್ನೊಂದರ ಮೊದಲ ವಾರ್ಷಿಕದಲ್ಲಿ ಅಮೆರಿಕ ಸರಕಾರದ ಆಮಂತ್ರಣದ ಮೇರೆಗೆ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡ ಕುಸಿದ ‘ಗ್ರೌಂಡ್ ಜೀರೊ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ.
ಅಮೆರಿಕ ಅಂದ್ರೆ ನನಗೆ ಯಾವತ್ತೂ ಕುತೂಹಲವೇ. ಅದು ಶ್ರೀಮಂತ ದೇಶ ಎಂಬ ಕಾರಣದಿಂದ ಅಲ್ಲ. ಸಿರಿ ಸಮೃದ್ಧಿ ತುಂಬಿದ, ಐಷಾರಾಮಿ ವೈಭವೋಪೇತ ರಾಷ್ಟ್ರ ಎಂಬುದೂ ಅಲ್ಲ. ಅಮೆರಿಕದಂತೆ ಇರುವ ಇಂಗ್ಲೆಂಡ್‌ನಲ್ಲಿ ನಾನು ಕೆಲ ಕಾಲ ಓದಿದವ. ಹಾಗೆ ನೋಡಿದರೆ ನನಗೆ ಅಮೆರಿಕಕ್ಕಿಂತ ಇಂಗ್ಲೆಂಡ್ ಕಡೆಗೇ ಮನಸ್ಸು ಹೆಚ್ಚು ವಾಲುತ್ತದೆ. ಯಾವತ್ತಿಗೂ ಇಂಗ್ಲೆಂಡ್‌ಗೇ ಒಂದು ಮುಷ್ಠಿ ಹೆಚ್ಚು ಹೆಚ್ಚು ಮಾರ್ಕ್ಸ್ ಕೊಡುತ್ತೇನೆ. ಇಂಗ್ಲೆಂಡ್‌ನ ಯಾವುದೇ ಮೂಲೆಗೆ ಹೋದರೂ ಅಲ್ಲೊಂದು ಇತಿಹಾಸ ಸಿಗುತ್ತದೆ. ಅಲ್ಲಿನ ಒಂದು ಕಲ್ಲು ಸಹ ಕತೆ ಹೇಳುತ್ತದೆ. ನಾವು ನಿಂತ ನೆಲ, ಮುಟ್ಟುವ ಕಟ್ಟಡ, ನೋಡುವ ದೃಶ್ಯ ಕೂಡ ಇತಿಹಾಸದ ಒಂದು ತುಣುಕಾಗಿರುತ್ತದೆ.
ಆದರೆ ಇಡೀ ದೇಶವನ್ನು ನಮ್ಮ ಮನೆ ಜಗಲಿಯಂತೆ, ನಮ್ಮ ಬೆಡ್‌ರೂಮಿನಂತೆ ಸ್ವಚ್ಛವಾಗಿಟ್ಟುಕೊಳ್ಳಬಹುದೆಂಬುದನ್ನು ಸಮಸ್ತ ಪ್ರಪಂಚಕ್ಕೆ ತೋರಿಸಿಕೊಟ್ಟವರು ಅಮೆರಿಕನ್‌ರು. ಬಿಳಿ ಖಾದಿಬಟ್ಟೆಯನ್ನು ಗಂಜಿಯಲ್ಲಿ ನೆನೆಸಿ ತೆಗೆದು, ಕಬ್ಬಿಣದ ಇಸ್ತ್ರಿಪೆಟ್ಟಿಗೆಯೊಳಗೆ ಇದ್ದಿಲು ಹಾಕಿ ತಿಕ್ಕಿ ತಿಕ್ಕಿ ಇಸ್ತ್ರಿ ಮಾಡಿದ ಪ್ರತಿದಿನದ ಗರಿಗರಿ ಬಟ್ಟೆಯಂತೆ ಅಮೆರಿಕ. ಎಲ್ಲೂ ಸುಕ್ಕು ಎಂಬುದೇ ಇಲ್ಲ.
ಅಮೆರಿಕದ ಸಿರಿವಂತಿಕೆಯ ನೆರಳಲ್ಲಿ ನಮ್ಮ ಬಡತನ, ಹಸಿವು, ಅನಕ್ಷರತೆಯ ಮೊನಚು, ತೀವ್ರತೆ ಅರ್ಥವಾಗುತ್ತವೆ. ದಾರಿದ್ರ್ಯದ ಅಲುಗು ಶ್ರೀಮಂತಿಕೆಯ ಹೊಳಪಿನಲ್ಲಿ ಢಾಳಾಗಿ ಕಾಣುತ್ತದಂತೆ. ಹೀಗಾಗಿ ಅಮೆರಿಕ, ಇಂಗ್ಲೆಂಡ್, ಸ್ವಿಜರ್ಲ್ಯಾಂಡ್, ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳಿಗೆ ಹೋದಾಗ ನಮ್ಮೂರಿನ ಬಡತನ, ಹಸಿವು, ಅನಕ್ಷರತೆ, ರೋಗರುಜಿನು ಮತ್ತಷ್ಟು ಘೋರವಾಗಿ ಕಾಣುತ್ತದೆ. ಇವನ್ನೆಲ್ಲ ಅರ್ಥಮಾಡಿಕೊಳ್ಳಲು ವಿದೇಶಗಳಿಗೇ ಹೋಗಬೇಕಿಲ್ಲ. ಈ ಎಲ್ಲ ಅನಿಷ್ಟಗಳನ್ನು ಹುಡುಕಿಕೊಂಡು ಬಾಂಗ್ಲಾ, ಆಫ್ರಿಕಾಕ್ಕೂ ಹೋಗಬೇಕಿಲ್ಲ. ಅವೆಲ್ಲ ನಮ್ಮ ರಾಜ್ಯದಲ್ಲೇ ಇವೆ. ಆದರೂ ಅವೆರಡರ contrastನಮಗೆ ಚೆನ್ನಾಗಿ ಅರ್ಥವಾಗುತ್ತದೆ.
ಪ್ರತಿ ಸಲ ಅಮೆರಿಕಕ್ಕೆ ಬಂದಾಗಲೂ ನನಗೆ ಹೀಗೇ ಅನಿಸಿದೆ. ಅಮೆರಿಕದ ಒಂದು ಊರನ್ನು ನೋಡಿದರೂ ಸಾಕು, ಎಲ್ಲವನ್ನೂ ನೋಡಿದಂತೆ. ಎಲ್ಲ ಊರುಗಳೂ ಮತ್ತೊಂದರ ಪಡಿಯಚ್ಚು. ಇಡೀ ದೇಶಾದ್ಯಂತ ಒಂದೇ ವ್ಯವಸ್ಥೆ, ಅಚ್ಚುಕಟ್ಟುತನ ಸದಾ ಜಾರಿಯಲ್ಲಿರುತ್ತದೆ. ಈ ದೇಶದ ಅಗಾಧತೆಗೆ ಯಾರೇ ಆದರೂ ಮಾರು ಹೋಗಲೇಬೇಕು.
ಪೂರ್ವ ಕರಾವಳಿಯಲ್ಲಿನ ರಾಜಧಾನಿ ನಗರ ವಾಷಿಂಗ್‌ಟನ್ ಪಶ್ಚಿಮ ಕರಾವಳಿಯ ಲಾಸ್‌ಏಂಜಲೀಸ್ ವಿಮಾನ ಪ್ರಯಾಣದಲ್ಲಿ ಐದೂವರೆ ಗಂಟೆ ದೂರದಲ್ಲಿದೆ. ಒಂದೇ ದೇಶದಲ್ಲಿ ಮೂರು ಗಂಟೆ ಸಮಯ ವ್ಯತ್ಯಾಸ! ಅಂದರೆ ಬೆಳಿಗ್ಗೆ 8 ಗಂಟೆಗೆ ವಾಷಿಂಗ್‌ಟನ್‌ನಲ್ಲಿ ಉಪಾಹಾರ ಸೇವಿಸಿ ಐದೂವರೆ ಗಂಟೆ ವಿಮಾನ ಪ್ರಯಾಣ ಮಾಡಿ ಲಾಸ್‌ಎಂಜಲೀಸ್ ತಲುಪಿದರೆ ಅಲ್ಲಿ ಬೆಳಿಗ್ಗೆ ಆಗಿನ್ನೂ ಹತ್ತೂವರೆ ಆಗಿರುತ್ತದೆ ಅಷ್ಟೆ, ಪುನಃ ಉಪಾಹಾರ ಸೇವಿಸುವ ಹೊತ್ತು. ಅದೇ ಲಾಸ್‌ಎಂಜಲೀಸ್‌ನಿಂದ ಬೆಳಿಗ್ಗೆ ಎಂಟು ಗಂಟೆಗೆ ಉಪಾಹಾರ ಸೇವಿಸಿ ಐದೂವರೆ ಗಂಟೆ ವಿಮಾನದಲ್ಲಿ ಕುಂತು ವಾಷಿಂಗ್‌ಟನ್ ತಲುಪುವ ಹೊತ್ತಿಗೆ ಸಾಯಂಕಾಲ ನಾಲ್ಕೂವರೆ ಆಗಿರುತ್ತದೆ! ಒಂದೇ ದೇಶದಲ್ಲಿ ನಾಲ್ಕು ಬೇರೆಬೇರೆ ಟೈಮ್‌ಜೋನ್‌ಗಳು! ಜೆಟ್‌ಸ್ಪೀಡ್, ಜೆಟ್‌ಲ್ಯಾಗ್‌ನ್ನು ತಲೆತುಂಬಾ ತುಂಬಿಕೊಂಡೇ ಓಡಾಡಬೇಕಾದ ಅನುಭವ.
ಅದ್ಯಾಕೋ ನಮ್ಮ ಊರು, ಭಾಷೆ, ಊಟ ಅಮೆರಿಕದಲ್ಲಿದ್ದಾಗ ಹೆಚ್ಚು ಕಾಡುತ್ತವೆ. ಹಾಗೇ ನಮ್ಮ ಜನರೂ. ಇಂಟರ್‌ನೆಟ್ ತಂತ್ರಜ್ಞಾನದ ಚಮತ್ಕಾರದಿಂದ ಕನ್ನಡವನ್ನು ಕಿಸೆಯಲ್ಲಿಟ್ಟುಕೊಂಡು ಅಮೆರಿಕದಲ್ಲಿ ಓಡಾಡಬಹುದು. ಪ್ರತಿದಿನ ಮಧ್ಯಾಹ್ನ ನಾಲ್ಕು ಗಂಟೆಯಾದರೆ ವಾಷಿಂಗ್‌ಟನ್‌ನಲ್ಲಿ ‘ವಿಜಯ ಕರ್ನಾಟಕ’ ಓದಬಹುದು. ಆಗ ಕರ್ನಾಟಕದಲ್ಲಿ ಮಧ್ಯರಾತ್ರಿ ಒಂದೂವರೆ. ಅಂದರೆ ನಾವು ‘ವಿಜಯ ಕರ್ನಾಟಕ’ವನ್ನು ಓದುವುದಕ್ಕಿಂತಲೂ ಮೊದಲೇ ಅಮೆರಿಕನ್ನಡಿಗರು ನಮ್ಮ ಪತ್ರಿಕೆ ಓದಿರುತ್ತಾರೆ! ಈಗಂತೂ ಎಲ್ಲರ ಮನೆಗಳಲ್ಲಿ ಉದಯ ಟಿವಿಯೂ ನುಲಿಯುವುದರಿಂದ ಧಾರಾವಾಹಿಗಳನ್ನು ನೋಡುತ್ತ, ಕನ್ನಡ ಹಾಡುಗಳನ್ನು ಕೇಳುತ್ತ ಎಲ್ಲರ ಮನೆಗಳಲ್ಲಿ ಕನ್ನಡ ವಾತಾವರಣ ಹಾಸಿರುತ್ತದೆ.
ಪತ್ರಿಕೆ, ಫೋನು, ಧಾರಾವಾಹಿ ಎಲ್ಲರ ಮನೆಗಳಲ್ಲಿ ಕನ್ನಡವನ್ನು ಜಾರಿಯಲ್ಲಿಟ್ಟಿವೆ. ಇಲ್ಲಿನ ಎಲ್ಲ ಕನ್ನಡಿಗರ ಮನಸ್ಸಿನಲ್ಲಿರುವುದು ಒಂದೇ - ‘ನಾವ್ಯಾಕ ಹಾಂಗ, ಇವರ್ಯಾಕ ಹೀಂಗ?’ . ಯಾಕೆ ನಮಗೆ ಸಾಧ್ಯವಾಗದ್ದು ಇವರಿಗೆ ಸಾಧ್ಯವಾಗಿದೆ ಅಥವಾ ಅದಕ್ಕಿಂತ ಮುಖ್ಯವಾಗಿ ಇವರಿಗೆ ಸಾಧ್ಯವಾದದ್ದು ನಮಗೇಕೆ ಸಾಧ್ಯವಾಗಿಲ್ಲ ಎಂಬುದು. ಈ ಪ್ರಶ್ನೆ ಇಂದು ನಿನ್ನೆಯದಲ್ಲ. ಯಾರೇ ಅಮೆರಿಕದಲ್ಲಿ ನೆಲೆನಿಂತರೂ ಕಾಡುವ ಪ್ರಶ್ನೆಯಿದು. ಆದರೆ ನಮಗೆ ಉತ್ತರ ಮಾತ್ರ ಸಿಗುತ್ತಿಲ್ಲ. ಇದು ಒಂದು ದಿನ, ಒಂದು ವರ್ಷದಲ್ಲಿ ಆಗುವ ಬದಲಾವಣೆಯಲ್ಲ. ಒಬ್ಬರಿಂದ ಆಗುವಂಥದ್ದೂ ಅಲ್ಲ. ಇಡೀ ದೇಶವೇ ಬದಲಾವಣೆ, ಪ್ರಗತಿ, ಅಭಿವೃದ್ಧಿಯೆಡೆಗೆ ಮುಖ ಮಾಡಿ ಮುಖ ಮಾಡಿ ನಿಂತುಕೊಂಡಾಗ ಮಾತ್ರ ಸಾಧ್ಯ.
ಹಡಗಿನಲ್ಲಿ ಒಂದು ತೂತಾದರೆ ಮುಚ್ಚಬಹುದು. ಆದರೆ ಹಡಗಿಗೆ ಹಡಗೇ ತೂತದರೆ ಮುಚ್ಚುವುದಾದರೂ ಹೇಗೆ? ನಮಗೆ ಅಭಿವೃದ್ಧಿ ಬೇಡ ಎಂದಲ್ಲ, ಬೇಕೇಬೇಕು. ನಮಗೂ ಮುಂದುವರಿದ ದೇಶಗಳ ಹಾಗೆ ಆಧುನಿಕ ವ್ಯವಸ್ಥೆ ಬೇಡ ಎಂದಲ್ಲ, ಅದೂ ಬೇಕು. ನಮ್ಮ ಕನಸೂ ಅದೇ. ಆದರೆ ಅದನ್ನು ಸಾಧಿಸುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಾವೇ ಹತಾಶರಾಗಿ ಹೇಳುವುದುಂಟು ಇನ್ನು ಐವತ್ತು ವರ್ಷ ಕಳೆದರೂ ನವು ಅಮೆರಿಕದ ಸನಿಹ ಸಹ ಬರಲಾಗುವುದಿಲ್ಲ ಎಂದು. ಅಂದರೆ ನಮ್ಮ ವ್ಯವಸ್ಥೆ ಅದೆಷ್ಟು ಹದಗೆಟ್ಟಿರಬಹುದು ಯೋಚಿಸಿ.
ಜನಸಂಖ್ಯೆಯೊಂದೇ ನಮ್ಮ ಸಮಸ್ಯೆಯಲ್ಲ. ಅದು ನಮಗೆ ವರದಾನವಾಗಬೇಕಿತ್ತು. ಆದರೆ ಶಾಪವಾಗಿದೆ. ಪಕ್ಕದ ಚೀನಾವನ್ನೇ ತೆಗೆದುಕೊಳ್ಳೋಣ. ಜನಸಂಖ್ಯೆಯಲ್ಲಿ ನಮಗಿಂತ ಮುಂದಿರುವ ಚೀನಾ, ಅದನ್ನೊಂದು ಸಮಸ್ಯೆಯಾಗಿ ಪರಿಗಣಿಸಿಯೇ ಇಲ್ಲ. ಎಲ್ಲ ಕೈಗಳನ್ನೂ ಕೆಲಸಕ್ಕೆ ಹಚ್ಚಿದೆ. ಕೆಲಸ ಮಾಡುವ ಕೈಗಳು ದುಡ್ಡನ್ನು ಎಣಿಸುತ್ತವೆ. ಇಂದು ಯಾವುದೇ ದೇಶಕ್ಕೆ ಹೋಗಿ, ಅಲ್ಲಿ ಸಿಗುವುದು ‘ಮೇಡ್ ಇನ್ ಚೀನಾ’ ವಸ್ತುಗಳೇ. ವಿಶ್ವ ಮಾರುಕಟ್ಟೆಯಲ್ಲಿ ಚೀನಾ ವಸ್ತುಗಳದೇ ಪ್ರಭುತ್ವ. ಅಮೆರಿಕದಲ್ಲಂತೂ ರಾಷ್ಟ್ರಧ್ವಜವೂ ಚೀನಾದಿಂದಲೇ ಬರುತ್ತದೆ! ನಮ್ಮ ಹಾಗೇ ಇದ್ದ ಚೀನಾಕ್ಕೆ ಇವೆಲ್ಲ ಸಾಧ್ಯವಾಗಿದ್ದು ಹೇಗೆ? ಇವೆಲ್ಲ ಒಂದೆರಡು ವರ್ಷಗಳಲ್ಲಿ ಆದ ಬದಲಾವಣೆಗಳಲ್ಲ. ಆದರೆ ಯಾರೋ ಕೆಲವರು ಎದ್ದುನಿಂತಿದ್ದರಿಂದ ಇಷ್ಟೆಲ್ಲ ಪರಿವರ್ತನೆಯಾಗಿದೆಯಲ್ಲ.
ಹಾಗಂತ ನಾವು ಸುಮ್ಮನೆ ಕುಳಿತಿಲ್ಲ. ಎದ್ದು ನಿಂತಿದ್ದೇವೆ. ಆದರೆ ಸುಧಾರಣಾಕ್ರಮವನ್ನು ಎಲ್ಲಿಂದ ಆರಂಭಿಸಬೇಕೆಂಬುದೇ ನಮ್ಮ ಮುಂದಿರುವ ಪ್ರಶ್ನೆ. ಇಡೀ ಹಡಗೇ ತೂತಾಗಿರುವಾಗ ಯಾವ ತೂತನ್ನು ಮುಚ್ಚುವುದು? ಒಂದು ಸಮಸ್ಯೆಯನ್ನು ನಾವು ಹೇಗೆ tackle ಮಾಡುತ್ತೇವೆ ಗಮನಿಸಿ. ಕರ್ನಾಟಕ ಸರಕಾರ ರಾಜ್ಯಾದ್ಯಂತ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ನಲವತ್ತು ಮಂದಿ ಆರ್‌ಟಿಒ ಅಧಿಕಾರಿಗಳನ್ನು ಯುರೋಪ್‌ಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲು ನಿರ್ಧರಿಸಿದೆಯಂತೆ. ಈ ವಿಷಯದಲ್ಲಿ ಕನಿಷ್ಠ ಈಗಾದರೂ ಸರಕಾರ ಎಚ್ಚೆತ್ತುಕೊಂಡಿದೆಯಲ್ಲ ಎಂದು ಸಮಾಧಾನಪಡಬೇಕು.
ಆರ್‌ಟಿಒಗಳು ಪ್ರವಾಸ ಹೋಗಿ ಬಂದಾಕ್ಷಣ ಸಂಚಾರ ವ್ಯವಸ್ಥೆ ಸುಧಾರಿಸುವುದಿಲ್ಲ ಎಂಬುದು ನಮಗೆಲ್ಲ ಗೊತ್ತು. ನಮ್ಮಲ್ಲಿ ವಿದೇಶ ಅಧ್ಯಯನ ಪ್ರವಾಸವೆಲ್ಲ ಜಾರಿಯಾಗಿದ್ದರೆ ನಾವು ಹೀಗಿರುತ್ತಿರಲಿಲ್ಲ. ಅಧಿಕಾರಕ್ಕೆ ಬಂದ ಶಾಸಕ, ಸಂಸದ, ಮೇಯರ್, ಕಾರ್ಪೊರೇಟರ್, ಮಂತ್ರಿ, ಮುಖ್ಯಮಂತ್ರಿ, ಸ್ಪೀಕರ್ ಎಲ್ಲರೂ ಹೀಗೆ ಪ್ರವಾಸಕ್ಕೆ ಹೋಗಿಬರುತ್ತಾರೆ. ಐದು ವರ್ಷ ಅವಧಿ ಮುಗಿಸುವ ಸಂಸದನೊಬ್ಬ ಏನಿಲ್ಲವೆಂದರೂ ಕನಿಷ್ಠ ಹತ್ತು ದೇಶಗಳನ್ನು ನೋಡಿರುತ್ತಾನೆ ಸರಕಾರಿ ಹಣದಲ್ಲಿ. ವರ್ಷವಿಡೀ ಒಂದಲ್ಲ ಒಂದು ಸಂಸದೀಯ ನಿಯೋಗ ಒಂದಲ್ಲ ಒಂದು ದೇಶದಲ್ಲಿ ಸುತ್ತುತ್ತಲೇ ಇರುತ್ತದೆ. ಮೋರಿ, ಚರಂಡಿ, ಬೀದಿದೀಪ ವ್ಯವಸ್ಥೆ ಸುಧಾರಣೆಗೆಂದು ನಮ್ಮ ಮೇಯರ್, ಕಾರ್ಪೊರೇಟರ್, ಅಧಿಕಾರಿಗಳೆಲ್ಲ ವಿದೇಶ ಸುತ್ತಿ ಬಂದಿದ್ದಾರೆ. ಸಂಶಯ ಬೇಡ, ಮುಂದೆ ಅಧಿಕಾರಕ್ಕೆ ಬರುವ ಎಲ್ಲರೂ ಇದೇ ಚಾಳಿ ಮುಂದುವರಿಸುತ್ತಾರೆ. ಸಂಶಯ ಬೇಡ, ನಮ್ಮ ಮೋರಿ, ಚರಂಡಿಗಳೆಲ್ಲ ಹೀಗೇ ಇರುತ್ತವೆ.
ಇರಲಿ, ಆರ್‌ಟಿಒಗಳ ವಿದೇಶಯಾತ್ರೆಯನ್ನೇ ತೆಗೆದುಕೊಳ್ಳೋಣ. ಯುರೋಪಿನ ಸಂಚಾರಿ ಅನುಭವದಿಂದ ಪ್ರಭಾವಿತರಾಗಿ ಆರ್‌ಟಿಒಗಳೆಲ್ಲ ನಮ್ಮ ಸಂಚಾರ ವ್ಯವಸ್ಥೆಯನ್ನು ಬದಲಿಸಲು ನಿರ್ಧರಿಸಿದರೆಂದು ಭಾವಿಸೋಣ. ಆದರೆ ಮೊದಲು ತೊಡಕಾಗುವುದು ಕಾನೂನು. ಈಗಲೂ ನಮ್ಮಲ್ಲಿರುವುದು ನೂರಾರು ವರ್ಷಗಳಷ್ಟು ಹಳೆಯ ಮೋಟಾರುವಾಹನ ಕಾಯ್ದೆ. ಅದಿರಲಿ, ಡ್ರೈವಿಂಗ್ ಲೈಸೆನ್ಸ್ ವ್ಯವಸ್ಥೆಯಲ್ಲೇ ನೂರಾರು ಲೋಪದೋಷ. ಲಂಚಕೊಟ್ಟರೆ ಕಣ್ಣುಕಾಣದವ ಕಾರ್ ಲೈಸೆನ್ಸ್, ಕಾಲು ಇಲ್ಲದವ ಬೈಕ್ ಲೈಸೆನ್ಸ್ ಪಡೆಯುವುದು ಕಷ್ಟವೇನಿಲ್ಲ. ಚಾಲಕನಾದವನಿಗೆ ವಾಹನ ಚಲಿಸುವುದು ಮಾತ್ರ ಗೊತ್ತಿದ್ದರೆ ಸಾಲದು, ಆತನಿಗೆ ತನ್ನ ಕೆಲಸದ ಜವಾಬ್ದಾರಿಯೂ ಗೊತ್ತಿರಬೇಕು. ವಾಹನದಲ್ಲಿ ಹೋಗುವವರಷ್ಟೇ ಪಾದಚಾರಿಗಳೂ ಮುಖ್ಯವೆಂದು ಅನಿಸಬೇಕು. ಶಾಲೆ, ಆಸ್ಪತ್ರೆ, ದೇವಸ್ಥಾನದ ಮುಂದೆ ಯಾಕೆ ಹಾರ್ನ್ ಮಾಡಬಾರದು ಎಂಬುದೂ ಅವನಿಗೆ ಗೊತ್ತಿರಬೇಕು. ಸಂಚಾರಿ ವ್ಯವಸ್ಥೆ ಸುಧಾರಣೆಯೆಂದರೆ ಕೇವಲ ಟ್ರಾಫಿಕ್ ಜಾಮನ್ನು ಕರಗಿಸುವುದಲ್ಲ.
ಇನ್ನು ನಮ್ಮ ರಸ್ತೆಗಳು. ಎಲ್ಲ ಊರುಗಳೂ ಹೋಂಡಾ ಸಿಟಿಗಳೇ! ಟ್ರಾಫಿಕ್ ಜಾಮ್‌ಗೆ, ಅಪಘಾತಕ್ಕೆ ಹೊಂಡಗಳೂ ಕಾರಣ. ರಸ್ತೆಗಳನ್ನು ಸುಧಾರಿಸದೇ ಯಾವ ಸಂಚಾರಿ ವ್ಯವಸ್ಥೆಯನ್ನು ಸುಧಾರಿಸುವುದು ಅಸಾಧ್ಯವೇ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿಯಂಥ ಊರುಗಳಲ್ಲಿ ರಸ್ತೆ ಅಗಲೀಕರಣಕ್ಕೆ ನೂರಾರು ವಿಘ್ನಗಳು. ಅಲ್ಲೆಲ್ಲ ರಸ್ತೆಗಳೇ ಇಲ್ಲ.
ಒಮ್ಮೆ ಮೈಕ್ರೊಸಾಫ್ಟ್ ಕಂಪೆನಿಯ ಮುಖ್ಯಸ್ಥ ಬಿಲ್‌ಗೇಟ್ಸ್‌ಗೆ ‘ಒಂದು ವೇಳೆ ನೀವು ಸಾಫ್ಟ್‌ವೇರ್ ಬದಲು ಅಟೊಮೊಬೈಲ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೆ ಏನು ಮಾಡುತ್ತಿದ್ದಿರಿ?’ ಎಂದು ಕೇಳಿದಾಗ ಅವರು ಹೇಳಿದ್ದರು - ‘‘ನಾನು ಕಾರು ತಯಾರಿಕೆ ಬಿಜಿನೆಸ್‌ನಲ್ಲಿದ್ದರೆ, ಅದನ್ನು ತಯಾರಿಸುವುದಕ್ಕಿಂತ ಮೊದಲು ಎಲ್ಲ ರಸ್ತೆಗಳನ್ನು ಸುಧಾರಿಸುತ್ತಿದ್ದೆ. ರಸ್ತೆ ಸುಧಾರಿಸದೇ ಎಷ್ಟೇ ಉತ್ತಮ ವಾಹನ ತಯಾರಿಕೆ ಪ್ರಯೋಜನವೆನು?’’ ಈ ಮಾತು ನಮ್ಮ ರಸ್ತೆಗಳಿಗೂ ಅನ್ವಯ. ಉತ್ತಮ ರಸ್ತೆ ಹೊಂದದೇ ಸಂಚಾರವ್ಯವಸ್ಥೆ ಸುಧಾರಿಸುವುದು ಸಾಧ್ಯವೇ ಇಲ್ಲ.
ಇನ್ನು ಆರ್‌ಟಿಒ ಇಲಾಖೆ. ಪ್ರಾಯಶಃ ಈ ಇಲಾಖೆಯಲ್ಲಿರುವಷ್ಟು ಭ್ರಷ್ಟಾಚಾರ ಮತ್ತೆಲ್ಲೂ ಇರಲಿಕ್ಕಿಲ್ಲ. ಇಲ್ಲಿ ಲಂಚವಿಲ್ಲದೇ ಯಾವ ಕೆಲಸವೂ ಆಗುವುದಿಲ್ಲ. ಸಣ್ಣಪುಟ್ಟ ಇನ್ಸ್‌ಪೆಕ್ಟರ್‌ಗಳನ್ನು ಅಲುಗಾಡಿಸಿದರೂ ಹಣ ಉದುರೀತು. ಮಾಜಿ ಲೋಕಾಯುಕ್ತ ವೆಂಕಟಾಚಲ ಹೇಳುತ್ತಿದ್ದರು -ಆರ್‌ಟಿಒ ಡಿಪಾರ್ಟ್‌ಮೆಂಟ್‌ನ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದಾಗ ಬರಿಗೈಲಿ ವಾಪಸ್ ಬಂದದ್ದೇ ಇಲ್ಲ ಎಂದು. ಆ ಪರಿ ಲಂಚಗುಳಿತನ ಅಲ್ಲಿ ವ್ಯಾಪಿಸಿದೆ. ದಿನಕ್ಕೊಂದಂತೆ ಹತ್ತುಸಾವಿರಕ್ಕಿಂತ ಹೆಚ್ಚು ಲಾರಿಗಳು ಚಲಿಸುವ ಕರ್ನಾಟಕ-ಮಹಾರಾಷ್ಟ್ರ ಗಡಿಯ ಬಿಜಾಪುರದ ಜಳಕಿ ಚೆಕ್‌ಪೋಸ್ಟ್‌ನಲ್ಲಿ ನಿಲ್ಲುವ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಅಥವಾ ಆರ್‌ಟಿಒ ಏನಿಲ್ಲವೆಂದರೂ ಲಕ್ಷ ರೂ. ಜೇಬಿಗಿಳಿಸಬಲ್ಲ. ಆತ ಅಲ್ಲಿಗೆ ವರ್ಗ ಮಾಡಿಸಿಕೊಳ್ಳಲು ಮಂತ್ರಿಗೆ, ಕನಿಷ್ಠ ನಲ್ವತ್ತು-ಐವತ್ತು ಲಕ್ಷ ರೂಪಾಯಿ ಕೊಟ್ಟೇ ಬಂದಿರುತ್ತಾನೆ. ಹೀಗೆ ಇಡೀ ವ್ಯವಸ್ಥೆಯೇ ಲಂಚಮಯವಾಗಿರುವಾಗ ಸುಧಾರಣೆ ಎಲ್ಲಿ ಬಂತು ಮಣ್ಣು?
ಒಂದು ಸಮಸ್ಯೆಯನ್ನು ಸುಧಾರಿಸುವ ಮೊದಲು ಅದರ ಎಲ್ಲ ಮಜಲು, ಮುಖಗಳನ್ನು ಗಮನಿಸಬೇಕೇ ಹೊರತು ಮೇಲಿನ ಕವಚವನ್ನಲ್ಲ. ದನ ಸಾಕುವ ಮೊದಲು ಹುಲ್ಲು ಬೆಳೆಸಬೇಕು, ಅದಕ್ಕೂ ಮೊದಲು ಹುಲ್ಲು ಬೆಳೆಸಲು ಭೂಮಿ ಖರೀದಿಸಬೇಕು. ಟಿವಿ ತಯಾರಿಸುವ ಮೊದಲು ಒಳ್ಳೆ ಆಂಟೆನಾ ತಯಾರಿಸಬೇಕು. ಎಂಟು ಗಂಟೆಗಳೊಳಗೆ ಮರ ಕಡಿಯುವ ಕೆಲಸ ಕೊಟ್ಟರೆ ಆರು ಗಂಟೆ ಕೊಡಲಿಯನ್ನು ಹರಿತಗೊಳಿಸಬೇಕು. ಆದರೆ ನಾವು ಸಮಸ್ಯೆಯನ್ನು ನೋಡುವ ರೀತಿಯೇ ಬೇರೆ. ಹೀಗಾಗಿ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಅದರ ಬದಲು ಕೆಲ ಸಮಯದ ನಂತರ ಅದು ಬೃಹದಾಕಾರವಾಗಿ ಕಾಡತೊಡಗುತ್ತದೆ.
ಅಮೆರಿಕದ ಎಲ್ಲ ಅದ್ಭುತಗಳ ಮುಂದೆ ನಿಂತಾಗಲೂ ಮನಸ್ಸು ನಮ್ಮ ಊರಿನ ಮುಂದೆ ಹೋಗಿ ನಿಲ್ಲುತ್ತದೆ. ಯಾಕೋ ಖಾಲಿ ಖಾಲಿ ಎನಿಸುತ್ತದೆ.
ನಮಗೆ ಅಂಟಿರುವ ಎಲ್ಲ ರೋಗಗಳೂ ಮದ್ದು-ಇಂಜಕ್ಷನ್‌ಗಳಿಂದ ಗುಣ ಆಗುವಂಥದ್ದಲ್ಲ. ಶಸ್ತ್ರಚಿಕಿತ್ಸೆಯೇ ಆಗಬೇಕು. ನಮಗಿಂದು ಅಂಥ ಸರ್ಜನ್‌ಗಳು ಬೇಕಾಗಿದ್ದಾರೆ. ಕಂಪೌಂಡರ್‌ಗಳಿಂದ ರೋಗಕ್ಕಾಗಲೀ ರೋಗಿಗಾಗಲೀ ಪ್ರಯೋಜನವಿಲ್ಲ.












Click it and Unblock the Notifications