ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರಂಗ ಹಬ್ಬ ಅಂದ್ರೆ ಮಕ್ಕಳಿಗಷ್ಟೇ ಆಚರಣೆ, ಉಳಿದವರಿಗೆ ರಜೆ!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಮತ್ತೊಂದು ತಿರಂಗ ಹಬ್ಬದ ಮುಂದೆ ನಿಂತಿದ್ದೇವೆ. ಮಡಚಿಟ್ಟ ಬಾವುಟಗಳನ್ನು ಹಳೆಯ ಸಂದೂಕುಗಳಿಂದ ಹೊರತೆಗೆಯುವ ಕೆಲಸ ಇನ್ನೇನು ಆರಂಭವಾಗಬೇಕಿದೆ. ಪಂದ್ರ ಆಗಸ್ಟ್‌ ಬರುತ್ತಿರುವಂತೆ ನಾವೊಂದು ತೀರಾ ritualistic ಆದ ಕ್ರಿಯೆಗೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಸ್ವಾತಂತ್ರ್ಯೋತ್ಸವ ಆಚರಣೆಯೇನಿದ್ದರೂ ಈಗ ಕೇವಲ ಶಾಲಾ ಮಕ್ಕಳಿಗೆ ಅನ್ವಯ ಅಷ್ಟೆ. ಮತ್ತ್ಯಾರಿಗೂ ಸಂಬಂಧವೇ ಇಲ್ಲ. ಇನ್ನುಳಿದವರಿಗೆ ರಜೆ! ಪ್ರಭಾತ ಫೇರಿಗಳ ಜಮಾನ ಮುಗಿದು ಅನೇಕ ವರ್ಷಗಳೇ ಆದವು. ಇನ್ನು ಸ್ವಾತಂತ್ರ್ಯೋತ್ಸವದ ದಿನದಂದು ಕೆಂಪುಕೋಟೆಯಿಂದ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಹತ್ತಾರು ಘೋಷಣೆ, ಆಶ್ವಾಸನೆಗಳನ್ನು ಕೊಡುತ್ತಾರೆ. ಅವನ್ನೆಲ್ಲ ಕೇಳಿ, ಮೇಲೇಳುವ ಹೊತ್ತಿಗೆ ಮರೆತುಹೋಗಿರುತ್ತೇವೆ. ಸ್ವಾತಂತ್ರ್ಯೋತ್ಸವ ನಮ್ಮಲ್ಲಿ ಅಂಥ ಪುಳಕವನ್ನೇಕೆ ಹುಟ್ಟಿಸುತ್ತಿಲ್ಲ?

ಅದೊಂದು ಕಾಲವಿತ್ತು. ತೀರಾ ಹಿಂದಲ್ಲ. ಕಳೆದ 20-25ವರ್ಷಗಳ ಹಿಂದಿನ ಮಾತು. ನಾವೆಲ್ಲ ಚಿಕ್ಕವರಾಗಿದ್ದಾಗಿನ ಮಾತು. ಪಂದ್ರ ಆಗಸ್ಟ್‌ ಬರುವುದಕ್ಕೆ ಒಂದು ತಿಂಗಳ ಮೊದಲು ತಿರಂಗ ಹಬ್ಬಕ್ಕೆ ಅಣಿಯಾಗುತ್ತಿದ್ದೆವು. ಭಾಷಣ ಬರೆದುಕೊಂಡು ಉರು ಹೊಡೆಯುತ್ತಿದ್ದೆವು. ಇನ್ನೇನು 15ದಿನಗಳಿವೆ ಎನ್ನುವಾಗ ಇಡೀ ಶಾಲೆ ಮದುವೆ ಛತ್ರದಂತೆ ಸಿದ್ಧವಾಗುತ್ತಿತ್ತು. ಪ್ರಭಾತ ಫೇರಿ ಸಿದ್ಧತೆಗೆ, ಸಾಂಸ್ಕೃತಿಕ ಕಾರ್ಯಕ್ರಮ ತಯಾರಿಗೆ, ಧ್ವಜಾರೋಹಣಕ್ಕೆ, ಕವಾಯಿತಿಗೆ ಹೀಗೆಲ್ಲ ಒಂದೊಂದು ತಂಡವಾಗಿ ಇಡೀ ಶಾಲೆಗೆ ಶಾಲೆಯೇ ಸಡಗರದಿಂದ ಅಣಿಗೊಳ್ಳುತ್ತಿತ್ತು. ಸ್ವಾತಂತ್ರ್ಯೋತ್ಸವವೆಂದರೆ ನಮ್ಮ ಮನೆಯ ಕಾರ್ಯಕ್ರಮವೆಂಬಂತೆ ನಾವು ಸಿದ್ಧರಾಗುತ್ತಿದ್ದೆವು.

ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಹೆಣಗಿದ ಮಹಾತ್ಮರ ದರ್ಶನವಾಗುತ್ತಿತ್ತು. ಆ ಮೂಲಕ ಸ್ವಾತಂತ್ರ್ಯದ ಮಹತ್ವವನ್ನು ಮನವರಿಕೆ ಮಾಡಿಕೊಳ್ಳುತ್ತಿದ್ದೆವು. ಕೆಂಪುಕೋಟೆಯಿಂದ ಪ್ರಧಾನಿ ಮಾತನಾಡುತ್ತಾರೆಂದರೆ ಬೆಳಗ್ಗೆಯೇ ರೇಡಿಯಾ ಮುಂದೆ ಚಕ್ಕಳಮಕ್ಕಳ ಹಾಕಿ ಕುಳಿತಿರುತ್ತಿದ್ದೆವು. ಪ್ರಧಾನಿ ಮಾತಿನ ಕೊನೆಯಲ್ಲಿನ ಮೂರು ಸಲದ ‘ ಜೈ ಹಿಂದ್‌’ ಕೂಗಿಗೆ ಸೊಲ್ಲಾಗುತ್ತಿದ್ದೆವು. ಅಂತಿಮವಾಗಿ ‘ ಜನಗಣಮನ ’ ಮೊಳಗುವಾಗ ರೇಡಿಯೋ ಮುಂದೇ ನಿಂತು ರಾಷ್ಟ್ರಗೀತೆ ಹೇಳುತ್ತಿದ್ದ ದಿನಗಳು ನಿನ್ನೆಯ, ಮೊನ್ನೆಯ ಘಟನೆಗಳಂತೆ ನೆನಪಿನ ಚೀಲದಲ್ಲಿ ಹಸುರಾಗಿವೆ.

Children celebrating independence dayಇಂದು ಅದ್ಯಾವ ಉತ್ಸಾಹವಾಗಲಿ, ರೋಮಾಂಚನವಾಗಲಿ, ಸಂಭ್ರಮಗಳಾಗಲಿ ಕಾಣುತ್ತಿಲ್ಲ. ದೇಶದ ರಾಜಧಾನಿ ದಿಲ್ಲಿ ಸ್ವಾತಂತ್ರ್ಯೋತ್ಸವಕ್ಕಾಗಿ ಸಿಂಗರಿಸಿಕೊಳ್ಳುತ್ತಿರುವಾಗ ರಾಷ್ಟ್ರಪತಿ ಭವನ, ಸೌತ್‌ಬ್ಲಾಕ್‌, ನಾರ್ತ್‌ ಬ್ಲಾಕ್‌, ಸಂಸತ್‌ ಭವನದ ಮುಂದೆ ಬೆಳಗ್ಗೆ ನಡೆದು ಹೋಗುತ್ತಿರುವಾಗ ಒಂದು ರೀತಿಯ ಭಯದ ವಾತಾವರಣ. ಇಂಡಿಯಾ ಗೇಟಿನ ಮುಂದೆ ದಂಡಿ ಪೊಲೀಸರು. ಬಹುಮಹಡಿ ಕಟ್ಟಡ, ಆಯಕಟ್ಟಿನ ಸ್ಥಳ, ರೈಲು, ವಿಮಾನ ನಿಲ್ದಾಣ, ಪ್ರಮುಖ ಸ್ಥಳ, ಗಣ್ಯರ ಮನೆ ಮುಂತಾದೆಡೆ ಸದಾ ಕಟ್ಟೆಚ್ಚರ, ಕಣ್ಗಾವಲು. ಕೆಂಪುಕೋಟೆಯ ಸುತ್ತಮುತ್ತ ಹೆಜ್ಜೆಹೆಜ್ಜೆಗೂ ಇರುವೆಗಳಂತಿರುವ ಪೊಲೀಸರು. ದಿಲ್ಲಿಯಲ್ಲಿ ಸ್ವಾತಂತ್ರ್ಯದ ಉತ್ಸಾಹ ಎಲ್ಲೂ ಕಾಣುತ್ತಿಲ್ಲ. ಎಲ್ಲೆಡೆ ಭಯ, ಶೋಕ, ಸೂತಕದ ವಾತಾವರಣ. ಎಲ್ಲೆಡೆ ಮಡುಗಟ್ಟಿದ ಆತಂಕ. ಬೂದಿ ಮುಚ್ಚಿದ ಕೆಂಡ.

ಅರವತ್ತು ವರ್ಷದ ಸ್ವಾತಂತ್ರ್ಯ ನಮ್ಮನ್ನು ಎಂಥ ಆತಂಕ, ವಿಹ್ವಲ ಸ್ಥಿತಿಗೆ ತಲುಪಿಸಿದೆ ನೋಡಿ. ಖ್ಯಾತ ನ್ಯಾಯವಾದಿ ದಿವಂಗತ ನಾನಿ ಪಾಲ್ಖೀವಾಲ ಒಂದು ಮಾತು ಹೇಳುತ್ತಿದ್ದರು - ‘ಬ್ರಿಟಿಷರ ಗುಂಡಿಗೆ ಎದೆಯಾಡ್ಡಿ ನಾವು ಸಂಪಾದಿಸಿದ ಸ್ವಾತಂತ್ರ್ಯ ಎಲ್ಲಿಗೆ ಬಂದಿದೆಯೆಂದರೆ, ಇಂದು ಕೆಂಪುಕೋಟೆ ಮೇಲೆ ನಿಂತು ಮಾತನಾಡುವ ಪ್ರಧಾನಿ ಬುಲೆಟ್‌ಫ್ರೂಪ್‌ ತೆರೆ ಹಿಂದೆ ಅಡಗಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ಎಲ್ಲಿ ತನಕ ಪ್ರಧಾನಿಗೆ ಸ್ವಾತಂತ್ರ್ಯ ದಿನದಂದು ಇಂಥ ಪರಿಸ್ಥಿತಿ ಬರುವುದೋ, ಅಲ್ಲಿ ತನಕ ನಮ್ಮ ದೇಶ ಒಂದಲ್ಲ ಒಂದು ರೀತಿಯಲ್ಲಿ ಬಂಧಿಯೇ. ಅಷ್ಟರಮಟ್ಟಿಗೆ ನಮ್ಮ ಸ್ವಾತಂತ್ರ್ಯಹರಣವಾಗಿದೆಯೆಂದೇ ಅರ್ಥ. ’

ಪಾಲ್ಖೀವಾಲರ ಮಾತಿನಲ್ಲಿ ಅದೆಂಥ ಕಠೋರ ಸತ್ಯವಿದೆಯೆಂದರೆ , ನಾಳೆ ನಮ್ಮ ಪ್ರಧಾನಿ ಅಳುಕಿನಿಂದಲೇ ಬುಲೆಟ್‌ಫ್ರೂಪ್‌ ಜಾಕೆಟ್‌ ತೊಟ್ಟು, ಗುಂಡು ನಿರೋಧಕ ಪರದೆ ಹಿಂದೆ ಅವಿತು ಮಾತಾಡುತ್ತಾರೆ! ಪ್ರಧಾನಿ ಪಾಡೇ ಹೀಗಾದರೆ ಜನಸಾಮಾನ್ಯರ ಸ್ಥಿತಿಯೇನು?

ಈ ಸಲದ ಆಗಸ್ಟ್‌ ಹದಿನೈದಕ್ಕೆ ವಿಶೇಷ ಅರ್ಥವಿದೆ. ಮೊದಲ ಸ್ವಾತಂತ್ರ್ಯ ಹೋರಾಟ ಎಂದೇ ಪರಿಗಣಿತವಾಗಿರುವ ಸಿಪಾಯಿ ದಂಗೆಗೆ 150 ವರ್ಷಗಳಾಗುತ್ತಿವೆ. 1857ರಲ್ಲಿ ಬ್ರಿಟಿಷರ ವಿರುದ್ಧ ಮೊದಲ ಕಹಳಯೂದಿದ 90ವರ್ಷಗಳ ಬಳಿಕ ನಮಗೆ ಸ್ವಾತಂತ್ರ್ಯ ದೊರಕಿತು. ಸ್ವಾತಂತ್ರ್ಯ ದೊರೆತು ಈಗ ಅರವತ್ತು ವರ್ಷಗಳಾಗುತ್ತಿವೆ.

ಈ ಅರವತ್ತು ವರ್ಷಗಳಲ್ಲಿ ನಾವು ಅಂದು ಪಡೆದ ಸ್ವಾತಂತ್ರ್ಯಕ್ಕೂ, ಇಂದು ಅನುಭವಿಸುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸ್ವಾತಂತ್ರ್ಯ ಪಡೆವಾಗ ಇದ್ದ ಆದರ್ಶಗಳಾಗಲಿ, ಮೌಲ್ಯಗಳಾಗಲಿ ಇಂದು ಗಟ್ಟಿಯಾಗಿ ಉಳಿದಿಲ್ಲ. ಆ ಬಗ್ಗೆ ಮಾತನಾಡುವುದೇ ನಗೆಪಾಟಲಿಗೆ ಈಡಾಗುವಂತಾಗಿದೆ.

ಯಾವ ಗಾಂಧಿಯಿಂದ ಸ್ವಾತಂತ್ರ್ಯ ಪ್ರೇರಣೆ ಪಡೆದೆವೋ, ಅದೇ ಗಾಂಧಿ ಪ್ರತಿಪಾದಿಸಿದ ತತ್ವಗಳು ನಮ್ಮಲ್ಲಿ ಯಾವ ಚೇತನವನ್ನೂ ಮೂಡಿಸುತ್ತಿಲ್ಲ. ಆರವತ್ತು ವರ್ಷಗಳ ಹಿಂದೆ ನಮಗೆ ಆದರ್ಶಕ್ಕೆಂದು ಅನೇಕ ಜನರಿದ್ದರು. ಹಲವಾರು ರೋಡ್‌ಮಾಡೆಲ್‌ಗಳಿದ್ದರು. ಈ ಅವಧಿಯಲ್ಲಿ ನಾವೆಷ್ಟು ಬರಗೆಟ್ಟು ಹೋಗಿದ್ದೇವೆಂದರೆ ನಮಗೊಬ್ಬ ಆದರ್ಶ ವ್ಯಕ್ತಿಯೂ ಸಿಗುವುದಿಲ್ಲ. ಇವರಂತೆ ಆಗಬಾರದೆನ್ನಲು ಸಾವಿರಾರು ಜನರು ಸಿಗುವುದರಿಂದ ಒಂದು ರೀತಿಯಲ್ಲಿ ನೆಗೆಟಿವ್‌ ಪ್ರೇರಣೆ ಪಡೆಯುವಂಥ ಸ್ಥಿತಿ.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ, ಈಗ ಬದುಕಿರುವ ಯಾರನ್ನೇ ಕೇಳಿದರೂ ಅವರ್ಯಾರೂ ಈಗಿನ ಸ್ಥಿತಿಗತಿ ಬಗ್ಗೆ ಒಳ್ಳೆಯ ಮಾತುಗಳನ್ನಾಡುವುದಿಲ್ಲ. ನಮಗೆ ಸಿಗುವ ಸ್ವಾತಂತ್ರ್ಯ ನಮ್ಮನ್ನು ಈ ಹಂತಕ್ಕೆ ತಂದಿಡುತ್ತದೆಯೆಂದು ಗೊತ್ತಿದ್ದರೆ, ಅವರ್ಯಾರು ಬ್ರಿಟಿಷರ ವಿರುದ್ಧ ಹೋರಾಡುತ್ತಿರಲೇ ಇಲ್ಲ. ಈಗಲೂ ಈ ಮಂದಿ ‘ ಬ್ರಿಟಿಷರ ಆಳ್ವಿಕೆಯೇ ಚೆನ್ನಾಗಿತ್ತೂರೀ’ ಎಂದು ಹೇಳುವುದನ್ನು ಕೇಳುತ್ತೇವೆ. ಅಂದರೆ ನಾವು ಗಳಿಸಿದ ಸ್ವಾತಂತ್ರ್ಯದ ಬಗ್ಗೆ ನಮಗೆ ಜಂಭವಾಗಲಿ ಅಭಿಮಾನವಾಗಲಿ ಹೆಮ್ಮೆಯಾಗಲಿ ಆಗುತ್ತಿಲ್ಲ.

ಇನ್ನು ಈಗಿನ ಮಕ್ಕಳಿಗೆ ಸ್ವಾತಂತ್ರ್ಯದ ಹಿನ್ನೆಲೆಯಾಗಲಿ, ಬಲಿದಾನಗೈದವರ ಕತೆಯಾಗಲಿ, ಕಷ್ಟಪಟ್ಟು ಸಂಪಾದಿಸಿದ ಸ್ವಾತಂತ್ರ್ಯದ ಮಹತ್ವವಾಗಲಿ ಗೊತ್ತೇ ಇಲ್ಲ. ಪಠ್ಯಪುಸ್ತಕಗಳಲ್ಲಿ ಪರೀಕ್ಷೆಯಲ್ಲಿ ಪಾಸಾಗುವಷ್ಟು ಮಾಹಿತಿ. ಇನ್ನುಳಿದ ಮಾಹಿತಿಯೇನಿದ್ದರೂ ಅಂಕಿಸಂಖ್ಯೆಗಳು! ಮಹತ್ವದ ಘಟನೆಗಳೆಲ್ಲ ಫಿಲ್‌ ಇನ್‌ ದಿ ಬ್ಲಾಂಕ್ಸ್‌ಗೆ ಸಾಕಾಗುವಷ್ಟು ಮಾತ್ರ ಸಾಕು. ಈಗಿನ ಮಕ್ಕಳಿಗೆ ಸ್ವಾತಂತ್ರ್ಯ ಯಾವ ಅಚ್ಚರಿ ಹುಟ್ಟಿಸುತ್ತಿಲ್ಲ. ಹೀಗಿರುವಾಗ ಈ ದೇಶ, ಪರಂಪರೆ ಬಗ್ಗೆ ಅದೆಲ್ಲಿಂದ ಗೌರ ಮೂಡಬೇಕು? ಇದು ಖಂಡಿತವಾಗಿಯೂ ಅವರ ತಪ್ಪಲ್ಲ. ಅಂಥ ಸ್ಥಿತಿ ನಿರ್ಮಿಸಿದ ನಮ್ಮನ್ನೇ ಹಳಿದುಕೊಳ್ಳಬೇಕು.

ಭ್ರಷ್ಟಾಚಾರ, ಬಡತನ, ರೋಗರುಜಿನು, ಹಸಿವು, ಅನಕ್ಷರತೆ -ಹೀಗೆ ಅನಿಷ್ಟಗಳ ಪಟ್ಟಿಯಲ್ಲಿ ಭಾರತ ಒಂದಿಲ್ಲೊಂದು ಸ್ಥಾನ ಪಡೆಯುತ್ತದೆ. ಜಗತ್ತಿನ ಸೌಜನ್ಯಹರಿತನಗರ, ಶಿಷ್ಟಾಚಾರ ಮರೆತ ದೇಶ, ತೀರಾ ಒರಟು ಮಂದಿಯಿರುವ ರಾಷ್ಟ್ರ ಮುಂತಾದ ಸ್ಪರ್ಧೆಗಳಲ್ಲೂ ನಾವು ಮುಂದು. ಕ್ರೆೃಂ, ಜೂಜು, ಆತ್ಮಹತ್ಯೆ, ವಂಚನೆ, ಸುಳ್ಳು ಈ ವಿಭಾಗಗಳಲ್ಲೂ ನಾವು ಎಲ್ಲರನ್ನು ಮೀರಿಸಿದ್ದೇವೆ. ಇವ್ಯಾವವೂ ನಾಚಿಕೆಗೇಡಿನ ಸಂಗತಿಗಳಾಗಿ ನಮ್ಮನ್ನು ಬಾಧಿಸುತ್ತಿಲ್ಲ. ನಮ್ಮ ಶಾಕ್‌ ಅಬ್ಸರ್ವರ್‌ ಅದೆಷ್ಟು ಬಲಿಷ್ಠಾಗಿದೆಯೆಂದರೆ, ನಮಗೆ ಸಣ್ಣಪುಟ್ಟ ದಢಕಿಗಳೆಲ್ಲ ಯಾವ ಲೆಕ್ಕ?

ಹಾಗಂತ ಸಂಪೂರ್ಣ ನಿರಾಶರಾಗಬೇಕಿಲ್ಲ. ಈ ಎಲ್ಲ ಅಪಸವ್ಯಗಳ ನಡುವೆಯೂ, ಯಡವಟ್ಟುಗಳ ಮಧ್ಯೆಯೂ ನಾವೊಂದಿಷ್ಟು ಪ್ರಗತಿ ಸಾಧಿಸಿದ್ದೇವೆ. ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಮಾಹಿತಿ, ಜೈವಿಕ ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ನಮ್ಮ ಸಾಧನೆ ಕಂಡು ಇಡೀ ಜಗತ್ತೇ ಭಾರತದತ್ತ ನೋಡುತ್ತಿದೆ. ಜನಸಾಮಾನ್ಯರ ಬದುಕಿನಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದೆ. ಜೀವನ ಮಟ್ಟ ಸುಧಾರಿಸಿದೆ. ಮೊಬೈಲು, ಟೀವಿ, ಫ್ರಿಜ್‌, ಕಾರು, ಸ್ಕೂಟರ್‌, ವಿಮಾನಯಾನ ಪ್ರಗತಿ ಸಂಕೇತಗಳೆಂದು ಭಾವಿಸುವುದಾದರೆ ಸಾಕಷ್ಟು ಮನೆ, ಮಂದಿ ಪ್ರಗತಿ ಹೊಂದಿದ್ದಾರೆ. ಭಾರತವನ್ನು ಥರ್ಟ್‌ ವರ್ರ್ಡ್‌ ಕಂಟ್ರಿ ಎಂದು ಯಾರು ಕರೆಯುತ್ತಿಲ್ಲ. ಹಾವಾಡಿಗರ ದೇಶ ಎಂದೂ ಕರೆಯುವುದಿಲ್ಲ. ನಮ್ಮ ದೇಶವನ್ನು ಎಮರ್ಜಿಂಗ್‌ ಎಕಾನಮಿ ಅಂತಾರೆ. ನಾಲೆಡ್ಸ್‌ ಪೊಟೆನ್ಷಿಯಲ್‌ ನೇಷನ್‌ ಅಂತಾರೆ. ಹಲವು ಸದಾವಕಾಶಗಳು ತೆರೆದುಕೊಳ್ಳುವ ದೇಶ ಎಂದು ಬಿಂಬಿಸಲಾಗುತ್ತಿದೆ. ಇವ್ವಾವವೂ ನಮ್ಮ ಉದ್ಗಾರಗಳಲ್ಲ. ನಮ್ಮ ಬಗ್ಗೆ ವಿದೇಶಿಯರು ಹೀಗೆಲ್ಲ ಹೇಳುತ್ತಿದ್ದಾರೆ. ಭಾರತದ ಇಮೇಜ್‌ ಬದಲಾಗುತ್ತಿದೆ.

ಹೀಗೆಲ್ಲ ಹೇಳುವಾಗ ಬಹಳ ಖುಷಿಯಾಗುತ್ತದೆ. ಆದರೆ, ನಾವು ಈಗ ಸಾಧಿಸಿರುವ ಪ್ರಗತಿಗಳೆಲ್ಲ ಒಮ್ಮುಖವಾಗಿವೆ. ನಗರ ಕೇಂದ್ರೀಕೃತವಾಗಿದೆ. ಪ್ರತಿನಗರ ಬೆಳೆಯುತ್ತಾ ಬೆಲೆಯುತ್ತಾ ಆಧುನಿಕ ಸ್ಲಮ್‌ ಆಗುತ್ತಿದೆ. ಎಲ್ಲ ನಗರಗಳಲ್ಲೂ ಜೀವನ ಅಸಹನೀಯವಾಗುತ್ತಿದೆ. ಎಲ್ಲರ ಮನೆಯೂ ಸುಂದರ ಆದರೆ ಎಲ್ಲ ಬೀದಿಗಳೂ ಕೊಳಕು ಎಂಬಂತೆ ಪರಿಸರವನ್ನೆೆಲ್ಲ ಹಾಳುಗೆಡವಿದ್ದೇವೆ. ಕೊಡ ನೀರಿಗೆ ಹತ್ತು ಕಿ.ಮೀ. ಕ್ರಮಿಸುವ, ಹೆರಿಗೆಯಲ್ಲಿ ಸಾಯುವ ನೂರಾರು ಸಾವಿರಾರು ಹಳ್ಳಿಗಳಿವೆ. ಕಲಬೆರಕೆಯಿಲ್ಲದೇ ಏನು ತಿಂದರೂ ನಮ್ಮ ಮೈಗೆ ಹತ್ತುವುದಿಲ್ಲ. ಎರಡೂ ಹೊತ್ತು ಊಟಕ್ಕೆ ಗತಿಯಿಲ್ಲದ ಕೋಟ್ಯಂತರ ಜನರಿದ್ದಾರೆ. ಮೂಢನಂಬಿಕೆ ವಿದ್ಯಾವಂತರನ್ನೂ ಬಿಟ್ಟಿಲ್ಲ. ನಿರುದ್ಯೋಗ, ಅನಕ್ಷರತೆ ವಿರುದ್ಧದ ನಮ್ಮ ಹೋರಾಟಕ್ಕೂ ನೂರೈವತ್ತು ವರ್ಷಗಳ ಇತಿಹಾಸ. ಆದರೆ ಸಾಧಿಸಿದ್ದು ಸ್ವಲ್ಪ. ರಾಜಕೀಯ, ಭ್ರಷ್ಟಾಚಾರ ನಮ್ಮ ಸಾಮಾಜಿಕ ಜೀವನದ ಅವಿಭಾಜ್ಯಅಂಗಗಳು. ನೈತಿಕ ಮೌಲ್ಯ, ಹೊಣೆಗಾರಿಕೆ, ಉತ್ತರದಾಯಿತ್ವ, ಪ್ರಾಮಾಣಿಕತೆ, ಸಾಮಾಜಿಕ ಜವಾಬ್ದಾರಿಗಳಿಗೆಲ್ಲ ಹೆಚ್ಚಿನ ಮಹತ್ವ, ಅರ್ಥ ಉಳಿದಿಲ್ಲ. ಅೃೆಲ್ಲ ನಮಗೆ ಬರೀ ಕರ್ಕಶ ಶಬ್ದಗಳು.

ಜನಸಂಖ್ಯೆ, ನಿರುದ್ಯೋಗ, ಹಸಿವನ್ನು ಇಟ್ಟುಕೊಂಡು ಚೀನಾ ಕಳೆದ ಐವತ್ತು ವರ್ಷಗಳಲ್ಲಿ ಅಗಾಧ ಪ್ರಗತಿ ಸಾಧಿಸಿ ಜಗತ್ತಿನ ಸೂಪರ್‌ ಪವರ್‌ಗಳಲ್ಲೊಂದಾಗಿದೆ. ಎಲ್ಲ ವೈರುಧ್ಯಗಳನ್ನು ತಮ್ಮ ಪರವಾದ ಸಕಾರಾತ್ಮಕವನ್ನಾಗಿ ಮಾಡಿಕೊಂಡಿದ್ದಾರೆ. ಚೀನಾ ಕೇಳಿ ಮಸಾಲೆ ಅರೆಯುವ ಕಾಲ ಬರಬಹುದೆಂದು ನೋಮ್‌ ಚಾಮ್‌ಸ್ಕಿಯಂಥ ಪ್ರಾಜ್ಞರು ಭವಿಷ್ಯ ಹೇಳುತ್ತಿದ್ದಾರೆ. ಇಂದು ಚೀನಾದಲ್ಲಿ ಉತ್ಪನ್ನವಾಗುವ ವಸ್ತುಗಳು ಸಿಗದ ಜಾಗತಿಕ ಮಾರುಕಟ್ಟೆಗಳೇ ಇಲ್ಲ. ಡಿಸ್ನಿ ವರ್ಲ್ಡ್‌ ಸಹ ಚೀನಾ ಪೈಪೋಟಿಗೆ ಗರಬಡಿದಿದೆ.

ಕೋರಿಯಾದಂಥ ಚಿಕ್ಕಾಣಿ ದೇಶ ಸಹ ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕೆಯಲ್ಲಿ ಅಮೆರಿಕವನ್ನು ಹಿಮ್ಮೆಟ್ಟಿಸಿದೆ. ಸಣ್ಣ ಬಂದರು ದೇಶವಾದ ಸಿಂಗಾಪುರ ಇಂದು ಇಡೀ ವಿಶ್ವದ ದೇಶಗಳನ್ನು ಸೆಳೆಯುತ್ತಿದೆ. ಹಾಂಗ್‌ಕಾಂಗ್‌, ಕೌಲಾಲಂಪುರಗಳು ವಿಶ್ವ ವ್ಯಾಪಾರದ ಹೊಸ ಕೇಂದ್ರಗಳು. ಐವತ್ತು ವರ್ಷಗಳ ಹಿಂದೆ ಎರಡನೆ ಮಹಾಯುದ್ಧದಲ್ಲಿ ಸಂಪೂರ್ಣ ಜರ್ಜರಿತವಾದ ಜಪಾನ್‌, ಎಲ್ಲ ಕಸುವು ಎಳೆದುಕೊಂಡು ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಎದ್ದು ನಿಂತಿದೆ. ಕೇವಲ ವ್ಯಾಪಾರ, ವ್ಯವಹಾರ, ವಾಣಿಜ್ಯದಲ್ಲಿ ಮಾತ್ರವಲ್ಲ ನೈತಿಕತೆ, ಮೌಲ್ಯ, ಆದರ್ಶ ಪಾಲನೆಯಲ್ಲೂ ಈ ಎಲ್ಲ ದೇಶಗಳು ಮುಂಚೂಣಿಯಲ್ಲಿವೆ. ಆನೆ ಮುಂದೆ ಇರುವೆಯಂತೆ ಕಾಣುವ ಜಪಾನ್‌, ಇಂದು ಅಮೆರಿಕಕ್ಕೆ ಸೆಡ್ಡು ಹೊಡೆಯುವಷ್ಟು ಬಲಾಢ್ಯವಾಗಿದೆಯೆಂದರೆ ಆ ದೇಶದ ನರನಾಡಿಗಳಲ್ಲಿ ಅದೆಂಥ ಕೆಚ್ಚು, ಕಿಚ್ಚು, ದೇಶಭಕ್ತಿ, ದೇಶ ಪ್ರೀತಿ ಹರಿಯುತ್ತಿರಬಹುದು ಊಹಿಸಿ.

ನಾವು ಸಾಧನೆ, ಪ್ರಗತಿಯ ಬೆನ್ನು ಬಿದ್ದು ಒಂದಿಷ್ಟು ಸಾಧಿಸಿದ್ದೇವೆ. ಆದರೆ ನೈತಿಕವಾಗಿ ದಿವಾಳಿಯಾಗಿದ್ದೇವೆ. ‘ನೈತಿಕ ತಳಹದಿಯಿಲ್ಲದೇ ಏನೇ ಸಾಧಿಸಿದರೂ ಅದು ಶೂನ್ಯ’ ಎಂಬ ಗಾಂಧಿ ಮಾತು ನಮಗೆ ಇನ್ನೂ ಅರ್ಥವಾದಂತಿಲ್ಲ. ಶೀಲ ಹರಣದ ನಂತರ ಪಾವಿತ್ರ್ಯದ ಬಗ್ಗೆ ಮಾತಾಡಿದರೇನು ಬಂತು? ನಮ್ಮ ಮುಂದಿಡುವ ನಿಜವಾದ ಸವಾಲು ಅದೇ -ನೈತಿಕ ಬಲದ ಪ್ರಗತಿ.

ಈ ಸ್ವಾತಂತ್ರ್ಯ ಹಬ್ಬದ ಧ್ವಜದ ಕಟ್ಟೆಯ ಮುಂದೆ ನಿಲ್ಲುವ ಕ್ಷಣದಲ್ಲಿ ಈ ವಿಚಾರವನ್ನು ಧೇನಿಸೋಣ. ಏನಂತೀರಿ?

(ಸ್ನೇಹ ಸೇತು : ವಿಜಯ ಕರ್ನಾಟಕ)


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X